ಶಾಸಕ ಹರೀಶ್ ಪೂಂಜ ಹಿಂದುತ್ವದ ವಿರುದ್ದವಾಗಿ ಕೆಲಸ ಮಾಡುತ್ತಿದ್ದಾರೆ: ಹಿಂಜಾವೇ ಆರೋಪ
ಬೆಳ್ತಂಗಡಿ: ತಾಲೂಕಿನಲ್ಲಿ ಶಾಸಕ ಹರೀಶ್ ಪೂಂಜ ಅವರು ಹಿಂದುತ್ವದ ವಿರುದ್ದವಾಗಿ ಕೆಲಸ ಮಾಡುತ್ತಿದ್ದಾರೆ. ಹರೀಶ್ ಪೂಂಜರ ಕಚೇರಿಯಿಂದಲೇ ಗೋ ಸಾಗಾಟ ನಡೆಯುತ್ತಿದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಣೇಶ್ ಎಂಬವರೇ ಗೋಸಾಗಾಟ ಮಾಡುತ್ತಿದ್ದಾರೆ ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಮಹೇಶ್ ಶೆಟ್ಟಿ ತಿಮರೋಡಿ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರು ಎಂಬ ಹೆಸರಿನಲ್ಲಿ ಹರೀಶ್ ಪೂಂಜರ ಜನರು ಕೇಸರಿ ಹಾಕಿಕೊಂಡು ದನ ಕೊಂಡು ಹೋಗಿ ಕಸಾಯಿ ಖಾನೆಗೆ ಕೊಡುತ್ತಿದ್ದಾರೆ. ಹಲವು ಗ್ರಾಮಗಳಲ್ಲಿ ಇದು ನಡೆಯುತ್ತಿದೆ. ಇಂತಹವರನ್ನು ಹಿಡಿದ ಎಷ್ಟೋ ಉದಾಹರಣೆಗಳಿವೆ. ಸಾಕ್ಷಿ ಸಮೇತ ಸಾಬೀತುಪಡಿಸುತ್ತೇವೆ. ಹರೀಶ್ ಪೂಂಜರ ಮನೆಯ ಸಮೀಪವೇ ಅಕ್ರಮವಾಗಿ ದನ ಕಡಿಯುವ ಕಾರ್ಯ ನಡೆಯುತ್ತಿದೆ. ಇದು ಹರೀಶ್ ಪೂಂಜರಿಗೆ ತಿಳಿದಿದ್ದರೂ ಅವರು ಬೆಂಬಲ ನೀಡುತಿದ್ದಾರೆ ಎಂದು ಆರೋಪಿಸಿದರು.
ದನ ಕಡಿಯು ಕೆಲಸ ಮಾಡುವ ಕ್ರೈಸ್ತ ವ್ಯಕ್ತಿಯೊಬ್ಬನನ್ನು ಬಿಜೆಪಿಯ ನಾಯಕನನ್ನಾಗಿ ಮಾಡಿ, ಅವನು ಬಿಜೆಪಿ ಎಂದು ಕೇಸರಿ ಶಾಲು ಹಾಕಿ ತಿರುಗುತ್ತಾನೆ. ಇದು ಕೇಸರಿ ಶಾಲು ಹಾಗೂ ಹಿಂದೂ ಧರ್ಮಕ್ಕೆ ಮಾಡಿದ ಅಪಮಾನವಾಗಿದೆ ಹರೀಶ್ ಪೂಂಜನ ಕಾರ್ಯಕರ್ತರು ಕೇಸರಿಯನ್ನು ಅಪಮಾನಿಸುತ್ತಿದ್ದಾರೆ ದೇವಸ್ಥಾನದ ಬ್ರಹ್ಮಕಲಶೋತ್ಸವಗಳಲ್ಲಿ ಅನಗತ್ಯ ರಾಜಕೀಯ ಮಾಡುತ್ತಿದ್ದಾರೆ. ಪೂಂಜನ ರಾಜಕೀಯದಿಂದಾಗಿ ತಾಲೂಕಿನ ದೇವಸ್ಥಾನಗಳಲ್ಲಿ ಬ್ರಹ್ಮಕಲಶವೇ ಸರಿಯಾಗಿ ನಡೆದಿಲ್ಲ. ಇದು ತಾಲೂಕಿಗೆ ಶಾಪವಾಗಿ ಪರಿಣಮಿಸಲಿದೆ ಎಂದು ಅವರು ಹೇಳಿದರು.
ಸಿದ್ದಾರಾಮಯ್ಯ 24ಮಂದಿ ಹಿಂದೂಗಳನ್ನು ಹತ್ಯೆ ಮಾಡಿರುವುದಾಗಿ ಹರೀಶ್ ಪೂಂಜ ಹೇಳುತ್ತಾರೆ. ಇದು ಸತ್ಯವಾದರೆ ಸಿದ್ದರಾಮಯ್ಯ ಜೈಲಿಗೆ ಹೋಗಬೇಕು. ಹರೀಶ್ ಪೂಂಜ ಸುಳ್ಳು ಹೇಳಿದರೆ ಅವರಿಗೆ ಶಿಕ್ಷೆಯಾಗಬೇಕು. ಸಿದ್ದರಾಮಯ್ಯ ಕೊಲೆ ಮಾಡಿದ್ದು ಸರಿಯಾದರೆ ಕಳೆದ ಐದು ವರ್ಷ ಹರೀಶ್ ಪೂಂಜ ಏನು ಮಾಡುತ್ತಿದ್ದರು. ಬಿಜೆಪಿ ಸರಕಾರ ಏನುಮಾಡುತ್ತಿತ್ತು. ಈಗ ಹರೀಶ್ ಪೂಂಜನಿಗೆ ಜ್ಞಾನೋದಯವಾಗಿದೆಯಾ ಎಂದು ಪ್ರಶ್ನಿಸಿದರು.
ಹರೀಶ್ ಪೂಂಜ ಅವರು ವೇದಿಕೆಯಲ್ಲಿ ತನಗೆ ಮುಸ್ಲಿಮರ ಮತ ಬೇಡ ಎಂದು ಹೇಳಿ ಹಿಂದುಗಳನ್ನು ದಾರಿತಪ್ಪಿಸಿ ಮುಸ್ಲಿಮರಿಗೆ ಕ್ರೈಸ್ತ ರಿಗೆ ನೆರವಾಗಿದ್ದಾರೆ. ಅವರಿಗೆ ಕೊಡುವ ಬಗ್ಗೆ ನಮ್ಮ ತಕರಾರಿಲ್ಲ. ಆದರೆ ಹಿಂದೂಗಳ ಮುಂದೆ ಬಂದು ಸುಳ್ಳು ಹೇಳುವುದು ಯಾಕೆ. ಇಂತಹ ಇಬ್ಬಗೆಯ ನೀತಿಯನ್ನು ಅಂದಿನಿಂದಲೂ ಹರೀಶ್ ಪೂಂಜ ಅನುಸರಿಸಿಕೊಂಡು ಬಂದಿದ್ದಾರೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಮುಖಂಡರು ಉಪಸ್ಥಿತರಿದ್ದರು