ಜಿಲ್ಲೆಯಲ್ಲಿ ನಡೆದ ಧರ್ಮಾಧಾರಿತ ರಾಜಕೀಯ ಹತ್ಯಾ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆಗೆ ಮಾಜಿ ಸಚಿವ ರಮಾನಾಥ ರೈ ಆಗ್ರಹ
ಮಂಗಳೂರು, ಮೇ 26: ದ.ಕ. ಜಿಲ್ಲೆಯಲ್ಲಿ ನಡೆದಿರುವ ಈ ವರೆಗೆ ನಡೆದಿರುವ ಧರ್ಮಾಧಾರಿತ ಮತ್ತು ರಾಜಕೀಯ ಪ್ರೇರಿತ ಹತ್ಯಾ ಪ್ರಕರಣಗಳ ತನಿಖೆಗೆ ಪೊಲೀಸರ ವಿಶೇಷ ತನಿಖಾ ತಂಡ ರಚಿಸುವಂತೆ ಮಾಜಿ ಸಚಿವ ಬಿ.ರಮಾನಾಥ ರೈ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ನಡೆದಿರುವ ರಾಜಕೀಯ ಪ್ರೇರಿತ ಇಂತಹ ಹತ್ಯಾ ಪ್ರಕರಣಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಮುಂದೆ ಈ ರೀತಿಯ ಘಟನೆಗಳು ನಡೆಯಬಾರದು ಎಂದರು.
ಧರ್ಮಾಧಾರಿತ ರಾಜಕೀಯ ಹತ್ಯೆಗಳು ಜಿಲ್ಲೆಯಲ್ಲಿ ತುಂಬಾ ಆಗಿದೆ. ಹಿಂದು ಮತ್ತು ಮುಸ್ಲಿಂ ಸಮುದಾಯದ ಆನೇಕ ಮಂದಿ ಅಮಾಯಕರು ಪ್ರಕರಣಗಳಲ್ಲಿ ಬಲಿಯಾಗಿದ್ದಾರೆ. ಅಮಾಯಕ ಹರೀಶ್ ಪೂಜಾರಿ ಕೊಲೆಯಾಕೆ ಆಗಿದೆ ಎಂದು ಅವನಿಗೆ ಗೊತ್ತಿರಲಿಕ್ಕಿಲ್ಲ. ಕೇವಲ ವೋಟಿಗಾಗಿ ಅವನ ಹತ್ಯೆ ನಡೆದಿದೆ . ಶರತ್ ಮಡಿವಾಳ, ಅಶ್ರಫ್, ಜಲೀಲ್, ಪ್ರವೀಣ್ ನೆಟ್ಟಾರು, ಮಸೂದ್, ಫಾಝಿಲ್, ಪ್ರಶಾಂತ್, ಬಾಳಿಗಾ, ಹರೀಶ್ ಪೂಜಾರಿ ಹೀಗೆ ಆನೇಕ ಮಂದಿಯ ಹತ್ಯೆ ಆಗಿದೆ. ಈ ಎಲ್ಲ ಹತ್ಯೆಗಳಲ್ಲಿ ಕಾಂಗ್ರೆಸ್‌ನ ಯಾವನೇ ಒಬ್ಬ ಕಾರ್ಯಕರ್ತ ಭಾಗಿಯಾಗಿಲ್ಲ . ಆರೋಪ ಪಟ್ಟಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನ ಹೆಸರಿಲ್ಲ. ಬಿಜೆಪಿ ಮತ್ತು ಎಸ್‌ಡಿಎಪಿಯ ಕೆಲವು ಮಂದಿ ಹತ್ಯೆಯಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದರು.
ಜಿಲ್ಲೆಯಲ್ಲಿ ನಡೆದಿರುವ ಧರ್ಮಾಧಾರಿತ ರಾಜಕೀಯ ಹತ್ಯಾ ಪ್ರಕರಣಗಳಲ್ಲಿ ಬಲಿಯಾದವರ ಪಟ್ಟಿಯನ್ನು ಸರಕಾರ ತಯಾರಿಸಬೇಕು. ಪ್ರತಿಯೊಂದು ಹತ್ಯಾ ಪ್ರಕರಣದ ನಿಷ್ಪಕ್ಷಪಾತ ತನಿಖೆಯಾಗಬೇಕು. ಹತ್ಯಾಪ್ರಕರಣಗಳಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬ ವಿಚಾರ ಹೊರಬರಬೇಕು ಮತ್ತು ಅವರಿಗೆ ತಕ್ಕ ಶಿಕ್ಷೆಯಾಗಬೇಕು. ವಿಶೇಷ ತನಿಖಾ ತಂಡದ ನೇತೃತ್ವವನ್ನು ಡಾ. ಎ.ಸುಬ್ರಹ್ಮಣ್ಯೇಶ್ವರ ರಾವ್ ಅವರಂತಹ ಹಿರಿಯ ಐಪಿಎಸ್ ಅಧಿಕಾರಿಗಳಿಗೆ ನೀಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಸರಕಾರ ಇದ್ದಾಗ ಯಾವುದೇ ಹತ್ಯೆಗಳು ಆಗಿಲ್ಲ ಎಂದು ಬಿಜೆಪಿ ವಾದ. ಜನರನ್ನು ತಪ್ಪು ದಾರಿಗೆಳೆಯುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಇಲ್ಲಿ ಹತ್ಯೆ ಮಾಡಿದವರು ಯಾರು ಎನ್ನುವುದು ಮುಖ್ಯ. ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಮತೀಯ ಶಕ್ತಿಗಳು ಅಹಿತಕರ ಘಟನೆಯನ್ನು ಸೃಷ್ಟಿಸುವ ಸಾಧ್ಯತೆ ಇದೆ. ಹೀಗಾಗಿ ಸರಕಾರ ದ.ಕ. ಜಿಲ್ಲೆಯಲ್ಲಿ ಹಿಂದೆ ನಡೆದಿರುವ ಧರ್ಮಾಧಾರಿತ ಮತ್ತು ರಾಜಕೀಯ ಪ್ರೇರಿತ ಹತ್ಯಾ ಪ್ರಕರಣಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು. ಜಿಲ್ಲೆಯ ಶಾಂತಿ ,ಸಾಮರಸ್ಯಕ್ಕೆ ಧಕ್ಕೆಯಾಗಬಾರದು. ಹರೀಶ್ ಪೂಂಜಾ ಮಾತನಾಡಿದ ಪ್ರಕರಣದ ಬಗ್ಗೆ ಎಫ್‌ಐಆರ್ ದಾಖಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ ಮತ್ತು ಎಂ.ಹರಿನಾಥ್, ಮನಪಾ ವಿಪಕ್ಷ ನಾಯಕ ನವೀನ್ ಡಿ ಸೋಜ, ಬಂಟ್ವಾಳ ತಾಪಂ ಮಾಜಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ಟಿ.ಕೆ.ಸುಧೀರ್, ಸಿ.ಎಂ ಮುಸ್ತಫಾ, ಸಲೀಂ , ಸುಹೈಲ್‌ಕಂದಕ್ ಮತ್ತಿತರರು ಉಪಸ್ಥಿತರಿದ್ದರು.
''ಸಚಿವರಾಗುವುದು ಗಾಸಿಪ್ ಅಷ್ಟೇ ...''
ನೂತನ ಕಾಂಗ್ರೆಸ್ ಸರಕಾರ ನಿಮ್ಮನ್ನು ಎಂಎಲ್‌ಸಿ ಮಾಡಿ ಸಚಿವ ಸ್ಥಾನ ನೀಡಲಿದೆ ಎಂಬ ಸುದ್ದಿಯ ಬಗ್ಗೆ ಮಾಜಿ ಸಚಿವ ರೈ ಅವರ ಗಮನ ಸೆಳೆದಾಗ, 'ಇಲ್ಲ ಅದು ಗಾಸಿಪ್ ಅಷ್ಟೇ' ಎಂದು ನಗುತ್ತಲೇ ಉತ್ತರಿಸಿದರು.