ಐಪಿಎಲ್-2023: ಮೂರನೇ ಶತಕದೊಂದಿಗೆ ದಾಖಲೆ ಬರೆದ ಶುಭಮನ್ ಗಿಲ್

ಐಪಿಎಲ್ ಪ್ಲೇ ಆಫ್‌ನಲ್ಲಿ ಶತಕ ಸಿಡಿಸಿದ 7ನೇ ಆಟಗಾರ

Update: 2023-05-26 17:37 GMT

ಅಹಮದಾಬಾದ್: ಮುಂಬೈ ಇಂಡಿಯನ್ಸ್ ವಿರುದ್ಧ ಐಪಿಎಲ್ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ 8 ಸಿಕ್ಸರ್ ಹಾಗೂ 4 ಬೌಂಡರಿಗಳ ಸಹಾಯದಿಂದ ಕೇವಲ 49 ಎಸೆತಗಳಲ್ಲಿ ಶತಕ ಸಿಡಿಸಿದ ಶುಭಮನ್ ಗಿಲ್ ಮತ್ತೊಮ್ಮೆ ತನ್ನ ವಿರಾಟ್ ರೂಪ ಪ್ರದರ್ಶಿಸಿದರು.

ಗಿಲ್ ಈ ಋತುವಿನಲ್ಲಿ 4ನೇ ಟಿ-20 ಇನಿಂಗ್ಸ್‌ಗಳಲ್ಲಿ 3ನೇ ಶತಕ ದಾಖಲಿಸಿದರು. ಈ ಸಾಧನೆಯ ಮೂಲಕ ಇಲೈಟ್ ಲಿಸ್ಟ್‌ಗೆ ಸೇರ್ಪಡೆಯಾಗಿದ್ದು, ಮೈಕಲ್ ಕ್ಲಿಂಜರ್ ನಂತರ ಈ ಸಾಧನೆ ಮಾಡಿದ 2ನೇ ಆಟಗಾರ ಎನಿಸಿಕೊಂಡರು. ಕ್ಲಿಂಜರ್ 4 ಟಿ-20 ಇನಿಂಗ್ಸ್‌ಗಳಲ್ಲಿ 3 ಶತಕ ಸಿಡಿಸಿದ್ದರು.

ಈ ವರ್ಷದ ಐಪಿಎಲ್‌ನಲ್ಲಿ 800ಕ್ಕೂ ಅಧಿಕ ರನ್ ಕಲೆ ಹಾಕಿದ ಗಿಲ್ ಅವರು ವಿರಾಟ್ ಕೊಹ್ಲಿ(2016ರಲ್ಲಿ 973 ರನ್) ನಂತರ ಈ ಸಾಧನೆಗೈದ ಭಾರತದ 2ನೇ ಹಾಗೂ ವಿಶ್ವದ 4ನೇ ಆಟಗಾರ ಎನಿಸಿಕೊಂಡರುು. ಗಿಲ್ ಪ್ರಸಕ್ತ ಟೂರ್ನಿಯಲ್ಲಿ 16 ಪಂದ್ಯಗಳಲ್ಲಿ 3 ಶತಕ ಹಾಗೂ 5 ಅರ್ಧಶತಕಗಳ ಸಹಿತ ಒಟ್ಟು 851 ರನ್ ಗಳಿಸಿದ್ದಾರೆ. 14ನೇ ಓವರ್‌ನಲ್ಲಿ ಗ್ರೀನ್ ಎಸೆತದಲ್ಲಿ ಒಂಟಿ ರನ್ ಪಡೆದು ಶತಕ ತಲುಪಿದ ಗಿಲ್ ಐಪಿಎಲ್ ಪ್ಲೇ ಆಫ್‌ನಲ್ಲಿ ಶತಕ ಸಿಡಿಸಿದ 7ನೇ ಆಟಗಾರ ಎನಿಸಿಕೊಂಡರು. 23 ವರ್ಷದ ಗಿಲ್ ಈ ಮೈಲಿಗಲ್ಲು ತಲುಪಿದ ಕಿರಿಯ ಆಟಗಾರನೆಂಬ ಕೀರ್ತಿಗೆ ಭಾಜನರಾದರು.

49 ಎಸೆತಗಳಲ್ಲಿ ಶತಕ ಪೂರೈಸಿದ ಗಿಲ್ ಐಪಿಎಲ್‌ನ ಪ್ಲೇ ಆಫ್‌ನಲ್ಲಿ ವೇಗವಾಗಿ ಶತಕದ ಸಿಡಿಸಿದ ಆಟಗಾರರ ಪೈಕಿ ಒಬ್ಬರೆನಿಸಿಕೊಂಡರು. ವೃದ್ದಿಮಾನ್ ಸಹಾ(2014ರ ಫೈನಲ್) ಹಾಗೂ ರಜತ್ ಪಾಟಿದಾರ್(2022ರ ಎಲಿಮಿನೇಟರ್)ಅವರೊಂದಿಗೆ ದಾಖಲೆ ಹಂಚಿಕೊಂಡರು.

ಒಂದೇ ಋತುವಿನಲ್ಲಿ 3 ಶತಕಗಳನ್ನು ಬಾರಿಸಿರುವ ಗಿಲ್ ಅವರು ವಿರಾಟ್ ಕೊಹ್ಲಿ(2016ರಲ್ಲಿ 4 ಶತಕ) ಹಾಗೂ ಜೋಸ್ ಬಟ್ಲರ್(4 ಶತಕ, 2022)ನಂತರ ಒಂದೇ ಋತುವಿನಲ್ಲಿ ಹೆಚ್ಚು ಶತಕ ಸಿಡಿಸಿದ ಸಾಧನೆ ಮಾಡಿದರು.

ಗಿಲ್ 17ನೇ ಓವರ್‌ನಲ್ಲಿ ವೇಗಿ ಆಕಾಶ್ ಬೌಲಿಂಗ್‌ನಲ್ಲಿ 60 ಎಸೆತಗಳಲ್ಲಿ 129 ರನ್ ಗಳಿಸಿ ಔಟಾದರು. ಗಿಲ್ ಇನಿಂಗ್ಸ್‌ನಲ್ಲಿ 10 ಸಿಕ್ಸರ್ ಹಾಗೂ 7 ಬೌಂಡರಿಗಳಿದ್ದವು.

Similar News