'ಬಂಧಿತ' ಚೀತಾಗಳ ಅರಣ್ಯ ರೋದನ

Update: 2023-05-27 04:33 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಭಾರತದ ಮಟ್ಟಿಗೆ ನಶಿಸಿದ ಪ್ರಾಣಿ ಚೀತಾಕ್ಕೆ ಈ ನೆಲದಲ್ಲೇ ಮತ್ತೆ 'ಜೀವ' ನೀಡುವ ದಶಕಗಳ ಪ್ರಯತ್ನ 'ಚೀತಾ ಮರು ಸೇರ್ಪಡೆ ಯೋಜನೆ'ಯ ಮೇಲೆ ಇದೀಗ ಕರಿಛಾಯೆ ಕವಿದಿದೆ. ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿದ್ದ ಎರಡು ಚೀತಾಮರಿಗಳು ಗುರುವಾರ ಅಸು ನೀಗಿವೆ. ಈ ಸಾವುಗಳೂ ಸೇರಿದಂತೆ ಕಳೆದ ಎರಡು ತಿಂಗಳ ಒಳಗೆ ಮೂರು ದೊಡ್ಡ ಚೀತಾಗಳು ಮತ್ತು ಮೂರು ಮರಿ ಚೀತಾಗಳು ದುರಂತ ಅಂತ್ಯ ಕಂಡಂತಾಗಿದೆ. ಇದು ಆತಂಕಕಾರಿ. ಸರಿಯಾಗಿ ಎಪ್ಪತ್ತು ವರ್ಷಗಳ ಹಿಂದೆ ಆಗಿನ ಕೇಂದ್ರ ಸರಕಾರ 'ಭಾರತದಲ್ಲಿ ಚೀತಾ ಸಂತತಿ ನಶಿಸಿದೆ' ಎಂದು ಅಧಿಕೃತವಾಗಿ ಪ್ರಕಟಿಸಿತ್ತು. ಜತೆಗೆ ಈ ದೇಶದಲ್ಲಿ ಈ ಪ್ರಾಣಿ ಸಂತತಿಯ ಅಭಿವೃದ್ಧಿ ಕುರಿತು ಆಸಕ್ತಿ ತೋರಿತ್ತು. ಎಪ್ಪತ್ತರ ದಶಕದಲ್ಲಿ ಇರಾನ್‌ನಿಂದ ಇಲ್ಲಿಗೆ ಚೀತಾವನ್ನು ತರಿಸಿಕೊಳ್ಳುವ ಬಗ್ಗೆ ಮಾತುಕತೆಯೂ ನಡೆದಿತ್ತು. ಆದರೆ ಒಂದೂವರೆ ದಶಕದ ಹಿಂದೆ ಇಂತಹ ಪ್ರಯತ್ನಗಳಿಗೆ ಫಲ ಸಿಗತೊಡಗಿತು. ಆಗಿನ ಕೇಂದ್ರದ ಯುಪಿಎ ಸರಕಾರದಲ್ಲಿ ಪರಿಸರ ಸಚಿವರಾಗಿದ್ದ ಜೈರಾಮ್ ರಮೇಶ್ ಈ ನಿಟ್ಟಿನಲ್ಲಿ ದಾಪುಗಾಲು ಹಾಕಿದ್ದರು. 2008ರಲ್ಲಿ ಮನಮೋಹನ್ ಸಿಂಗ್ ಸರಕಾರ 'ಚೀತಾ ಮರು ಸೇರ್ಪಡೆ' ಯೋಜನೆಗೆ ಹಸಿರು ನಿಶಾನೆ ತೋರಿಸಿತು. ಇದಕ್ಕೆ ಸಂಬಂಧಿಸಿದ ಸಮೀಕ್ಷೆ, ಮಾತುಕತೆಗಳು ತೀವ್ರ ಗತಿಯಲ್ಲೇ ನಡೆದವು. ಇನ್ನೇನು ಚೀತಾಗಳನ್ನು ಭಾರತಕ್ಕೆ ಕರೆತರಲು ಕ್ಷಣಗಣನೆ ಎನ್ನುವಾಗ 2013ರಲ್ಲಿ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತ್ತು. ಆದರೆ ಸುಪ್ರೀಂ ಕೋರ್ಟ್ 2020ರಲ್ಲಿ ಇದೇ ತಡೆಯಾಜ್ಞೆ ಯನ್ನು ತೆರವು ಗೊಳಿಸಿತು. ಈ ಯೋಜನೆಯ ಚಟುವಟಿಕೆಗಳು ಮುಂದುವರಿದವು. ಹೀಗಾಗಿ ಹೋದ ವರ್ಷ ಸೆಪ್ಟಂಬರ್ 17ರಂದು ನಮೀಬಿಯಾದಿಂದ ಹನ್ನೆರಡು ಚೀತಾಗಳನ್ನು ಮತ್ತು ಈ ವರ್ಷ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ಎಂಟು ಚೀತಾಗಳನ್ನು ಕರೆತರಲಾಯಿತು. ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದಂದು ನಮೀಬಿಯಾದ ಚೀತಾಗಳನ್ನು ಸ್ವತಃ ಅವರ ಸಮ್ಮುಖದಲ್ಲಿಯೇ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಯಿತು. ಸ್ವಾತಂತ್ರ್ಯಾ ನಂತರ ಇಲ್ಲಿ ಚೀತಾ ಸಂತತಿ ಉಳಿಸುವುದಕ್ಕೆ ನಡೆದ ಎಲ್ಲಾ ವೈಜ್ಞಾನಿಕ ನೆಲೆಯ ಪ್ರಯತ್ನಗಳ ನೆನಪುಗಳು ಅಂದು ಹಿನ್ನೆಲೆಗೆ ಸರಿದು ಪ್ರಧಾನಿಯವರ ಹುಟ್ಟು ಹಬ್ಬ ಮತ್ತು ಅವರ ಕುನೊ ಭೇಟಿಯ ಸುದ್ದಿಗಳೇ ಮುನ್ನೆಲೆಗೆ ಬಂದವು. ಆ ನಂತರವಂತೂ ಎಲ್ಲರ ಸ್ಮತಿಪಠಲದಿಂದ ಕುನೊ ಮತ್ತು ಚೀತಾಗಳು ಅಳಿಸಿ ಹೋದವು.

ಇದೀಗ ಕುನೊದಲ್ಲಿ ಒಂದರ ಹಿಂದೊಂದು ಚೀತಾಗಳು ಸಾಯುತ್ತಿರುವ ಸುದ್ದಿಗಳು ವರದಿಯಾಗುತ್ತಿವೆ. ಚೀತಾಗಳನ್ನು ಭಾರತಕ್ಕೆ ಕರೆತರುವುದಕ್ಕೆ ಮೊದಲು ಅನೇಕ ವನ್ಯಜೀವಿ ತಜ್ಞರು ಉಪಯುಕ್ತ ಸಲಹೆಗಳನ್ನು ನೀಡಿದ್ದರು. ಅಲ್ಲದೆ ಚೀತಾಗಳು ಪ್ರತಿಕೂಲ ವಾತಾವರಣದಲ್ಲಿ ಹೊಂದಿಕೊಳ್ಳಲು ಪಡಿಪಾಟಲು ಪಡುತ್ತವೆ ಎಂಬ ಮುನ್ನೆಚ್ಚರಿಕೆ ನೀಡಿದ್ದರು. ಅವಸರ ಬೇಡ ಎಂದಿದ್ದರು. ಆದರೆ ಮೋದಿಯವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಮೈಮರೆತ್ತಿದ್ದವರೆಲ್ಲರೂ ಇಂತಹ ಸಲಹೆಗಳನ್ನು ಅದೆಷ್ಟರ ಮಟ್ಟಿಗೆ ಸ್ವೀಕರಿಸಿದರೋ ಗೊತ್ತಿಲ್ಲ. ಒಂದು ಭೌಗೋಳಿಕ ಪ್ರದೇಶ, ಹವಾಮಾನಕ್ಕೆ ಹೊಂದಿಕೊಂಡ ಚೀತಾಗಳನ್ನು ಖಂಡಾಂತರ ಸ್ಥಳಾಂತರ ಮಾಡುವಾಗ ಸೂಕ್ಷ್ಮವಾದ ವೈಜ್ಞಾನಿಕ ಅಧ್ಯಯನ ಸಮೀಕ್ಷೆಗಳ ಅಗತ್ಯ ಇದೆ. ಚೀತಾಗಳು ಸದಾ ತಮ್ಮ ನಿರ್ದಿಷ್ಟ ಪ್ರದೇಶದ ಓಡಾಟ ವ್ಯಾಪ್ತಿ ವಿಸ್ತರಣೆಯ ಜಾಯಮಾನ ಹೊಂದಿರುತ್ತವೆ. ಕುನೊ ಪ್ರದೇಶ ಇಪ್ಪತ್ತು ಚೀತಾಗಳಿಗೆ ಸಾಲುವುದಿಲ್ಲ ಎಂದೂ ತಜ್ಞರು ಅಭಿಪ್ರಾಯ ಪಟ್ಟಿದ್ದರು. ಪ್ರಾಣಿಗಳ ಸಂಘರ್ಷದ ಅಪಾಯವೂ ಚೀತಾಗಳಿಗೆ ಎದುರಾಯಿತು. ಜತೆಗೆ ಈ ಚೀತಾಗಳಿಗೆ ಅಗತ್ಯವಾದ ಜಿಂಕೆ, ಮೊಲ ಮುಂತಾದವುಗಳ ಬೇಟೆಗೆ ಪ್ರಯಾಸ ಹೆಚ್ಚಿತು. ಆಫ್ರಿಕಾದ ತಮ್ಮದೇ ವಿಶಾಲ ಸಮೃದ್ಧ ಸಾಮ್ರಾಜ್ಯದಲ್ಲಿ ಸಂತೃಪ್ತಿಯಿಂದ ವಿಹರಿಸುತ್ತಿದ್ದ ಚೀತಾಗಳಿಗೆ ಕುನೊ ಬಂದಿಖಾನೆಯಂತಾಯಿತು ಎಂಬ ಅರಿವೂ ಆಡಳಿತಗಾರರಲ್ಲಿ ಮೂಡಲಿಲ್ಲ ಏಕೆ.

ಈಚೆಗೆ ಕುನೊ ಉದ್ಯಾನವನ ಪರಿಸರದಲ್ಲಿ 47 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಬಿಸಿಗಾಳಿ ತತ್ತರಗೊಳಿಸಿದೆ. ಸ್ಥಳಾಂತರಗೊಂಡ ಚೀತಾಗಳ ಪಾಡು ದಯನೀಯವಾಯಿತು. ನಮೀಬಿಯಾದಿಂದ ಪ್ರಧಾನಿ ಹುಟ್ಟುಹಬ್ಬದಂದು ಕುನೊಗೆ ಬಂದ ಜ್ವಾಲಾ ಎರಡು ತಿಂಗಳ ಹಿಂದೆ ನಾಲ್ಕು ಮರಿಗಳಿಗೆ ಜನ್ಮ ನೀಡಿತು. ಸುತ್ತಲೂ ಬೇಲಿ ಹಾಕಿದ ಕೃತಕ ಪರಿಸರದಲ್ಲಿ ಈ ತಾಯಿ ಮಕ್ಕಳು ಇದ್ದವು. ವೈದ್ಯರು ಕಣ್ಣಲ್ಲಿ ಕಣ್ಣಿಟ್ಟು ನೋಡಿದರೂ ಮೂರು ಮರಿಗಳು ಸಾವನ್ನಪ್ಪಿವೆ. ಮರಿಗಳೆಲ್ಲವೂ ದಿನೇ ದಿನೇ ಕ್ಷೀಣಿಸಿವೆ, ತೂಕ ಕಡಿಮೆಯಾಗಿವೆ, ನಿರ್ಜಲೀಕರಣದಿಂದ ಬಳಲಿವೆ ಎಂದೂ ತಜ್ಞರು ಹೇಳಿದ್ದಾರೆ. ಮಾರ್ಚ್‌ನಲ್ಲಿ ಸಾಶಾ ಎಂಬ ಚೀತಾ ಮೂತ್ರಕೋಶದ ಸಮಸ್ಯೆ ಯಿಂದ ಸತ್ತಿದೆ. ಆರು ವರ್ಷ ವಯಸ್ಸಿನ ಉದಯ್ ಕುನೊಗೆ ಬಂದ ಎರಡೇ ತಿಂಗಳಲ್ಲಿ ಅಂದರೆ ಎಪ್ರಿಲ್‌ನಲ್ಲಿ ಹೃದಯ ಸಂಬಂಧಿ ರೋಗದಿಂದ ಸಾವನ್ನಪ್ಪಿದೆ. ಸಾಯುವ ಕೆಲವು ದಿನಗಳ ಹಿಂದೆಯೇ ಇದು ನಡೆಯಲೂ ಆಗದೆ ಬಿದ್ದುಕೊಂಡಿತ್ತೆನ್ನಲಾಗಿದೆ.

ದಕ್ಷಾ ಎಂಬ ಚೀತಾ ಇದೇ ತಿಂಗಳ ಮೊದಲ ವಾರ ಪ್ರಾಣಿ ಸಂಘರ್ಷದಲ್ಲಿ ತೀವ್ರವಾಗಿ ಗಾಯಗೊಂಡು ಸತ್ತಿದೆ. ಎಲ್ಲಾ ಚೀತಾಗಳಿಗೂ ರೇಡಿಯೊ ಕಾಲರ್ ಹಾಕಲಾಗಿದೆ. ಅವುಗಳು ತಮ್ಮ ಸೀಮಿತ ವಲಯದಲ್ಲಿ ಸದಾ ತಜ್ಞರ ಕಣ್ಗಾವಲಿನಲ್ಲಿ ಬದುಕುತ್ತಿವೆ. ಈ ಕಟ್ಟೆಚ್ಚರದ ನಡುವೆಯೂ ಪವನ್ ಎಪ್ರಿಲ್ ಮೊದಲ ವಾರ ತಪ್ಪಿಸಿಕೊಂಡಿತ್ತು. ಕೆಲವೇ ಗಂಟೆಗಳಲ್ಲಿ ಅದು ನೂರೈವತ್ತು ಕಿ.ಮೀ. ಕ್ರಮಿಸಿ ಜಾನ್ಸಿಯತ್ತ ಹೋಗುತ್ತಿತ್ತು. ಅದಕ್ಕೆ ಅರಿವಳಿಕೆ ನೀಡಿ ಬಂಧಿಸಲಾಗಿದೆ. ಇದು ಎರಡೆರಡು ಸಲ ಇಂತಹ ಸಾಹಸ ಮಾಡಿದೆ. ಚೀತಾಗಳ ಮೇಲಿನ ಇಂತಹ ಅವಾಂತರ ಮತ್ತು ಕ್ರೌರ್ಯಕ್ಕೆ ಹೊಣೆಗಾರರನ್ನು ಹುಡುಕುವ ಮೊದಲು ಪ್ರಸ್ತುತ ಜೀವ ಉಳಿಸಿಕೊಂಡಿರುವ ಚೀತಾಗಳನ್ನು ರಕ್ಷಿಸುವ ಕೆಲಸಕ್ಕೆ ಆದ್ಯತೆ ನೀಡಬೇಕಿದೆ. ಇನ್ನಾದರೂ ಈ ಮೂಕ ಪ್ರಾಣಿಗಳ ಪರೋಕ್ಷ ಕಗ್ಗೊಲೆಗೆ ಇತಿಶ್ರೀ ಹೇಳಲೇ ಬೇಕಿದೆ. ಕಳೆದ ವಾರ ಸುಪ್ರೀಂ ಕೋರ್ಟ್ ಕೂಡಾ ಈ ಸಾವು ನೋವುಗಳ ಬಗ್ಗೆ ಕಳವಳ ವ್ಯಕ್ತ ಪಡಿಸಿದೆ. ''ಬದುಕಿರುವ ಚೀತಾಗಳನ್ನು ಉಳಿಸಲು ಏನು ಕ್ರಮ ಕೈಗೊಂಡಿದ್ದೀರಿ'' ಎಂದೂ ಪ್ರಶ್ನಿಸಿದೆ.

ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಓಡುವ ಚೀತಾಗಳು ನಮ್ಮ ನಡುವಣ ಆಕರ್ಷಕ ಪ್ರಾಣಿ ಮತ್ತು ಕೌತುಕದ ಜೀವ ವೈವಿಧ್ಯ. ಮೈತುಂಬಾ ಕಪ್ಪುಬಟ್ಟುಗಳನ್ನು ಹೊಂದಿರುವ ಇದರ ಬಾಲವಂತೂ ಬಲು ಬಲಿಷ್ಠ ಮತ್ತು ಉದ್ದ ಕೂಡ. ಹೀಗೆ ತನ್ನದೇ ವೈಶಿಷ್ಟ್ಯ ಹೊಂದಿರುವ ಈ ಚೀತಾ ಸಂಕುಲದ ಬಗ್ಗೆ ಮೊಗಲ್ ದೊರೆ ಅಕ್ಬರ್‌ಗೆ ಅಪಾರ ಪ್ರೀತಿ ಇತ್ತಲ್ಲದೆ, ಆತ ಸಾವಿರಕ್ಕೂ ಹೆಚ್ಚು ಚೀತಾಗಳನ್ನು ಸಾಕಿದ್ದಕ್ಕೆ ಲಿಖಿತ ದಾಖಲೆಗಳಿವೆ. ಈ ದೇಶದಲ್ಲಿ ವಿವಿಧ ಕಾರಣಗಳಿಂದ ಚೀತಾ ಸಂತತಿ ನಶಿಸುತ್ತಾ ಬಂದಿತು. ಹೀಗಾಗಿ ಕಳೆದ ಶತಮಾನದ ಮೊದಲಾರ್ಧದಲ್ಲಿ ವಿವಿಧ ಸಂಸ್ಥಾನಗಳ ರಾಜರು ಸುಮಾರು ಇನ್ನೂರಕ್ಕೂ ಹೆಚ್ಚು ಚೀತಾಗಳನ್ನು ವಿದೇಶಗಳಿಂದ ತರಿಸಿಕೊಂಡಿದ್ದರು. ಹಾಗಿದ್ದರೂ ಈ ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷವೇ ಕೊನೆಯ ಚೀತಾ ಸಾವನ್ನಪ್ಪಿತ್ತು. ಹೀಗಾಗಿ ನೆಹರೂ ಸರಕಾರ ಚೀತಾ ಸಂಕುಲದ ಅಭಿವೃದ್ಧಿಗೆ ವಿಶೇಷ ಆಸಕ್ತಿ ತೋರಿತ್ತು. ಆ ದಿನಗಳಿಂದಲೇ ಈ ಕುರಿತು ಸಂಶೋಧನೆ, ಸಮೀಕ್ಷೆಗಳು ನಡೆಯುತ್ತಲೇ ಬಂದಿವೆ. ಖಂಡಾಂತರ ಸ್ಥಳಾಂತರಗೊಂಡ ಚೀತಾಗಳನ್ನು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಮಾಡಲು ಬೇಕಿರುವ ಅಗತ್ಯಗಳ ಬಗ್ಗೆ ಸಂಶೋಧನೆಗೆ ಹೆಚ್ಚು ಒತ್ತು ನೀಡಬೇಕಿದೆ. ವನ್ಯಜೀವಿಗಳಿಗೆ ಸಂಬಂಧಿಸಿದ ಇಂತಹ ವಿಷಯಗಳನ್ನು ಸಂಪೂರ್ಣವಾಗಿ ತಜ್ಞರ ವಿವೇಚನೆಗೇ ಬಿಡಬೇಕು. ಯಾರನ್ನೋ ಸಂಪ್ರೀತಿಗೊಳಿಸುವುದರ ಸುತ್ತ ಗಿರಕಿ ಹೊಡೆದರೆ, ಕಾರ್ಯಕ್ರಮಗಳನ್ನು ರೂಪಿಸಿದರೆ ಇಂತಹ ಅನಾಹುತಗಳು ಸಹಜ.

Similar News