ಹಿಂದಿನ ಸರಕಾರದ ತಾತ್ಕಾಲಿಕ ನೇಮಕಾತಿ ರದ್ದತಿ ಹಿನ್ನೆಲೆ: ನೌಕರಿ ಕಳೆದುಕೊಂಡ ಪ್ರವೀಣ್ ನೆಟ್ಟಾರು ಪತ್ನಿ

ಕಾಂಗ್ರೆಸ್ ನಿಂದ ದ್ವೇಷ ರಾಜಕಾರಣ ಎಂದು ಟೀಕಿಸಿದ ಬಿಜೆಪಿ

Update: 2023-05-27 06:05 GMT

ಸುಳ್ಯ, ಮೇ 27: ಸರಕಾರ ಬದಲಾದ ಬೆನ್ನಲ್ಲೇ ಹಿಂದಿನ ಸರಕಾರ ಮಾಡಿರುವ ಎಲ್ಲ ತಾತ್ಕಾಲಿಕ ನೇಮಕಾತಿಗಳನ್ನು ರದ್ದುಗೊಳಿಸಲಾಗಿದೆ. ನೂತನ ಸರಕಾರದ ಈ ಆದೇಶವು ಅನುಕಂಪದ ಆಧಾರದಲ್ಲಿ ನೌಕರಿ ಪಡೆದಿದ್ದ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಪತ್ನಿಯ ನೌಕರಿಗೂ ಕುತ್ತು ತಂದಿದೆ.

ಪ್ರವೀಣ್‌ ನೆಟ್ಟಾರ್‌ ಕಳೆದ ವರ್ಷ ಜುಲೈ 26ರಂದು ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದರು. ಈ ಸಂದರ್ಭ ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಕುಮಾರಿಗೆ ಮಾನವೀಯ ನೆಲೆಯಲ್ಲಿ ಮುಖ್ಯಮಂತ್ರಿಯ ವಿಶೇಷಾಧಿಕಾರ ಬಳಸಿ ಕೆಲಸ ಕೊಡಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ, ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಭರವಸೆ ನೀಡಿದ್ದರು. ಅದರಂತೆ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಚಿವಾಲಯದಲ್ಲಿ ಹಿರಿಯ ಸಹಾಯಕಿ (ಗ್ರೂಪ್ ಸಿ) ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಿಸಿ 2022ರ ಸೆಪ್ಟೆಂಬರ್ 22ರಂದು ಸರಕಾರ ಆದೇಶ ಹೊರಡಿಸಿತ್ತು. ನೂತನ ಕುಮಾರಿಯವರ ವಿನಂತಿ ಮೇರೆಗೆ ಅವರಿಗೆ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ನೌಕರಿ ಕಲ್ಪಿಸಲಾಗಿತ್ತು. ಕಳೆದ ಅಕ್ಟೋಬರ್ 14ರಿಂದ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು.

ಸರಕಾರ ಬದಲಾದಾಗ ಹಿಂದಿನ ತಾತ್ಕಾಲಿಕ ನೇಮಕಾತಿಗಳು ಸಹಜವಾಗಿ ರದ್ದಾಗುತ್ತವೆ. ಹೀಗಾಗಿ ನೂತನ ಕುಮಾರಿಯ ನೇಮಕಾತಿ ರದ್ದುಗೊಂಡಿದೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್ ಸರಕಾರದಿಂದ ದ್ವೇಷದ ರಾಜಕೀಯ: ಬಿಜೆಪಿ ಟೀಕೆ

ಈ ಬಗ್ಗೆ ಟೀಕಿಸಿರುವ ರಾಜ್ಯ ಬಿಜೆಪಿ, ಈಗ ಆಡಳಿತಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕೀಯವನ್ನು ಮುಂದುವರಿಸಿರುವುದು ಖಂಡನೀಯ. ಪ್ರವೀಣ್ ನೆಟ್ಟಾರು ಪತ್ನಿಯನ್ನು ಉದ್ಯೋಗದಿಂದ ವಜಾ ಮಾಡುವ ಅಮಾನವೀಯ ಆದೇಶವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದೆ.

ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, "ಕಾಂಗ್ರೆಸ್ ಪಕ್ಷವೇ ಸಾಕಿ‌ ಬೆಳೆಸಿದ ಪಿಎಫ್ಐ ಎಂಬ ಭಯೋತ್ಪಾದಕ ಸಂಘಟನೆಯ ಕೋಮು ದ್ವೇಷಕ್ಕೆ ಒಳಪಟ್ಟು, ಪಿಎಫ್‌ಐ ಗೂಂಡಾಗಳಿಂದ ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು ಅವರ ಧರ್ಮಪತ್ನಿಗೆ ಜೀವನ ನಿರ್ವಹಣೆಗಾಗಿ ಅನುಕಂಪದ ಆಧಾರದಲ್ಲಿ ನಮ್ಮ ಸರ್ಕಾರ ಮಂಗಳೂರಿನ ಡಿ.ಸಿ. ಕಚೇರಿಯಲ್ಲಿ ಉದ್ಯೋಗ ಕಲ್ಪಿಸಿತ್ತು. ಈಗ ಆಡಳಿತಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ತನ್ನ ದ್ವೇಷದ ರಾಜಕೀಯವನ್ನು ಮುಂದುವರೆಸಿರುವುದು ಖಂಡನೀಯ. ಈ ಕೂಡಲೇ ಸರ್ಕಾರ ಉದ್ಯೋಗದಿಂದ ವಜಾಮಾಡುವ ಅಮಾನವೀಯ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸುತ್ತೇವೆ. ಪಿಎಫ್ಐ ಕೈಗೊಂಬೆಯಂತೆ ಸಿದ್ದರಾಮಯ್ಯರವರ ಸರಕಾರ ಕುಣಿಯುತ್ತಿರುವುದು ರಾಜ್ಯದ ದುರಂತ" ಎಂದು ಟೀಕಿಸಿದೆ.

Similar News