ನೂತನ ಸಂಸತ್‌ ಕಟ್ಟಡದ ಕೆಲವೊಂದು ಪ್ರಮುಖ ಮಾಹಿತಿ ಇಲ್ಲಿದೆ...

Update: 2023-05-27 11:11 GMT

ಹೊಸದಿಲ್ಲಿ: ಮೇ 28 (ರವಿವಾರ) ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿರುವ ನೂತನ ಸಂಸತ್‌ ಕಟ್ಟಡದ ಬಗ್ಗೆ ಎಲ್ಲೆಡೆ ಸಾಕಷ್ಟು ಕುತೂಹಲವಿದೆ. ಈ ಕಟ್ಟಟದ ಕುರಿತು ಕೆಲವೊಂದು ಆಸಕ್ತಿಕರ ಮಾಹಿತಿ ಇಲ್ಲಿದೆ. ಈ ಕಟ್ಟಡ ಈಗಿನ ಸಂಸತ್‌ ಭವನದ ಸಮೀಪವೇ ಇದೆ.

ನೂತನ ಸಂಸತ್‌ ಕಟ್ಟಡವು ನಾಲ್ಕು ಅಂತಸ್ತುಗಳನ್ನು ಹೊಂದಿದೆ ಹಾಗೂ 64,500 ಚದರ ಮೀಟರ್‌ ವ್ಯಾಪ್ತಿ ಹೊಂದಿದೆ.

ಈ ಸಂಸತ್‌ ಕಟ್ಟಡ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಸೆಂಟ್ರಲ್‌ ವಿಸ್ತಾ ಯೋಜನೆಯ ಒಂದು ಭಾಗ ಆಗಿದೆ.

ಈ ಕಟ್ಟಡದ ವಿನ್ಯಾಸದ ಕೆಲಸವನ್ನು ಅಹ್ಮದಾಬಾದ್‌ ಮೂಲದ ಎಚ್‌ಸಿಪಿ ಡಿಸೈನ್‌ ಪ್ಲಾನಿಂಗ್‌ ಪ್ರೈವೇಟ್‌ ಲಿಮಿಟೆಡ್‌ಗೆ ಹಲವಾರು ಸುತ್ತುಗಳ ಬಿಡ್ಡಿಂಗ್‌ ನಂತರ ನೀಡಲಾಗಿತ್ತು. ಕಟ್ಟಡವನ್ನು ಟಾಟಾ ಸಮೂಹ ರೂ. 971 ಕೋಟಿ ವೆಚ್ಚದಲ್ಲಿ ಎರಡು ವರ್ಷಗಳಿಗೂ ಕಡಿಮೆ ಸಮಯದಲ್ಲಿ ನಿರ್ಮಿಸಿದೆ.

ಸರಕಾರದ ವೆಬ್‌ಸೈಟ್‌ನಲ್ಲಿನ ಮಾಹಿತಿ ಪ್ರಕಾರ ನೂತನ ಸಂಸತ್‌ ಕಟ್ಟಡ ನಿರ್ಮಾಣಕ್ಕೆ 26,045 ಮೆಟ್ರಿಕ್‌ ಟನ್‌ ಉಕ್ಕು, 63,807 ಮೆಟ್ರಿಕ್‌ ಟನ್‌ ಸಿಮೆಂಟ್‌, 9,689 ಮೆಟ್ರಿಕ್‌ ಟನ್‌ ಫ್ಲೈ ಆಶ್‌ ಬಳಸಲಾಗಿದೆ.

ಹೆಚ್ಚುವರಿ ಸ್ಥಳಾವಲಾಶ: ಈ ಹೊಸ ಕಟ್ಟಡದಲ್ಲಿ ಲೋಕಸಭೆಯಲ್ಲಿ 882 ಸಂಸದರಿಗೆ ಸ್ಥಳಾವಕಾಶವಿದೆ. ಈಗಿನ ಸಂಸತ್‌ ಕಟ್ಟಡದಲ್ಲಿ 552 ಸಂಸದರಿಗೆ ಸ್ಥಳಾವಕಾಶವಿದೆ. ನೂತನ ಕಟ್ಟಡದಲ್ಲಿ ರಾಜ್ಯಸಭೆಯಲ್ಲಿ ಈಗಿನ 245 ಬದಲು 384 ಸಂಸದರಿಗೆ ಸ್ಥಳಾವಕಾಶವಿದೆ.

ಹಳೆಯ ಕಟ್ಟಡಕ್ಕಿಂತ ಸರಿಸುಮಾರು ಮೂರು ಪಾಲು ಹೊಸ ಕಟ್ಟಡ ದೊಡ್ಡದಾಗಿದೆ. ಲೋಕಸಭೆಯ ವಿನ್ಯಾಸ ಭಾರತದ ರಾಷ್ಟ್ರೀಯ ಹಕ್ಕಿಯಾದ ನವಿಲಿನಿಂದ ಪ್ರೇರಿತವಾಗಿದ್ದರೆ ರಾಜ್ಯಸಭೆಯ ವಿನ್ಯಾಸ ಭಾರತದ ರಾಷ್ಟ್ರೀಯ ಹೂವಾದ ತಾವರೆಯಿಂದ ಪ್ರೇರಿತವಾಗಿದೆ.

ಜಂಟಿ ಅಧಿವೇಶನಕ್ಕಾಗಿ ಈ ಕಟ್ಟಡದಲ್ಲಿ 1,272 ಸದಸ್ಯರಿಗೆ ಹಾಗೂ ಇನ್ನೂ 1,140 ಮಂದಿಗೆ ಆಸೀನರಾಗಲು ವ್ಯವಸ್ಥೆಯಿದೆ.

Similar News