ಪಿಂಚಣಿದಾರರಿಗೆ ನಗದು ರೂಪದಲ್ಲಿ ಪಾವತಿಸಲು ಒಡಿಶಾ ನಿರ್ಧಾರ: ಕಾರಣವೇನು ಗೊತ್ತೇ?

Update: 2023-05-27 13:38 GMT

ಭುಬನೇಶ್ವರ್‌: ಒಡಿಶಾ ಸರ್ಕಾರವು ರಾಜ್ಯದ ಮಧು ಬಾಬು ಪಿಂಚಣಿ ಯೋಜನೆ (ಎಂಬಿಪಿವೈ) ಇದರಡಿಯಲ್ಲಿ ಸಮಾಜದ ದುರ್ಬಲ ವರ್ಗಗಳಿಗೆ ಜೂನ್‌ ತಿಂಗಳಿನಿಂದ ನಗದು ರೂಪದಲ್ಲಿ ಪಿಂಚಣಿ ಒದಗಿಸಲಿದ್ದು ಈಗ ಇರುವ ನೇರ ವರ್ಗಾವಣೆ (ಡೈರೆಕ್ಟ್‌ ಬೆನಿಫಿಟ್‌ ಟ್ರಾನ್ಸ್‌ಫರ್) ಅನ್ನು ಕೈಬಿಡಲಿದೆ. ಪಿಂಚಣಿದಾರರಿಗೆ ತಮ್ಮ ಬ್ಯಾಂಕ್‌ ಖಾತೆಗಳಿಂದ ಹಣ ಪಡೆಯುವ ಹಾಗೂ ಎಂಬಿಪಿವೈ ಪೋರ್ಟಲ್‌ನಲ್ಲಿರುವ ತಾಂತ್ರಿಕ ಸಮಸ್ಯೆಗಳೇ ಸರ್ಕಾರದ ಈ ನಿರ್ಧಾರಕ್ಕೆ ಕಾರಣವಾಗಿದೆ.

ಈ ಎಂಬಿಪಿವೈ ಯೋಜನೆಯು ಮೂಲತಃ ಬಡತನ ರೇಖೆಗಿಂತ ಕೆಳಗಿರುವ 60 ವರ್ಷ ಮೇಲ್ಪಟ್ಟವರಿಗೆ,  ವಿಧವೆಯರಿಗೆ, ಅಂಗವಿಕಲರಿಗೆ ಮತ್ತು ತೃತೀಯ ಲಿಂಗಿಗಳಿಗೆ ವಯೋಮಿತಿಯಿಲ್ಲದೆ ನೀಡಲಾಗುತ್ತದೆ.  ಈ ಯೋಜನೆಯಡಿ 60ರಿಂದ 79 ವರ್ಷ ವಯೋಮಿತಿಯವರಿಗೆ ಮಾಸಿಕ ರೂ 500 ಹಾಗೂ 80 ವರ್ಷ ಮೇಲ್ಪಟ್ಟವರಿಗೆ ಮಾಸಿಕ ರೂ 700 ನೀಡಲಾಗುತ್ತದೆ.

ಈ ಯೋಜನೆಯನ್ನು ರಾಜ್ಯದ ನವೀನ್‌ ಪಟ್ನಾಯಕ್‌ ಸರ್ಕಾರ ಸೆಪ್ಟೆಂಬರ್‌ 2022 ರಲ್ಲಿ ಜಾರಿಗೊಳಿಸಿತ್ತು. ಪ್ರಸ್ತುತ ಒಟ್ಟು 28.5 ಲಕ್ಷ ಫಲಾನುಭವಿಗಳ ಪೈಕಿ 15 ಲಕ್ಷ ಮಂದಿಗೆ ಪಿಂಚಣಿ ಮೊತ್ತ ಬ್ಯಾಂಕ್‌ ಖಾತೆಗೆ ಜಮೆಯಾಗುತ್ತಿದ್ದರೆ ಉಳಿದವರಿಗೆ ನಗದು ರೂಪದಲ್ಲಿ ನೀಡಲಾಗುತ್ತಿದೆ.

ಆದರೆ ಈ ನೇರ ಹಣ ವರ್ಗಾವಣೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಈಗ ಸರ್ಕಾರ ನಿರ್ಧರಿಸಿದ್ದು ನಗದನ್ನು ಪ್ರತಿ ತಿಂಗಳ 15ರಂದು ಪಂಚಾಯತ್‌ ಮಟ್ಟದಲ್ಲಿ ಶಿಬಿರಗಳನ್ನು ಏರ್ಪಡಿಸಿ ನೀಡಲಾಗುವುದು.

ಒಡಿಶಾದಲ್ಲಿ ಪ್ರಮುಖವಾಗಿ ಗ್ರಾಮೀಣ ಭಾಗಗಳಲ್ಲಿ ಬ್ಯಾಂಕಿಂಗ್‌ ಸೌಲಭ್ಯವು ಅಷ್ಟೊಂದು ಲಭ್ಯವಿಲ್ಲದೇ ಇರುವುದರಿಂದ ಸಮಸ್ಯೆ ಉದ್ಭವವಾಗಿದೆ. ಒಡಿಶಾದ ಒಟ್ಟು 6,798 ಗ್ರಾಮ ಪಂಚಾಯತುಗಳಲ್ಲಿ ಅರ್ಧದಷ್ಟು ಪಂಚಾಯತುಗಳಲ್ಲಿ ಬ್ಯಾಂಕ್‌ ಶಾಖೆಗಳಿಲ್ಲ. ಜನರು ದೂರದ ಸ್ಥಳಗಳಿಗೆ ತೆರಳಿ ಪಿಂಚಣಿ ಮೊತ್ತ ಪಡೆಯುವ ಅನಿವಾರ್ಯತೆಯಿದೆ.

ಆದರೆ ಕೇಂದ್ರ ಸರ್ಕಾರ ಒಡಿಶಾ ಸರ್ಕಾರದ ಈ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.

Similar News