ಉಡುಪಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಬಿಜೆಪಿ ಸರಕಾರದ ವೈಫಲ್ಯವೇ ಕಾರಣ: ಪ್ರಸಾದ್‌ರಾಜ್ ಕಾಂಚನ್ ಆರೋಪ

Update: 2023-05-27 14:15 GMT

ಉಡುಪಿ, ಮೇ 27: ಉಡುಪಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಈ ಬಾರಿ ದೊಡ್ಡಮಟ್ಟದಲ್ಲಿ ಕಾಣಿಸಿಕೊಂಡಿರುವ ಕುಡಿಯುವ ನೀರಿನ ಸಮಸ್ಯೆಗೆ ವಾರಾಹಿ ಕುಡಿಯುವ ನೀರಿನ ಯೋಜನೆಯ ಅನುಷ್ಠಾನದಲ್ಲಿ ಹಿಂದಿನ ಬಿಜೆಪಿ ಸರಕಾರದ ವೈಫಲ್ಯವೇ ಕಾರಣ ಎಂದು ಕಾಂಗ್ರೆಸ್ ನಾಯಕ ಪ್ರಸಾದ್‌ರಾಜ್ ಕಾಂಚನ್ ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಸಾದ್‌ರಾಜ್,  ಉಡುಪಿಗೆ ವಾರಾಹಿ ಕುಡಿಯುವ ನೀರಿನ ಯೋಜನೆಯನ್ನು 2022ರ ಡಿಸೆಂಬರ್ ಕೊನೆಯೊಳಗೆ ಅನುಷ್ಠಾನಗೊಳಿಸುವುದಾಗಿ ಘೋಷಿಸಿದ್ದ ಬಿಜೆಪಿ,  ಇನ್ನೂ ಪೈಪ್‌ಲೈನ್ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ ಎಂದು ದೂರಿದರು.

2022ರ ಡಿ.ಕೊನೆಯೊಳಗೆ ಉಡುಪಿ ನಗರಕ್ಕೆ ದಿನದ 24 ಗಂಟೆ ವಾರಾಹಿಯಿಂದ ಶುದ್ಧ ಕುಡಿಯುವ ನೀರು ಪೂರೈಸುತ್ತೇವೆ ಎಂದು ಹೇಳಿದ್ದ ಬಿಜೆಪಿ ಹಾಗೂ ಮಾಜಿ ಶಾಸಕ ಕೆ.ರಘುಪತಿ ಭಟ್ ಯಾವುದೇ ಭರವಸೆಯನ್ನು ಈಡೇರಿಸಲು ಸಫಲರಾಗಿಲ್ಲ. ನಗರದ ಜನತೆ ಇಂದು ಅನುಭವಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಸಂಪೂರ್ಣ ಜವಾಬ್ದಾರಿಯನ್ನು ಬಿಜೆಪಿ ಹೊರಬೇಕಾಗಿದೆ ಎಂದರು.

ಹಾಲಾಡಿಯ ಭರತ್ಕಲ್‌ನಿಂದ ಉಡುಪಿ ನಗರಕ್ಕೆ ನೀರು ಪೂರೈಸುವ ಯೋಜನೆಯ ಕಾಮಗಾರಿಯನ್ನು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (ಕೆಯುಐಡಿಎಫ್‌ಸಿ) ನಡೆಸುತ್ತಿದೆ. ಯೋಜನೆ ಪ್ರಾರಂಭಗೊಳ್ಳುವಾಗ ಎರಡು ವರ್ಷದೊಳಗೆ ಕಾಮಗಾರಿ ಪೂರ್ಣಗೊಂಡು ಉಡುಪಿ ನಗರದ ಜನತೆಗೆ ನೀರು ಲಭ್ಯವಾಗಲಿದೆ ಎಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭರವಸೆ ನೀಡಿದ್ದರು ಎಂದವರು ವಿವರಿಸಿದರು.

320 ಕೋಟಿ ರೂ.ವೆಚ್ಚದ ಈ ಯೋಜನೆಯಲ್ಲಿ ಭರತ್ಕಲ್‌ನಲ್ಲಿ ಡಬ್ಲುಟಿಪಿ ಘಟಕ ನಿರ್ಮಿಸಿ ನಿತ್ಯ 45 ಎಂಎಲ್‌ಡಿ ನೀರನ್ನು ಪಂಪ್ ಮಾಡಿ ನೀರನ್ನು ಮಣಿಪಾಲಕ್ಕೆ ಪೈಪ್‌ಲೈನ್ ಮೂಲಕ ಹಾಯಿಸುವುದು. ಈ ನೀರನ್ನು ಮಣಿಪಾಲದಲ್ಲಿರುವ 25 ಎಂಎಲ್‌ಡಿ ಸಾಮರ್ಥ್ಯದ ಎರಡು ಜಿಎಲ್‌ಎಸ್‌ಆರ್ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿ ಆ ಬಳಿಕ 7 ಓವರ್‌ಹೆಡ್ ಟ್ಯಾಂಕ್‌ಗಳಿಗೆ ನೀರು ಪೂರೈಸುವುದು. ಇಲ್ಲಿಂದ ಈಗಾಗಲೇ ಸಂಪರ್ಕ ಪಡೆದಿರುವ ನಗರದ 17,350 ನೀರಿನ ಸಂಪರ್ಕ ಹಾಗೂ ಹೊಸದಾಗಿ ಪಡೆದಿರುವ ಒಂದು ಸಾವಿರ ಸಂಪರ್ಕಗಳಿಗೆ ದಿನದ 24 ಗಂಟೆಯೂ ನೀರು ಪೂರೈಸುವುದು ಯೋಜನೆಯ ಮೂಲ ಸ್ವರೂಪವಾಗಿತ್ತು.

ಯೋಜನೆ ಸ್ಥಿತಿಗತಿ: ಭರತ್ಕಲ್‌ನಲ್ಲಿ ನಿರ್ಮಿಸಲಾಗುತ್ತಿರುವ ಡಬ್ಲ್ಯುಟಿಪಿ ಘಟಕದ ಸಿವಿಲ್ ಕಾಮಗಾರಿ ಮಾತ್ರ ನಡೆಯುತ್ತಿದೆ. ಯಂತ್ರೋಪಕರಣ ಅಳವಡಿಕೆ, ಘಟಕ ಅನುಷ್ಠಾನ ಸೇರಿದಂತೆ ಸಾಕಷ್ಟು ಕಾಮಗಾರಿ ಇನ್ನೂ ನಡೆಯಬೇಕಿದೆ. ಭರತ್ಕಲ್‌ನಿಂದ ಮಣಿಪಾಲಕ್ಕೆ ಪೈಪ್‌ಲೈನ್ ಮೂಲಕ ನೀರು ಬರುವಾಗ ಐದು ಹೊಳೆಗಳ ಮೂಲಕ ಸಾಗಬೇಕಿದೆ. ಇದಕ್ಕೂ ಪೂರಕ ಕಾಮಗಾರಿ ನಡೆಯಬೇಕಿದೆ.

ಶೇ.80ರಷ್ಟು ಪೈಪ್‌ಲೈನ್ ಕಾಮಗಾರಿ: ಉಡುಪಿ ನಗರದಲ್ಲಿ ಪ್ರಸ್ತುತ ಶೇ.70ರಿಂದ 80ರಷ್ಟು ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡಿದೆ. 7 ಓವರ್‌ಹೆಡ್ ಟ್ಯಾಂಕ್‌ಗಳಲ್ಲಿ 6 ಪೂರ್ಣಗೊಂಡಿದ್ದು, ಕಕ್ಕುಂಜೆಯಲ್ಲಿ ಓವರ್‌ಹೆಡ್ ಟ್ಯಾಂಕ್ ಕಾಮಗಾರಿ ನಡೆಯುತ್ತಿದೆ.

7 ಓವರ್‌ಹೆಡ್ ಟ್ಯಾಂಕ್ ನಿರ್ಮಾಣ, ಪೈಪ್‌ಲೈನ್‌ಗೆ 102 ಕೋಟಿ ರೂ., ಡಬ್ಲ್ಯುಟಿಪಿ ಘಟಕ ನಿರ್ಮಾಣಕ್ಕೆ 65 ಕೋಟಿ ರೂ., ಹಾಲಾಡಿಯಿಂದ ಮಣಿಪಾಲದವರೆಗೆ ಪೈಪ್‌ಲೈನ್ ಕಾಮಗಾರಿಗೆ 115 ಕೋಟಿ ರೂ. ಹಾಗೂ ಯೋಜನೆಯ ಎಂಟು ವರ್ಷಗಳ ನಿರ್ವಹಣೆಗೆ 70 ಕೋಟಿ ರೂ. ನೀಡಲಾಗಿದೆ ಎಂದು ಪ್ರಸಾದ್‌ರಾಜ್ ಕಾಂಚನ್ ತಿಳಿಸಿದರು.

ಕಾಮಗಾರಿ ವಿಳಂಬ: 2 ವರ್ಷದಲ್ಲಿ ಮುಗಿಯಬೇಕಿದ್ದ ಕಾಮಗಾರಿ ವಿಳಂಬ ಗೊಳ್ಳಲು ಯೋಜನೆಯ ಸ್ವರೂಪದಲ್ಲಾದ ಬದಲಾವಣೆ ಕಾರಣ ಎಂದು ಅವರು, ಮೂಲ ಯೋಜನೆಯಲ್ಲಿ ನೀರನ್ನು ಮಣಿಪಾಲದಲ್ಲಿ ಶುದ್ಧೀಕರಿಸುವ ಯೋಜನೆ ರೂಪಿಸಲಾಗಿತ್ತು. ಬಳಿಕ ಪೈಪ್‌ಲೈನ್ ಹಾದುಹೋಗಿರುವ ಗ್ರಾಪಂಗಳಿಗೆ ಉಚಿತ ನೀರು ನೀಡುವುದಕ್ಕಾಗಿ ಹಾಲಾಡಿಯಿಂದ ಬಜೆಯವರೆಗೆ ಪೈಪ್‌ಲೈನ್ ಹಾದುಹೋಗುವ ಗ್ರಾಮೀಣ ಭಾಗದ ಜನರಿಗೂ ಶುದ್ಧೀಕರಿಸಿದ ನೀರು ನೀಡಬೇಕೆಂಬ ಬೇಡಿಕೆಗೆ ಒಪ್ಪಿಕೊಳ್ಳಲಾಯಿತು.

ಇದರಿಂದಾಗಿ ಶುದ್ಧೀಕರಣ ಘಟಕವನ್ನು ಹಾಲಾಡಿಯ ಭರತ್ಕಲ್‌ನಲ್ಲೇ ನಿರ್ಮಿಸಲು ನಿರ್ಧರಿಸಿ 4 ಎಕರೆ ಜಾಗವನ್ನು ಖರೀದಿಸಿ ಶುದ್ಧೀಕರಣ ಘಟಕ ಸ್ಥಾಪನೆಗೊಳ್ಳುತ್ತಿದೆ. ಕೋವಿಡ್, ಪೈಪ್‌ಲೈನ್ ಕಾಮಗಾರಿ ವಿಳಂಬ, ಸೇತುವೆ ನಿರ್ಮಾಣದಲ್ಲಿ ವಿಳಂಬದಿಂದಾಗಿ ನಗರದ ಜನತೆಗೆ ವಾರಾಹಿ ನೀರು ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ವಿಳಂಬವಾಗಿದೆ. ಬಿಜೆಪಿ ಸರಕಾರ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೇ ಕುಡಿಯುವ ನೀರಿನ ಸಮಸ್ಯೆಗೆ ಕಾರಣ ಎಂದವರು ಆರೋಪಿಸಿದರು.

ಇದೀಗ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಆಡಳಿತಕ್ಕೇರಿದೆ. ಆದಷ್ಟು ಬೇಗ  ಯೋಜನೆಯನ್ನು ಆದ್ಯತೆ ಮೇಲೆ ಕೈಗೆತ್ತಿಕೊಂಡು ಉಡುಪಿಗೆ ದಿನದ 24 ಗಂಟೆಯೂ ಕುಡಿಯುವ ನೀರು ದೊರೆಯುವಂತೆ ಮಾಡಲು ತಾವು ಪ್ರಯತ್ನಿಸುವುದಾಗಿ ಅವರು ತಿಳಿಸಿದರು. ಜಿಲ್ಲಾಧಿಕಾರಿ ಹಾಗೂ ಪೌರಾಯುಕ್ತರು ಸಹ ಈ ದಿಶೆಯಲ್ಲಿ ಪ್ರಯತ್ನಿಸುವಂತೆ ತಾವು ಮನವಿ ಮಾಡುವುದಾಗಿ ಪ್ರಸಾದ್‌ರಾಜ್ ತಿಳಿಸಿದರು.

ಇದೀಗ ಮಳೆಗಾಲ ಕರಾವಳಿಗೆ ಕಾಲಿರಿಸುತ್ತಿದೆ. ಇದಕ್ಕೆ ಮೊದಲು ನಗರದಲ್ಲಿ ನೀರು ಹರಿಯುವ ಚರಂಡಿಗಳು ಹಾಗೂ ತೋಡುಗಳ ಹೂಳೆತ್ತುವ ಮೂಲಕ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಬೇಕು. ವಿದ್ಯುತ್ ತಂತಿಗಳಿಗೆ ಅಡ್ಡಿಯಾಗುವ ಮರ ಗೆಲ್ಲು,ಕೊಂಬೆಗಳನ್ನು ಕಡಿಯುವ ಬಗ್ಗೆಯೂ ಗಮನ ಹರಿಸಬೇಕು ಎಂದವರು ಒತ್ತಾಯಿಸಿದರು.

ನಗರಸಭಾ ಸದಸ್ಯರು ಟ್ಯಾಂಕರ್ ಮೂಲಕ ನೀರು ನೀಡುವಾಗ ಪಕ್ಷದ ಆಧಾರದಲ್ಲಿ ಜನರಲ್ಲಿ ತಾರತಮ್ಯ ತೋರುತಿದ್ದಾರೆ ಎಂಬ ಬಗ್ಗೆ ದೂರುಗಳು ಬಂದಿವೆ. ಇದನ್ನು ತಾವು ಖಂಡಿಸುವುದಾಗಿ ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಾದ ರಮೇಶ್ ಕಾಂಚನ್, ವಿಜಯ ಪೂಜಾರಿ, ಶರತ್‌ ಶೆಟ್ಟಿ, ಪ್ರಶಾಂತ್ ಪೂಜಾರಿ, ತಾರಾನಾಥ್ ಮುಂತಾದವರು ಉಪಸ್ಥಿತರಿದ್ದರು.

Similar News