ದೇರಳಕಟ್ಟೆ: ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಮದ್ಯವರ್ಜನ ಶಿಬಿರದ ಸಮಾರೋಪ ಕಾರ್ಯಕ್ರಮ

Update: 2023-05-27 15:25 GMT

ಕೊಣಾಜೆ : ಯಾವುದೇ ಒಬ್ಬ ವ್ಯಕ್ತಿಯ  ಜೀವನ ಮಟ್ಟ ಸುಧಾರಣೆಯಾಗಬೇಕಾದರೆ, ವಿದ್ಯೆ ಯೋಗ್ಯತೆಗೆ ಬೆಲೆ ಬರಬೇಕಾದರೆ ಮದ್ಯಪಾನದಂತಹ ದುಷ್ಛಟಗಳಿಂದ ದೂರವಿರಬೇಕು. ಮದ್ಯಪಾನ ಮಾಡಿದವರು ಯಾವುದೇ ಅಸಹ್ಯ ಕಾರ್ಯಗಳನ್ನು ಮಾಡಲು ಹೇಸುವುದಿಲ್ಲ, ಈ ನಿಟ್ಟಿನಲ್ಲಿ ದುಷ್ಚಟಕ್ಕೆ ಒಳಗಾದವರನ್ನು ಹೊರ ತರುವ ಈ ಕಾರ್ಯಕ್ಕೆ ಹಗಲಿರುಳು ಶ್ರಮಿಸಿದ ಎಲ್ಲಾ ಕಾರ್ಯಕರ್ತರ ಶ್ರಮ ಫಲಕಾರಿಯಾಗಬೇಕಾದರೆ ಮದ್ಯಮುಕ್ತರಾ ದವರು ಮುಂದಿನ ದಿನಗಳಲ್ಲಿ ಆದರ್ಶಯುತವಾಗಿ ಸಮಾಜದ ಆಸ್ತಿಯಾಗಬೇಕು ಎಂದು  ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ ಮಂಗಳೂರು, ನಿಟ್ಟೆ ವಿಶ್ವವಿದ್ಯಾನಿಲಯ ಇದರ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ ಮತ್ತು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ದೇರಳಕಟ್ಟೆಯ ಜಸ್ಟೀಸ್ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಏಳುದಿನಗಳ ಕಾಲ ನಡೆದ 1161ನೇ ಮದ್ಯವರ್ಜನ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮದ್ಯಪಾನದಿಂದ ಘಾಸಿಗೊಂಡಿದ್ದ ಮನಸ್ಸನ್ನು ದುರಸ್ತಿಗೊಳಿಸುವ ಕಾರ್ಯವನ್ನು ಜನಜಾಗೃತಿ ವೇದಿಕೆಯವರು ಮದ್ಯವರ್ಜನ ಶಿಬಿರದ ಮೂಲಕ ಕಳೆದ 6 ದಿನಗಳಿಂದ ಮಾಡಿದ್ದಾರೆ. ಮದ್ಯಮುಕ್ತರಾಗಿ ನವಜೀವನವನ್ನು ಪಡೆದಿರುವ ಶಿಬಿರಾರ್ಥಿಗಳು ಮುಂದಿನ ಜೀವನದಲ್ಲಿ ಮದ್ಯಮುಕ್ತರಾಗುವುದರೊಂದಿಗೆ ತಮ್ಮೊಂದಿಗೆ ಪ್ರತಿಯೊಬ್ಬರು 10 ಮಂದಿ ಮದ್ಯಪಾನಿಗಳನ್ನು ಮದ್ಯಮುಕ್ತಗೊಳಿಸುವ ಪ್ರತಿಜ್ಞೆಯನ್ನು ಮಾಡಬೇಕು ಎಂದು  ಹೇಳಿದರು.

ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಾ„ಪತಿ ಡಾ| ಎನ್. ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಸಹ ಕುಲಾ„ಪತಿ ಡಾ.ಎಮ್. ಶಾಂತಾರಾಮ್ ಶೆಟ್ಟಿ, ಉಪ ಕುಲಪತಿ ಡಾ.ಎಮ್. ಎಸ್. ಮೂಡಿತ್ತಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಿಟ್ಟೆ ಪರಿಗಣಿತ ವಿಶ್ವ ವಿದ್ಯಾನಿಲಯದ, ಕುಲಸಚಿವ ಡಾ. ಹರ್ಷ ಹಾಲಹಳ್ಳಿ, ವೈದ್ಯಕೀಯ ಅಧೀಕ್ಷಕಿ ಡಾ.ಸುಮಲತಾ ಶೆಟ್ಟಿ,  ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ, ತಾಲೂಕು ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್,  ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಗ್ರಾಮಾಭಿವೃದ್ಧಿ ಯೋಜನೆಯ ದ.ಕ. ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಮಂಗಳೂರು ತಾಲೂಕು ಯೋಜನಾಧಿಕಾರಿ ಚೆನ್ನಕೇಶವ ಉಪಸ್ಥಿತರಿದ್ದರು.

ನಿಟ್ಟೆ ವಿಶ್ವ ವಿದ್ಯಾನಿಲಯದ ಮನೋರೋಗ ವಿಭಾಗದ ಮುಖ್ಯಸ್ಥ ಹಾಗೂ ಜನಜಾಗೃತಿ ವೇದಿಕೆಯ ಟ್ರಸ್ಟಿ  ಶ್ರೀನಿವಾಸ್ ಭಟ್ ಸ್ವಾಗತಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯವಾಹ ನಿರ್ದೇಶಕ ಡಾ| ಎಲ್. ಎಚ್. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜನಜಾಗೃತಿ ವೇದಿಕೆಯ ಉಡುಪಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಗಣೇಶ್ ಆಚಾರ್ಯ ಮತ್ತು ಮೇಲ್ವಿಚಾರಕಿ ಜಯಂತಿ ಕಾರ್ಯಕ್ರಮ ನಿರ್ವಹಿಸಿದರು. ಮದ್ಯವರ್ಜನಾ ಶಿಬಿರದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ವಂದಿಸಿದರು.

Similar News