ಮನೆ ತೆರವು ನೊಟೀಸ್: ಉಡುಪಿ ಡಿಸಿಗೆ ಅಂಬೇಡ್ಕರ್ ಯುವಸೇನೆ ಮನವಿ

Update: 2023-05-27 16:39 GMT

ಉಡುಪಿ: ಮಲ್ಪೆ ಕಡಲ ತೀರದ ಪೂರ್ವ ಭಾಗದ ತೀರ ಪ್ರದೇಶದಲ್ಲಿರುವ ಹಲವು ಬಡ ದಲಿತ ಕುಟುಂಬಗಳ ಮನೆ ತೆರವುಗೊಳಿಸಲು ಮಲ್ಪೆ ಅಭಿವೃದ್ಧಿ ಸಮಿತಿಯ ಹೆಸರಿನಲ್ಲಿ ಉಡುಪಿ ನಗರಸಭೆಯ ಪೌರಾಯುಕ್ತರು ನೀಡಿರುವ ನೊಟೀಸಿನ ವಿರುದ್ಧ ಆಕ್ಷೇಪಿಸಿ ಜಿಲ್ಲಾಧಿಕಾರಿಗೆ ಅಂಬೇಡ್ಕರ್ ಯುವಸೇನೆ ಮನವಿ ಸಲ್ಲಿಸಿದೆ.

ಕಳೆದ ಹಲವು ದಶಕಗಳಿಂದ ಸಮುದ್ರತೀರ ಪ್ರದೇಶದಲ್ಲಿ ಮನೆಕಟ್ಟಿಕೊಂಡು ವಾಸವಾಗಿರುವ ದಲಿತ ಕುಟುಂಬ ಗಳಿಗೆ ಏಕಾಎಕಿ ಸಿಆರ್‌ಝಡ್ ಇಲಾಖಾ ನಿಯಮ 2011 ಮತ್ತು 2019ರ ಅನ್ವಯ ಹಾಗೂ ಮುನ್ಸಿಪಲ್ ಆ್ಯಕ್ಟ್ 187ರಂತೆ ಕಾನೂನು ಬಾಹಿರ ಎಂದು ನೊಟೀಸು ಜಾರಿಗೊಳಿಸಿದ್ದು, ಇದೇ ಕರಾವಳಿ ಬಂದರು ಪ್ರದೇಶದ ಸುತ್ತುಮುತ್ತ ಅತಿಕ್ರಮಣ ಮಾಡಿಕೊಂಡು ಮನೆ, ರೆಸಾರ್ಟ್, ಅಂಗಡಿ ಇತ್ಯಾದಿಗಳ ವಿರುದ್ಧ ಯಾವುದೇ ಕಾನೂನುಕ್ರಮ ಕೈಗೊಳ್ಳದೆ ಕೇವಲ ದಲಿತ ಕುಟುಂಬದ ಮೇಲೆ ನೊಟೀಸ್ ನೀಡಿ ದೌರ್ಜನ್ಯ ನೀಡಿರುವುದಕ್ಕೆ ಜನಪರ ಹೋರಾಟಗಾರ ಜಯನ್ ಮಲ್ಪೆ ಆಕ್ಷೇಪಿಸಿದ್ದಾರೆ.

ಇಲ್ಲಿ ಹಲವು ದಶಕಗಳಿಂದ ವಾಸವಾಗಿರುವ ದಲಿತ ಕುಟುಂಬಗಳಿಗೆ ಮನೆನಂಬ್ರ, ಆಧಾರ್ ಕಾರ್ಡ್, ರೇಶನ್ ಕಾರ್ಡ್, ವಿದ್ಯುತ್ ಸಂಪರ್ಕ ಸೇರಿದಂತೆ ಎಲ್ಲವನ್ನೂ ಕಾನೂನುಬದ್ಧವಾಗಿ ಪಡೆದಿದ್ದರೂ, ಅನಧಿಕೃತವೆಂಬ ನಿಯಮ ದಡಿ ಈ ಬಡಪಾಯಿ ದಲಿತ ಕುಟುಂಬಗಳಿಗೆ ತೆರವುಗೊಳಿಸುವ ಭಯದ ನೊಟೀಸ್ ನೀಡಿ ದೌಜನ್ಯ ಎಸಗಿದ್ದಾರೆ ಎಂದು ಜಿಲ್ಲಾಧಿಕಾರಿಗೆ ನೀಡಿದ ಮನವಿಯಲ್ಲಿ ತಿಳಿಸಲಾಗಿದೆ. 

ಮನವಿ ಅರ್ಪಿಸಿದ ನಿಯೋಗದಲ್ಲಿ ಜನಪರ ಹೋರಾಟಗಾರ ಜಯನ್ ಮಲ್ಪೆ, ಅಂಬೇಡ್ಕರ್ ಯುವಸೇನೆಯ ಜಿಲ್ಲಾ ಅಧ್ಯಕ್ಷ ಹರೀಶ್ ಸಾಲ್ಯಾನ್, ಗಣೇಶ್ ನೆರ್ಗಿ, ಸಂತೋಷ್ ಕಪ್ಪೆಟ್ಟು, ಕೃಷ್ಣ ಶ್ರೀಯಾನ್ ಮಲ್ಪೆ, ಗುಣವಂತ ತೊಟ್ಟಂ, ಪ್ರಸಾದ್, ವಿನಯ ಬಲರಾಮನಗರ, ಗೀತಾ, ಸಂಕಿ, ಜಲಜ, ಲಲಿತ, ಸುಂದರಿ ಮುಂತಾದವರು ಭಾಗವಹಿಸಿದ್ದರು.

Similar News