ಶೀಘ್ರವೇ ಬರಲಿರುವ ಡಿಜಿಟಲ್ ಇಂಡಿಯಾ ಕರಡು ಮಸೂದೆಯಿಂದ ನಾವೇನನ್ನು ನಿರೀಕ್ಷಿಸಬಹುದು?

Update: 2023-05-28 13:23 GMT

ಇಂಟರ್ನೆಟ್ ಆರ್ಥಿಕತೆಯನ್ನು ನಿಯಂತ್ರಿಸುವ ನಿಯಮಗಳನ್ನು ಪರಿಷ್ಕರಿಸಲು ದೇಶವು ಯೋಜಿಸುತ್ತಿದ್ದು, ಭಾರತದ ತಂತ್ರಜ್ಞಾನ ನಿಯಮಾವಳಿಗಳು ಬದಲಾವಣೆಯ ಹಂತದಲ್ಲಿವೆ. ದತ್ತಾಂಶ ಸಂರಕ್ಷಣಾ ಮಸೂದೆಯು ಅಂತಿಮಗೊಳ್ಳುತ್ತಿದ್ದು, ದೂರಸಂಪರ್ಕ ಕ್ಷೇತ್ರಕ್ಕೆ ಮಾರ್ಗಸೂಚಿಯನ್ನು ನಿಗದಿಗೊಳಿಸಲು ಕರಡು ಕಾನೂನನ್ನು ಮರುರೂಪಿಸಲಾಗುತ್ತಿದೆ. ಆದರೆ, ಬಹುಶಃ ಡಿಜಿಟಲ್ ಇಂಡಿಯಾ ಮಸೂದೆ ಸದ್ಯವೇ ಹೊರಬರಲಿರುವ ಅತ್ಯಂತ ಪ್ರಮುಖ ಕಾನೂನು ಆಗಿದೆ. ಇದರೊಂದಿಗೆ ದಶಕಗಳಷ್ಟು ಹಳೆಯದಾಗಿರುವ ದೇಶದ ಪ್ರಮುಖ ಇಂಟರ್ನೆಟ್ ಕಾನೂನು ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ.

ಕೇಂದ್ರದ ವಿದ್ಯುನ್ಮಾನ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ ಅವರು, ಡಿಜಿಟಲ್ ಇಂಡಿಯಾ ಮಸೂದೆಯು ಈಗ ರೂಪುಗೊಳ್ಳುತ್ತಿರುವ ಇತರ ಎಲ್ಲ ತಂತ್ರಜ್ಞಾನ ಕಾನೂನುಗಳನ್ನು ಸಮನ್ವಯಗೊಳಿಸಲಿದೆ ಎಂದು ಹೇಳಿದ್ದಾರೆ. ಭಾರತವು ತನ್ನ ಒಂದು ಶತಕೋಟಿ ಡಾಲರ್ ಗಳ ಅಥವಾ ಜಿಡಿಪಿಯ ಶೇ. 20ರಷ್ಟು ಡಿಜಿಟಲ್ ಆರ್ಥಿಕತೆ ಗುರಿಯನ್ನು ಸಾಧಿಸುವುದನ್ನು ಎದುರು ನೋಡುತ್ತಿರುವಾಗ ಸಹಜವಾಗಿಯೇ ಡಿಜಿಟಲ್ ಇಂಡಿಯಾ ಮಸೂದೆಯ ಬಗ್ಗೆ ಬಹಳಷ್ಟು ನಿರೀಕ್ಷೆಗಳಿವೆ.

ಜೂನ್ ಮೊದಲ ವಾರದಲ್ಲಿ ಡಿಜಿಟಲ್ ಇಂಡಿಯಾ ಮಸೂದೆಯ ಮೊದಲ ಕರಡು ಹೊರಬರುವ ನಿರೀಕ್ಷೆಯಿದೆ ಮತ್ತು ಇದು ಇಂಟರ್ನೆಟ್ ಉದ್ಯಮಗಳು, ಬಳಕೆದಾರರು ಮತ್ತು ಸ್ವತಃ ಸರಕಾರದ ಮೇಲೆ ಬೀರಬಹುದಾದ ಪರಿಣಾಮಗಳನ್ನು ಪರಿಗಣಿಸಿ ಚಂದ್ರಶೇಖರ ಅವರು ಮಸೂದೆಯು ಏನನ್ನು ಒಳಗೊಂಡಿರಬೇಕು ಎಂಬ ಬಗ್ಗೆ ಜನರ ಅಭಿಪ್ರಾಯಗಳನ್ನು ಆಹ್ವಾನಿಸಲು ಕರಡು ಪೂರ್ವ ಸಾರ್ವಜನಿಕ ಸಮಾಲೋಚನೆಗಳ ಎರಡು ಸುತ್ತುಗಳನ್ನು ನಡೆಸಿದ್ದಾರೆ.

ಪ್ರಸ್ತುತ ಐಟಿ ಕಾಯ್ದೆ,2000 ಇಂಟರ್ನೆಟ್ ನಲ್ಲಿಯ ಘಟಕಗಳನ್ನು ನಿಯಂತ್ರಿಸುವ ಪ್ರಮುಖ ಕಾನೂನು ಆಗಿದೆ. ಆದಾಗ್ಯೂ, ಇಂದಿನ ಇಂಟರ್ನೆಟ್ಗಿಂತ ತೀರ ವಿಭಿನ್ನವಾಗಿದ್ದ ಇಂಟರ್ನೆಟ್ ಯುಗದಲ್ಲಿ ಈ ಕಾನೂನು ರೂಪಿಸಲ್ಪಟ್ಟಿದ್ದರಿಂದ ಅದನ್ನು ನವೀಕರಿಸುವುದು ಅಗತ್ಯವಾಗಿದೆ. ಅಲ್ಲದೆ ಈ ಕಾಯ್ದೆಯ ವ್ಯಾಪ್ತಿಯು ಸೀಮಿತವಾಗಿರುವುದರಿಂದ ನಿಯಮಗಳನ್ನು ಪ್ರಕಟಿಸುವುದು ಸರಕಾರಕ್ಕೆ ಕೆಲವೊಮ್ಮೆ ಕಷ್ಟಕರವಾಗಿತ್ತು.

ಬಳಕೆದಾರರ ಹಕ್ಕುಗಳನ್ನು ರಕ್ಷಿಸಲು ಮತ್ತು ಆನ್ಲೈನ್ನಿಂದ ಅವರಿಗೆ ಅಪಾಯಗಳನ್ನು ಕಡಿಮೆ ಮಾಡಲು ಹಾಗೂ ತಂತ್ರಜ್ಞಾನ ಆವಿಷ್ಕಾರದ ಬೆಳವಣಿಗೆಯನ್ನು ತ್ವರಿತಗೊಳಿಸಲು ದೇಶದಲ್ಲಿ ಮುಕ್ತ ಮತ್ತು ಸುರಕ್ಷಿತ ಇಂಟರ್ನೆಟ್ ಅನ್ನು ಖಚಿತಪಡಿಸುವುದು ನೂತನ ಡಿಜಿಟಲ್ ಇಂಡಿಯಾ ಮಸೂದೆಯ ಮುಖ್ಯ ಉದ್ದೇಶಗಳಾಗಿವೆ ಎಂದು ಚಂದ್ರಶೇಖರ ಹೇಳಿದ್ದಾರೆ.

► ಮಸೂದೆಯ ಕುರಿತು ನಮಗೆ ಈವರೆಗೆ ಗೊತ್ತಿರುವುದೇನು?

ಕಾನೂನು ವಿನಾಯಿತಿಯ ಪುನರ್ಪರಿಶೀಲನೆ: ಐಟಿ ಕಾಯ್ದೆ,2000ರ ಕಲಂ 79ರಡಿ ಸಾಮಾಜಿಕ ಮಾಧ್ಯಮ ವೇದಿಕೆಗಳಂತಹ ಆನ್‌ಲೈನ್‌ ಮಧ್ಯವರ್ತಿಗಳು ತಮ್ಮ ಪ್ಲ್ಯಾಟ್ಫಾರ್ಮ್ಗಳಲ್ಲಿ ಬಳಕೆದಾರರು ಪೋಸ್ಟ್ ಮಾಡುವ ವಿಷಯಗಳ ವಿರುದ್ಧ ಕಾನೂನು ಕ್ರಮಗಳಿಂದ ವಿನಾಯತಿಯನ್ನು ಹೊಂದಿವೆ. ‘ಸೇಫ್ ಹಾರ್ಬರ್ ’ಎಂದು ಕಾಯ್ದೆಯಲ್ಲಿ ವ್ಯಾಖ್ಯಾನಿಸಲಾಗಿರುವ ಇದು ಬಹುಶಃ ಆನ್‌ಲೈನ್‌  ವೇದಿಕೆಗಳಿಗೆ ನೀಡಲಾಗಿರುವ ಅತ್ಯಂತ ಪ್ರಮುಖ ನಿಯಂತ್ರಕ ಸ್ವಾತಂತ್ರ್ಯವಾಗಿದ್ದು, ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಂ, ಯುಟ್ಯೂಬ್ ಮತ್ತು ವಾಟ್ಸ್ಆ್ಯಪ್ ನಂತಹ ಸಾಮಾಜಿಕ ಮಾಧ್ಯಮಗಳು ಭಾರತದಲ್ಲಿ ಹುಲುಸಾಗಿ ಬೆಳೆಯಲು ಅವಕಾಶವನ್ನು ಒದಗಿಸಿದೆ.

ಇಂದು ಇಂಟರ್ನೆಟ್ನಲ್ಲಿರುವ ಪ್ಲ್ಯಾಟ್‌ಫಾರ್ಮ್‌ಗಳ ಕುರಿತು ಹೆಚ್ಚಿನ ವೈವಿಧ್ಯತೆ ಮತ್ತು ಸಂಕೀರ್ಣತೆಯಿದೆ. ಹೀಗಾಗಿ ಅವುಗಳಿಗೆ ಕಾನೂನು ವಿನಾಯಿತಿ ಇರಲೇಬೇಕೇ? ಇದ್ದರೂ ಅದನ್ನು ಪಡೆಯಲು ಎಷ್ಟು ಪ್ಲ್ಯಾಟ್‌ಫಾರ್ಮ್‌ಗಳು ಅರ್ಹವಾಗಿವೆ ಎನ್ನುವುದು ಶಾಸನಬದ್ಧ ಪ್ರಶ್ನೆಯಾಗಿದೆ ಎಂದು ಈ ಹಿಂದೆ ಸಮಾಲೋಚನೆಗಳ ಸಂದರ್ಭದಲ್ಲಿ ಚಂದ್ರಶೇಖರ ಪ್ರಶ್ನಿಸಿದ್ದರು.
ಕಾನೂನುಬಾಹಿರ ಎಂದು ಪರಿಗಣಿಸಲಾದ ಭಾಷಣಗಳ ವಿರುದ್ಧ ಮಾತ್ರ ಪ್ಲ್ಯಾಟ್‌ಫಾರ್ಮ್‌ಗಳು ಕ್ರಮವನ್ನು ಕೈಗೊಳ್ಳಬೇಕಿರುವುದರಿಂದ ಇಂಟರ್ನೆಟ್ನಲ್ಲಿ ವಾಕ್ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳಲು ಸೇಫ್ ಹಾರ್ಬರ್ ಪ್ರಮುಖ ಸೂತ್ರವಾಗಿದೆ ಎನ್ನುವುದು ತಂತ್ರಜ್ಞಾನ ತಜ್ಞರ ಅಭಿಪ್ರಾಯವಾಗಿದೆ.

ಮಧ್ಯವರ್ತಿಗಳ ವರ್ಗೀಕರಣ: ಈವರೆಗೆ ಭಾರತದ ಇಂಟರ್ನೆಟ್ ಕಾನೂನುಗಳು ಪ್ಲ್ಯಾಟ್‌ಫಾರ್ಮ್‌ಗಳ ಸ್ವರೂಪದ ಆಧಾರದಲ್ಲಿ ಅವುಗಳನ್ನು ವರ್ಗೀಕರಿಸಿಲ್ಲ. ಪ್ಲ್ಯಾಟ್ಫಾರ್ಮ್ಗಳ ಗಾತ್ರಕ್ಕೆ ಸಂಬಂಧಿಸಿದಂತೆ ವ್ಯತ್ಯಾಸವನ್ನು ಮಾತ್ರ ಗುರುತಿಸಲಾಗಿದೆ. 50 ಲ.ಕ್ಕೂ ಅಧಿಕ ಭಾರತೀಯ ಬಳಕೆದಾರರಿರುವ ಪ್ಲ್ಯಾಟ್‌ಫಾರ್ಮ್‌ ಅನ್ನು ‘ಮಹತ್ವಪೂರ್ಣ ’ಸಾಮಾಜಿಕ ಮಾಧ್ಯಮ ಮಧ್ಯವರ್ತಿ ಎಂದು ಗುರುತಿಸಲಾಗಿದ್ದು,ಬದ್ಧತೆಗಳನ್ನು ಸೇರಿಸಲಾಗಿದೆ. ಆದಾಗ್ಯೂ ಸಾಮಾಜಿಕ ಮಾಧ್ಯಮ ಕಂಪನಿ ಮತ್ತು ಇ-ಕಾಮರ್ಸ್ ಕಂಪನಿಯ ನಡುವೆ ವ್ಯತ್ಯಾಸವನ್ನು ಗುರುತಿಸಲು ನಿಯಮಾವಳಿಗಳಲ್ಲಿ ಯಾವುದೇ ನಿರ್ದಿಷ್ಟ ನಿಬಂಧನೆಯಿಲ್ಲ. ಡಿಜಿಟಲ್ ಇಂಡಿಯಾ ಮಸೂದೆ ಇದನ್ನು ಸರಿದೂಗಿಸುವ ಸಾಧ್ಯತೆಯಿದೆ.

ಸಾಮಾಜಿಕ ಮಾಧ್ಯಮ ತಾಣಗಳು,ಇ-ಕಾಮರ್ಸ್ ಕಂಪನಿಗಳು,ಸತ್ಯಶೋಧನೆ ಪೋರ್ಟಲ್ಗಳು ಮತ್ತು ಚಾಟ್ಜಿಪಿಟಿಯಂತಹ ಕೃತಕ ಬುದ್ಧಿಮತ್ತೆ ಆಧಾರಿತ ವೇದಿಕೆಗಳು ಸೇರಿದಂತೆ ಆನ್‌ಲೈನ್‌  ಪ್ಲ್ಯಾಟ್‌ಫಾರ್ಮ್‌ಗಳ ವ್ಯಾಪಕ ಶ್ರೇಣಿಯನ್ನು ನಿಯಂತ್ರಿಸಲು ಕೇಂದ್ರವು ಪರಿಗಣಿಸುತ್ತಿದೆ. ಈ ವರ್ಗೀಕರಣವು ಸರಕಾರವು ಉನ್ನತೀಕರಿಸಲು ಬಯಸಿರುವ ಸೇಫ್ ಹಾರ್ಬರ್ ಪರಿಕಲ್ಪನೆಯೊಂದಿಗೂ ಪರಸ್ಪರ ಪ್ರಭಾವವನ್ನು ಹೊಂದಿದೆ.

ಈವರೆಗೆ ‘ಪ್ರಕಾಶಕರು ’ಎಂದು ತಿಳಿಯಲಾಗಿರುವ ಸತ್ಯ ಪರಿಶೀಲನೆ ಪೋರ್ಟಲ್ಗಳಂತಹ ಘಟಕಗಳನ್ನು ಮಧ್ಯವರ್ತಿಗಳು ಎಂದು ಸೇರ್ಪಡೆಗೊಳಿಸುವ ಮೂಲಕ ಸರಕಾರವು ಮಧ್ಯವರ್ತಿ ಎಂದರೇನು ಎನ್ನುವುದರ ವ್ಯಾಖ್ಯೆಯನ್ನು ಬದಲಿಸುತ್ತಿದೆ.

ಬಳಕೆದಾರರ ಹಾನಿ: ಚಂದ್ರಶೇಖರ ಅವರು ನೀಡಿರುವ ಸಾರ್ವಜನಿಕ ಹೇಳಿಕೆಗಳು ಡಿಜಿಟಲ್ ಇಂಡಿಯಾ ಮಸೂದೆಯು ಆನ್‌ಲೈನ್‌ ಕ್ಷೇತ್ರಕ್ಕೆ ವಿಶಿಷ್ಟವಾಗಿರುವ ಬಳಕೆದಾರರ ಹಾನಿಗಳ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಲಿದೆ ಎಂಬ ಭಾವನೆಯನ್ನು ಮೂಡಿಸಿದೆ. ಇಂಟರ್ನೆಟ್ ನ ವಿಕಸನದೊಂದಿಗೆ ಡಿಜಿಟಲ್ ಕ್ಷೇತ್ರವು ಆನ್ಲೈನ್ಗೆ ನಿರ್ದಿಷ್ಟವಾಗಿರುವ ಹಾನಿಗಳು ಮತ್ತು ಅಪರಾಧಗಳಿಂದ ತುಂಬಿದೆ ಎಂದು ಸರಕಾರವು ಭಾವಿಸಿದೆ. ಉದಾಹರಣೆಗೆ ಆನ್‌ಲೈನ್‌  ತಪ್ಪುಮಾಹಿತಿಯು ಪ್ರಸ್ತುತ ಭಾರತದಲ್ಲಿ ಕಾನೂನು ಅಪರಾಧವಲ್ಲ. ಈ ಕೊರತೆಗಳನ್ನು ನೀಗಿಸುವುದು ಡಿಜಿಟಲ್ ಇಂಡಿಯಾ ಮಸೂದೆಯ ಉದ್ದೇಶವಾಗಿದೆ. 

Similar News