ಮಂಗಳೂರು: ಎಲ್ಲಾ ದಲಿತ ಕಾಲನಿಗಳಲ್ಲಿ ಕುಂದುಕೊರತೆ ಸಭೆ; ಡಿಸಿಪಿ ಅಂಶುಕುಮಾರ್

Update: 2023-05-28 13:34 GMT

ಮಂಗಳೂರು, ಮೇ 28: ದಲಿತರು ಎದುರಿಸುವ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳುವ ಸಲುವಾಗಿ ವಾರಾಂತ್ಯದಲ್ಲಿ ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ದಲಿತ ಕಾಲನಿಗಳಲ್ಲಿ ಕುಂದುಕೊರತೆ ಸಭೆಗಳನ್ನು ನಡೆಸಲಾಗುವುದು ಎಂದು ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ಪತ್ತೆ ವಿಭಾಗದ ಡಿಸಿಪಿ ಅಂಶು ಕುಮಾರ್ ಹೇಳಿದ್ದಾರೆ.

ನಗರ ಪೊಲೀಸ್ ಕಮಿಷನರೇಟ್ ಕಚೇರಿಯಲ್ಲಿ ರವಿವಾರ ನಡೆದ ಮಾಸಿಕ ಎಸ್ಸಿ-ಎಸ್ಟಿ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸುಮಾರು ಎರಡು ವರ್ಷಗಳಿಂದ ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಎಸ್ಸಿ-ಎಸ್ಟಿ ಕುಂದು ಕೊರತೆ ಸಭೆ ನಡೆದಿಲ್ಲ. ಈ ಬಗ್ಗೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕು ಎಂಬ ದಲಿತ ಮುಖಂಡರ ಆಗ್ರಹಕ್ಕೆ ಉತ್ತರಿಸಿದ ಡಿಸಿಪಿ ಅಂಶು ಕುಮಾರ್, ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲು ನಮಗೆ ಆಗುವುದಿಲ್ಲ. ಆದರೆ ಈ ವಿಚಾರವನ್ನು ಜಿಲ್ಲಾಡಳಿತದ ಗಮನಕ್ಕೆ ತರಲಾಗುವುದು ಎಂದರು.

ಪ್ರತಿ ತಿಂಗಳಾಂತ್ಯದ ರವಿವಾರ ಕಮಿಷನರ್ ಕಚೇರಿಯಲ್ಲಿ ದಲಿತರ ಕುಂದುಕೊರತೆ ಸಭೆ ನಡೆಯುತ್ತದೆ. ಈ ಸಭೆಗೆ ಬರಲಾಗದವರು ಆಯಾ ಕಾಲನಿಗಳಲ್ಲಿ ನಡೆಯುವ ಕುಂದುಕೊರತೆ ಸಭೆಯಲ್ಲಿ ಪಾಲ್ಗೊಳ್ಳಬಹುದು. ಅದಲ್ಲದೆ ಪ್ರತಿ ಬೀಟ್ ಮಟ್ಟದಲ್ಲೂ ದಲಿತರ ಕುಂದು ಕೊರತೆ ಸಭೆ ನಡೆಸಲಾಗುತ್ತದೆ. ಆದಾಗ್ಯೂ ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ದಲಿತ ಕಾಲನಿಗಳಲ್ಲಿ ಸಭೆಯನ್ನು ನಡೆಸಲಾಗುವುದು. ಈ ಸಭೆಯಲ್ಲಿ ನಾಗರಿಕ ಜಾರಿಹಕ್ಕು ನಿರ್ದೇಶನಾಲಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಆಹ್ವಾನಿಸಲಾಗುವುದು ಎಂದರು.

ಕ್ಯೂಆರ್ ಕೋಡ್ ಬಳಸಿ: ಪ್ರತಿಯೊಂದು ಪೊಲೀಸ್ ಠಾಣೆಗಳಲ್ಲಿ ಕೂಡ ಕ್ಯೂಆರ್ ಕೋಡ್ ಇರಿಸಲಾಗಿದೆ. ಠಾಣೆಗೆ ಹೋಗುವವರು ಅಲ್ಲಿನ ಕುಂದುಕೊರತೆ, ಪೊಲೀಸರ ನಡವಳಿಕೆ ಬಗ್ಗೆ ಕ್ಯೂಆರ್ ಕೋಡ್‌ನ್ನು ಸ್ಕ್ಯಾನ್ ಮಾಡುವ ಮೂಲಕ ಅಭಿಪ್ರಾಯ ದಾಖಲಿಸಬಹುದು. ಇದು ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಸಹಕಾರಿಯಾಗಲಿದೆ ಎಂದು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಅಭಿಪ್ರಾಯಪಟ್ಟರು.

ಭಡ್ತಿಯಲ್ಲಿ ಅನ್ಯಾಯ: 2008ರಲ್ಲಿ ನನಗೆ ಭಡ್ತಿಯಾಗಬೇಕಿತ್ತು. ಆದರೆ ವಿಶ್ವವಿದ್ಯಾನಿಲಯವು ಈವರೆಗೆ ನನ್ನನ್ನು ಭಡ್ತಿಗೆ ಪರಿಗಣಿಸಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ವಿವಿಗೆ ನಾನು ಸಲ್ಲಿಸಿದ ಮೂಲ ದಾಖಲೆಪತ್ರಗಳು ಕಳವಾಗಿದೆ ಎನ್ನುತ್ತಿದ್ದಾರೆ ಎಂದು ಮಂಗಳೂರು ವಿವಿ ಪತ್ರಿಕೋದ್ಯಮ ಮತ್ತು ಸ್ನಾತಕೋತ್ತರ ಪದವಿ ವಿಭಾಗದ ಮುಖ್ಯಸ್ಥ ಪ್ರೊ.ಉಮೇಶ್ಚಂದ್ರ ಅಹವಾಲು ಸಲ್ಲಿಸಿದರು.

2003ರಲ್ಲಿ ನಾನು ವಿವಿ ಅಧ್ಯಾಪನ ವೃತ್ತಿಗೆ ಸೇರ್ಪಡೆಗೊಂಡೆ. 20 ವರ್ಷದ ಸೇವಾನುಭವವಿದ್ದರೂ ನನಗೆ ಪದೋನ್ನತಿ ದೊರೆತಿಲ್ಲ. ಈ ಬಗ್ಗೆ ಸೂಕ್ತ ದಾಖಲೆಗಳನ್ನು ವಿವಿ ಆಡಳಿತ ವಿಭಾಗಕ್ಕೆ ಸಲ್ಲಿಸಿದ್ದೆ. ಭಡ್ತಿ ಸಿಗದಿದ್ದಾಗ ಮೂಲ ದಾಖಲೆಗಳನ್ನು ಮರಳಿಸುವಂತೆ ಕೋರಿಕೊಂಡೆ. ಆದರೆ ನಾನು ಸಲ್ಲಿಸಿದ್ದ ಹಳೆಯ ದಾಖಲೆಗಳೇ ಇಲ್ಲ ಎಂದಿದ್ದಾರೆ. ಇದರಿಂದ ನನಗೆ ತುಂಬಾ ಅನ್ಯಾಯವಾಗಿದೆ ಎಂದು ಪ್ರೊ.ಉಮೇಶ್ಚಂದ್ರ ಹೇಳಿದರು.

ನನ್ನ ವಿರುದ್ಧ ಕೆಲವು ವಿದ್ಯಾರ್ಥಿಗಳು ದೂರು ನೀಡಿದ ಘಟನೆಗೆ ಸಂಬಂಧಿಸಿ ಕೊಣಾಜೆ ಪೊಲೀಸ್ ಠಾಣೆಗೆ ಹೋದಾಗ ಅಲ್ಲಿನ ಪೊಲೀಸರೊಬ್ಬರು ನನ್ನೊಂದಿಗೆ ದರ್ಪದಿಂದ ವರ್ತಿಸಿದ್ದಾರೆ. ವಿವಿಯಲ್ಲೂ ಅನ್ಯಾಯವಾಗಿದೆ. ಠಾಣೆಯಲ್ಲೂ ಅಗೌರವ ನೀಡಲಾಗಿದೆ ಎಂದು ಉಮೇಶ್ಚಂದ್ರ ಹೇಳಿಕೊಂಡರು.

*ಪುತ್ತೂರು ಘಟನೆ ನಮಗೆ ಪಾಠ: ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಪೊಲೀಸ್ ದೌರ್ಜನ್ಯ ಪ್ರಕರಣವು ಇಲಾಖೆಗೆ ಪಾಠವಾಗಿದೆ. ಯಾರದೋ ಒತ್ತಡಕ್ಕೆ ಒಳಗಾಗಿ ಕಾನೂನು ವ್ಯಾಪ್ತಿ ಮೀರಿ ಯಾರೂ ವರ್ತಿಸಬಾರದು. ನಮ್ಮ ತಲೆ ಮೇಲೆ ನಮ್ಮದೇ ಕೈ ಎಂಬುದು ನೆನಪಿರಬೇಕು. ಠಾಣೆಯಲ್ಲಾಗುವ ದುರ್ವರ್ತನೆಯು ಇಲಾಖೆಗೆ ಕಪ್ಪುಚುಕ್ಕೆ ಆಗದಂತೆ ನೋಡಿಕೊಳ್ಳಬೇಕು ಎಂದು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಹೇಳಿದರು.

ಕೆಲವು ಪೊಲೀಸ್ ಠಾಣೆಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಯು ದೂರುದಾರರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂಬ ದಲಿತ ಮುಖಂಡರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಠಾಣೆಗೆ ಬರುವ ಯಾರನ್ನೂ ನಿಂದಿಸಬೇಡಿ. ಮುಂದೆ ಇಂತಹ ದೂರು ಬಾರದಂತೆ ಎಚ್ಚರಿಕೆ ವಹಿಸಬೇಕು. ಕಾನೂನು ರೀತಿಯಲ್ಲಿ ಮಾತ್ರ ಕ್ರಮ ಕೈಗೊಳ್ಳಬೇಕು ಎಂದು ಡಿಸಿಪಿ ದಿನೇಶ್ ಕುಮಾರ್ ಸೂಚಿಸಿದರು.

*753 ಮೊಬೈಲ್ ಪತ್ತೆ: ನಗರ ಕಮಿಷನರೇಟ್ ವ್ಯಾಪ್ತಿಗೆ ಸಂಬಂಧಿಸಿ 5,685 ಮೊಬೈಲ್ ಕಳೆದುಹೋದ ಪ್ರಕರಣಗಳು ದಾಖಲಾಗಿವೆ. ಆ ಪೈಕಿ 753 ಮೊಬೈಲ್ ಫೋನ್ ಪತ್ತೆ ಮಾಡಿ ವಾರಸುದಾರರಿಗೆ ಹಿಂದಿರುಗಿ ಸಲಾಗಿದೆ. ಮೊಬೈಲ್ ಕಳವು ಅಥವಾ ಕಳೆದುಹೋದ ಬಗ್ಗೆ ದೂರು ದಾಖಲಾದ ತಕ್ಷಣ ಅದರ ಪತ್ತೆಗೆ ಸೆನ್ ಠಾಣೆಯ ಪೊಲೀಸರು ದೆಹಲಿ ಹಾಗೂ ಮುಂಬೈಗೆ ಹೋಗಿ ಪತ್ತೆ ಹಚ್ಚಿ ತಂದ ಉದಾಹರಣೆಯೂ ಇದೆ ಎಂದು ಡಿಸಿಪಿ ಅಂಶು ಕುಮಾರ್ ಹೇಳಿದರು.

Similar News