ತಾಪಂ-ಜಿಪಂ ಚುನಾವಣೆ: ಮೇ 29ರಿಂದ ಮತದಾರರ ಕರಡು ಪಟ್ಟಿ ತಯಾರಿಗೆ ಸಿದ್ಧತೆ

Update: 2023-05-28 16:40 GMT

ಮಂಗಳೂರು, ಮೇ 28: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬರುತ್ತಲೇ ಕಳೆದ ಎರಡು ವರ್ಷದಿಂದ ನನೆಗುದಿಗೆ ಬಿದ್ದಿರುವ ತಾಪಂ ಮತ್ತು ಜಿಪಂಗಳ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಸಿದ್ಧತೆ ನಡೆಸಿವೆ.

ಮೇ 29ರಿಂದ ಜೂನ್ 4ರೊಳಗೆ ಅರ್ಹ ಮತದಾರರನ್ನು ಗುರುತಿಸಿ ಅವರನ್ನು ಮತದಾರರ ಪಟ್ಟಿಗೆ ಸೇರಿಸುವುದು, ಜೂನ್ 5ರಿಂದ 13ರೊಳಗೆ ಕರಡು ಮತದಾರರ ಪಟ್ಟಿ ಪರಿಶೀಲನೆ ಮತ್ತು ಪರಿಷ್ಕರಣೆ, ಜೂನ್ 14ರಂದು ಕರಡು ಮತದಾರರ ಪಟ್ಟಿ ಪ್ರಕಟ, ಜೂನ್ 19ರೊಳಗೆ ಈ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ, ಜೂನ 22ರೊಳಗೆ ಈ ಆಕ್ಷೇಪಣೆಗಳಿಗೆ ಇತ್ಯರ್ಥಪಡಿಸುವುದು, ಜೂನ್ 25ರಂದು ಮತದಾರರ ಪಟ್ಟಿಯ ಮರುಪರಿಶೀಲನೆ, ಜೂನ್ 27ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲು ಚುನಾವಣಾ ಆಯೋಗ ಸೂಚನೆ ನೀಡಿದೆ.

ದ.ಕ.ಜಿಲ್ಲೆಯಲ್ಲಿ ಜಿಪಂ ಮತ್ತು ತಾಪಂ ಚುನಾವಣೆಯು 2016ರಲ್ಲಿ ನಡೆದಿತ್ತು. ಈ ಚುನಾಯಿತ ಸದಸ್ಯರ 5 ವರ್ಷಗಳ ಅವಧಿಯು 2021ರ ಎಪ್ರಿಲ್ 27ಕ್ಕೆ ಮುಕ್ತಾಯಗೊಂಡಿತ್ತು. ಆ ಬಳಿಕ ಚುನಾವಣೆ ನಡೆಯಬೇಕಿತ್ತು. ಆದರೆ ಬೇರೆ ಬೇರೆ ಕಾರಣದಿಂದ ಚುನಾವಣೆ ಮುಂದೂಡಿಕೆಯಾಗಿತ್ತು. ಹಾಗಾಗಿ ಕಳೆದ ಎರಡು ವರ್ಷದಿಂದ ಜನಪ್ರತಿನಿಧಿಗಳು ಇಲ್ಲದೆ ಅಧಿಕಾರಿ ವರ್ಗವೇ ಜಿಪಂ ಹಾಗೂ ತಾಪಂನಲ್ಲಿ ಆಡಳಿತ ನಡೆಸುವಂತಾಗಿದೆ.

ಚುನಾಯಿತ ಸದಸ್ಯರ ಅವಧಿ ಮುಕ್ತಾಯಗೊಂಡ ಬೆನ್ನಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಸಿದ್ಧತೆ ನಡೆಸಿತ್ತು. ಜಿಪಂ ಮತ್ತು ತಾಪಂ ಕ್ಷೇತ್ರಗಳ ಪುನರ್‌ವಿಂಗಡನೆ ಕಾರ್ಯವೂ ನಡೆದು ಹೊಸ ಕ್ಷೇತ್ರಗಳ ಹೆಸರು ಹಾಗೂ ಕ್ಷೇತ್ರವಾರು ಮತದಾರರ ಸಂಖ್ಯೆ ನಿಗದಿಯೂ ಆಗಿತ್ತು. ಆದರೆ ಕ್ಷೇತ್ರವಾರು ಮೀಸಲಾತಿಯ ನಿಗದಿಗೆ ಬಾಕಿಯಿತ್ತು. ಈ ಹಂತದಲ್ಲಿಯೇ ಕೋವಿಡ್-19 ಹಾವಳಿ ಕಂಡು ಬಂದ ಕಾರಣ ಎಲ್ಲಾ ಚುನಾವಣೆಗಳನ್ನು ರಾಜ್ಯ ಸರಕಾರ ಆರು ತಿಂಗಳ ಕಾಲ ಮುಂದೂಡಿತ್ತು.

ಕೊರೊನಾ ಕಡಿಮೆಯಾದ ಬಳಿಕ ಕ್ಷೇತ್ರವಾರು ಮೀಸಲಾತಿ ಪ್ರಕಟಿಸಿ ಚುನಾವಣಾ ಆಯೋಗ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ ರಾಜ್ಯ ಸರಕಾರ ಕ್ಷೇತ್ರ ಪುನರ್‌ವಿಂಗಡನೆಯನ್ನು ವಿಧಾನಸಭಾ ಕ್ಷೇತ್ರವಾರು ನಡೆಸುವ ನಿರ್ಧಾರ ಕೈಗೊಂಡ ಮೇರೆಗೆ ಜಿಪಂ/ತಾಪಂ ಚುನಾವಣಾ ಪ್ರಕ್ರಿಯೆಯು ಸ್ಥಗಿತಗೊಂಡಿತು. ಈ ಮಧ್ಯೆ ಮೀಸಲಾತಿ ಕುರಿತ ವಿಚಾರವು ಸುಪ್ರೀಂಕೋರ್ಟ್‌ನ ಮೆಟ್ಟಿಲೇರಿತ್ತು. ಹಾಗಾಗಿ ಸುಮಾರು 2 ವರ್ಷಗಳ ಜಿಪಂ/ತಾಪಂ ಚುನಾವಣೆ ಮುಂದೂಡಲ್ಪಟ್ಟಿದ್ದು, ಈ ಮಳೆಗಾಲ ಮುಗಿದ ಬಳಿಕ ಚುನಾವಣೆ ನಡೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

Similar News