ನೀರಿನ ಹಕ್ಕು ವಿವಾದ: ಇರಾನ್-ತಾಲಿಬಾನ್ ಗುಂಡಿನ ಚಕಮಕಿ

Update: 2023-05-28 17:46 GMT

ಟೆಹ್ರಾನ್, ಮೇ 28: ನೀರಿನ ಹಕ್ಕು ಕುರಿತ ವಿವಾದದ ಹಿನ್ನೆಲೆಯಲ್ಲಿಅಫ್ಘಾನ್ ನ ಗಡಿಭಾಗದಲ್ಲಿ ತಾಲಿಬಾನ್ ಮತ್ತು ಇರಾನ್ ಪಡೆಗಳ ನಡುವೆ ಭಾರೀ ಗುಂಡಿನ ಕಾಳಗ ನಡೆದಿದೆ ಎಂದು ವರದಿಯಾಗಿದೆ.

ತಾಲಿಬಾನ್ ಗುಂಡಿನ ದಾಳಿ ಆರಂಭಿಸಿದೆ. ಇರಾನ್ ನ ಸಿಸ್ತಾನ್ ಮತ್ತು ಬಲುಚೆಸ್ತಾನ್ ಪ್ರಾಂತ ಹಾಗೂ ಅಫ್ಘಾನ್ ನ ನಿಮ್ರೋರ್ ಪ್ರಾಂತದಲ್ಲಿ ತಾಲಿಬಾನ್ ಪಡೆ ಗುಂಡಿನ ದಾಳಿ ಆರಂಭಿಸಿದ್ದು ಇರಾನ್ ನಲ್ಲಿ  ವ್ಯಾಪಕ ನಾಶ-ನಷ್ಟ ಮತ್ತು ಜೀವಹಾನಿಯಾಗಿದೆ ಎಂದು ಇರಾನ್ ನ ಉಪಪೊಲೀಸ್ ಮುಖ್ಯಸ್ಥ ಜ ಖಾಸಿಮ್ ರಝಾಯಿ ಆರೋಪಿಸಿದ್ದಾರೆ.

ಗುಂಡಿನ ದಾಳಿಯಲ್ಲಿ ಇಬ್ಬರು ಗಡಿಭದ್ರತಾ ಯೋಧರು ಮೃತಪಟ್ಟಿದ್ದು ಅಫ್ಘಾನ್ ಜತೆಗಿನ ಮಿಲಾಕ್ ಗಡಿದಾಟನ್ನು ಮುಚ್ಚಲಾಗಿದೆ ಎಂದು ಇರಾನ್ ಪೊಲೀಸರನ್ನು ಉಲ್ಲೇಖಿಸಿ ‘ಇರ್ನಾ’ ಸುದ್ಧಿಸಂಸ್ಥೆ ವರದಿ ಮಾಡಿದೆ.

ಆದರೆ ಇದನ್ನು ತಳ್ಳಿಹಾಕಿರುವ ತಾಲಿಬಾನ್ ‘ಇರಾನ್ ಮೊದಲು ಗುಂಡು ಹಾರಿಸಿದ್ದು ಅದಕ್ಕೆ ನಮ್ಮ ಪಡೆ ಪ್ರತ್ಯುತ್ತರ ನೀಡಿದೆ. ಎರಡೂ ಕಡೆಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ. ಗಡಿಭಾಗದಲ್ಲಿ ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ  ಎಂದು ಅಫ್ಘಾನ್ ನ ಆಂತರಿಕ ಇಲಾಖೆಯ ವಕ್ತಾರ ಅಬ್ದುಲ್ ನಫಿ ಹೇಳಿದ್ದಾರೆ.

ಹೆಲ್ಮಂಡ್ ನದಿ ನೀರು ಹಂಚಿಕೆ ಕುರಿತು ಎರಡೂ ದೇಶಗಳ ನಡುವೆ ವಿವಾದವಿದೆ. ಇರಾನ್ ನ ನೀರಿನ ಹಕ್ಕನ್ನು ಉಲ್ಲಂಘಿಸದಂತೆ ಈ ತಿಂಗಳ ಆರಂಭದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ತಾಲಿಬಾನ್ಗೆ ಎಚ್ಚರಿಕೆ ನೀಡಿದ್ದರು. ಶನಿವಾರ ಅಫ್ಘಾನ್ ನ ವಿದೇಶಾಂಗ ಸಚಿವ ಅಮೀರ್ಖಾನ್ ಮುತ್ತಖಿ ಅಫ್ಘಾನಲ್ಲಿನ ಇರಾನ್ ಪ್ರತಿನಿಧಿಯನ್ನು ಭೇಟಿಯಾಗಿ ಹೆಲ್ಮಂಡ್ ನದಿ ನೀರು ವಿವಾದದ ಬಗ್ಗೆ ಚರ್ಚೆ ನಡೆಸಿದ್ದರು.

Similar News