ಇಂದು ಟರ್ಕಿ ಗೆದ್ದಿದೆ: ಐತಿಹಾಸಿಕ ಗೆಲುವಿನ ನಂತರ ಎರ್ದೋಗಾನ್‌

Update: 2023-05-29 09:31 GMT

ಇಸ್ತಾಂಬುಲ್: ಟರ್ಕಿ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿರುವ ಹಾಲಿ ಅಧ್ಯಕ್ಷ ರಿಸೆಪ್‌ ತಯ್ಯಿಪ್‌ ಎರ್ದೋಗಾನ್‌ ಅವರು ವಿಜಯೋತ್ಸವ ಆಚರಿಸಿದ ತಮ್ಮ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿ “ನಾವೆಲ್ಲರೂ ಒಗ್ಗಟ್ಟಿನಿಂದ ಮುಂದೆ ಬರಬೇಕು,” ಎಂದು ಹೇಳಿದರು.

“ಮುಂದಿನ ಐದು ವರ್ಷಗಳ ಕಾಲ ನಾವು ದೇಶವನ್ನು ಆಳಲಿದ್ದೇವೆ,” ಎಂದು ಜೈಕಾರ ಘೋಷಣೆ ಮೊಳಗಿಸುತ್ತಿದ್ದ ಬೆಂಬಲಿಗರಿಗೆ ಎರ್ದೋಗಾನ್‌ ಹೇಳಿದರು.

“ದೇವರ ಇಚ್ಛೆಯಂತೆ ನಿಮ್ಮ ವಿಶ್ವಾಸಕ್ಕೆ ನಾವು ಅರ್ಹರು” ಎಂದು ಅವರು ಹೇಳಿದರು.

“ಟರ್ಕಿಯ ಬಾಗಿಲನ್ನು ನಾವೀಗಾಗಲೇ ಎಲ್ಲರಿಗೂ, ಮಹಿಳೆಯರಿಗೆ, ಯುವಜನರಿಗೆ, ಹಿರಿಯರಿಗೆ ತೆರೆದಿದ್ದೇವೆ, ಸಮಾಜದ ಎಲ್ಲಾ ವರ್ಗಗಳವರಿಗೂ ಬಾಗಿಲು ತೆರೆಯುತ್ತೇವೆ. ನಮ್ಮ ಸ್ನೇಹಿತರ ನಿರೀಕ್ಷೆಗಳನ್ನು ಗರಿಗೆದರಿಸಿದ್ದೇವೆ,” ಎಂದು ಅವರು ಹೇಳಿದರು.

 ಹಿಂದೆ ಕಾನ್‌ಸ್ಟಾಂಟಿನೋಪಲ್‌ ಆಗಿದ್ದ ಇಸ್ತಾಂಬುಲ್‌ ಅನ್ನು ಒಟ್ಟೊಮನ್‌ ಸಾಮ್ರಾಜ್ಯ ತನ್ನ ವಶಕ್ಕೆ ಪಡೆದ 570ನೇ ವರ್ಷಾಚರಣೆ ಇಂದು ಆಗಿದೆ.

ಈ ಕುರಿತು ಉಲ್ಲೇಖಿಸಿದ ಎರ್ದೋಗಾನ್‌ “ಅದು ಇತಿಹಾಸದಲ್ಲಿನ ಮಹತ್ವದ ತಿರುವು, ಒಂದು ಶತಮಾನವನ್ನು ಮುಚ್ಚಿ ಇನ್ನೊಂದನ್ನು ತೆರೆಯಿತು. ಈ ಚುನಾವಣೆ ಕೂಡ ಇತಿಹಾಸದಲ್ಲಿ ಮಹತ್ವದ ತಿರುವಾಗಲಿದೆ ಎಂದು ನಿರೀಕ್ಷಿಸುತ್ತೇನೆ,” ಎಂದು ಅವರು ಹೇಳಿದರು.

“ಇಲ್ಲಿಯ ತನಕ ಸುಮಾರು 600 ಸಾವಿರ ವಲಸಿಗರನ್ನು ಸಿರಿಯಾದ ಸುರಕ್ಷಿತ ವಲಯಗಳಿಗೆ ಸ್ವಯಂಪ್ರೇರಣೆಯಿಂದ ಹಿಂದಿರುಗುವಂತೆ ನಾವು ಮಾಡಿದ್ದೇನೆ. ಮುಂದಿನ ಕೆಲ ವರ್ಷಗಳಲ್ಲಿ ಒಂದು ಮಿಲಿಯನ್‌ ಜನರು ವಾಪಸಾಗುವಂತೆ ನೋಡಿಕೊಳ್ಳಲಿದ್ದೇವೆ. ಈ ವಿಚಾರದಲ್ಲಿ ನಮ್ಮ ನಾಗರಿಕರ ಬೇಡಿಕೆ ಈಡೇರಿಸಬೇಕಿದೆ,” ಎದು ಅವರು ಹೇಳಿದರು.

ಯುದ್ಧಪೀಡಿತ ಸಿರಿಯಾದಿಂದ ತಪ್ಪಿಸಿ ಬಂದ 3.4 ಮಿಲಿಯನ್‌ ಸಿರಿಯನ್ನರು ಟರ್ಕಿಯಲ್ಲಿದ್ದಾರೆ.

"ಹಣದುಬ್ಬರದಿಂದ ಎದುರಾಗಿರುವ ಸಮಸ್ಯೆ ನಿಭಾಯಿಸುವುದು ನನ್ನ ಆದ್ಯತೆಗಳಲ್ಲೊಂದು,” ಎಂದೂ ಅವರು ಹೇಳಿದ್ದಾರೆ. ತಮ್ಮ ವಿಜಯವನ್ನು ಅವರು ದೇಶದ ವಿಜಯ ಎಂದೂ ಬಣ್ಣಿಸಿದ್ದಾರೆ.

Similar News