ಮೇ 28 ಕ್ರೀಡಾಪಟುಗಳಿಗೆ ಕರಾಳ ದಿನ: ಮಾಜಿ ಮೇಯರ್ ಕವಿತಾ ಸನಿಲ್

Update: 2023-05-29 09:47 GMT

ಮಂಗಳೂರು,ಮೇ 29: ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕ್ರೀಡಾ ಪಟುಗಳಿಗೆ ಮೇ 28 ಕರಾಳ ದಿನ ಎಂದು ಮಾಜಿ ಮೇಯರ್ ಕವಿತಾ ಸನಿಲ್ ಆಕ್ರೋಷ ವ್ಯಕ್ತಪಡಿಸಿದ್ದಾರೆ.

 ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ದೇಶದ ಪತಾಕೆಯನ್ನು ವಿಶ್ವದಲ್ಲಿ ಎತ್ತಿಹಿಡಿದ ಹೆಣ್ಣು ಮಕ್ಕಳು ಮೇ 28 ರಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ, ಮೋದಿ ಸರಕಾರದ ದೆಹಲಿ ಪೊಲೀಸರು ಮಹಿಳಾ ಕ್ರೀಡಾ ಪಟುಗಳನ್ನು ಬೂಟಿನಿಂದ ತುಳಿದು ಅವಮಾನ ಮಾಡಿ, ಹಿಗ್ಗಾಮುಗ್ಗ ಎಳೆದು ಕ್ರೂರವಾಗಿ ದೌರ್ಜನ್ಯ ಎಸಗಿರುವುದು ಖಂಡನೀಯ ಎಂದು ಹೇಳಿದರು.

ಭಾರತೀಯ ಕುಸ್ತಿ ಫೆಡರೇಷನ್‌ನ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಆಗಿರುವ ಬ್ರಿಜ್ ಭೂಷಣ್ ಚರಣ್ ಸಿಂಗ್ ಮಹಿಳಾ ಕುಸ್ತಿ ಕ್ರೀಡಾ ಪಟುಗಳ ಮೇಲೆ ಲೈಂಗಿಕ ಕಿರುಕುಳ ಎಸಗಿರುವ ಆರೋಪದಡಿ ಎಫ್‌ಐಆರ್ ದಾಖಲಾಗಿದ್ದರು ಕೂಡಾ, ಬಿಜೆಪಿ ಸಂಸದ ಎಂಬ ಕಾರಣದಿಂದ ಸರಕಾರ ಆತನನ್ನು ಬಂಧಿಸಿಲ್ಲ. ಹಾಗಾಗಿ ಕೂಡಲೇ ಬಂಧನ ಮಾಡುವಂತೆ ದೆಹಲಿಯಲ್ಲಿರುವ ಜಂತರ್ ಮಂತರ್‌ನಲ್ಲಿ ಕಳೆದ ಎಪ್ರಿಲ್ 23 ರಿಂದ ಈವರೆಗೂ ಒಂದು ತಿಂಗಳುಗಳ ಕಾಲ ಕ್ರೀಡಾ ಪಟುಗಳು ನಿರಂತರ ಪ್ರತಿಭಟನೆ ನಡೆಸಿಕೊಂಡು ಬಂದಿದ್ದಾರೆ. ತಪ್ಪಿತಸ್ಥನನ್ನು ಬಂಧಿಸಿದರೆ ಬಿಜೆಪಿಯ ಮರ್ಯಾದೆ ಹೋಗುತ್ತದೆ ಎಂಬ ಕಾರಣಕ್ಕೆ ಕೇಂದ್ರ ಸರಕಾರ ಇದರ ಬಗ್ಗೆ ಚಕಾರ ಎತ್ತಲಿಲ್ಲ. ಮೋದಿ ಸರಕಾರ ಕೂಡಲೇ ತಪ್ಪಿತಸ್ಥರನ್ನು ಬಂಧನ ಮಾಡಬೇಕು ಅಥವಾ ರಾಜಿನಾಮೆ ಕೊಡಿಸಬೇಕು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟು ಮಂಗಳೂರಿನಲ್ಲೂ ಈ ಬಗ್ಗೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಜೆಸಿಂತಾ, ಮಾಜಿ ಡೆಪ್ಯೂಟಿ ಮೇಯರ್ ಕವಿತಾ, ಮಾಜಿ ಕಾರ್ಪೋರೇಟರ್ ಸವಿತಾ ಮಿಸ್ಕಿಂತ್, ಸುರತ್ಕಲ್ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಶಶಿಕಲಾ, ಪಕ್ಷದ ಮುಖಂಡೆ ಮಂಜುಳಾ ನಾಯಕ್, ಕೆಪಿಸಿಸಿಯ ಕಾರ್ಯದರ್ಶಿಗಳಾದ ಶಾಂತಲಾ ಗಟ್ಟಿ, ಮಮತಾ ಲೂಯಿಸ್, ಅಪ್ಪಿ, ಚಂದ್ರಕಲಾ ಹಾಗೂ ಇತರರು ಉಪಸ್ಥಿತರಿದ್ದರು.

Similar News