ಕಾಪು ಕ್ಷೇತ್ರವನ್ನು ಮಾದರಿಯನ್ನಾಗಿ ಅಭಿವೃದ್ಧಿ ಪಡಿಸಲಾಗುವುದು: ಶಾಸಕ ಗುರ್ಮೆ ಸುರೇಶ್ ಶೆಟ್ಟಿ

Update: 2023-05-29 13:15 GMT

ಕಾಪು (ಪಡುಬಿದ್ರಿ): ಸಮೃದ್ಧ ಕಾಪು-ಸ್ವಾಭಿಮಾನ ಕಾಪು ಆಗಬೇಕು ಎಂಬ ಕನಸು ಕಂಡಿದ್ದು, ಈ ಮೂಲಕ ಕಾಪು ಕ್ಷೇತ್ರವನ್ನು ಮಾದರಿಯನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ.

ಅವರು ಸೋಮವಾರ ಕಾಪು ತಾಲ್ಲೂಕು ಸೌಧದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಭಿವೃದ್ಧಿ ಕೆಲಸದಲ್ಲಿ ಎಲ್ಲರ ವಿಶ್ವಾಸ ತೆಗೆದುಕೊಂಡು ಯಾರಿಗೂ ತೊಂದರೆಯಾಗದಂತೆ ಕಾಪು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಆಧ್ಯತೆ. ಕಾಪುವಿನ ಸಮಗ್ರ ಅಭಿವೃದ್ಧಿಗೆ ಕ್ಷೇತ್ರದ ಮಾಜಿ ಶಾಸಕರಾದ ಲಾಲಾಜಿ ಮೆಂಡನ್ ಹಾಗೂ ಕ್ಷೇತ್ರದ ಜನರ ಜನಾಭಿಪ್ರಾಯವನ್ನು ಪಡೆದು ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಆಧ್ಯತೆಯ ಮೇರೆಗೆ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗುವುದು ಎಂದರು.

ಮಳೆಗಾಲದಲ್ಲಿ ಅನಾಹುತಗಳು ಆಗದಂತೆ ಈಗಿಂದಲೇ ಕಾರ್ಯೋನ್ಮುಖರಾಗಲು ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಟಾಸ್ಕ್‍ಪೋರ್ಸ್ ಸಮಿತಿಯನ್ನು ರಚಿಸಿ ಮಳೆಗಾಲದಲ್ಲಿ ಉಂಟಾಗಬಹುದಾದ ಅನಾಹುತಗಳನ್ನು ತಪ್ಪಿಸುವಲ್ಲಿ ತಂಡ ಸಜ್ಜುಗೊಳಿಸಲಾಗುವುದು ಎಂದು ನುಡಿದರು. 

ಕಾಪು ಕ್ಷೇತ್ರದಲ್ಲಿ ಪ್ರವಾಸೋಧ್ಯಮಕ್ಕೆ ವಿಫುಲ ಅವಕಾಶಗಳಿವೆ. ಪ್ರವಾಸೋಧ್ಯಮ ನನ್ನ ಆಸಕ್ತಿಯ ಕ್ಷೇತ್ರವೂ ಹೌದು. ಪ್ರವಾಸಿ ತಾಣಗಳನ್ನು ಇನ್ನಷ್ಟು ಅಭಿವೃದ್ಧಿ ಪಡಿಸಬೇಕಾದರೆ ಸಂಪರ್ಕ ರಸ್ತೆಗಳು ಉತ್ತಮವಾಗಿರಬೇಕು. ಇದರಿಂದ ಹೆಚ್ಚು ಹೆಚ್ಚು ಪ್ರವಾಸಿಗರನ್ನು ಬರುವಂತೆ ಮಾಡಲು ಸಾಧ್ಯ. ಇದರಿಂದ ಉದ್ಯೋಗ ಸೃಷ್ಟಿ ಸಾಧ್ಯ. ಈ ನಿಟ್ಟಿನಲ್ಲಿ ಪ್ರವಾಸಿ ತಾಣಗಳ ಸಂಪರ್ಕ ರಸ್ತೆ ಹಾಗೂ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಮಿತಿಯನ್ನು ರಚಿಸಲಾಗುವುದು. ಆ ಸಮಿತಿಯ ವರದಿಯ ಆಧಾರದ ಮೇರೆಗೆ ಪ್ರವಾಸಿ ತಾಣಗಳು ಹಾಗೂ ಅಲ್ಲಿನ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು. 

ಕಾಪು ವಿಧಾನಸೌಭಾ ಕ್ಷೇತ್ರದಲ್ಲಿ ನಿವೇಶನ ರಹಿತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ನಿವೇಶನ ರಹಿತರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಿ ಜಾಗವನ್ನು ಗುರುತಿಸಿ ನಿವೇಶನ ನೀಡುವ ಬಗ್ಗೆ ಯೋಜನೆ ರೂಪಿಸಲಾಗುವುದು ಎಂದು ನುಡಿದರು.

Similar News