ತಕ್ಷಣ ಡಬ್ಲ್ಯುಎಫ್ಐ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ಬಂಧನಕ್ಕೆ 1,000ಕ್ಕೂ ಹೆಚ್ಚು ಗಣ್ಯ ನಾಗರಿಕರ ಆಗ್ರಹ

Update: 2023-05-29 13:44 GMT

ಹೊಸದಿಲ್ಲಿ: ರವಿವಾರ ದಿಲ್ಲಿ ಪೊಲೀಸರು ಪ್ರತಿಭಟನಾನಿರತ ಕುಸ್ತಿಪಟುಗಳ ಮೇಲೆ ನಡೆಸಿದ ದೌರ್ಜನ್ಯವನ್ನು 1,150ಕ್ಕೂ ಅಧಿಕ ಮಾನವ ಹಕ್ಕುಗಳ ಕಾರ್ಯಕರ್ತರು, ಮಾಜಿ ಸರಕಾರಿ ಅಧಿಕಾರಿ, ವಕೀಲರು. ಲೇಖಕರು ಮತ್ತು ಇತರರನ್ನೊಳಗೊಂಡ ಗುಂಪೊಂದು ವಿರೋಧಿಸಿದೆ. ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್ಐ)ದ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ ಸಿಂಗ್ ರನ್ನು ತಕ್ಷಣ ಬಂಧಿಸುವಂತೆ ಮತ್ತು ಪೊಲೀಸರ ವಶದಲ್ಲಿರುವ ಎಲ್ಲ ಕುಸ್ತಿಪಟುಗಳು ಮತ್ತು ಕಾರ್ಯಕರ್ತರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಅದು ಹೇಳಿಕೆಯಲ್ಲಿ ಆಗ್ರಹಿಸಿದೆ.

ಸಂಸದ ಜವಾಹರ ಸರ್ಕಾರ್, ಮಾಜಿ ಸಂಸದರಾದ ಹನ್ನನ್ ಮುಲ್ಲಾ ಮತ್ತು ಸುಭಾಷಿಣಿ ಅಲಿ, ಮಾಜಿ ಹಿರಿಯ ಸರಕಾರಿ ಅಧಿಕಾರಿಗಳಾದ  ಅದಿತಿ ಮೆಹ್ತಾ ಮತ್ತು ಅಭಿಜಿತ್ ಸೇನಗುಪ್ತಾ, ವಕೀಲರಾದ ಇಂದಿರಾ ಜೈಸಿಂಗ್, ವೃಂದಾ ಗ್ರೋವರ್ ಮತ್ತು ಪ್ರಶಾಂತ್ ಭೂಷಣ, ಕಲಾವಿದರಾದ ಮಾಯಾ ರಾವ್, ಮಲ್ಲಿಕಾ ಸಾರಾಭಾಯಿ ಮತ್ತು ಶೀಬಾ ಚಚ್ಛಿ, ಶಿಕ್ಷಣತಜ್ಞರಾದ ಮೇರಿ ಜಾನ್, ಜಯತಿ ಘೋಷ, ಪ್ರಭಾತ ಪಟ್ನಾಯಕ್ ಮತ್ತು ಚಿತ್ರಾ ಜೋಶಿ,ಮಾನವ ಹಕ್ಕುಗಳ ಕಾರ್ಯಕರ್ತರಾದ ಆ್ಯನ್ನಿ ರಾಜಾ, ಶಬನಮ್ ಹಾಶ್ಮಿ, ಮರಿಯಂ ಧಾವಳೆ, ಮೀರಾ ಸಂಘಮಿತ್ರ, ಜಗ್ಮತಿ ಸಂಗ್ವಾನ್, ಅರುಂಧತಿ ಧುರು ಮತ್ತು ಕವಿತಾ ಶ್ರೀವಾಸ್ತವ ಹೇಳಿಕೆಗೆ ಸಹಿ ಹಾಕಿದರವರಲ್ಲಿ ಸೇರಿದ್ದಾರೆ.

‘ಕಳೆದೊಂದು ದಶಕದಿಂದಲೂ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳದ ಆರೋಪವನ್ನು ಹೊತ್ತಿರುವ ಡಬ್ಲ್ಯುಎಫ್ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ ಸಿಂಗ್ ವಿರುದ್ಧ ನಮ್ಮ ಕುಸ್ತಿಪಟುಗಳ ಹೋರಾಟ ಮತ್ತು ಅವರಿಗೆ ಪ್ರಬಲ ತಳಮಟ್ಟದ ಬೆಂಬಲವನ್ನು ದಮನಿಸಲು ಸರಕಾರ ಮತ್ತು ಪೊಲೀಸರು ಇಂದು ನಡೆಸಿದ ಹಿಂಸಾಚಾರವನ್ನು ಕಂಡು ನಾವು ಸಂಪೂರ್ಣವಾಗಿ ಭಯಭೀತರಾಗಿದ್ದೇವೆ. ಕುಸ್ತಿಪಟುಗಳು 2023, ಜ.18ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರು ಮೇ 28 ರಂದು ನೂತನ ಸಂಸತ್ ಕಟ್ಟಡದ ಹೊರಗೆ ಮಹಿಳಾ ಸಮ್ಮಾನ್ ಮಹಪಂಚಾಯತ್ ನಲ್ಲಿ ಪಾಲ್ಗೊಳ್ಳುವಂತೆ ಎಲ್ಲ ಮಹಿಳಾ ಸಂಘಟನೆಗಳು, ಕಾರ್ಯಕರ್ತರು ಮತ್ತು ಇತರ ಎಲ್ಲ ನಾಗರಿಕ ಸಮಾಜದ ಸಂಸ್ಥೆಗಳಿಗೆ ಕರೆ ನೀಡಿದ್ದರು. ದಿಲ್ಲಿ ಮತ್ತು ಸಮೀಪದ ರಾಜ್ಯಗಳ ಸಾವಿರಾರು ಮಹಿಳೆಯರು ಈ ಕರೆಗೆ ಸ್ಪಂದಿಸಿದ್ದರು. ಭಾರತೀಯ ಮಹಿಳೆಯರ ಸಾಮೂಹಿಕ ಶಕ್ತಿಗೆ ಹೆದರಿದ ಪೊಲೀಸರು ಪೂರ್ವಭಾವಿಯಾಗಿ ಎಲ್ಲ ಗಡಿ ರಸ್ತೆಗಳನ್ನು ನಿರ್ಬಂಧಿಸಿದ್ದರು, ಸಮೀಪದ ಮೆಟ್ರೋ ನಿಲ್ದಾಣಗಳನ್ನು ಮುಚ್ಚಿಸಿದ್ದರು ಮತ್ತು ರಸ್ತೆಗಳಲ್ಲಿ ಸಂಚಾರವನ್ನು ನಿರ್ಬಂಧಿಸಿದ್ದರು. ಭಾರತದ ಮಹಿಳೆಯರು ಪರಸ್ಪರ ಬೆಂಬಲವಾಗಿ ನಿಂತಿರುವುದನ್ನು ಕಂಡು ಈ ಪುರುಷ ಪ್ರಧಾನ ಸರಕಾರವು ಎಷ್ಟೊಂದು ಹೆದರಿಕೊಂಡಿದೆ ಎನ್ನುವುದನ್ನು ಇದು ತೋರಿಸುತ್ತಿದೆ. ಈ ದಾಳಿಯ ಹೊರತಾಗಿಯೂ ಒಗ್ಗಟ್ಟಿನ ಮಹಾಪೂರವನ್ನು ತಡೆಯಲು ಸರಕಾರಕ್ಕೆ ಸಾಧ್ಯವಾಗಲಿಲ್ಲ. ಕಾರ್ಯಕರ್ತರು ಮತ್ತು ಕಾಳಜಿಬದ್ಧ ನಾಗರಿಕರು ಪ್ರತಿಭಟನಾ ಸ್ಥಳವನ್ನು ತಲುಪಲು ಪ್ರಯತ್ನಿಸಿದ್ದರು ಎಂದು ಹೇಳಿಕೆಯು ತಿಳಿಸಿದೆ.

‘ಕಳೆದ ಕೆಲವು ವರ್ಷಗಳಲ್ಲಿ ಜನರ ಪ್ರತಿಭಟನೆಗಳನ್ನು ನಿಗ್ರಹಿಸಲಾಗಿದೆ. ಹಲವಾರು ಮಹಿಳೆಯರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಮತ್ತು ಅನೇಕರಿಗೆ ದೈಹಿಕ ಹಾಗೂ ಮೌಖಿಕ ಹಿಂಸೆಯನ್ನು ನೀಡಿದ್ದಾರೆ. ನಾವು ಈ ಪತ್ರ ಬರೆಯುತ್ತಿರುವಾಗ ಜಂತರ್ ಮಂತರ್ನಲ್ಲಿಯ ಕುಸ್ತಿಪಟುಗಳ ಟೆಂಟ್ ಅನ್ನು ಕೆಡವಲಾಗಿದೆ ಮತ್ತು ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಸೂಕ್ತ ವಿಚಾರಣೆಯನ್ನು ನಡೆಸಬೇಕೆಂಬ ಅವರ ಕನಿಷ್ಠ ಬೇಡಿಕೆಯನ್ನು ಈಡೇರಿಸಲಾಗಿಲ್ಲ,ಆದರೆ ಮಹಿಳೆಯರಿಗೆ ನ್ಯಾಯಕ್ಕಾಗಿ ಅವರ ಪರ ಧ್ವನಿಯೆತ್ತಿರುವ ದೇಶಾದ್ಯಂತದ ಜನರನ್ನು ಕ್ರಿಮಿನಲ್ಗಳಂತೆ ನಡೆಸಿಕೊಳ್ಳಲಾಗುತ್ತಿದೆ. ಆದರೆ ನಿಜವಾದ ಅಪರಾಧಿ ಬ್ರಿಜ್ಭೂಷಣ್ ಸ್ವಂತಂತ್ರರಾಗಿ ಓಡಾಡಿಕೊಂಡಿದ್ದಾರೆ. ಈ ಮಹಿಳಾ ವಿರೋಧಿ ಸರಕಾರಕ್ಕೆ ತಕ್ಕಂತೆ ನೂತನ ಸಂಸತ್ ಕಟ್ಟಡದ ಉದ್ಘಾಟನೆಯ ದಿನವೇ ಇದೆಲ್ಲ ನಡೆದಿದೆ. ಈ ಸಂಸತ್ತು ನಮಗೆಲ್ಲರಿಗೂ ಸೇರಿದೆ,ಅದು ಈ ದೇಶದ ಮಹಿಳೆಯರಿಗೆ ಸೇರಿದೆ,ಅವರು ನ್ಯಾಯಕ್ಕಾಗಿ ಆಗ್ರಹಿಸುವ ಹಕ್ಕು ಹೊಂದಿದ್ದಾರೆ. ನಾವು ಕುಸ್ತಿಪಟುಗಳೊಂದಿಗೆ ಸಂಪೂರ್ಣ ಒಗ್ಗಟ್ಟಿನಿಂದ ನಿಂತಿದ್ದೇವೆ ’ಎಂದು ಗುಂಪು ಹೇಳಿಕೆಯಲ್ಲಿ ತಿಳಿಸಿದೆ.

Similar News