​ಮಂಗಳೂರು: ಗಾಂಜಾ ಸಹಿತ ಆರೋಪಿ ಸೆರೆ

Update: 2023-05-29 15:30 GMT

ಮಂಗಳೂರು, ಮೇ 29: ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಕಾರಿನಲ್ಲಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಕಾಸರಗೋಡು ಬಂದ್ಯೋಡ್ ಕುಬನೂರು ನಿವಾಸಿ ಮೊಯಿದ್ದೀನ್ ಶಬ್ಬೀರ್(35)ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ 23.250 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಸೋಮವಾರ ವಿಶಾಖಪಟ್ಟಣದಿಂದ ಮಹೇಂದ್ರ ಕೆಯುವಿ 100 ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಎಸಿಪಿ ಪಿ.ಎ ಹೆಗಡೆ ನೇತೃತ್ವದ ಸಿಸಿಬಿ ಪೊಲೀಸರು ಮುಡಿಪು ಕಾಯರಗೋಳಿ ಕ್ರಾಸ್ ಎಂಬಲ್ಲಿ ಕಾರು ಪತ್ತೆ ಹಚ್ಚಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಗಾಂಜಾ, 2 ಮೊಬೈಲ್ ಫೋನ್, ಕಾರು ಸಹಿತ 12,96,470 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿದ್ದಾರೆ.

ಈತ ವಿಶಾಖಪಟ್ಟಣದಿಂದ ಬೆಂಗಳೂರು ಮೂಲಕ ಗಾಂಜಾ ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮೊಯಿದ್ದೀನ್ ಶಬ್ಬೀರ್ ವಿರುದ್ಧ ಕಳ್ಳತನ, ಹಲ್ಲೆ, ಕೊಲೆ ಪ್ರಕರಣಗಳು ಕಾಸರಗೋಡು, ಮಂಜೇಶ್ವರ, ಕುಂಬ್ಳೆ, ವಿದ್ಯಾನಗರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದೆ. ಆಂಧ್ರಪ್ರದೇಶದಲ್ಲಿ ಗಾಂಜಾ ಸಾಗಾಟಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. 

Similar News