1 ವರ್ಷದಲ್ಲಿ 30 ಡಯಾಲಿಸಿಸ್ ರೋಗಿಗಳ ಸಾವು !

ಉಡುಪಿ ಜಿಲಾಸ್ಪತ್ರೆಯ ಡಯಾಲಿಸಿಸ್ ಕೇಂದ್ರದ ಅವ್ಯವಸ್ಥೆ ವಿರುದ್ಧ ರೋಗಿಗಳ ಗಂಭೀರ ಆರೋಪ

Update: 2023-05-30 08:25 GMT

ಉಡುಪಿ: ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಖಾಸಗಿಯವರಿಗೆ ಗುತ್ತಿಗೆಗೆ ನೀಡಿರುವ ಡಯಾಲಿಸಿಸ್ ಕೇಂದ್ರದ ಅವ್ಯವಸ್ಥೆಯಿಂದ ಕಳೆದ ಒಂದು ವರ್ಷದಲ್ಲಿ 30 ರೋಗಿಗಳು ಮೃತಪಟ್ಟಿದ್ದಾರೆ ಎಂದು  ಡಯಾಲಿಸಿಸ್ ಗೆ ಒಳಗಾಗುತ್ತಿರುವ ರೋಗಿಗಳು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ಇದರ ವಿರುದ್ಧ ಆಸ್ಪತ್ರೆಯ ಎದುರು ಧರಣಿ ಕುಳಿತು ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸಿ ರೋಗಿಗಳ ಜೀವ ಉಳಿಸುವಂತೆ ಆಗ್ರಹಿಸಿದ್ದಾರೆ.

ಉಡುಪಿ ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಕೇಂದ್ರವನ್ನು 2021ರ ಮೇ ತಿಂಗಳ ವರೆಗೆ ಖಾಸಗಿ ಸಂಸ್ಥೆ ಬಿಆರ್ಎಸ್ ಹೆಲ್ತ್ ಆ್ಯಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ ನೋಡಿಕೊಳ್ಳುತ್ತಿತ್ತು. ಈ ಸಂಸ್ಥೆ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಈ ಕೇಂದ್ರವನ್ನು ಮೇ ತಿಂಗಳಿನಿಂದ 2022ರ ಜನವರಿ ವರೆಗೆ ಜಿಲ್ಲಾಸ್ಪತ್ರೆಯವರೇ ಮುನ್ನಡೆಸುತ್ತಿದ್ದರು. ರಾಜ್ಯ ಸರಕಾರ 2022ರ ಜ. 14ರಂದು ಈ ಕೇಂದ್ರದ ಗುತ್ತಿಗೆಯನ್ನು ಕೋಲ್ಕತಾ ಮೂಲದ ಎಸ್ಕಗ್ ಸಂಜೀವಿನಿ ಸಂಸ್ಥೆಗೆ ನೀಡಿತು.

ಜಿಲ್ಲಾಸ್ಪತ್ರೆಯವರು ಈ ಸಂಸ್ಥೆಗೆ ಕೇಂದ್ರವನ್ನು ಬಿಟ್ಟು ಕೊಡುವಾಗ ಒಟ್ಟು 14 ಡಯಾಲಿಸಿಸ್ ಯಂತ್ರಗಳಿದ್ದವು. ಪ್ರಸಕ್ತ ಅವುಗಳ ಪೈಕಿ ಏಳು ಯಂತ್ರಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಉಳಿದವು ಹಾಳಾಗಿದ್ದು, ಅವುಗಳನ್ನು ದುರಸ್ತಿ ಕೂಡ ಮಾಡಿಲ್ಲ. ಈಗ ಈ ಕೇಂದ್ರದಲ್ಲಿ ಒಟ್ಟು 60 ರೋಗಿಗಳು ಡಯಾಲಿಸಿಸ್ಗೆ ಒಳಗಾಗುತ್ತಿದ್ದಾರೆ. ಈ ಎಲ್ಲ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ರೋಗಿಗಳು ಜಿಲ್ಲಾ ಸರ್ಜನ್, ಜಿಲ್ಲಾಧಿಕಾರಿ, ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಡಯಾಲಿಸಿಸ್ಗೆ ಒಳಗಾಗುವ ರೋಗಿಗಳು ಇಂದು ಆಸ್ಪತ್ರೆ ಎದುರು ಧರಣಿ ನಡೆಸಿದರು.

10ರ ಬದಲು ಐದೇ ಸಿಬ್ಬಂದಿ

‘‘ಸಂಜೀವಿನಿ ಸಂಸ್ಥೆ ವಹಿಸಿಕೊಂಡ ಬಳಿಕ ಡಯಾಲೀಸಿಸ್ ಕೇಂದ್ರ ತೀರಾ ಅವ್ಯವಸ್ಥೆಯಿಂದ ತುಂಬಿದೆ.  ಕೆಮಿಕಲ್ ಇಲ್ಲದೆ ಯಂತ್ರಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಆಕ್ಸಿಜನ್, ಬಿಪಿ ನೋಡುವ ವ್ಯವಸ್ಥೆ ಇಲ್ಲ. ತಿಂಗಳಿಗೆ ಮೂರು ಇಂಜೆಕ್ಷನ್ ಬದಲು ಒಂದೇ ಇಂಜೆಕ್ಷನ್ ನೀಡಲಾಗುತ್ತಿದೆ. ಈ ಅವ್ಯವಸ್ಥೆಯಿಂದ ಕಳೆದ ಒಂದು ವರ್ಷದಲ್ಲಿ ಸುಮಾರು 30 ಮಂದಿ ರೋಗಿಗಳು ಮೃತಪಟ್ಟಿದ್ದಾರೆ. 23 ಮಂದಿ ಇಲ್ಲಿಂದ ಬಿಟ್ಟು ಬೇರೆಡೆ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದಾರೆ" ಎಂದು ಡಯಾಲಿಸಿಸ್ಗೆ ಒಳಗಾಗುತ್ತಿರುವ ರೋಗಿ ರಮೇಶ್ ಪೆರ್ಡೂರು ಆರೋಪಿಸಿದ್ದಾರೆ.

ಈ ಕೇಂದ್ರದಲ್ಲಿ ಹವಾನಿಯಂತ್ರಣ ವ್ಯವಸ್ಥೆ ಸರಿ ಇಲ್ಲದ ಕಾರಣ ಕಿಟಕಿಯನ್ನು ತೆರೆದು ಇಡಲಾಗುತ್ತಿದೆ. ಇದರಿಂದ ಸಮೀಪದ  ಕಟ್ಟಡದಲ್ಲಿ ನಡೆಯುತ್ತಿರುವ ಕಾಮಗಾರಿಯ ದೂಳು ಕೇಂದ್ರದೊಳಗೆ ತುಂಬಿಕೊಳ್ಳುತ್ತಿದೆ. 10 ಸಿಬ್ಬಂದಿ ಬದಲು ಕೇವಲ 5 ಮಂದಿಯನ್ನು ಮಾತ್ರ ಇಲ್ಲಿ ನಿಯೋಜಿಸಲಾಗಿದೆ. ಅವರು ಯಂತ್ರಗಳನ್ನು ಸರಿಯಾಗಿ ತೊಳೆಯುತ್ತಿಲ್ಲ.  ಕುಂದಾಪುರ, ಪೆರ್ಡೂರು, ಕಾಪು ಸೇರಿದಂತೆ ದೂರದ ಊರುಗಳಿಂದ ಬಡವರು ಇಲ್ಲಿಗೆ ಬರುತ್ತಾರೆ. ವಾರಕ್ಕೆ ಎರಡು ಮೂರು ಬಾರಿ ಡಯಾಲೀಸಿಸ್ ಮಾಡಬೇಕಾದ ಬಡವರಿಗೆ ಖಾಸಗಿಯಾಗಿ ಮಾಡಿಸಿಕೊಳ್ಳಲು ಹಣ ಇಲ್ಲ. ಹಾಗಾಗಿ ಈ ವ್ಯವಸ್ಥೆ ಯನ್ನು ಸರಿಪಡಿಸಬೇಕು. ಸಂಜೀವಿನಿ ಸಂಸ್ಥೆಯನ್ನು ಕೈಬಿಟ್ಟು ಸರಕಾರವೇ ಈ ಕೇಂದ್ರವನ್ನು ನಡೆಸಬೇಕು ಎಂದು ಅವರು ಆಗ್ರಹಿಸಿದರು.

60 ಕಿ.ಮೀ. ದೂರದ ಪ್ರಯಾಣ: ‘‘ನಾವು ಜೀವ ಉಳಿಸಿಕೊಳ್ಳುವುದಕ್ಕಾಗಿ 60 ಕಿ.ಮೀ. ದೂರದ ಅಮಾಸೆಬೈಲು ಗ್ರಾಮದಿಂದ ಇಲ್ಲಿಗೆ ಬರುತ್ತಿದ್ದೇವೆ. ಹೋಗಿ ಬರಲು 120 ಕಿ.ಮೀ. ಆಗುತ್ತದೆ. ಆದರೆ ಇಲ್ಲಿ ಸರಿಯಾದ ಯಾವುದೇ ವ್ಯವಸ್ಥೆ ಇಲ್ಲ. 2017ರಿಂದ ಇಲ್ಲೇ ಡಯಾಲಿಸಿಸ್ ಮಾಡಿಸುತ್ತಿದ್ದೆ. ಆದರೆ ಕಳೆದ ಆರು ತಿಂಗಳಿನಿಂದ ಇಲ್ಲಿ ಸರಿಯಾಗದ ಕಾರಣ ಖಾಸಗಿಯಲ್ಲಿ ಮಾಡಿಸಿಕೊಳ್ಳುತ್ತಿದ್ದೇನೆ. ಆದರೆ, ಈ ಕೇಂದ್ರದಲ್ಲಿ ಗುಣಮಟ್ಟದ ಯಂತ್ರ, ಇಂಜೆಕ್ಷನ್ಗಳಿಲ್ಲ. ಡಯಾಲಿಸಿಸ್ ಸರಿ ಕೂಡ ಆಗುವುದಿಲ್ಲ. ರಕ್ತ ತುಂಬಾ ವ್ಯರ್ಥ ಮಾಡುತ್ತಿದ್ದಾರೆ. ಇದರಿಂದ ನನಗೆ ರಕ್ತದ ಕೊರತೆ ಕಾಡುತ್ತಿದೆ. ರೋಗಿಗಳ ಬಗ್ಗೆ ಯಾವುದೇ ಕಾಳಜಿ ವಹಿಸುವುದಿಲ್ಲ’’ ಎಂದು ಪ್ರೇಮಾ ಅಮಾಸೆಬೈಲು ದೂರಿದ್ದಾರೆ.

‘‘ಬಿಆರ್ಎಸ್ ಸಂಸ್ಥೆ ವಹಿಸಿಕೊಂಡಿದ್ದಾಗ ಒಂದೂವರೆ ವರ್ಷ ಇಲ್ಲಿ ಡಯಾಲಿಸಿಸ್ ಮಾಡಿಸಿದ್ದೇನೆ. ಆಗ ಯಾವುದೇ ಸಮಸ್ಯೆ ಇರಲಿಲ್ಲ. ಸಂಜೀವಿನಿ ಬಂದ ನಂತರ ಒಂದೇ ತಿಂಗಳಲ್ಲಿ ನನಗೆ ಹಿಮೋಗ್ಲೋಬಿನ್ ಇಂಜೆಕ್ಷನ್ ಕೊಟ್ಟರು. ಅದರ ನಂತರ ಸಮಸ್ಯೆ ಉಂಟಾಗಿ 45 ದಿನಗಳ ಕಾಲ ನಾನು ನರಳಿದ್ದೇನೆ. ಮತ್ತೆ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡೆ.  ಇದಕ್ಕಾಗಿ ಒಂದೂವರೆ ಲಕ್ಷ ರೂ. ಖರ್ಚು ಮಾಡಬೇಕಾಯಿತು. ಈಗ ಒಂದೂವರೆ ವರ್ಷಗಳಿಂದ ನಾನು ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸುತ್ತಿದ್ದೇನೆ. ಆದರೆ ನಾವು ಬಡವರು. ನಮಗೆ ಯಾವುದೇ ಆದಾಯ ಇಲ್ಲ’’ ಎಂದು ಕಟಪಾಡಿ ಮಟ್ಟುವಿನ ಶೇಖರ್ ಶೆಟ್ಟಿಗಾರ್ ಅಳಲು ತೋಡಿಕೊಂಡರು.

‘ಡಯಾಲಿಸಿಸ್ ಯಂತ್ರದಲ್ಲಿ ತುಂಬಾ ಸಮಸ್ಯೆ ಇದೆ. ಸರಿಯಾಗಿ ಕ್ಲೀನ್ ಆಗುತ್ತಿಲ್ಲ. ಡಯಾಲಿಸಿಸ್ ಮಾಡಿದ ನಂತರ ಚಳಿ, ವಾಂತಿ ಆಗುತ್ತದೆ. ನಾವು ಪ್ರಶ್ನೆ ಮಾಡಿದರೆ ಉಡಾಫೆಯಿಂದ ಮಾತನಾಡುತ್ತಾರೆ. ಸಿಬ್ಬಂದಿಯಿಲ್ಲದೆ ಸಮಯಕ್ಕೆ ಸರಿಯಾಗಿ ಡಯಾಲಿಸಿಸ್ ಆಗುತ್ತಿಲ್ಲ. ಅವರು ಏನು ಮಾಡಿದರೂ ನಾವು ಒಪ್ಪಿಕೊಳ್ಳಬೇಕು. ಯಾಕೆಂದರೆ ನಾವು ಉಚಿತವಾಗಿ ಮಾಡಿಸುವವರು ಎಂಬ ನಿರ್ಲಕ್ಷ್ಯ ಅವರಲ್ಲಿದೆ. ಆದುದರಿಂದ ಸರಕಾರ ಕೂಡಲೇ ಹೊಸ ಯಂತ್ರ ಅಳವಡಿಸಿ ಸರಿಯಾದ ವ್ಯವಸ್ಥೆ ಮಾಡಿಕೊಡಬೇಕು’’
- ಶಹಝಾದ್ ಆದಿಉಡುಪಿ, ಡಯಾಲಿಸಿಸ್ ರೋಗಿ

ಸಂಜೀವಿನಿ ಸಂಸ್ಥೆಯ ವಿರುದ್ಧ ತನಿಖೆಗೆ ಶಾಸಕರ ಆಗ್ರಹ
ಉಡುಪಿ ಜಿಲ್ಲಾಸ್ಪತ್ರೆಯ ಡಯಾಲಿಸಿಸ್ಗೆ ಒಳಗಾಗುತ್ತಿರುವ ರೋಗಿಗಳ ಧರಣಿಯ ಹಿನ್ನೆಲೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಡಯಾಲಿಸಿಸ್ ಕೇಂದ್ರವನ್ನು ಪರಿಶೀಲನೆ ನಡೆಸಿದರು. ಬಳಿಕ ಈ ಕುರಿತಂತೆ ಶಾಸಕರು ಜಿಲ್ಲಾ ಸರ್ಜನ್ ಡಾ. ಸುದೇಶ್ ಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದರು. ಧರಣಿ ನಿರತ ರೋಗಿಗಳನ್ನು ಸಂತೈಸಿ, ಇಲ್ಲಿನ ಸಮಸ್ಯೆಯನ್ನು ಕೂಡಲೇ ಬಗೆಹರಿಸುವುದಾಗಿ ಭರವಸೆ ನೀಡಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರಕಾರ ಸಂಜೀವಿನಿ ಎಂಬ ಸಂಸ್ಥೆಗೆ ರಾಜ್ಯದ 120 ಸರಕಾರಿ ಆಸ್ಪತ್ರೆಗಳ ಡಯಾಲಿಸಿಸ್ ಕೇಂದ್ರವನ್ನು ಗುತ್ತಿಗೆ ವಹಿಸಿಕೊಟ್ಟಿದೆ. ಆದರೆ ಅವರ ಕೆಲವೊಂದು ಸಮಸ್ಯೆಯಿಂದ ಉಡುಪಿಯ ಬಡ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ರೋಗಿಗಳೇ ಹೇಳುವಂತೆ ಈ ಅವ್ಯವಸ್ಥೆಯಿಂದ ಈವರೆಗೆ 30 ಮಂದಿ ಮೃತಪಟ್ಟಿದ್ದಾರೆ. ಇದನ್ನೆಲ್ಲ ಪರಿಶೀಲಿಸಿದಾಗ ಸಂಜೀವಿನಿ ಸಂಸ್ಥೆಯ ಲೋಪಗಳು ಎದ್ದು ಕಾಣುತ್ತವೆ ಎಂದರು.

ಈ ಬಗ್ಗೆ ನಾನು ಜಿಲ್ಲಾಧಿಕಾರಿಗಳ ಜೊತೆ ಕೂಡ ಮಾತನಾಡಿದ್ದು, ಸಂಜೀವಿನಿ ಸಂಸ್ಥೆಯವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದೇನೆ. ಅಲ್ಲದೇ ಸಂಸ್ಥೆಯ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸರಕಾರವನ್ನು ಒತ್ತಾಯಿಸುತ್ತೇನೆ. ಈ ಸಮಸ್ಯೆ ಪರಿಹರಿಸಲು ಸರಕಾರದ ಮಟ್ಟದಲ್ಲಿ ಸಾಧ್ಯವಾಗದಿದ್ದರೆ ಖಾಸಗಿಯ ಸಹಯೋಗದೊಂದಿಗೆ ತಾತ್ಕಾಲಿಕ ಪರಿಹಾರ ಒದಗಿಸಲು ಪ್ರಯತ್ನಿಸುತ್ತೇನೆ.
ಯಶ್ಪಾಲ್ ಸುವರ್ಣ, ಉಡುಪಿ ಶಾಸಕ

Similar News