ಟ್ರಾಫಿಕ್ ಪೊಲೀಸರಿಗೆ, ಚಾಲಕರಿಗೆ ತರಬೇತಿ ಅಗತ್ಯ: ಎಸ್ಪಿ ಹಾಕೆ ಅಕ್ಷಯ್ ಮಚ್ಚೀಂದ್ರ

ಉಡುಪಿ: ಸಂಚಾರಿ ಪೊಲೀಸರಿಗೆ ತರಬೇತಿ ಕಾರ್ಯಾಗಾರ

Update: 2023-05-30 13:56 GMT

ಮಣಿಪಾಲ, ಮೇ 30: ರಸ್ತೆಗಳಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಖಾತ್ರಿ ಪಡಿಸುವಲ್ಲಿ ಟ್ರಾಫಿಕ್ ಪೊಲೀಸರು ಹಾಗೂ ಚಾಲಕರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ರಸ್ತೆ ನಿರ್ವಹಣೆ ಮತ್ತು ತುರ್ತು ಪ್ರತಿಕ್ರಿಯೆಗಳ ಸಂದರ್ಭದಲ್ಲಿ  ಅವರಿಗೆ ಸವಾಲುಗಳನ್ನು ಎದುರಿಸಲು ನಿರಂತರ ತರಬೇತಿ ಅಗತ್ಯವಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹಾಕೆ ಅಕ್ಷಯ್ ಮಚ್ಚೀಂದ್ರ ಹೇಳಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್, ಸೆಂಟರ್ ಫಾರ್ ಕ್ಲಿನಿಕಲ್ ಮತ್ತು ಇನ್ನೋವೇಟಿವ್ ಫೋರೆನ್ಸಿಕ್ಸ್ (ಸಿಸಿಐಎಫ್) ಮತ್ತು ಮಣಿಪಾಲ ಕೆಎಂಸಿ ತುರ್ತು ವೈದ್ಯಕೀಯ ವಿಭಾಗದ ಸಹಯೋಗದೊಂದಿಗೆ ಜಿಲ್ಲಾ ಟ್ರಾಫಿಕ್ ಪೊಲೀಸ್ ಮತ್ತು ಚಾಲಕರಿಗೆ ಪ್ರಥಮ ಪ್ರತಿಕ್ರಿಯೆ ನೀಡುವುದರ ಬಗ್ಗೆ ಇಂದು ಹಮ್ಮಿಕೊಳ್ಳಲಾದ ತರಬೇತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು. 

ಕೆಎಂಸಿಯ ಡಾ.ಟಿಎಂಎ ಪೈ ಹಾಲ್‌ನಲ್ಲಿ ನಡೆದ ಕಾರ್ಯಾಗಾರದಲ್ಲಿ  ಮಾತನಾಡಿದ ಹಾಕೆ ಅಕ್ಷಯ್ ಅವರು, ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವಲ್ಲಿ ಮತ್ತು ತುರ್ತು ಸಂದರ್ಭಗಳಲ್ಲಿ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ಅಗತ್ಯವಾದ ಕೌಶಲ್ಯಗಳೊಂದಿಗೆ ಟ್ರಾಫಿಕ್ ಪೋಲೀಸ್ ಮತ್ತು ಚಾಲಕರನ್ನು ಸಜ್ಜುಗೊಳಿಸುವಲ್ಲಿ ಈ ತರಬೇತಿ ಕಾರ್ಯಕ್ರಮ ಅತ್ಯಂತ ಮಹತ್ವವನ್ನು ಹೊಂದಿದೆ ಎಂದರು. 

ಸಮಾರಂಭದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿದ ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ. ಶರತ್ ಕೆ ರಾವ್ ಮಾತನಾಡಿ,  ಸಹ ಉಪ ಕುಲಪತಿ  (ಆರೋಗ್ಯ ವಿಜ್ಞಾನ)  ಅವರು ತಮ್ಮ ಭಾಷಣದಲ್ಲಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ನ  ಸಮಾಜಮುಖಿ ಕಾರ್ಯಗಳನ್ನು ವಿವರಿಸಿ, ಆರೋಗ್ಯ ಶಿಕ್ಷಣ, ಸಂಶೋಧನೆ ಮತ್ತು ಸಮುದಾಯದ ಒಳಿತಿಗಾಗಿ ಮಾಹೆ ಮುಂದೆ ಮಾಡುವ ಕಾರ್ಯಗಳ ಕುರಿತು ವಿವರಿಸಿದರು. 

ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮಾತನಾಡಿ, ಉಡುಪಿ ಜಿಲ್ಲಾ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ, ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಮತ್ತು ಸಮುದಾಯದ ಯೋಗಕ್ಷೇಮವನ್ನು ಬಲಪಡಿಸುವ ಕಾರ್ಯದಲ್ಲಿ ಸಕ್ರಿಯ ವಾಗಿ ಭಾಗವಹಿಸುತ್ತಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಕಾರ್ಯಾಗಾರದಲ್ಲಿ ಪ್ರಥಮ ಚಿಕಿತ್ಸಾ ತಂತ್ರಗಳು, ಸಿಪಿಆರ್ (ಹೃದಯ ಶ್ವಾಸಕೋಶದ ಪುನರುಜ್ಜೀವನ), ಅಪಘಾತ ನಿರ್ವಹಣೆ ಮತ್ತು ರಸ್ತೆ ಅಪಘಾತಗಳು ಮತ್ತು ತುರ್ತು ಸಂದರ್ಭಗಳಲ್ಲಿ ತಕ್ಷಣದ ಪ್ರತಿಕ್ರಿಯೆಗಾಗಿ ನಿರ್ಣಾಯಕವಾದ ಇತರ ಅಗತ್ಯ ಕೌಶಲ್ಯಗಳನ್ನು ಒಳಗೊಂಡಂತೆ ವಿವಿಧ ಕ್ಷೇತ್ರಗಳಲ್ಲಿ ಟ್ರಾಫಿಕ್ ಪೊಲೀಸರಿಗೆ ಸಮಗ್ರ ತರಬೇತಿಯನ್ನು ನೀಡಲಾಯಿತು. 

ಕೆಎಂಸಿ ಮಣಿಪಾಲದ ಡೀನ್ ಡಾ.ಪದ್ಮರಾಜ್ ಹೆಗ್ಡೆ ಅತಿಥಿಗಳನ್ನು ಸ್ವಾಗತಿಸಿದರು. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಫ್ರೆಸ್ಟನ್ ಮಾರ್ಕ್ ಸಿರೂರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೆಎಂಸಿ ಮಣಿಪಾಲದ ಸಿಸಿಐಎಫ್  ಸಂಯೋಜಕ ಡಾ.ವಿನೋದ್ ನಾಯಕ್ ವಂದಿಸಿದರು. 

Similar News