ಹೆಣ್ಣು ಮಕ್ಕಳಲ್ಲಿ ಆತ್ಮ ವಿಶ್ವಾಸ ತುಂಬಲು ಜಾಗೃತಿ: ಡಾ.ಕುಮಾರ್

Update: 2023-05-30 14:32 GMT

ಮಂಗಳೂರು: ಋತುಸ್ರಾವವೆಂಬುದು ಪ್ರಕೃತಿಯು ಮಹಿಳೆಗೆ ನೀಡಿರುವ ನೈಸರ್ಗಿಕ ಪ್ರಕ್ರಿಯೆಯೇ ಹೊರತು ಖಾಯಿಲೆಯಲ್ಲ. ಋತುಸ್ರಾವ ಜಾಗೃತಿ ಮೂಲಕ ಹೆಣ್ಣು ಮಕ್ಕಳಲ್ಲಿ ಆತ್ಮ ವಿಶ್ವಾಸ ಹಾಗೂ ಆತ್ಮ ಗೌರವ ಹೆಚ್ಚಿಸುವ ಕೆಲಸಕ್ಕೆ ಪ್ರೇರಣೆ ನೀಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ದ.ಕ.ಜಿಪಂ ಸಿಇಒ ಡಾ.ಕುಮಾರ್ ಹೇಳಿದರು.

ನಗರದ ಕೊಟ್ಟಾರದಲ್ಲಿರುವ ಜಿಪಂನ ನೇತ್ರಾವತಿ ಸಭಾಂಗಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಸ್ವಚ್ಛ ಭಾರತ ಮಿಷನ್ (ಗ್ರಾಮೀಣ)ನ ಸಹಯೋಗದಲ್ಲಿ ಮಂಗಳವಾರ ನಡೆದ ಅಂತಾರಾಷ್ಟ್ರೀಯ ಋತುಸ್ರಾವ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಋತುಸ್ರಾವ ಕುರಿತು ಜಾಗೃತಿಯು ಮಹಿಳಾ ಸಬಲೀಕರಣದ ಭಾಗವಾಗಿದೆ. ಮಹಿಳೆಯು ಆರೋಗ್ಯವಾಗಿದ್ದರೆ ಆಕೆ ಸದೃಢಳಾಗುತ್ತಾಳೆ. ಆಕೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿದ್ದರೆ ಮಾತ್ರ ಕುಟುಂಬ, ಸಮಾಜ, ದೇಶ ಹಾಗೂ ಪ್ರಪಂಚ ಬೆಳಗಲು ಸಾಧ್ಯ. ನಾವು ಹೆಣ್ಣನ್ನು ತಾಯಿಯಾಗಿ, ಹೆಂಡತಿಯಾಗಿ, ಗೆಳತಿ ಯಾಗಿ, ಅಕ್ಕ, ತಂಗಿಯಾಗಿ ಸ್ವೀಕರಿಸಬೇಕಿದೆ ಎಂದರು.

ಒಂದು ಸಮಾಜ, ಕುಟುಂಬ ಬೆಳೆಯಲು ಹೆಣ್ಣು ದೀಪ ಮತ್ತು ಆಧಾರ ಸ್ತಂಭ. ಹೆಣ್ಣು ಮನೆಯನ್ನು ಬೆಳಗುವ ಗೂಡುದೀಪವಲ್ಲ. ಇಡೀ ಸಮಾಜವನ್ನು ಬೆಳಗುವ ಲೋಕದೀಪವಾಗಬೇಕು ಎಂದು ಡಾ.ಕುಮಾರ್ ಆಶಿಸಿದರು.
ಹಿಂದೆ ಮಹಿಳೆಯರಿಗೆ ಮುಟ್ಟಿನ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಆದುದರಿಂದ ಅನೇಕ ಮಹಿಳೆಯರು ಅನಾರೋಗ್ಯದಿಂದ ಬಳಳುತ್ತಿದ್ದರು. ಇಂದು ಇದರ ಬಗ್ಗೆ ಶಾಲೆಗಳು, ಕೆಲಸ ಮಾಡುವ ಸ್ಥಳಗಳಲ್ಲಿ ಮಾಹಿತಿ ನೀಡಲಾಗುತ್ತಿದೆ. ನಾವು ಇದರ ಬಗ್ಗೆ ಹೆಚ್ಚಿನ ಅರಿವನ್ನು ನೀಡಬೇಕು ಎಂದು ಮುಖ್ಯ ಯೋಜನಾಧಿಕಾರಿಗಳು ಮತ್ತು ಮುಖ್ಯ ಲೆಕ್ಕಾಧಿಕಾರಿ ಸಂಧ್ಯಾ ಕೆ.ಎಸ್. ತಿಳಿಸಿದರು.

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ವೈದ್ಯಾಧಿಕಾರಿ ಡಾ.ಶಶಿಕಲಾ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

Similar News