ಜೂನ್ 1: ವೃತ್ತಿನಿರತ ಯಕ್ಷಗಾನ ಕಲಾವಿದರ 25ನೇ ವರ್ಷದ ಸಮಾವೇಶ

Update: 2023-05-30 15:18 GMT

ಉಡುಪಿ, ಮೇ 30: ಉಡುಪಿಯ ಯಕ್ಷಗಾನ ಕಲಾರಂಗ, ವೃತ್ತಿ ಕಲಾವಿದರ ಕ್ಷೇಮ ಚಿಂತನೆಗೆ ರೂಪಿಸಿದ ಅಂಗ ಸಂಸ್ಥೆ ಯಕ್ಷನಿಧಿಯ ಮೂಲಕ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು, ಇದರೊಂದಿಗೆ ಪ್ರತೀ ವರ್ಷ ಕಲಾವಿದರ ಸಮಾವೇಶವನ್ನು ಆಯೋಜಿಸಿಕೊಂಡು ಬರುತ್ತಿದೆ. 

ಯಕ್ಷನಿಧಿಯ 25ನೇ ವರ್ಷದ ಸಮಾವೇಶ ಜೂನ್ 1ರ ಗುರುವಾರ  ಉಡುಪಿ ಪೂರ್ಣಪ್ರಜ್ಞ ಸಭಾಂಗಣದಲ್ಲಿ ದಿನವಿಡೀ ನಡೆಯಲಿದೆ. ಬೆಳಗ್ಗೆ 10:00ಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ ಅಧ್ಯಕ್ಷತೆಯಲ್ಲಿ ಖ್ಯಾತ ನೃತ್ಯ ಕಲಾವಿದೆ ವಿದುಷಿ ಮಧು ನಟರಾಜ್ ಸಮಾವೇಶವನ್ನು ಉದ್ಘಾಟಿಸುವರು.

ಅಪರಾಹ್ನ 2:30ಕ್ಕೆ ಜಿ. ಶಂಕರ್ ಅಧ್ಯಕ್ಷತೆಯಲ್ಲಿ ಜರಗಲಿರುವ ಸಮಾವೇಶದ ಸಮಾರೋಪ ಸಮಾರಂಭ ಜರಗಲಿದೆ. ಇದರಲ್ಲಿ ಉಡುಪಿ ಶಾಸಕ ಯಶಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉದ್ಯಮಿ ಆನಂದ ಸಿ. ಕುಂದರ್, ಮಾಜಿ ಶಾಸಕ ಕೆ. ರಘುಪತಿ ಭಟ್, ಉದ್ಯಮಿ ಪಿ. ಪುರುಷೋತ್ತಮ ಶೆಟ್ಟಿ, ಕೆನರಾ ಬಸ್ಸು ಮಾಲಕರ ಸಂಘದ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್, ಮೊಗವೀರ ಮಹಾಸಭಾ ಉಚ್ಚಿಲ ಇದರ ಅಧ್ಯಕ್ಷ ಜಯ ಕೋಟ್ಯಾನ್ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಅಶಕ್ತ ಕಲಾವಿದರಿಗೆ ಗೃಹನಿರ್ಮಾಣ ನೆರವು, ವೈದ್ಯಕೀಯ ನೆರವು ವಿತರಿಸಲಾಗುವುದು. ಬೆಳಗ್ಗೆ 8:30ರಿಂದ 10:00ರ ವರೆಗೆ ಕಲಾವಿದರ ಆರೋಗ್ಯ ತಪಾಸಣೆ ನಡೆಸಲಾಗುವುದು. 10:30ರಿಂದ  ಮಧು ನಟರಾಜ್ ಮತ್ತು ಬಳಗದವರಿಂದ ನೃತ್ಯ ಪ್ರಾತ್ಯಕ್ಷಿಕೆ ಜರಗಲಿದೆ.

ಅಪರಾಹ್ನ 12:00ಕ್ಕೆ ಯಕ್ಷಗಾನ ಕಲಾವಿದರು ‘ಸಮಯ ಮಿತಿ ಯಕ್ಷಗಾನ ಸುಖ-ಕಷ್ಟ’ ಎಂಬ ವಿಷಯದ ಕುರಿತು ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Similar News