ಹುದ್ದೆಯ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ಸಿಗದಿದ್ದಲ್ಲಿ ಎಂಆರ್‌ಪಿಎಲ್ ಮುತ್ತಿಗೆ: ಡಿವೈಎಫ್‌ಐ ಎಚ್ಚರಿಕೆ

Update: 2023-05-30 15:29 GMT

ಮಂಗಳೂರು, ಮೇ 30: ಕೇಂದ್ರ ಸರಕಾರದ ಅಧೀನದಲ್ಲಿರುವ ಸಾರ್ವಜನಿಕ ಉದ್ದಿಮೆ ಎಂಆರ್‌ಪಿಎಲ್‌ನಲ್ಲಿ 50 ಉದ್ಯೋಗದ ನೇಮಕಾತಿಗೆ ರಾಷ್ಟ ಮಟ್ಟದಲ್ಲಿ ಅರ್ಜಿ ಆಹ್ವಾನಿಸಿದ್ದು, ಈ ಬಾರಿಯೂ ಸ್ಥಳೀಯರಿಗೆ ಆದ್ಯತೆ ನೀಡದೆ ವಂಚಿಸುವ ಹುನ್ನಾರ ಅಡಗಿದೆ. ಕಳೆದ 234 ಹುದ್ದೆಯ ನೇಮಕಾತಿಯಲ್ಲಿ ವಂಚಿಸಿದಂತೆ ಈ ಬಾರಿಯ 50 ಹುದ್ದೆಗಳ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ಸಿಗದಿದ್ದಲ್ಲಿ ಡಿವೈಎಫ್‌ಐ ಎಂಆರ್‌ಪಿಎಲ್‌ಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಿದ್ದೇವೆ ಎಂದು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಹೇಳಿದರು.

ತುಳುನಾಡಿನ ಅಭಿವೃದ್ಧಿಯಲ್ಲಿ ತುಳುನಾಡಿನ ಯುವಜನತೆಗೆ ದೊಡ್ಡ ಪಾಲು, ಎಂಆರ್‌ಒಇಎಲ್ ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ಒದಗಿಸಿ ನೇಮಕಾತಿ ಪ್ರಕ್ರಿಯೆ ನಡೆಸಲು ಒತ್ತಾಯಿಸಿ, ಸರೋಜಿನಿ ಮಹಿಷಿ ವರದಿಯ ಆಧಾರದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಲು ಆಗ್ರಹಿಸಿ ನಗರದ ಕ್ಲಾಕ್ ಟವರ್ ಬಳಿ ಮಂಗಳವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಎರಡು ವರ್ಷದ ಹಿಂದೆ 234 ಹುದ್ದೆಯ ನೇಮಕಾತಿಯಲ್ಲಿ ತುಳುನಾಡಿನ ಯುವಜನತೆಗಾದ ಅನ್ಯಾಯ ಪ್ರಶ್ನಿಸಿ ನಡೆಸಿದ ಪ್ರತಿಭಟನೆಯ ಬಿಸಿಗೆ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಉಮಾನಾಥ ಕೋಟ್ಯಾನ್, ಡಾ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಕಂಪೆನಿಯ ಆಡಳಿತದ ಪ್ರಮುಖರೊಂದಿಗೆ ಮಾತುಕತೆ ನಡೆಸಿ ಸ್ಥಳೀಯ ಯುವಜನರಿಗೆ ಆದ್ಯತೆ ನೀಡಿ ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದಿದ್ದರು. ಆದರೆ ಆಗಲಿಲ್ಲ. ಹಾಗಾಗಿ ಈ ಬಾರಿ ಸರೋಜಿನಿ ಮಹಿಷಿ ವರದಿಯ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆ ನಡೆಸಬೇಕೆಂದು ಒತ್ತಾಯಿಸಿದರು.

ಡಿವೈಎಫ್‌ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರು, ಪದಾಧಿಕಾರಿಗಳಾದ ನಿತಿನ್ ಕುತ್ತಾರ್, ರಫೀಕ್ ಹರೇಕಳ, ನಗರ ಅಧ್ಯಕ್ಷ ಜಗದೀಶ್ ಬಜಾಲ್, ನಗರ ಕೋಶಾಧಿಕಾರಿ ತಯ್ಯೂಬ್ ಬೆಂಗರೆ, ಎ.ಬಿ. ನೌಶಾದ್, ಪ್ರಮಿಳಾ ದೇವಾಡಿಗ, ಆಶಾ ಬೋಳೂರು, ಪ್ರಮಿಳಾ ಶಕ್ತಿನಗರ, ಅಸುಂತ ಡಿಸೋಜ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ವಿನಿತ್ ದೇವಾಡಿಗ, ದೀಕ್ಷಾ ಜಲ್ಲಿಗುಡ್ಡೆ, ಪಿ.ಜಿ ರಫೀಕ್, ಮನೋಜ್ ಉರ್ವಸ್ಟೋರ್, ಝುಬೈರ್ ಪಾಲ್ಗೊಂಡಿದ್ದರು.

Similar News