ವರದಕ್ಷಿಣೆ ಕಿರುಕುಳ, ತಲಾಖ್ ನೀಡಿದ ಆರೋಪ: ಪ್ರಕರಣ ದಾಖಲು

Update: 2023-05-30 17:36 GMT

ಮಂಗಳೂರು, ಮೇ 30: ಮದುವೆಯಾದ ಆರು ತಿಂಗಳಲ್ಲೇ ವರದಕ್ಷಿಣೆ ಕಿರುಕುಳ ನೀಡಿ, ಹಲ್ಲೆ ನಡೆಸಿ, ತ್ರಿವಳಿ ತಲಾಖ್ ನೀಡಿದ ಆರೋಪದ ಮೇರೆಗೆ ನಗರದ ಮಾರ್ನಮಿಕಟ್ಟೆಯ ಮೂವರ ವಿರುದ್ಧ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಮಾರ್ನಮಿಕಟ್ಟೆಯ ಅಪಾರ್ಟ್‌ಮೆಂಟ್‌ವೊಂದರ ನಿವಾಸಿಗಳಾದ ಮುಹಮ್ಮದ್ ಹುಸೇನ್, ಆತನ ತಾಯಿ ಝೊಹರಾ, ತಂದೆ ಅಹ್ಮದ್ ಅಬ್ಬು ಆರೋಪಿಗಳಾಗಿದ್ದಾರೆ. ಮುಹಮ್ಮದ್ ಹುಸೇನ್‌ನ ಪತ್ನಿ ಬೋಳಾರ ಸಮೀಪದ ಮುಳಿಹಿತ್ಲು ನಿವಾಸಿ ಶಬಾನಾ ದೂರು ನೀಡಿದ ಮಹಿಳೆ.

ಮದುವೆಯಾದ 8 ದಿನಗಳಲ್ಲಿ ಪತಿ ಚಿನ್ನಾಭರಣಗಳನ್ನು ಕೊಂಡೊಯ್ದಿದ್ದು, ಬಳಿಕ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು. ಎಪ್ರಿಲ್‌ನಲ್ಲಿ ಗರ್ಭಿಣಿಯಾದಾಗ ಮಗು ಬೇಡ ಎಂದು ಮಾತ್ರೆ ಕೊಟ್ಟು ಗರ್ಭಪಾತ ಮಾಡಿಸಿದ್ದಾರೆ. ಬೇರೆ ಹೆಂಗಸರ ಸಹವಾಸ ಇರುವುದನ್ನು ಪ್ರಶ್ನಿಸಿದಾಗ ಅವಾಚ್ಯವಾಗಿ ಬೈದು ಮಾನಸಿಕ ಹಿಂಸೆ ನೀಡಿದ್ದಾರೆ. ಹೆಚ್ಚಿನ ವರದಕ್ಷಿಣೆ ತರುವಂತೆ ಕಿರುಕುಳ ನೀಡಿ ಹಲ್ಲೆ ನಡೆಸಿದ್ದಾರೆ ಎಂದು ಶಬಾನಾ ದೂರಿನಲ್ಲಿ ತಿಳಿಸಿದ್ದು, ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Similar News