ಉಡುಪಿ ಜಿಲ್ಲೆಯಾದ್ಯಂತ ಮಕ್ಕಳಿಗೆ ಶಾಲಾ ಪುನರಾರಂಭದ ಸಂಭ್ರಮ, ಸಡಗರ

ಪಠ್ಯಪುಸ್ತಕ, ಸಮವಸ್ತ್ರ ವಿತರಣೆ; ಬಿಸಿಯೂಟದೊಂದಿಗೆ ಸಿಹಿ ಹಂಚಿಕೆ

Update: 2023-05-31 14:39 GMT

ಉಡುಪಿ/ಕುಂದಾಪುರ, ಮೇ 31: ಬೇಸಿಗೆ ರಜೆಯ ಬಳಿಕ ಇಂದು ಶಾಲೆಗಳು ಪುನರಾರಂಭಗೊಂಡಿದ್ದು, ಜಿಲ್ಲೆಯ ಹೆಚ್ಚಿನ ಶಾಲೆಗಳಲ್ಲಿ ಸಂಭ್ರಮ, ಸಡಗರ ಮನೆ ಮಾಡಿತ್ತು. ಹಬ್ಬದ ವಾತಾವರಣ ಕಂಡುಬಂದಿತ್ತು. ಹೆಚ್ಚಿನ ಶಾಲೆಗಳಲ್ಲಿ ಹಸಿರು ತೋರಣಗಳನ್ನು ಕಟ್ಟಿ, ರಂಗವಲ್ಲಿ ಬರೆದು  ಮಕ್ಕಳನ್ನು  ಸ್ವಾಗತಿಸಲಾಯಿತು. 

ಸುಣ್ಣಬಣ್ಣಗಳೊಂದಿಗೆ ವರ್ಣರಂಜಿತ ಚಿತ್ರ-ಚಿತ್ತಾರಗಳೊಂದಿಗೆ ಶಾಲೆಗಳು  ಮಕ್ಕಳನ್ನು ಕೈಬೀಸಿ ಸ್ವಾಗತಿಸಿದವು. ಶಾಲೆಯ ಶಿಕ್ಷಕ-ಶಿಕ್ಷಕಿಯರು ಮಕ್ಕಳಿಗೆ ಪುಷ್ಪವೃಷ್ಟಿ ಮಾಡಿ ಮಕ್ಕಳನ್ನು ಶಾಲೆಗೆ ಬರಮಾಡಿಕೊಂಡರು. ಇಂದು ಮಕ್ಕಳಿಗೆ ಬಿಸಿಯೂಟದೊಂದಿಗೆ ಸಿಹಿತಿಂಡಿಯನ್ನು ಸಹ ವಿತರಿಸಲಾಯಿತು.

ಹಲವಾರು ಶಾಲೆಗಳಲ್ಲಿ ಮಕ್ಕಳನ್ನು ಬ್ಯಾಂಡು-ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಶಾಲೆಗಳಿಗೆ ಕರೆ ತರಲಾ ಯಿತು. ಆಯಾ ಊರಿನ ಗಣ್ಯರು, ಜನಪ್ರತಿನಿಧಿಗಳ ಮೂಲಕ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮಗಳಲ್ಲಿ ಶಾಲೆಗಳ ಅಧ್ಯಾಪಕರು, ಶಾಲಾಡಳಿತ ಮಂಡಳಿ, ಹಳೆ ವಿದ್ಯಾರ್ಥಿಗಳು ಹಾಗೂ ಸಂಘಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಕಾಪು ತಾಲೂಕು ಬೆಳಪು ಸರಕಾರಿ ಸಂಯುಕ್ತ ಪ್ರೌಢ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಡುಪಿ ಡಿಸಿ ಕೂರ್ಮಾರಾವ್ ಅವರು ಭಾಗವಹಿಸಿದ್ದು, ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳನ್ನು ವಿತರಿಸಿದರು.

ಶಾಸಕರಿಂದ ಸಮವಸ್ತ್ರ ವಿತರಣೆ: 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಅಂಗವಾಗಿ  ವಳಕಾಡು ಉಡುಪಿ ಸರಕಾರಿ ಸಂಯುಕ್ತ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉಡುಪಿ ಶಾಸಕ ಯಶಪಾಲ್ ಸುವರ್ಣ   ಉದ್ಘಾಟಿಸಿ ಶುಭಹಾರೈಸಿದರು. 

ಸಮಾರಂಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಪಠ್ಯ ಪುಸ್ತಕಗಳನ್ನು ಶಾಸಕರು ವಿತರಿಸಿದರು. ಉಡುಪಿ ವಿಧಾನಸಭಾ ಕ್ಷೇತ್ರವ್ಯಾಪ್ತಿ ಯಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಲಾಗುವುದು. ನಗರದ ಅಜ್ಜರಕಾಡು ವಾರ್ಡ್ ಒಂದರಲ್ಲೇ 9 ಸಾವಿರಕ್ಕೂ ಅಧಿಕ ವಿದ್ಯಾರ್ಥಿ ಗಳು ಎಲ್‌ಕೆಜಿಯಿಂದ ಉನ್ನತ ಶಿಕ್ಷಣದವರೆಗೂ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅಧಿಕಾರಿಗಳು, ಶಿಕ್ಷಕರು ಶೈಕ್ಷಣಿಕ ಗುಣಮಟ್ಟವನ್ನು ಇನ್ನಷ್ಟು ಮೇಲ್ದರ್ಜೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವಂತೆ ಶಾಸಕ ಸುವರ್ಣ ಕರೆ ನೀಡಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ಮನೋ ವೈದ್ಯ ಡಾ.ಪಿ. ವಿ.ಭಂಡಾರಿ, ಡಿಜಿಎಂ ಕೆನರಾ ಬ್ಯಾಂಕ್ ಸಬಿತಾ ನಾಯಕ್, ಡಾ. ಅಶೋಕ್ ಕಾಮತ್, ಬಿಇಒ ಚಂದ್ರೇಗೌಡ, ಎಸ್‌ಡಿಎಂಸಿ ಉಪಾಧ್ಯಕ್ಷ ಶ್ಯಾಮ್ ಕುಡ್ವ, ಪ್ರಾಥಮಿಕ ಶಾಲಾ ವಿಭಾಗದ ಎಸ್‌ಡಿಎಂಸಿ ಅಧ್ಯಕ್ಷ  ಪ್ರಕಾಶ್ ಚಂದ್ರ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಗಣಪತಿ, ವಳಕಾಡು ವಾರ್ಡಿನ ನಗರ ಸಭಾ ಸದಸ್ಯೆ ರಜನಿ ಹೆಬ್ಬಾರ್, ಶಾಲೆಯ ಮುಖ್ಯೋಪಾಧ್ಯಾಯಿನಿ ಕುಸುಮ ಉಪಸ್ಥಿತರಿದ್ದರು. ಪ್ರೌಢಶಾಲೆ ಮುಖ್ಯಶಿಕ್ಷಕಿ ನಿರ್ಮಲಾ ಸ್ವಾಗತಿಸಿದರೆ, ವಿದ್ಯಾರ್ಥಿನಿ ಸನ್ನಿಧಿ ನಾಯಕ್ ನಿರೂಪಿಸಿದರು.

ಸಿಹಿ ವಿತರಣೆ: ಶಾಸಕ ಯಶ್ಪಾಲ್ ಸುವರ್ಣ ಅವರು ಪುಷ್ಪಾನಂದ ಫೌಂಡೇಶನ್ ವತಿಯಿಂದ ತಮ್ಮ ತಂದೆ ತಾಯಿಯರ ನೆನಪಿನಲ್ಲಿ ಉಡುಪಿ ಕ್ಷೇತ್ರ ವ್ಯಾಪ್ತಿಯ ಎಲ್ಲ ಸರಕಾರಿ ಹಾಗೂ ಅನುದಾನಿತ ಶಾಲೆಗಳ ಸುಮಾರು 17 ಸಾವಿರ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ(ಲಡ್ಡು) ವಿತರಣೆಗೆ ವ್ಯವಸ್ಥೆ ಮಾಡಿದರು. 

ಬಳಿಕ ಶಾಸಕ ಯಶ್ಪಾಲ್ ಸುವರ್ಣ ಅವರು ನಿಟ್ಟೂರು ಹನುಮಂತ ನಗರದ ಸರಕಾರಿ ಶಾಲೆ, ಬ್ರಹ್ಮಾವರದ ಬೋರ್ಡ್ ಹೈಸ್ಕೂಲ್ ಹಾಗೂ ಕೊಕ್ಕರ್ಣೆಯ ಕರ್ನಾಟಕ ಪಬ್ಲಿಕ್ ಶಾಲಾ ಆರಂಭೋತ್ಸವದಲ್ಲೂ ಪಾಲ್ಗೊಂಡರು.

ಕುಂದಾಪುರ: ಕುಂದಾಪುರ ಹಾಗೂ ಬೈಂದೂರು ವಲಯದ ಶಾಲೆಗಳಲ್ಲಿ ಇಂದು ಶಾಲಾ ಪ್ರಾರಂಭ ಸಂಭ್ರಮ ಹಾಗೂ ಸಡಗರಗಳಿಂದ ನಡೆಯಿತು. ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿರುವ ಕುಂದಾಪುರ ವಲಯದ ಹೆಸ್ಕತ್ತೂರು  ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2023-24ನೇ ಸಾಲಿನ ನೂತನ ಶೈಕ್ಷಣಿಕ ವರ್ಷಕ್ಕೆ ಸಂಭ್ರಮದ ಚಾಲನೆ ನೀಡಲಾಯಿತು.

ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣ ಕೆದ್ಲಾಯ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು. ಶೈಕ್ಷಣಿಕ ಘೋಷಣೆ, ಬ್ಯಾಂಡು ವಾದನದೊಂದಿಗೆ ಬಲೂನು ಹಿಡಿದು, ಬಣ್ಣದ ಮುಖವಾಡಗಳನ್ನು ಧರಿಸಿ ವಿದ್ಯಾರ್ಥಿಗಳು ಊರ ಬೀದಿಗಳ ಮುಖಾಂತರ ಮೆರವಣಿಗೆಯಲ್ಲಿ ಸಾಗಿದರು. 

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಸರಕಾರದ ವತಿಯಿಂದ ಒದಗಿಸ ಲಾದ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಮಾಡಲಾಯಿತು. 

ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ರಾಘವೇಂದ್ರ ಶೆಟ್ಟಿ, ಅಶೋಕ ಮೊಗವೀರ, ಎಸ್‌ಡಿಎಂಸಿ ಉಪಾಧ್ಯಕ್ಷೆ ಗಾಯತ್ರಿ ಆಚಾರ್, ಎಸ್‌ಡಿಎಂಸಿ ಸದಸ್ಯರು, ಪೋಷಕರು ಹಾಗೂ ಶಾಲಾ ಶಿಕ್ಷಕರಾದ ಸಂಜೀವ ಎಂ, ಜಯರಾಮ ಶೆಟ್ಟಿ, ವಿಜಯಾ ಆರ್, ವಿಜಯ ಶೆಟ್ಟಿ, ರವೀಂದ್ರ ನಾಯಕ್ ಉಪಸ್ಥಿತರಿದ್ದರು. 

Similar News