ಚತ್ತೀಸ್ ಗಡ್: ಆದಿವಾಸಿ ವಸತಿಸ್ಥಳಗಳ ಮೇಲೆ ಸಿಆರ್ಪಿಎಫ್ ನಿಂದ ವೈಮಾನಿಕ ದಾಳಿ?

ಯುರೋಪ್ ಒಕ್ಕೂಟದ ಸಂಸದೆ ಆರೋಪ

Update: 2023-05-31 18:11 GMT

ಹೊಸದಿಲ್ಲಿ: ಚತ್ತೀಸ್ಗಢದ ಬಸ್ತಾರ್ ಜಿಲ್ಲೆಯಲ್ಲಿ ಆದಿವಾಸಿಗಳ ವಸತಿಪ್ರದೇಶಗಳ ಮೇಲೆ ನಡೆದಿತ್ತೆನ್ನಲಾದ ‘ವೈಮಾನಿಕ ಬಾಂಬ್ ದಾಳಿ’ಯ ಬಗ್ಗೆ ಯುರೋಪ್ ಸಂಸತ್ತಿನಲ್ಲಿ ಸದಸ್ಯರೊಬ್ಬರು ಪ್ರಶ್ನೆಗಳನ್ನೆತ್ತಿದ್ದಾರೆ.

ಬಸ್ತಾರ್ ನಲ್ಲಿ ಕಳೆದ ಮೂರು ವರ್ಷಗಳಲ್ಲಿ ನಾಲ್ಕು ವೈಮಾನಿಕ ಬಾಂಬ್ ದಾಳಿಗಳು ನಡೆದಿರುವುದಾಗಿ ಯುರೋಪ್ ಯೂನಿಯನ್ ಸಂಸದೆ ಮಾರಿಸಾ ಮ್ಯಾಟಿಯಾಸ್ ಸದನದಲ್ಲಿ ಆರೋಪಿಸಿದ್ದಾರೆ. ತೀರಾ ಇತ್ತೀಚಿನ ಘಟನೆಯೊಂದರಲ್ಲಿ, ಎಪ್ರಿಲ್ 7ರಂದು ಭಾರತ ಸರಕಾರವು ಚತ್ತೀಸ್ಗಡದ ಬಿಜಾಪುರ್ಗೆ ಗ್ರಾಮಸ್ಥರ ಮೇಲೆ ಭಾರೀ ಮೆಷಿನ್ ಗನ್ ಗಳಿಂದ ದಾಳಿ ನಡೆಸುವುದಕ್ಕಾಗಿ ಮೂರು ಹೆಲಿಕಾಪ್ಟರ್ ಗಳನ್ನು ಕಳುಹಿಸಿತ್ತು’’ ಎಂದು ಮೂಲಗಳು ತಿಳಿಸಿವೆ.

ಮೇ 16ರಂದು ಯುರೋಪ್ ಸಂಸತ್ ನಲ್ಲಿ ಈ ವಿಚಾರ ಪ್ರಸ್ತಾವಿಸಿದ ಪೋರ್ಚುಗಲ್ ಸಂಸದೆ ಮ್ಯಾಟಿಯಾಸ್ ಅವರು ಭಾರತ ಸರಕಾರದ ದಮನಕ್ಕೊಳಗಾಗಿರುವ ಸಂತ್ರಸ್ತರನ್ನು ರಕ್ಷಿಸಲು ಅವರಿಗೆ ಯುರೋಪ್ ಒಕ್ಕೂಟ ಹೇಗೆ ಬೆಂಬಲ ನೀಡುತ್ತಿದೆ ಎಂದು ಪ್ರಶ್ನಿಸಿದರು.

ಈ ದಾಳಿಗಳು ಪರಿಸರ ಸಂರಕ್ಷಕರಾದ ಮೂಲನಿವಾಸಿಗಳನ್ನು ಗುರಿಯಿರಿಸಿ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ‘ಆಪರೇಶನ್ ಸಮಾಧಾನ್-ಪ್ರಹಾರ್’ ಕಾರ್ಯಾಚರಣೆಯ ಭಾಗಗಳಾಗಿವೆ ಎಂದು ಮ್ಯಾಟಿಯಾಸ್ ತಿಳಿಸಿದರು.

ಬಸ್ತಾರ್ ಹಾಗೂ ಆಸುಪಾಸಿನ ಪ್ರದೇಶಗಳು ಮುಖ್ಯವಾಗಿ ಮಾವೋವಾದಿಗಳ ನಿಯಂತ್ರಣದಲ್ಲಿವೆ. ಅರೆಸೈನಿಕ ಪಡೆಗಳು ಹಲವಾರು ವರ್ಷಗಳಿಂದ ಈ ಪ್ರದೇಶಗಳಲ್ಲಿ ಬಂಡುಕೋರ ನಿಗ್ರಹ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದರೂ, ಮಾವೋವಾದಿಗಳನ್ನು ಮಟ್ಟಹಾಕಲು ಸಾಧ್ಯವಾಗಿಲ್ಲವೆಂದು ‘ದಿ ಸ್ಕ್ರೋಲ್’ ಸುದ್ದಿಜಾಲತಾಣ ವರದಿ ಮಾಡಿದೆ.

ಎಪ್ರಿಲ್ 7ರಂದು ಸೇನಾ ಹೆಲಿಕಾಪ್ಟರ್ ಗಳು ದಾಳಿ ನಡೆಸಿದ್ದವು ಎನ್ನಲಾದ ಭಟ್ಟಿಗುಡಾ, ಕಾವಾರ್ಗಟ್ಟಾ, ಜಬ್ಬಾಗಟ್ಟಾ ಹಾಗೂ ಮೀನಾಗಟ್ಟಾ ಗ್ರಾಮಗಳ ನಿವಾಸಿಗಳನ್ನು ‘ಸ್ಕ್ರೋಲ್’ ನ ಪತ್ರಕರ್ತರು ಸಂದರ್ಶಿಸಿದ್ದರು. ತಮ್ಮ ಗ್ರಾಮಗಳ ಮೇಲೆ ವೈಮಾನಿಕ ಬಾಂಬ್ ದಾಳಿ ಹಾಗೂ ಸಮೀಪದ ಅರಣ್ಯ ಪ್ರದೇಶದಿಂದ ಗುಂಡು ಹಾರಾಟ ನಡೆದಿರುವುದನ್ನು ತಾವು ಕಂಡಿರುವುದಾಗಿ ಗ್ರಾಮಸ್ಥರು ಹೇಳಿರುವುದಾಗಿ ವರದಿ ತಿಳಿಸಿದೆ.

ಆದರೆ ಸಿಆರ್ಪಿಎಫ್ ಚತ್ತೀಸ್ಗಢ ವಲಯದ ಮಹಾನಿರೀಕ್ಷಕರಾದ ಸಾಕೇತ್ ಕುಮಾರ್ ಸಿಂಗ್ ಅವರು ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಯೋಧರು ಆತ್ಮರಕ್ಷಣೆಗಾಗಿ ಹೆಲಿಕಾಪ್ಟರ್ನಿಂದ ದಾಳಿ ನಡೆಸಿದ್ದಾರೆಂದು ಹೇಳಿದ್ದಾರೆ.

Similar News