ಮಣಿಪುರ ಘರ್ಷಣೆ: ಕುಕಿ ಸಮುದಾಯಕ್ಕೆ ಮಿಝೋರಾಂ ಬೆಂಬಲದ ಹಿಂದೆ ಮುಂದೆ...

Update: 2023-06-01 05:08 GMT

ಕುಕಿಗಳು ಮಿಝೋಗಳೊಂದಿಗೆ ನಿಕಟ ಜನಾಂಗೀಯ ಸಂಬಂಧ ಹೊಂದಿದ್ದಾರೆ. ತಮ್ಮನ್ನು ತಾವು ಗ್ರೇಟ್ ರೆ ಕುಟುಂಬದ ಭಾಗವೆಂದು ಕೂಡ ಅವರು ಭಾವಿಸುತ್ತಾರೆ. ಈಗಾಗಲೇ ಮಣಿಪುರ ಹಿಂಸಾಚಾರದಿಂದ ಸ್ಥಳಾಂತರಗೊಂಡ ಸಾವಿರಾರು ಕುಕಿಗಳು ಆಶ್ರಯ ಪಡೆದಿರುವುದು ಕೂಡ ಮಿಝೋರಾಂನಲ್ಲಿ. ಈಗಾಗಲೇ ಮಿಝೋರಾಂ ನಾಯಕರು ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಮಿಝೋರಾಂ ಮುಖ್ಯಮಂತ್ರಿ ರೆರಂತಂಗ ಮತ್ತು ವನ್ಲಾಲ್ವೆನಾ ಇಬ್ಬರೂ ಹಿಂಸಾಚಾರದ ವಿರುದ್ಧ ಮಾತನಾಡಿದ್ದಾರೆ ಮತ್ತು ಬುಡಕಟ್ಟು ಅಲ್ಪಸಂಖ್ಯಾತರನ್ನು ರಕ್ಷಿಸಲು ಮಣಿಪುರವನ್ನು ಒತ್ತಾಯಿಸಿದ್ದಾರೆ.

ಮಣಿಪುರವಿನ್ನೂ ಉರಿಯುತ್ತಲೇ ಇದೆ. ಮುಗಿಯದ ಘರ್ಷಣೆ ಮನಸ್ಸುಗಳನ್ನು ಸುಡುತ್ತಿದೆ. ಹಿಂಸಾಚಾರದ ಹಿನ್ನೆಲೆಯಲ್ಲಿ ಮಣಿಪುರ ಒಡೆದುಹೋಗಿದೆ. ಇದೆಲ್ಲದರ ನಡುವೆಯೇ ಮಣಿಪುರದ ನೆರೆಯ ಮಿಝೋರಾಂನಿಂದ ಕುಕಿ ಸಮುದಾಯಕ್ಕೆ ಬೆಂಬಲ ವ್ಯಕ್ತವಾಗುತ್ತಿದೆ.

ಮಣಿಪುರದಲ್ಲಿ ಮೈತೈ ಮತ್ತು ಕುಕಿಗಳ ನಡುವಿನ ಘರ್ಷಣೆಗಳು ಹಲವಾರು ಮಂದಿಯನ್ನು ಬಲಿತೆಗೆದುಕೊಂಡ ಹಲವು ದಿನಗಳ ಬಳಿಕ ಮೇ 13ರಂದು ನಾಗಾಲಿಮ್ ಚರ್ಚ್ಗಳ ಕೌನ್ಸಿಲ್ ತೀಕ್ಷ್ಣ ಹೇಳಿಕೆಯೊಂದನ್ನು ನೀಡಿತು. ಅದು ಹಿಂಸಾಚಾರವನ್ನು ಅಧಿಕಾರದಲ್ಲಿರುವ ಜನರೊಂದಿಗೆ ಶಾಮೀಲಾಗಿ ಉದ್ರಿಕ್ತ ಜನಸಮೂಹ ನಡೆಸಿದ ಪೂರ್ವಯೋಜಿತ ಕಾರ್ಯಾಚರಣೆ ಎಂದು ವ್ಯಾಖ್ಯಾನಿಸಿತು.

ಈ ಚರ್ಚ್ ಗಳ ಕೌನ್ಸಿಲ್ ಬೆನ್ನಿಗಿರುವುದು ಪ್ರಮುಖ ನಾಗಾ ದಂಗೆಕೋರ ಗುಂಪಾದ ನಾಗಾಲ್ಯಾಂಡ್ನ ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್(ಇಸಾಕ್ ಮೋವ).

ಹಿಂಸಾಚಾರದ ವಿಚಾರದಲ್ಲಿ ಮಣಿಪುರ ಸರಕಾರ ಪಕ್ಷಪಾತ ಧೋರಣೆ ತೋರಿಸಿದೆ ಎಂಬುದು ಚರ್ಚ್ ಗಳ ಕೌನ್ಸಿಲ್ ಟೀಕೆ. ಭಾರತೀಯ ಅರೆಸೈನಿಕ ಪಡೆಗಳು ಮಧ್ಯಪ್ರವೇಶಿಸದಿದ್ದರೆ, ಗುಡ್ಡಗಾಡಿನ ಜನ ಬದುಕುಳಿಯುತ್ತಿರಲಿಲ್ಲ ಎಂದು ಅದು ಪ್ರತಿಕ್ರಿಯಿಸಿದೆ.

ಕಣಿವೆಯಲ್ಲಿ ವಾಸಿಸುವ ಬಹುಸಂಖ್ಯಾತ ಮೈತೈ ಸಮುದಾಯ ಮತ್ತು ಮಣಿಪುರದ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಕುಕಿ ಬುಡಕಟ್ಟು ಜನಾಂಗದವರ ನಡುವಿನ ಹಿಂಸಾಚಾರದಲ್ಲಿ ಮೇ 3ರಿಂದ ಕನಿಷ್ಠ 74 ಮಂದಿ ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ.

ಮಣಿಪುರದ ಎರಡು ಪ್ರಮುಖ ಬುಡಕಟ್ಟು ಗುಂಪುಗಳಾದ ನಾಗಾಗಳು ಮತ್ತು ಕುಕಿಗಳ ನಡುವಿನ ಹಿಂಸಾಚಾರದ ಇತಿಹಾಸ ದಶಕಗಳಷ್ಟು ಹಿಂದಕ್ಕೆ ಹೋಗುತ್ತದೆ. 1990ರ ದಶಕದಲ್ಲಿ ಭುಗಿಲೆದ್ದ ಸಂಘರ್ಷದಲ್ಲಿ ನಾಗಾಲ್ಯಾಂಡ್ನ ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್(ಐಎಂ) ಪಾತ್ರವಿತ್ತು. ಈ ಹಿನ್ನೆಲೆಯಲ್ಲಿ ಚರ್ಚ್ಗಳ ಕೌನ್ಸಿಲ್ ಹೇಳಿಕೆ ಬಗ್ಗೆ ಅಚ್ಚರಿಯೂ ವ್ಯಕ್ತವಾಗಿದೆ. ಆದರೆ ಮಿಝೋರಾಂನಿಂದ ಕುಕಿಗಳಿಗೆ ವ್ಯಕ್ತವಾಗಿರುವ ಬೆಂಬಲ ಇದು ಮಾತ್ರವೇ ಅಲ್ಲ. ಕುಕಿಗಳು ಮಿಝೋಗಳೊಂದಿಗೆ ನಿಕಟ ಜನಾಂಗೀಯ ಸಂಬಂಧ ಹೊಂದಿದ್ದಾರೆ. ತಮ್ಮನ್ನು ತಾವು ಗ್ರೇಟ್ ರೆ ಕುಟುಂಬದ ಭಾಗವೆಂದು ಕೂಡ ಅವರು ಭಾವಿಸುತ್ತಾರೆ. ಈಗಾಗಲೇ ಮಣಿಪುರ ಹಿಂಸಾಚಾರದಿಂದ ಸ್ಥಳಾಂತರಗೊಂಡ ಸಾವಿರಾರು ಕುಕಿಗಳು ಆಶ್ರಯ ಪಡೆದಿರುವುದು ಕೂಡ ಮಿಝೋರಾಂನಲ್ಲಿ. ಈಗಾಗಲೇ ಮಿಝೋರಾಂನಾಯಕರು ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಮೇ 11ರಂದು ಮಿಝೋರಾಂನ ರಾಜ್ಯಸಭಾ ಸಂಸದ ವನ್ಲಾಲ್ವೆನಾ ‘‘ಮಣಿಪುರದ ಮಿರೆ ಸಮುದಾಯದ ವಿವಿಧ ಬುಡಕಟ್ಟುಗಳು ತಮ್ಮದೇ ಆದ ಸಂಸದರನ್ನು ಹೊಂದಿಲ್ಲ ಎಂದು ಭಾವಿಸಬಹುದು. ಆದರೆ ನಾನು ಅವರ ಸಂಸದ’’ ಎಂದು ಅವರಿಗೆ ತಿಳಿಸ ಬಯಸುತ್ತೇನೆ ಎಂದು ಟ್ವೀಟ್ ಮಾಡಿದ್ದರು.

ಮಿಝೋರಾಂ ಮುಖ್ಯಮಂತ್ರಿ ರೆರಂತಂಗ ಮತ್ತು ವನ್ಲಾಲ್ವೆನಾ ಇಬ್ಬರೂ ಹಿಂಸಾಚಾರದ ವಿರುದ್ಧ ಮಾತನಾಡಿದ್ದಾರೆ ಮತ್ತು ಬುಡಕಟ್ಟು ಅಲ್ಪಸಂಖ್ಯಾತರನ್ನು ರಕ್ಷಿಸಲು ಮಣಿಪುರವನ್ನು ಒತ್ತಾಯಿಸಿದ್ದಾರೆ.

ಮಣಿಪುರ ಹಿಂಸಾಚಾರದ ನಂತರ ದೊಡ್ಡ ಬುಡಕಟ್ಟು ಒಗ್ಗಟ್ಟಿನ ಈ ಬೆಳವಣಿಗೆಯ ಮಹತ್ವವೇನು? ಜನಾಂಗೀಯ ಘರ್ಷಣೆಯ ನಂತರ ವಿಭಜಿತ ಮಣಿಪುರದಲ್ಲಿ ಈ ಬೆಳವಣಿಗೆಯನ್ನು ಹೇಗೆ ಗ್ರಹಿಸಲಾಗುತ್ತದೆ?

ಮಣಿಪುರ ಹಿಂಸಾಚಾರಕ್ಕೆ ಪ್ರಚೋದನೆಯಾದದ್ದು ಚುರಾಚಂದ್ಪುರದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ. ಕುಕಿಗಳು ಮತ್ತು ನಾಗಾಗಳೂ ಸೇರಿ ಸಾವಿರಾರು ಬುಡಕಟ್ಟು ನಿವಾಸಿಗಳು ಪರಿಶಿಷ್ಟ ಪಂಗಡದ ಸ್ಥಾನಮಾನ ಬೇಕೆಂಬ ಮೈತೈ ಸಮುದಾಯದ ಬೇಡಿಕೆ ವಿರೋಧಿಸಿ ಸಂಘಟಿಸಿದ್ದ ಐಕ್ಯತಾ ಮೆರವಣಿಗೆ ಅದಾಗಿತ್ತು.

ಈಗ ಕಳೆದೊಂದು ತಿಂಗಳಿಂದ, ಕುಕಿಗಳು ಬಿಜೆಪಿ ಸರಕಾರದೊಂದಿಗೆ ಮತ್ತು ಮುಖ್ಯವಾಗಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಜೊತೆ ಸಂಘರ್ಷದಲ್ಲಿದ್ದಾರೆ. ಗಸಗಸೆ ತೋಟಗಳ ಮೇಲಿನ ರಾಜ್ಯ ಸರಕಾರದ ದಬ್ಬಾಳಿಕೆ, ಅರಣ್ಯ ಪ್ರದೇಶಗಳಿಂದ ನಿವಾಸಿಗಳನ್ನು ಹೊರಹಾಕುವುದು ಮತ್ತು ಮ್ಯಾನ್ಮಾರ್ನಿಂದ ನಿರಾಶ್ರಿತರು ಬರುವುದರ ವಿರುದ್ಧದ ನಿಲುವು ಕುಕಿಗಳ ವಿರುದ್ಧದ ನೀತಿಯಾಗಿದೆ ಎಂಬುದು ಅವರ ಆರೋಪ.

ಹಿಂಸಾಚಾರದ ನಂತರ ಬಿಜೆಪಿಯ ಎಂಟು ಮಂದಿ ಸೇರಿದಂತೆ ಎಲ್ಲಾ 10 ಕುಕಿ ಶಾಸಕರು ಗುಡ್ಡಗಾಡು ಪ್ರದೇಶಗಳಿಗೆ ಪ್ರತ್ಯೇಕ ಆಡಳಿತಕ್ಕಾಗಿ ಕೋರಿದ್ದಾರೆ. ಬುಡಕಟ್ಟು ಸಮುದಾಯದ ವಿರುದ್ಧದ ದ್ವೇಷ ಶಾಸಕರು, ಮಂತ್ರಿಗಳು, ಪಾದ್ರಿಗಳು, ಪೊಲೀಸ್ ಮತ್ತು ಸಿವಿಲ್ ಅಧಿಕಾರಿಗಳು, ಸಾಮಾನ್ಯರು, ಮಹಿಳೆಯರು ಮತ್ತು ಮಕ್ಕಳನ್ನು ಸಹ ಉಳಿಸದಿರುವಷ್ಟು ಉತ್ತುಂಗಕ್ಕೆ ತಲುಪಿರುವುದರಿಂದ ನಮ್ಮ ಜನರು ಇನ್ನು ಮುಂದೆ ಮಣಿಪುರದಲ್ಲಿ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಎಂದು ಶಾಸಕರು ಹೇಳಿಕೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಆದರೆ, ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್, ಮಣಿಪುರದ ಪ್ರಾದೇಶಿಕ ಸಮಗ್ರತೆಯನ್ನು ಎಷ್ಟೇ ಬೆಲೆ ತೆತ್ತಾದರೂ ರಕ್ಷಿಸಲಾಗುವುದು ಎಂದು ಹೇಳುವ ಮೂಲಕ ಆ ಶಾಸಕರ ಬೇಡಿಕೆ ತಳ್ಳಿಹಾಕಿದ್ದಾರೆ.

ಈ ಹಿನ್ನೆಲೆಯಲ್ಲಿ ಕುಕಿ ಶಾಸಕರು ಮತ್ತು ನಾಗರಿಕ ಸಮಾಜ ಗುಂಪುಗಳು ಐಜ್ವಾಲ್ನಲ್ಲಿ ನಡೆಸಿದ ಸಭೆಗಳ ನಂತರದ ಹೇಳಿಕೆಗಳು ಮಹತ್ವ ಪಡೆದಿವೆ. ‘‘ಐಜ್ವಾಲ್ನಲ್ಲಿ ನಮಗೆ ಸುರಕ್ಷತೆಯಿದೆ. ಮಿರೆಗಳು ನಮ್ಮೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಚಿನ್, ಕುಕಿಸ್ ಮತ್ತು ಮಿರೆಸ್ ನಾವೆಲ್ಲ ರಕ್ತಸಂಬಂಧಿಗಳು. ನಾವು ಒಂದೇ ಆಡುಭಾಷೆಯನ್ನು ಮಾತನಾಡುತ್ತೇವೆ ಮತ್ತು ಅದೇ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಅನುಸರಿಸುತ್ತೇವೆ’’ ಎಂದು ಬಿಜೆಪಿಗೆ ಸೇರಿರುವ ಶಾಸಕರೇ ಹೇಳಿದ್ದಾರೆ.

ಈ ಪ್ರತ್ಯೇಕತೆ ಬೇಡಿಕೆ ಇಂಫಾಲ್ ಕಣಿವೆಯಾದ್ಯಂತ ಪ್ರತಿಭಟನೆಗಳಿಗೆ ಕಾರಣವಾಗಿದೆ. ಕುಕಿ ಶಾಸಕರು ಮಿಝೋರಾಂ ಸೇರಿಕೊಂಡಿರುವುದಕ್ಕೆ ಖಂಡನೆ ವ್ಯಕ್ತವಾಗುತ್ತಿದೆ. ಅವರು ಅಲ್ಲಿಯೇ ಇರಲಿ. ಎಂದಿಗೂ ಹಿಂದಿರುಗಕೂಡದು. ಹೊರಗಿನವರಿಗೆ ಒಂದಿಂಚು ನೆಲವನ್ನೂ ಕೊಡಲಾಗದು ಎಂಬ ಥರದ ಪ್ರತಿರೋಧ ತೋರಿಸಲಾಗುತ್ತಿದೆ.

ರಾಜಕೀಯ ವಿಜ್ಞಾನಿ ಖಾಮ್ ಖಾನ್ ಸುವಾನ್ ಹೌಸಿಂಗ್ ಪ್ರಕಾರ, ಮಿರೆಗಳ ಈ ಬೆಂಬಲ ಬಲವಾದ ಜನಾಂಗೀಯ ಬಂಧದಿಂದ ಉಂಟಾಗಿದ್ದು. ಅಲ್ಲಿ ಕುಕಿ-ಮಿರೆ-ಚಿನ್ ಬುಡಕಟ್ಟುಗಳು ಪರಸ್ಪರ ಅವಿಭಾಜ್ಯ ಎಂದೇ ಪರಿಗಣಿಸಲಾಗಿದೆ. ಬುಡಕಟ್ಟುಗಳು ಈಶಾನ್ಯ ಮತ್ತು ಮ್ಯಾನ್ಮಾರ್ನ ಕೆಲ ಭಾಗಗಳು, ಬಾಂಗ್ಲಾದೇಶದ ಚಿತ್ತಗಾಂಗ್ ಗುಡ್ಡಗಾಡುಗಳಲ್ಲಿ ಹರಡಿಕೊಂಡಿವೆ.

ಭೌಗೋಳಿಕ ಮತ್ತು ರಾಜಕೀಯ ಪ್ರತ್ಯೇಕತೆಯ ಹೊರತಾಗಿಯೂ ಅವರ ಜನಾಂಗೀಯ ಒಗ್ಗಟ್ಟು ಮತ್ತು ಐಕ್ಯತೆ ಆಳವಾಗಿದೆ. ಕುಕಿ ಜನರು ತಮ್ಮ ಪ್ರಾಣ, ಆಸ್ತಿಗಳು ಮತ್ತು ಭೂ ದಾಖಲೆಗಳನ್ನು ಕಳೆದುಕೊಳ್ಳಲು ಕಾರಣವಾದ ಹಿಂಸಾಚಾರದ ನಂತರ ವಿವಿಧ ಮಿರೆ ರಾಜ್ಯಗಳಲ್ಲಿ ವ್ಯಕ್ತವಾಗುತ್ತಿರುವ ಬೆಂಬಲವೇ ಈ ಅಂಶವನ್ನು ಒತ್ತಿಹೇಳುತ್ತದೆ. ಮೇ 18ರಂದು ಮಿಝೋರಾಂ ನಲ್ಲಿ ಬಿಜೆಪಿಯ ಕಾರ್ಯಕಾರಿಣಿ ಸಭೆ ಕೂಡ ಕುಕಿಗಳಿಗೆ ಪ್ರತ್ಯೇಕ ಆಡಳಿತದ ಕೂಗನ್ನು ಬೆಂಬಲಿಸಿತು. ಈ ಸಭೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಅದರ ಈಶಾನ್ಯ ವೇದಿಕೆಯ ಸಹ ಸಂಚಾಲಕ ರಿತುರಾಜ್ ಸಿನ್ಹಾ ಭಾಗವಹಿಸಿದ್ದರು ಎಂಬುದು ವಿಶೇಷವಾಗಿತ್ತು.

ರಾಜಕೀಯ ವಿಜ್ಞಾನಿ ಮತ್ತು ಲೇಖಕ ಸಂಜೀವ್ ಬರುವಾ ಪ್ರಕಾರ, ಇದು ಬುಡಕಟ್ಟು ಏಕತೆಗಿಂತ ಹೆಚ್ಚಾಗಿ ಕುಕಿ-ಮಿರೆ ಏಕತೆ. ಇದು ಮಿಝೋ ಮುಖ್ಯಮಂತ್ರಿ ಮತ್ತು ಸಂಸದ ವನ್ಲಾಲ್ವೆನಾ ಅವರ ನಡೆಗಳಿಂದ ಸ್ಪಷ್ಟವಾಗಿದೆ.

ಮಿಝೋ ಹೋರಾಟ ನಾಗಾ ಸಂಘರ್ಷದಂತೆ ಅಲ್ಲ. ಅದು ಮಿಝೋ ವಸತಿ ಪ್ರದೇಶಗಳ ಏಕೀಕರಣದ ಬೇಡಿಕೆಯನ್ನು ಒಳಗೊಂಡಿತ್ತು ಎಂದು ಹೇಳುವ ಬರುವಾ, 1960ರ ದಶಕದ ಉತ್ತರಾರ್ಧದಲ್ಲಿ ಪ್ರತ್ಯೇಕ ಸಾರ್ವಭೌಮ ಮಿಝೋರಾಂ ರಾಜ್ಯಕ್ಕಾಗಿ ಭುಗಿಲೆದ್ದಿದ್ದ ಉಗ್ರಗಾಮಿ ಚಳವಳಿಯನ್ನು ಉಲ್ಲೇಖಿಸುತ್ತಾರೆ.

ಮಿಝೋ ನ್ಯಾಷನಲ್ ಫ್ರಂಟ್ ನೇತೃತ್ವದ ಸಶಸ್ತ್ರ ಹೋರಾಟ 1986ರ ಮಿಝೋ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಕೊನೆಗೊಂಡಿತು. ತ್ರಿಪುರಾ, ಮಣಿಪುರ ಮತ್ತು ಅಸ್ಸಾಮಿನಲ್ಲಿ ಮಿಝೋ-ಕುಕಿ-ಚಿನ್ ಜನರು ವಾಸಿಸುವ ಎಲ್ಲಾ ಪ್ರದೇಶಗಳನ್ನು ಇಂದಿನ ಮಿಝೋರಾಂನೊಂದಿಗೆ ಸಂಯೋಜಿಸಲು ಮಿಝೋ ನ್ಯಾಷನಲ್ ಫ್ರಂಟ್ ಒತ್ತಾಯಿಸಿತ್ತು. ಪ್ರತ್ಯೇಕತಾವಾದಿ ಸಂಘಟನೆ ನಂತರ ರಾಜ್ಯದ ಪ್ರಮುಖ ರಾಜಕೀಯ ಪಕ್ಷವಾಯಿತು. ಅದರ ಸದಸ್ಯ ಇಂದಿನ ಮುಖ್ಯಮಂತ್ರಿ ರೆರೊಂತಂಗ.

ಒಪ್ಪಂದದಲ್ಲಿ, ಮಿಝೋದ ಏಕೀಕರಣ ಜನವಸತಿ ಪ್ರದೇಶಗಳನ್ನು ಒಂದು ಆಡಳಿತಾತ್ಮಕ ಘಟಕವಾಗಿಸಬೇಕೆಂಬ ಮಿಝೋ ನ್ಯಾಷನಲ್ ಫ್ರಂಟ್ ಬೇಡಿಕೆಯನ್ನು ಕೇಂದ್ರ ಅಂಗೀಕರಿಸಿತು. ಆದರೆ ಅದು ಒಪ್ಪಿಕೊಳ್ಳಲಿಲ್ಲ. ಮಣಿಪುರದ ಅನೇಕ ಕುಕಿಗಳು ಹೋರಾಟದಲ್ಲಿ ಭಾಗವಹಿಸಿದ್ದು, ಅವರನ್ನು ಹೊರಗಿಡಲಾಗಿದೆ ಎಂದು ಅದು ಅಸಮಾಧಾನ ತೋರಿಸಿತು ಎನ್ನುತ್ತಾರೆ ಬರುವಾ.

ಮೇ 18ರಂದು ಮಿಝೋರಾಂ ನ್ಯಾಷನಲ್ ಫ್ರಂಟ್ನ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ, ಸಿಎಂ ರೆರಂತಂಗ ಈ ಇತಿಹಾಸವನ್ನು ಉಲ್ಲೇಖಿಸಿದರು.ಮಿಝೋರಾಂ ಸರಕಾರ ಮಣಿಪುರದ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದರು. ತಮ್ಮ ಪಕ್ಷದ ಕಾರ್ಯಕರ್ತರಿಗೆ ರೆ ಬುಡಕಟ್ಟುಗಳು ವಾಸಿಸುವ ಎಲ್ಲಾ ಪಕ್ಕದ ಪ್ರದೇಶಗಳ ಏಕೀಕರಣವು ಪಕ್ಷದ ಸಂಸ್ಥಾಪಕ ನಾಯಕರ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂಬುದನ್ನೂ ನೆನಪಿಸಿದರು. ಅವರ ಈ ಹೇಳಿಕೆ ಮಣಿಪುರದಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ಮಿಝೋರಾಂ, ಗಡಿಯಾಚೆಗಿನ ಕುಕಿ-ಚಿನ್ ನಿರಾಶ್ರಿತರಿಗೆ ಆಶ್ರಯ ನೀಡಿದರೆ, ನಿರಾಶ್ರಿತರಿಗೆ ನೆಲೆ ನೀಡುವ ಕುಕಿಗಳ ಮೇಲೆ ಮಣಿಪುರ ಸರಕಾರ ಕಠಿಣ ಕ್ರಮ ಕೈಗೊಂಡಿದೆ. ಬರುವಾ ಅವರು ಹೇಳುವಂತೆ, ರೆ ದೃಷ್ಟಿಕೋನದಿಂದ ನೋಡಿದರೆ, ಇಂದು ಅದೇ ನಿರಾಶ್ರಿತರನ್ನು ಮಿಝೋರಾಂನಲ್ಲಿ ಸ್ವಾಗತಿಸಲಾಗುತ್ತದೆ. ಆದರೆ ಮಣಿಪುರದಲ್ಲಿ ಅಲ್ಲ. ಬದಲಿಗೆ ಅವರನ್ನು ವಿದೇಶಿಯರು ಎಂದು ನೋಡಲಾಗುತ್ತದೆ. ಇದು ಮಣಿಪುರದಲ್ಲಿ ಮೈತೈಗಳ ಎದುರು ಕುಕಿ ಅಂಚಿನಲ್ಲಿರುವುದರ ಸೂಚನೆ.

ಮಣಿಪುರದ ಎರಡು ಪ್ರಮುಖ ಬುಡಕಟ್ಟು ಸಮುದಾಯಗಳು, ನಾಗಾ ಮತ್ತು ಕುಕಿ. ರಾಜ್ಯದ ಶೇ. 90ರಷ್ಟು ಭಾಗವನ್ನುಳ್ಳ ಗುಡ್ಡಗಾಡು ಪ್ರದೇಶಗಳಲ್ಲಿ ಇವರ ವಾಸ. ಮೇ 3ರಂದು ಮೈತೈಗಳಿಗೆ ಪರಿಶಿಷ್ಟ ಪಂಗಡದ ಸ್ಥಾನಮಾನದ ವಿರುದ್ಧದ ಮೆರವಣಿಗೆಯಲ್ಲಿ ನಾಗಾಗಳು ಭಾಗವಹಿಸಿದ್ದರೂ, ಅವರು ಹಿಂಸಾಚಾದಿಂದ ಹೊರಗೇ ಇದ್ದಾರೆ.

ಹೀಗಿರುವಾಗಲೇ ಹೊರಬಿದ್ದಿರುವ ಚರ್ಚ್ಗಳ ಕೌನ್ಸಿಲ್ ಹೇಳಿಕೆ ಕುಕಿಗಳನ್ನು ಸೆಳೆಯುವ ಪ್ರಯತ್ನವಾಗಿದೆ. ನಾಗಾ ಮತ್ತು ಕುಕಿಗಳ ಸಾಮಾನ್ಯ ವೈರಿಯಾದ ಮೈತೈಗಳ ವಿರುದ್ಧ ಸಾಮಾನ್ಯ ನೆಲೆಯನ್ನು ರೂಪಿಸುವ ಪ್ರಯತ್ನವಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

2001ರಲ್ಲಿ ಕೇಂದ್ರ ನಾಗಾಲ್ಯಾಂಡ್ನ ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್(ಐಎಂ) ಜೊತೆಗಿನ ಕದನ ವಿರಾಮವನ್ನು ನಾಗಾಲ್ಯಾಂಡ್ನ ಆಚೆ ನಾಗಾ ಜನವಸತಿ ಪ್ರದೇಶಗಳಿಗೆ ವಿಸ್ತರಿಸಿದಾಗ ಮಣಿಪುರ ಸ್ಫೋಟಿಸಿತು. ಇದು ಮಣಿಪುರದ ಪ್ರಾದೇಶಿಕ ಸಮಗ್ರತೆಗೆ ಬೆದರಿಕೆಯಾಗಿ ಮತ್ತು ಗ್ರೇಟರ್ ನಾಗಾಲಿಮ್ ಪ್ರದೇಶದ ಬೇಡಿಕೆಗೆ ಸಮ್ಮತಿಯಾಗಿ ಕಂಡಿತು. ದೊಡ್ಡ ಮಟ್ಟದಲ್ಲಿ ಹಿಂಸಾಚಾರ ನಡೆದಿತ್ತು.

ಈಗ ನಾಗಾಲ್ಯಾಂಡ್ನ ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್(ಐಎಂ) ಬೆಂಬಲಿತ ಕೌನ್ಸಿಲ್ನ ಹೇಳಿಕೆ ಇದೆಲ್ಲದರ ಹಿನ್ನೆಲೆಯಲ್ಲಿ ಹೊಸ ಅರ್ಥ ಪಡೆದುಕೊಳ್ಳತೊಡಗಿದೆ. ಮಣಿಪುರದ ನಾಗಾಗಳು ಸಂಪೂರ್ಣವಾಗಿ ಮೌನವಹಿಸಿದ್ದಾರೆ. ಯಾವುದೇ ಗುಂಪಿನೊಂದಿಗೆ ತೋರಿಸಿಕೊಳ್ಳದ ಮಧ್ಯಮ ನಿಲುವು ತಳೆದಿದ್ದಾರೆ. ಅವರಿಗೂ ಕುಕಿಗಳೊಂದಿಗೆ ವಿವಾದಗಳಿವೆ ಎನ್ನಲಾಗುತ್ತಿದೆ. ಈ ವಿಘಟನೆಯ ಹೊತ್ತಲ್ಲಿ ನಾಗಾಗಳಿಗೆ ಶಾಂತಿಪಾಲಕರಂತೆ ನಡೆದುಕೊಳ್ಳದೆ ಬೇರೆ ಆಯ್ಕೆಗಳಿಲ್ಲ ಎಂಬುದು ಆ ಸಮುದಾಯದ ನಾಯಕರ ಅಭಿಪ್ರಾಯ.

ಬುಡಕಟ್ಟು ಜನಾಂಗದವರ ಮೇಲೆ ಪರಿಣಾಮ ಬೀರುವ ಯಾವುದೇ ವಿಷಯದಲ್ಲೂ ಕುಕಿ-ನಾಗಾ-ಚಿನ್-ಮಿರೆಸ್ ಒಟ್ಟಾಗಿ ನಿಲ್ಲುತ್ತಾರೆ. ಆದರೆ ಈಗಿನ ಬೆಳವಣಿಗೆ ನಮ್ಮನ್ನು ಹಿಂಸಾಚಾರದೊಳಕ್ಕೆ ಎಳೆಯಬಾರದು. ಹಗೆತನ ಅಥವಾ ಜಗಳವೇನಿದ್ದರೂ ಅವೆರಡು ಸಮುದಾಯಗಳ ನಡುವೆಯೇ ಹೊರತು ನಾವು ಯಾರ ಬಗ್ಗೆಯೂ ಯಾವುದೇ ದ್ವೇಷ ಹೊಂದಿಲ್ಲ ಎಂಬುದು ನಾಗಾ ಸಮುದಾಯದ ನಿಲುವು.

(ಕೃಪೆ: scroll.in)

Similar News