ಗುಜರಾತ್:‌ ಉತ್ತಮ ವಸ್ತ್ರ, ಕನ್ನಡಕ ಧರಿಸಿದಕ್ಕೆ ದಲಿತ ವ್ಯಕ್ತಿಯ ಮೇಲೆ ಹಲ್ಲೆ, ತಡೆಯಲು ಬಂದ ತಾಯಿಗೂ ಥಳಿತ

Update: 2023-06-01 14:41 GMT

ಅಹಮದಾಬಾದ್: ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಹಳ್ಳಿಯೊಂದರಲ್ಲಿ ದಲಿತ ವ್ಯಕ್ತಿಯೊಬ್ಬರು ಉತ್ತಮ ಬಟ್ಟೆ ಮತ್ತು ಸನ್‌ಗ್ಲಾಸ್ ಧರಿಸಿದ್ದಕ್ಕಾಗಿ ಸವರ್ಣೀಯರು ಥಳಿಸಿದ್ದರೆನ್ನಲಾದ ಘಟನೆ ವರದಿಯಾಗಿದೆ. 

ಮಂಗಳವಾರ ರಾತ್ರಿ ಪಾಲನ್‌ಪುರ ತಾಲೂಕಿನ ಮೋಟಾ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಹಲ್ಲೆಗೊಳಗಾದ ಸಂತ್ರಸ್ತ ಮತ್ತು ಅವರ ತಾಯಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತ ಜಿಗರ್ ಶೆಖಾಲಿಯಾ ನೀಡಿದ ದೂರಿನ ಆಧಾರದ ಮೇಲೆ ಏಳು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ತಾನು ಉತ್ತಮ ವಸ್ತ್ರ ಹಾಗೂ ಕನ್ನಡಕ ಧರಿಸಿದ್ದಕ್ಕಾಗಿ ಅಸಮಾಧಾನಗೊಂಡ ಆರೋಪಿಗಳು ತನಗೆ ಹಾಗೂ ತನ್ನ ತಾಯಿಗೆ ಹೊಡೆದಿದ್ದಾರೆ ಎಂದು ಶೆಖಾಲಿಯಾ ಆರೋಪಿಸಿದ್ದಾರೆ.

ಮಂಗಳವಾರ ಬೆಳಗ್ಗೆ ನಾನು ನನ್ನ ಮನೆಯ ಹೊರಗೆ ನಿಂತಿದ್ದಾಗ ಏಳು ಮಂದಿ ಆರೋಪಿಗಳಲ್ಲಿ ಒಬ್ಬಾತ ತನ್ನ ಬಳಿಗೆ ಬಂದು ತನ್ನನ್ನು ನಿಂದಿಸತೊಡಗಿದ. ಇತ್ತೀಚೆಗೆ ನಾನು ತುಂಬಾ ಹಾರಾಡುವುದಾಗಿಯೂ, ನನ್ನನ್ನು ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ ಎಂದು ದೂರಿನಲ್ಲಿ ಹೇಳಿದ್ದಾರೆ. 

ಅದೇ ದಿನ ರಾತ್ರಿ, ಸಂತ್ರಸ್ತ ಗ್ರಾಮದ ದೇವಸ್ಥಾನದ ಹೊರಗೆ ನಿಂತಿದ್ದಾಗ ರಜಪೂತ ಉಪನಾಮವಿರುವ ಸಮುದಾಯದ ಆರು ಆರೋಪಿಗಳು ಅವರಿಗೆ ಬಂದು, ಸನ್‌ ಗ್ಲಾಸ್‌ ಯಾಕೆ ಧರಿಸುತ್ತೀಯಾ? ಉತ್ತಮ ವಸ್ತ್ರ ಯಾಕೆ ಧರಿಸುತ್ತೀಯಾ ಎಂದು ಪ್ರಶ್ನಿಸಿ ಥಳಿಸಿದ್ದಾರೆ. ರಕ್ಷಿಸಲು ತಾಯಿ ಧಾವಿಸಿದಾಗ ಆಕೆಯ ಮೇಲೂ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಅವರು ಆಕೆಯ ಬಟ್ಟೆಗಳನ್ನು ಹರಿದಿದ್ದಾರೆ ಎಂದು ದೂರನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ.

Similar News