​ಡಾಡ್ಜ್ ಬಾಲ್: ಅಂತರಾಷ್ಟ್ರೀಯ ರೆಫ್ರಿಯಾಗಿ ಉಪ್ಪಿನಂಗಡಿಯ ವಿಜೇತ್ ಕುಮಾರ್ ನೇಮಕ

Update: 2023-06-06 17:09 GMT

ಉಪ್ಪಿನಂಗಡಿ: ವಿಶ್ವ ಡಾಡ್ಜ್ ಬಾಲ್ ಪಂದ್ಯಾಟದ ಅಂತರಾಷ್ಟ್ರೀಯ ರೆಫ್ರಿಯಾಗಿ  ಉಪ್ಪಿನಂಗಡಿಯ ವಿಜೇತ್ ಕುಮಾರ್ ಜೈನ್  ಆಯ್ಕೆಯಾಗಿದ್ದು, ಅಂತರಾಷ್ಟ್ರೀಯ ರೆಫ್ರಿಯಾಗಿ ಆಯ್ಕೆಯಾಗಿರುವ ಭಾರತದ ಮೊದಲ ವ್ಯಕ್ತಿ ಇವರಾಗಿದ್ದಾರೆ.

ಅಂತರಾಷ್ಟ್ರೀಯ ನೆಲೆಗಟ್ಟಿನಲ್ಲಿ ನಡೆದ ಮೂರು ದಿನಗಳ ರೆಫ್ರಿ ಪರೀಕ್ಷೆಯನ್ನು ಎದುರಿಸಿ ಉತ್ತಮ ರೀತಿಯಲ್ಲಿ ಉತ್ತೀರ್ಣರಾದ ಇವರು ಲೆವೆಲ್ 1 ಅಂತರಾಷ್ಟ್ರೀಯ ರೆಫ್ರಿಯಾಗಿ ಆಯ್ಕೆಯಾಗುವುದರೊಂದಿಗೆ ಭಾರತದಿಂದ ಈ ಕ್ರೀಡೆಗೆ ಅಂತರಾಷ್ಟ್ರೀಯ ರೆಫ್ರಿಯಾಗಿ ಆಯ್ಕೆಯಾಗಿರುವ ಮೊದಲ ವ್ಯಕ್ತಿಯೆಂಬ ಖ್ಯಾತಿಯನ್ನು ಪಡೆದಿದ್ದಾರೆ. 

ಇವರೊಂದಿಗೆ ಮಧ್ಯಪ್ರದೇಶದ ಸುದರ್ಶನ್‍ರವರು ಕೂಡಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಇವರಿಬ್ಬರಿಗೆ ವಿಶ್ವದೆಲ್ಲೆಡೆ ಡಾಡ್ಜ್ ಬಾಲ್ ಪಂದ್ಯಾಟದ ರೆಫ್ರಿಯಾಗಿ, ತರಬೇತುದಾರರಾಗಿ  ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ.

ವಿಶ್ವ ಚಾಂಪಿಯನ್ ಶಿಪ್ ಪಂದ್ಯಾಟಕ್ಕೆ ಅರ್ಹತೆ ಪಡೆದ ಭಾರತ ತಂಡ ಇತ್ತೀಚೆಗೆ ಮಲೇಶಿಯಾದಲ್ಲಿ ನಡೆದ ಏಷ್ಯನ್ ಪೆಸಿಫಿಕ್  ಅಂತರಾಷ್ಟ್ರೀಯ ಡಾಡ್ಜ್ ಬಾಲ್  ಚಾಂಪಿಯನ್ ಶಿಪ್‍ನಲ್ಲಿ ವಿಜೇತ್ ಕುಮಾರ್ ಜೈನ್ ರವರ ತರಬೇತುದಾರಿಕೆಯಲ್ಲಿ ಪಾಲ್ಗೊಂಡ ಭಾರತ ತಂಡದ  ಪುರುಷ ಮತ್ತು ಮಹಿಳೆಯರ  ಮಿಶ್ರ ತಂಡವು ಉತ್ತಮ ಪ್ರದರ್ಶನವನ್ನು ನೀಡಿದ್ದು, ಇದನ್ನು  ಪರಿಗಣಿಸಿ ವಿಶ್ವ ಚಾಂಪಿಯನ್ ಶಿಪ್ ಪಂದ್ಯಾಟಕ್ಕೆ ಭಾರತ ತಂಡ ಅರ್ಹತೆಯನ್ನು ಗಳಿಸಿದೆ. ಈ ಮೂಲಕ  ಮುಂಬರುವ ವಿಶ್ವ ಡಾಡ್ಜ್ ಬಾಲ್ ಪಂದ್ಯಾಟದಲ್ಲಿ ಮೂರು ವಿಭಾಗದಲ್ಲಿ ಭಾರತ ತಂಡ ಭಾಗವಹಿಸುವ ಅರ್ಹತೆಯನ್ನು ಪಡೆದಂತಾಗಿದೆ. 

Similar News