ಸಂಸದರಿಗೆ ಮೀಸಲಾದ ಫ್ಲ್ಯಾಟ್‌ನಲ್ಲಿ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ, ಹಿಂದುತ್ವ ಸಂಘಟನೆಯ ಮುಖಂಡ ವಾಸ: ವರದಿ

Update: 2023-06-02 14:15 GMT

ಹೊಸದಿಲ್ಲಿ: ಮಹಾರಾಣಾ ಪ್ರತಾಪ್‌ ಸೇನಾ ಎಂಬ ಹಿಂದುತ್ವ ಸಂಘಟನೆಯ ಮುಖ್ಯಸ್ಥನಾಗಿ ಗುರುತಿಸಿಕೊಂಡಿರುವ ರಾಜ್ಯವರ್ಧನ್‌ ಸಿಂಗ್‌ ಪರ್ಮಾರ್‌ ಎಂಬಾತ ಹಲವು ಕಾರಣಗಳಿಗಾಗಿ ಸುದ್ದಿಯಾಗುತ್ತಲೇ ಇರುತ್ತಾನೆ. ಮುಘಲ್‌ ಸ್ಮಾರಕಗಳ ಹಿಂದು ಮೂಲಗಳ ಬಗ್ಗೆ ಹೇಳಿಕೊಳ್ಳುವ ಈತ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಬ್ರಜ್‌ ಭೂಷಣ್‌ ಸಿಂಗ್‌ ರನ್ನೂ ಬೆಂಬಲಿಸಿದ್ದಾನೆ.

ತನ್ನ ಮೇಲೆ ದಿಲ್ಲಿಯಲ್ಲಿರುವ ಉತ್ತರ ಪ್ರದೇಶ ಭವನದಲ್ಲಿ ಲೈಂಗಿಕ ಹಲ್ಲೆ ನಡೆಸಿದ್ದಾನೆಂದು ಮಹಿಳೆಯೊಬ್ಬಳು ಆರೋಪಿಸಿದ ನಂತರ ಈತನನ್ನು ಕಳೆದ ವಾರ ಬಂಧಿಸಲಾಗಿದೆ. ಸಂತ್ರಸ್ತೆಯ ಸಿನೆಮಾ ಯೋಜನೆಗೆ ಸಹಾಯಕ್ಕಾಗಿ ಕೇಂದ್ರ ಸಚಿವರೊಂದಿಗೆ ಭೇಟಿ ಏರ್ಪಡಿಸುವುದಾಗಿ ಹೇಳಿ ಆತ ಆಕೆಯನ್ನು ಕರೆಸಿದ್ದ ಎಂದು ಆರೋಪಿಸಲಾಗಿದೆ. ಸಾಮಾನ್ಯವಾಗಿ ಉನ್ನತ ಅಧಿಕಾರಿಗಳಿಗೆ ಮತ್ತು ಸಚಿವರಿಗೆ ಮೀಸಲಾಗಿರುವ ಉತ್ತರ ಪ್ರದೇಶ ಭವನದಲ್ಲಿ ಈತ ಹೇಗೆ ಕೊಠಡಿ ಕಾಯ್ದಿರಿಸಿದ ಎಂಬ ತನಿಖೆ ಈಗ ನಡೆಯುತ್ತಿದೆ. ಆತನಿದ್ದ ಕೊಠಡಿ ಸಂಖ್ಯೆ 123 ಅನ್ನು ತನಿಖೆಗಾಗಿ ಅಧಿಕಾರಿಗಳು ಸೀಲ್‌ ಮಾಡಿದ್ದಾರೆ ಎಂದು newslaundry.com ವರದಿ ಮಾಡಿದೆ. 

ಅದೇ ಸಮಯ ಇನ್ನೊಂದು ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ. ಈ ಪರ್ಮಾರ್‌ ಕಳೆದ ಎರಡು ವರ್ಷಗಳಿಂದ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಲುಟ್ಯೆನ್ಸ್‌ ದಿಲ್ಲಿಯ ವಿಠಲ್‌ಭಾಯಿ ಪಟೇಲ್‌ ಹೌಸ್‌ನಲ್ಲಿ ವಾಸಿಸುತ್ತಿದ್ದಾನೆ. ಇಲ್ಲಿ ಮನೆಗಳನ್ನು ಸಾಮಾನ್ಯವಾಗಿ ಸಂಸದರು ಅಥವಾ ಮಾಜಿ ಸಂಸದರಿಗೆ ಮಂಜೂರುಗೊಳಿಸಲಾಗುತ್ತದೆ. ಆದರೆ ಅದಕ್ಕೆ ಲೋಕಸಭೆ ಸೆಕ್ರಟೇರಿಯಟ್‌ ಅನುಮತಿ ಬೇಕಿದೆ. ಈತನಿಗೆ ಇಲ್ಲಿ ಮನೆ ಹೇಗೆ ದೊರೆಯಿತು ಹಾಗೂ ಯಾರು ಮಂಜೂರುಗೊಳಿಸಿದರು ಎಂಬ ಹಲವು ಪ್ರಶ್ನೆಗಳು ಈಗ ಎದ್ದಿವೆ.

ಉತ್ತರ ಪ್ರದೇಶದ ಹರ್ದೋಯಿಯವನಾಗಿರುವ ಪರ್ಮಾರ್‌ನನ್ನು ಬಂಧಿಸಲು ದಿಲ್ಲಿ ಪೊಲೀಸರಿಗೆ  ಮೂರು ದಿನ ಬೇಕಾಯಿತು. ಈ ನಡುವೆ ಪರ್ಮಾರ್‌ ಫೇಸ್ಬುಕ್‌ನಲ್ಲಿ ಲೈವ್‌ ಕಾಣಿಸಿಕೊಂಡು ತನ್ನನ್ನು ಸಮರ್ಥಿಸಿಕೊಂಡಿದ್ದಾನೆ.

Similar News