ಉಡುಪಿ ಜಿಲ್ಲೆಯಲ್ಲಿ ದಡಾರ ರೋಗ ನಿರ್ಮೂಲನೆಗೆ ಕ್ರಮ ಕೈಗೊಳ್ಳಿ: ಡಿಸಿ ಕೂರ್ಮಾರಾವ್

Update: 2023-06-02 14:40 GMT

ಉಡುಪಿ, ಜೂ.2: ಮಕ್ಕಳಲ್ಲಿ ಕಂಡು ಬರುವ ದಡಾರ ರೂಬೆಲ್ಲಾ ರೋಗವನ್ನು ಜಿಲ್ಲೆಯಿಂದ ಸಂಪೂರ್ಣ ನಿರ್ಮೂಲನೆ ಮಾಡುವ ಕುರಿತು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿ ಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚನೆಗಳನ್ನು ನೀಡಿದ್ದಾರೆ. 

ಶುಕ್ರವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಎಂ.ಆರ್.ಎಲಿಮಿನೇಷನ್ ಲಸಿಕಾ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. 

ದಡಾರ ರುಬೆಲ್ಲಾ ಕಾಯಿಲೆಯು 5 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚು ಅಪಾಯಕಾರಿಯಾಗಿದೆ. ದಡಾರ ತೀವ್ರ ಸಾಂಕ್ರಾಮಿಕ ರೋಗವಾಗಿದ್ದು, ಇದರಿಂದ ಮಕ್ಕಳಲ್ಲಿ ಜ್ವರ ಕಾಣಿಸಿಕೊಳ್ಳಲಿದೆ ಮತ್ತು ಚರ್ಮದ ಮೇಲೆ ಕೆಂಪು ದದ್ದುಗಳು ಉಂಟಾಗಲಿದೆ. ಈ ರೋಗವು ಲಸಿಕೆ ಪಡೆಯದ ಮಕ್ಕಳಲ್ಲಿ ಹೆಚ್ಚು ಅಪಾಯಕಾರಿಯಾಗಲಿದ್ದು, ಮಕ್ಕಳ ಮರಣಕ್ಕೂ ಕಾರಣವಾಗಬಹುದು. ಆದ್ದರಿಂದ ಜಿಲ್ಲೆಯ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ  ಈ ರೋಗ ಕಂಡು ಬರದಂತೆ ಲಸಿಕೆ ನೀಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ವಿಶ್ವದಲ್ಲೇ  ಭಾರತದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ದಡಾರ ರೂಬೆಲ್ಲಾ ಪ್ರಕರಣಗಳು ವರದಿಯಾಗುತ್ತಿದ್ದು, ಜಿಲ್ಲೆಯಲ್ಲಿ ಈ ವರ್ಷದ ಮೇ ಅಂತ್ಯ ದವರೆಗೆ 59 ಪ್ರಕರಣಗಳು ವರದಿಯಾಗಿವೆ. ಆದ್ದರಿಂದ ಜಿಲ್ಲೆಯ 5 ವರ್ಷ ದೊಳಗಿನ ಎಲ್ಲಾ ಮಕ್ಕಳಿಗೂ ಲಸಿಕೆ ನೀಡುವ ಕುರಿತಂತೆ ಕ್ರಿಯಾಯೋಜನೆ ರೂಪಿಸಿ, ಅದರಂತೆ ಕಾರ್ಯ ನಿರ್ವಹಿಸುವಂತೆ ಅವರು ಸೂಚನೆ ನೀಡಿದರು.

ಜಿಲ್ಲೆಯ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಈ ರೋಗದ ಲಕ್ಷಣಗಳು ಮತ್ತು ನಿರ್ಮೂಲನೆ ಕುರಿತಂತೆ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತರಬೇತಿ ಕಾರ್ಕ್ರಮಗಳನ್ನು ಆಯೋಜಿಸಿ. ಅವರು ತಮ್ಮ ವ್ಯಾಪ್ತಿಯ ಎಲ್ಲಾ ಪೋಷಕರಿಗೆ ಈ ಬಗ್ಗೆ ಜಾಗೃತಿ ಮೂಡಿಸುವಂತೆ ಮತ್ತು ಅಂತಹ ರೋಗ ಲಕ್ಷಣಗಳು ಇರುವ ಮಕ್ಕಳು ಕಂಡು ಬಂದಲ್ಲಿ ಕೂಡಲೇ ಅಗತ್ಯ ಚಿಕಿತ್ಸೆಗೆ ಕರೆತರಲು ಸೂಚಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಕಾರ್ಮಿಕ ಇಲಾಖೆಯ ಮೂಲಕ ವಲಸೆ ಕಾರ್ಮಿಕರ ಮಕ್ಕಳು ದಡಾರ ರೂಬೆಲ್ಲಾ ಲಸಿಕೆ ಪಡೆಯುವ ಕುರಿತಂತೆ ಅವರು ಕೆಲಸ ಮಾಡುವ ಪ್ರದೇಶಗಳಿಗೆ ತೆರಳಿ ಅರಿವು ಮೂಡಿಸುವಂತೆ ಮತ್ತು ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಎಲ್ಲಾ ಮಕ್ಕಳಿಗೆ ಲಸಿಕೆ ನೀಡುವಂತೆ ತಿಳಿಸಿದರು.

ಜಿಲ್ಲೆಯ ಎಲ್ಲಾ ಖಾಸಗಿ ನರ್ಸಿಂಗ್ ಹೋಂಗಳು ಮತ್ತು ಕ್ಲಿನಿಕ್‌ಗಳು ತಮ್ಮಲ್ಲಿಗೆ ಬರುವ ಮಕ್ಕಳಲ್ಲಿ ದಡಾರ ರೂಬೆಲ್ಲಾ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಮತ್ತು ಪೋಷಕರಿಗೆ ಈ ರೋಗದ ಬಗ್ಗೆ ಜಾಗೃತಿ ಮೂಡಿಸುವಂತೆ ತಿಳಿಸಿದರು.       

ದಡಾರ ರೂಬೆಲ್ಲಾ ರೋಗದ ವಿರುದ್ದ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮವನ್ನು ಆಯೋಜಿಸುವಂತೆ ಅರೋಗ್ಯ ಇಲಾಖೆಗೆ ಸೂಚನೆ ನೀಡಿದ  ಜಿಲ್ಲಾಧಿಕಾರಿ, ಜಿಲ್ಲೆಯ ಯಾವುದೇ ಮಗು  ಈ ರೋಗಕ್ಕೆ ತುತ್ತಾಗ ದಂತೆ, ಜಿಲ್ಲೆಯನ್ನು ದಡಾರ ರೂಬೆಲ್ಲಾ ರೋಗ ಮುಕ್ತವಾಗಿಸಲು ಆರೋಗ್ಯ ಇಲಾಖೆ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸುವಂತೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ಎಂ.ಜಿ. ರಾಮ, ವಿಶ್ವ ಆರೋಗ್ಯ ಸಂಸ್ಥೆ ಪ್ರತಿನಿಧಿ ಡಾ.ಅನಂತೇಶ್, ಆರೋಗ್ಯ ಇಲಾಖೆ ಮತ್ತು ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Similar News