ಬ್ರಿಜ್‌ ಭೂಷಣ್‌ ವಿರುದ್ಧ 2021 ರಲ್ಲೇ ಪ್ರಧಾನಿ ಮೋದಿಗೆ ದೂರು ನೀಡಿದ್ದ ಮಹಿಳಾ ಕುಸ್ತಿಪಟು: ವರದಿ

Update: 2023-06-02 15:33 GMT

ಹೊಸದಿಲ್ಲಿ: ಭಾರತದ ಪ್ರಮುಖ ಮಹಿಳಾ ಕುಸ್ತಿಪಟು ಒಬ್ಬರು, ಭಾರತದ ಕುಸ್ತಿ ಫೆಡರೇಷನ್‌  (ಡಬ್ಲ್ಯುಎಫ್‌ಐ) ಅಧ್ಯಕ್ಷ  ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಅವರಿಂದ ಲೈಂಗಿಕ ದೌರ್ಜನ್ಯ ಎದುರಿಸಿರುವ ಬಗ್ಗೆ 2021 ರಲ್ಲಿ ಪ್ರಧಾನಿ ಕಛೇರಿಯಲ್ಲೇ ನರೇಂದ್ರ ಮೋದಿಯವರ ಗಮನಕ್ಕೆ ತಂದಿದ್ದರು ಎಂಬ ಆಘಾತಕಾರಿ ಅಂಶವು ಎಫ್‌ಐಆರ್‌ನಲ್ಲಿ ದಾಖಲಾಗಿದೆ ಎಂದು TheNewsMinute ವರದಿ ಮಾಡಿದೆ.

ಎಪ್ರಿಲ್ 28 ರಂದು ದಾಖಲಿಸಲಾದ ಎಫ್‌ಐಆರ್‌ ನಲ್ಲಿ, ಕುಸ್ತಿಪಟು ತಾನು ಪ್ರಧಾನಿಯನ್ನು ಭೇಟಿಯಾಗಿದ್ದನ್ನು ಉಲ್ಲೇಖಿಸಿದ್ದಾರೆ. "ಆರೋಪಿ ನಂ.1 (ಬ್ರಿಜ್ ಭೂಷಣ್) ನನ್ನ ಮತ್ತು ಇತರ ಮಹಿಳಾ ಕುಸ್ತಿಪಟುಗಳ ಮೇಲೆ ಪದೇ ಪದೇ ಲೈಂಗಿಕ, ಶಾರೀರಿಕ, ದೈಹಿಕ ದೌರ್ಜನ್ಯ ನಡೆಸಿದ ಬಗ್ಗೆ ನಾನು ಗೌರವಾನ್ವಿತ ಪ್ರಧಾನ ಮಂತ್ರಿಯವರಿಗೆ ತಿಳಿಸಿದ್ದೇನೆ" ಎಂದು ದೂರಿನಲ್ಲಿ ಹೇಳಿದ್ದಾರೆ.

ಕ್ರೀಡಾ ಸಚಿವಾಲಯವು ತನ್ನ ಕುಂದುಕೊರತೆಗಳನ್ನು ಪರಿಶೀಲಿಸುತ್ತದೆ ಮತ್ತು ಶೀಘ್ರದಲ್ಲೇ ಸಚಿವಾಲಯದಿಂದ ಕರೆ ಬರುತ್ತದೆ ಎಂದು ಭರವಸೆ ನೀಡಿದ ಪ್ರಧಾನಿ ಮೋದಿ ತನಗೆ ಭರವಸೆ ನೀಡಿದ್ದರು ಎಂದು ಅವರು‌ ದೂರಿನಲ್ಲಿ ತಿಳಿಸಿದ್ದಾರೆ. 

"ಪ್ರಧಾನಿ ಮೋದಿಯನ್ನು ಭೇಟಿಯಾದ ನಂತರ ನಾನು ಸುಧಾರಿಸಿದ್ದೇನೆ ಮತ್ತು ಭಾರತಕ್ಕಾಗಿ ಆಡಲು ಸಾಧ್ಯವಾಗದಿರುವ ಬಗ್ಗೆ ಎಲ್ಲಾ ನಕಾರಾತ್ಮಕ ಆಲೋಚನೆಗಳು ಮತ್ತು ಆರೋಪಿ ಮತ್ತು ಆತನ ಸಹಚರರು ಪದೇ ಪದೇ ಉಂಟುಮಾಡಿದ ಮಾನಸಿಕ ಆಘಾತದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಗಳು ಮಾಯವಾಗಿದ್ದವು" ಎಂದು ಅವರು ಹೇಳಿದ್ದಾರೆ.

ಪ್ರಧಾನಿಗೆ ದೂರು ನೀಡಿರುವುದು ಬ್ರಿಜ್ ಭೂಷಣ್ ರಿಗೆ ನಂತರ ತಿಳಿದು ಬಂದಿದೆ. ಸ್ವಲ್ಪ ಸಮಯದ ನಂತರ,  ಈ ಹಿಂದೆ  ತನಗೆ ನೀಡಲಾಗಿದ್ದ ಶೋಕಾಸ್ ನೋಟಿಸ್ ಅನ್ನು WFI ಹಿಂತೆಗೆದುಕೊಂಡಿತ್ತು. ಬ್ರಿಜ್ ಭೂಷಣ್ ಮತ್ತು ಸಹಚರರು ಕೆಲವು ಕಾಲ ತನ್ನ ಮೇಲೆ ಒತ್ತಡ ಹೇರುವುದನ್ನು ನಿಲ್ಲಿಸಿದ್ದರು. ಆದರೆ ಸ್ವಲ್ಪ ಸಮಯದ ನಂತರ ಮಾನಸಿಕ ಕಿರುಕುಳ ಮತ್ತೆ ಶುರುವಾಯಿತು ಎಂದು ಕುಸ್ತಿಪಟು ದೂರಿನಲ್ಲಿ ಹೇಳಿದ್ದಾರೆ.

ಅಪ್ರಾಪ್ತೆ ಸೇರಿದಂತೆ ಏಳು ಮಹಿಳೆಯರು ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ್ದಾರೆ. ಒಟ್ಟಾರೆಯಾಗಿ 12 ಲೈಂಗಿಕ ದೌರ್ಜನ್ಯದ ಪ್ರಕರಣಗಳನ್ನು ಬ್ರಿಜ್ ಭೂಷಣ್ ಎದುರಿಸುತ್ತಿದ್ದಾರೆ.

Similar News