ಮಣಿಪುರ ಹಿಂಸಾಚಾರದಲ್ಲಿ ಕನಿಷ್ಠ 98 ಸಾವು, 310 ಮಂದಿಗೆ ಗಾಯ: ರಾಜ್ಯ ಸರಕಾರ

Update: 2023-06-02 16:09 GMT

ಇಂಫಾಲ: ಮಣಿಪುರದಲ್ಲಿ ತಿಂಗಳ ಹಿಂದೆ ಆರಂಭವಾದ ಜನಾಂಗೀಯ ಹಿಂಸಾಚಾರದಲ್ಲಿ ಕನಿಷ್ಠ 98 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 310 ಮಂದಿ ಗಾಯಗೊಂಡಿದ್ದಾರೆ ಎಂದು ಮಣಿಪುರ ಸರಕಾರದ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಸಕ್ತ ಒಟ್ಟು 37,450 ಜನರು 272 ಪರಿಹಾರ ಕೇಂದ್ರಗಳಲ್ಲಿ ಇದ್ದಾರೆ. ಮೇ 3ರಂದು ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದ ಬಳಿಕ ಬೆಂಕಿ ಹಚ್ಚಿದ 4,014 ಪ್ರಕರಣಗಳು ವರದಿಯಾಗಿವೆ. ಕಳೆದ ಒಂದು ತಿಂಗಳಲ್ಲಿ ರಾಜ್ಯ ಪೊಲೀಸರು 3,734 ಪ್ರಕರಣಗಳನ್ನು ದಾಖಲಿಸಿದ್ದಾರೆ ಹಾಗೂ ಹಿಂಸಾಚಾರದಲ್ಲಿ ಭಾಗಿಯಾದ ಆರೋಪದಲ್ಲಿ 65 ಮಂದಿಯನ್ನು ಬಂಧಿಸಿದ್ದಾರೆ.

 ಸೇನೆ, ಅಸ್ಸಾಂ ರೈಫಲ್ಸ್, ಸಿಎಪಿಎಫ್ ಹಾಗೂ ಸ್ಥಳೀಯ ಪೊಲೀಸರನ್ನು ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಇದುವರೆಗೆ ಕೇಂದ್ರ ಶಸಸ್ತ್ರ ಪಡೆಗಳ 84 ಕಂಪೆನಿಗಳನ್ನು ನಿಯೋಜಿಸಲಾಗಿದೆ. 

ಧ್ವಜ ಮೆರವಣಿಗೆ ಹಾಗೂ ಪ್ರದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಕಾರ್ಯಾಚರಣೆ ವ್ಯಾಪಕವಾಗಿ ನಡೆಸಲಾಗುತ್ತಿದೆ. ಕಿತ್ತುಕೊಳ್ಳಲಾದ ಶಸ್ತ್ರಾಸ್ತ್ರ ಹಾಗೂ ಸ್ಪೋಟಕಗಳನ್ನು ಪತ್ತೆ ಮಾಡಲು ಇಂದಿನಿಂದ ಶೋಧ ಕಾರ್ಯಾಚರಣೆ ಆರಂಭಿಸಲಾಗುತ್ತಿದೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ. ಕಿತ್ತುಕೊಳ್ಳಲಾದ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳೊಂದಿಗೆ ಯಾವುದೇ ವ್ಯಕ್ತಿಯನ್ನು ಬಂಧಿಸಿದರೆ, ಆತನ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಇದುವರೆಗೆ 144 ಶಸ್ತ್ರಾಸ್ತ್ರ ಹಾಗೂ 11 ಮ್ಯಾಗಝಿನ್‌ಗಳನ್ನು ಭದ್ರತಾ ಸಂಸ್ಥೆಗಳು ಪತ್ತೆ ಮಾಡಿವೆ.

ಬಿಕ್ಕಟ್ಟು ಪರಿಹರಿಸಲು ಹಾಗೂ ಶಾಂತಿ ಸ್ಥಾಪಿಸಲು ಗ್ರಾಮ ಮುಖ್ಯಸ್ಥರು ಹಾಗೂ ನಾಗರಿಕ ಸಮಾಜದ ಸಂಘಟನೆಗಳೊಂದಿಗೆ ಸಭೆ ನಡೆಸಲಾಗಿದೆ. ಹೆಚ್ಚಿನ ಜಿಲ್ಲೆಗಳಲ್ಲಿ ಪರಿಸ್ಥಿತಿ ಶಾಂತವಾಗಿದೆ ಎಂದು ಮುಖ್ಯಮಂತ್ರಿ ಕಚೇರಿಯ ಹೇಳಿಕೆ ತಿಳಿಸಿದೆ.

Similar News