ಮುಂದಿನ 3-4 ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಧೂಳೀಪಟ: ರಾಹುಲ್ ಗಾಂಧಿ

Update: 2023-06-02 17:59 GMT

ವಾಶಿಂಗ್ಟನ್: ಈ ವರ್ಷ ನಡೆಯಲಿರುವ ಮೂರ್ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನು ‘‘ಸದೆಬಡಿಯಲಿದೆ’’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಬಿಜೆಪಿಯನ್ನು ಸೋಲಿಸಲು ಬೇಕಾಗಿರುವ ಮೂಲ ವಸ್ತುಗಳು ಕಾಂಗ್ರೆಸ್ ಬಳಿ ಇದೆ ಎಂದು ಹೇಳಿದ ಅವರು, ಬಿಜೆಪಿಯು ಭಾರತದ ಬಹುಸಂಖ್ಯಾತ ಜನತೆಯ ಬೆಂಬಲವನ್ನು ಹೊಂದಿಲ್ಲ ಎಂದರು.

ರಾಹುಲ್ ಗಾಂಧಿ ಈಗ ಅಮೆರಿಕ ಪ್ರವಾಸದಲ್ಲಿದ್ದಾರೆ. ಗುರುವಾರ ಖ್ಯಾತ ಭಾರತೀಯ ಅಮೆರಿಕನ್ ಫ್ರಾಂಕ್ ಇಸ್ಲಾಮ್ ನೀಡಿದ ಆತಿಥ್ಯದ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

‘‘ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಈ ಯಾತ್ರೆಯನ್ನು ನಿಲ್ಲಿಸುವುದು ಸಾಧ್ಯವಿಲ್ಲ ಎಂದು ಭಾವಿಸುವ ಪ್ರವೃತ್ತಿ ಜನರಲ್ಲಿದೆ. ಆದರೆ, ಅದು ಹಾಗಿಲ್ಲ. ನಾನಿಲ್ಲಿ ಕೊಂಚ ಭವಿಷ್ಯ ನುಡಿಯುತ್ತೇನೆ. ನಾವು ಬಿಜೆಪಿಯೊಂದಿಗೆ ನೇರವಾಗಿ ಸ್ಪರ್ಧಿಸುವ ಮುಂದಿನ ಮೂರು ಅಥವಾ ನಾಲ್ಕು ಚುನಾವಣೆಗಳಲ್ಲಿ, ನಾವು ಬಿಜೆಪಿಯನ್ನು ಸದೆಬಡಿಯುವುದನ್ನು ನೀವು ನೋಡಲಿದ್ದೀರಿ’’ ಎಂದು ಈ ಕಾರ್ಯಕ್ರಮದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು ಹೇಳಿದರು.

‘‘ಇದನ್ನು ನಾನು ಈಗಲೇ ಸ್ಪಷ್ಟವಾಗಿ ಹೇಳಬಲ್ಲೆ, ಈ ವಿಧಾನಸಭಾ ಚುನಾವಣೆಗಳಲ್ಲಿ ಅವರು ನಿಜವಾಗಿಯೂ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಕರ್ನಾಟಕದಲ್ಲಿ ನಾವು ಏನು ಮಾಡಿದ್ದೇವೆಯೋ ಅದನ್ನೇ ನಾವು ಈ ರಾಜ್ಯಗಳಲ್ಲಿಯೂ ಅವರಿಗೆ ಮಾಡಲಿದ್ದೇವೆ’’ ಎಂದರು.

ಕರ್ನಾಟಕದಲ್ಲಿ ಮೇ 10ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಅಧಿಕಾರದಿಂದ ಹೊರದಬ್ಬಿದೆ. ಅದು ರಾಜ್ಯದಲ್ಲಿ ಅಗಾಧ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ.

 ‘‘60 ಶೇ. ಭಾರತೀಯರು ಬಿಜೆಪಿಗೆ, ಮೋದಿಗೆ ಮತ ಹಾಕುವುದಿಲ್ಲ’’

ಪ್ರಸಕ್ತ ಭಾರತೀಯ ಮಾಧ್ಯಮಗಳು ಬಿಜೆಪಿಗೆ ಅತ್ಯಂತ ಪೂರಕವಾಗಿರುವ ವರದಿಗಳನ್ನು ಪ್ರಸಾರಿಸುತ್ತಿವೆ ಎಂದು ರಾಹುಲ್ ಗಾಂಧಿ ಹೇಳಿದರು.

‘‘ಭಾರತದ 60 ಶೇಕಡ ಜನರು ಬಿಜೆಪಿಗೆ ಮತ ಹಾಕುವುದಿಲ್ಲ, ನರೇಂದ್ರ ಮೋದಿಗೆ ಮತ ಹಾಕುವುದಿಲ್ಲ ಎನ್ನುವುದನ್ನು ದಯವಿಟ್ಟು ಗಮನಿಸಿ. ಇದನ್ನು ನೀವು ನೆನಪಿನಲ್ಲಿಡಬೇಕು. ಬಿಜೆಪಿಯ ಕೈಯಲ್ಲಿ ಶಬ್ದ ಮಾಡುವ ಉಪಕರಣಗಳಿವೆ. ಹಾಗಾಗಿ, ಅವರು ಬೊಬ್ಬೆ ಹೊಡೆಯಬಹುದು, ಚೀರಬಹುದು, ಅವರು ತಿರುಚಬಹುದು, ಅವರು ಬೈಯಬಹುದು. ಹಾಗೆ ಮಾಡುವಲ್ಲಿ ಅವರು ತುಂಬಾ ಪರಿಣತಿ ಹೊಂದಿದ್ದಾರೆ. ಆದರೆ, ಅಗಾಧ ಬಹುಸಂಖ್ಯೆಯ ಭಾರತೀಯರು ಅವರನ್ನು ಬೆಂಬಲಿಸುವುದಿಲ್ಲ’’ ಎಂದು ಅವರು ಅಭಿಪ್ರಾಯಪಟ್ಟರು.

Similar News