ಜಪಾನ್: ಜನನ ಪ್ರಮಾಣ ದಾಖಲೆ ಮಟ್ಟಕ್ಕೆ ಇಳಿಕೆ

Update: 2023-06-02 18:05 GMT

ಟೋಕಿಯೊ: ಜಪಾನ್‌ನಲ್ಲಿ ಸತತ 7ನೇ ವರ್ಷವೂ ಜನನ ಪ್ರಮಾಣ ದಾಖಲೆ ಮಟ್ಟಕ್ಕೆ ಕುಸಿದಿದ್ದು ದೇಶದ ಜನಸಂಖ್ಯೆ ಕುಗ್ಗುತ್ತಿರುವ ಜತೆಗೆ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚುತ್ತಿದೆ ಎಂದು ಸರಕಾರದ ವರದಿ ಹೇಳಿದೆ.

ದೇಶದಲ್ಲಿ ಫಲವತ್ತತೆ ಅಥವಾ ಮಹಿಳೆಯ ಜೀವಿತಾವಧಿಯಲ್ಲಿ ಆಕೆಗೆ ಜನಿಸುವ ಮಕ್ಕಳ ಸರಾಸರಿ ದರ 1.2565 ಆಗಿದ್ದು ಇದು ಸ್ಥಿರವಾದ ಜನಸಂಖ್ಯೆಯನ್ನು ಉಳಿಸಿಕೊಳ್ಳಲು ಅಗತ್ಯ ಎಂದು ಪರಿಗಣಿಸಲಾದ 2.07 ದರಕ್ಕಿಂತ ತುಂಬಾ ಕಡಿಮೆಯಾಗಿದೆ.

ಜನನ ಪ್ರಮಾಣದ ಕುಸಿತಕ್ಕೆ ತಡೆಯೊಡ್ಡುವುದು ಸರಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಜಪಾನ್ ಪ್ರಧಾನಿ ಫುಮಿಯೊ ಕಿಷಿಡಾ ಘೋಷಿಸಿದ್ದಾರೆ. ಸರಕಾರದ ಸಾಲದ ಪ್ರಮಾಣ ಹೆಚ್ಚಿದ್ದರೂ, ಮಕ್ಕಳ ಆರೈಕೆ ಹಾಗೂ ಹೆತ್ತವರಿಗೆ ನೆರವಾಗುವ ಇತರ ಕ್ರಮಗಳಿಗಾಗಿ ಪ್ರತೀ ಮಗುವಿಗೆ ವಾರ್ಷಿಕ 25 ಶತಕೋಟಿ ಡಾಲರ್ ಮೀಸಲಿರಿಸುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ.

ಕಳೆದ ವರ್ಷ ಹೊಸದಾಗಿ ಜನಿಸುವ ಮಕ್ಕಳ ಸಂಖ್ಯೆ 5%ದಷ್ಟು ಕುಸಿತಗೊಂಡು 770,747ಕ್ಕೆ ತಲುಪಿದ್ದರೆ ಸಾವಿನ ಪ್ರಮಾಣ 9%ದಷ್ಟು ಹೆಚ್ಚಿ 1.57 ದಶಲಕ್ಷಕ್ಕೆ ತಲುಪಿದೆ. ಕಳೆದ ವರ್ಷ ಕೊರೋನ ಸೋಂಕಿನಿಂದ ಜಪಾನ್‌ನಲ್ಲಿ 47,000ಕ್ಕೂ ಅಧಿಕ ಸಾವು ಸಂಭವಿಸಿದೆ. 2030ರ ಬಳಿಕ ದೇಶದ ಯುವ ಜನಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಆದ್ದರಿಂದ ಈ ನಡುವಿನ ಅವಧಿಯಲ್ಲಿ ಜನನ ಪ್ರಮಾಣ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಪ್ರಧಾನಿ ಕಿಷಿಡಾ ಹೇಳಿದ್ದಾರೆ.

Similar News