ರಶ್ಯ ಅಸ್ಥಿರಗೊಳಿಸಲು ದುಷ್ಟಶಕ್ತಿಗಳ ಹುನ್ನಾರ: ಪುಟಿನ್ ಆರೋಪ

Update: 2023-06-02 18:15 GMT

ಮಾಸ್ಕೋ: ರಶ್ಯವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಕೆಲವು ದುಷ್ಟಶಕ್ತಿಗಳು ಹೆಚ್ಚಿಸಿವೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶುಕ್ರವಾರ ಆರೋಪಿಸಿದ್ದು ಯಾವುದೇ ಸಂದರ್ಭದಲ್ಲೂ ಇದಕ್ಕೆ ಅವಕಾಶ ನೀಡಬಾರದು ಎಂದು ಸಂಪುಟದ ಸದಸ್ಯರನ್ನು ಆಗ್ರಹಿಸಿದ್ದಾರೆ.

ದೇಶದ 190 ಜನಾಂಗೀಯ ಗುಂಪುಗಳ ನಡುವಿನ ಸಂಬಂಧಗಳ ಕುರಿತ ಅತ್ಯಂತ ಪ್ರಮುಖ ವಿಷಯಗಳಲ್ಲಿ ಭದ್ರತೆಯನ್ನು ಖಾತರಿಪಡಿಸುವ ಬಗ್ಗೆ ರಶ್ಯದ ಭದ್ರತಾ ಮಂಡಳಿ ಚರ್ಚೆ ನಡೆಸಲಿದೆ. ದೇಶೀಯ ಭದ್ರತೆಗೆ ಸಂಬಂಧಿಸಿದ ವಿಷಯ ಇದಾಗಿದೆ ಎಂದು ಪುಟಿನ್ ಹೇಳಿದ್ದಾರೆ. 2022ರ ಫೆಬ್ರವರಿಯಲ್ಲಿ ಉಕ್ರೇನ್‌ಗೆ ಸಾವಿರಾರು ಪಡೆಗಳನ್ನು ಕಳುಹಿಸಿದಂದಿನಿಂದ ರಶ್ಯವು ವಿರೋಧದ ಧ್ವನಿಯನ್ನು ಹತ್ತಿಕ್ಕುವ, ವಿರೋಧಿಗಳ ಧ್ವನಿ ಅಡಗಿಸುವ ಕಾರ್ಯಾಚರಣೆ ಬಿಗಿಗೊಳಿಸಿದೆ.

ಪಾಶ್ಚಿಮಾತ್ಯ ದೇಶಗಳಿಂದ ಅಸ್ತಿತ್ವಕ್ಕೆ ಬೆದರಿಕೆ ಎದುರಾಗಿರುವುದರಿಂದ ಒಗ್ಗೂಡುವಂತೆ ಪುಟಿನ್ ಪದೇ ಪದೇ ರಶ್ಯ ಜನತೆಗೆ ಕರೆ ನೀಡುತ್ತಿದ್ದಾರೆ. ಆದರೆ ಇದೇ ವೇಳೆ ಅವರು, ಮೀಸಲು ಪಡೆಗೆ ಸ್ಥಳೀಯರನ್ನು ನೇಮಿಸುವ ಕ್ರಮದಿಂದ  ಸ್ಥಳೀಯ ಜನಾಂಗೀಯ ಗುಂಪುಗಳ ದ್ವೇಷಕ್ಕೂ ಗುರಿಯಾಗಿದ್ದಾರೆ.

ವಿರೋಧ ಪಕ್ಷದ ಕಾರ್ಯಕರ್ತರು ಸ್ಥಾಪಿಸಿದ್ದ , ರಶ್ಯಾದ ಬಹುಜನಾಂಗೀಯ ಗುಂಪುಗಳಿಗೆ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ‘ಫ್ರೀ ನೇಷನ್ಸ್ ಆಫ್ ಪೋಸ್ಟ್-ರಶ್ಯ ಫೋರಂ’ ಅನ್ನು ಕಳೆದ ಮಾರ್ಚ್‌ನಲ್ಲಿ ರಶ್ಯ ನಿಷೇಧಿಸಿದೆ.

Similar News