ಸಲಿಂಗ ವಿವಾಹಕ್ಕೆ ನಾನು ನೂರಕ್ಕೆ ನೂರರಷ್ಟು ವಿರುದ್ಧ: ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಕುರಿಯನ್ ಜೋಸೆಫ್

Update: 2023-06-03 16:29 GMT

ತಿರುವನಂತಪುರ: ಸಲಿಂಗ ವಿವಾಹಗಳ ಪರಿಕಲ್ಪನೆಗೆ ತಾನು ಸಂಪೂರ್ಣವಾಗಿ ವಿರುದ್ಧವಾಗಿದ್ದೇನೆ ಎಂದು ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಕುರಿಯನ್ ಜೋಸೆಫ್ ಹೇಳಿದ್ದಾರೆ. 

ಶುಕ್ರವಾರ ಕೇರಳದ ಕೋವಲಮ್ನಲ್ಲಿ ಇಂಡಿಯಾ ಟುಡೇ ಕಾಂಕ್ಲೇವ್ ಸೌಥ್ 2023 ಸಂವಾದ ಕಾರ್ಯಕ್ರಮದಲ್ಲಿ  ಮಾತನಾಡುತ್ತಿದ್ದ ನ್ಯಾ.ಜೋಸೆಫ್, ‘ಮದುವೆ ಎನ್ನುವುದು ಮೂಲಭೂತವಾಗಿ ಪುರುಷ ಮತ್ತು ಮಹಿಳೆಯ ನಡುವೆ ಸಮಾಗಮವಾಗಿದೆ. ಮತ್ತೊಂದು (ಸಲಿಂಗ ಸಂಬಂಧ) ಒಡನಾಟ/ಕೂಟವಾಗಿದೆ.

ಮದುವೆಯು ಪ್ರಕೃತಿಯ ಉದ್ದೇಶಗಳಿಗಾಗಿ,ಸಂತಾನೋತ್ಪತ್ತಿಗಾಗಿ ಮತ್ತು ರಂಜನೆಗಾಗಿ ಶಾಶ್ವತವಾದ ಸಮಾಗಮವಾಗಿದೆ. ಸಲಿಂಗ ವಿವಾಹಕ್ಕೆ ನಾನು ನೂರಕ್ಕೆ ನೂರರಷ್ಟು ವಿರುದ್ಧವಾಗಿದ್ದೇನೆ. ಅದು ಒಡನಾಟವಾಗಬಹುದು,ಅದು ಕೂಟವಾಗಬಹುದು,ಅದು ಯಾವುದೇ ಆಗಬಹುದು...’ ಎಂದು ಹೇಳಿದರು.

ಮದುವೆಯು ಮೂಲಭೂತ ಹಕ್ಕು ಅಲ್ಲ ಎಂದು ಹೇಳಿದ ಅವರು,ಸಲಿಂಗ ಸಂಬಂಧದಲ್ಲಿ ನೀವು ನಿಮ್ಮ ಸ್ನೇಹಿತ ಅಥವಾ ನಿಕಟ ಸ್ನೇಹಿತ,ಆಪ್ತ ಸ್ನೇಹಿತ ಅಥವಾ ನಿರ್ದಿಷ್ಟ ಸ್ನೇಹಿತನೊಂದಿಗೆ ವಾಸವಾಗಿರಲು ಬಯಸುವ  ಆಯ್ಕೆಯನ್ನು ಹೊಂದಿರಬಹುದು. ಆದರೆ ಮದುವೆಯ ಪರಿಕಲ್ಪನೆಗೆ ಬಂದಾಕ್ಷಣ ಅದು ವಿಭಿನ್ನವಾಗಿರುತ್ತದೆ. ಅದು ಸಮಾಜದ ಮೂಲ ಘಟಕವಾಗಿದೆ. ಇದು ಸಮಸ್ಯೆಯ ಮೂಲಗಳ ಮೇಲೆ ಪರಿಣಾಮವನ್ನು ಬೀರುತ್ತದೆ ಎಂದರು.

ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆಯನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತು 10 ದಿನಗಳ ಕಾಲ ವಿಚಾರಣೆಯನ್ನು ನಡೆಸಿರುವ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ ಪೀಠವು ಕಳೆದ ತಿಂಗಳು ಪ್ರಕರಣದಲ್ಲಿ ತನ್ನ ತೀರ್ಪನ್ನು ಕಾಯ್ದರಿಸಿದೆ. 

ಕಾನೂನುಗಳು ಮತ್ತು ಇತರ ಕಾರ್ಯಕಾರಿ ಕ್ರಮಗಳ ಸಿಂಧುತ್ವವನ್ನು ಪರಿಶೀಲಿಸುವುದು ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಪ್ರಾಥಮಿಕ ಪಾತ್ರವಾಗಿದೆ ಎಂದು ಶುಕ್ರವಾರ ಹೇಳಿದ ನ್ಯಾ.ಜೋಸೆಫ್,ಈ ವಿಷಯವು ಧರ್ಮ,ಸಂಸ್ಕೃತಿ ಮತ್ತು ಜನರ ನಂಬಿಕೆಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ ಎಂದರು.

Similar News