ಅಮೆರಿಕದ ಮಿತ್ರರಾಷ್ಟ್ರಗಳನ್ನು ಬೆದರಿಸದಿರಿ: ಚೀನಾಕ್ಕೆ ಅಮೆರಿಕ ಎಚ್ಚರಿಕೆ

Update: 2023-06-04 18:24 GMT

ವಾಷಿಂಗ್ಟನ್, ಜೂ.4: ತನ್ನ ಮಿತ್ರರಾಷ್ಟ್ರಗಳು, ಪಾಲುದಾರರನ್ನು ಚೀನಾ ಬೆದರಿಸಿ, ಅವರ ವಿರುದ್ಧ ಒತ್ತಡ ತಂತ್ರ ಪ್ರಯೋಗಿಸುವುದನ್ನು ಅಮೆರಿಕ ಸಹಿಸುವುದಿಲ್ಲ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಚೀನಾಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ತೈವಾನ್ ವಿಷಯದಲ್ಲಿ ಯಥಾಸ್ಥಿತಿಗೆ ಅಮೆರಿಕ ಬದ್ಧವಾಗಿರುತ್ತದೆ ಮತ್ತು ಯಾವುದೇ ಸಮಸ್ಯೆಗೆ ಮಾತುಕತೆಯೇ ಪ್ರಥಮ ಆಯ್ಕೆ ಎಂಬ ನಿಲುವಿಗೆ ಬದ್ಧವಾಗಿದೆ ಎಂದು ಇದೇ ವೇಳೆ ಅವರು ಚೀನಾಕ್ಕೆ ಭರವಸೆ ನೀಡಿದ್ದಾರೆ. ಸಿಂಗಾಪುರದಲ್ಲಿ ಆಯೋಜಿಸಲಾಗಿರುವ ವಿಶ್ವದ ಉನ್ನತ ರಕ್ಷಣಾ ಅಧಿಕಾರಿಗಳು, ರಾಜತಾಂತ್ರಿಕರು ಮತ್ತು ಮುಖಂಡರ ವಾರ್ಷಿಕ ಸಮಾವೇಶ ‘ಶಾಂಗ್ರಿ-ಲ’ ಸಂವಾದದಲ್ಲಿ ಮಾತನಾಡಿದ ಆಸ್ಟಿನ್ ‘ಜಾಗತಿಕ ನಿಯಮ ಮತ್ತು ಹಕ್ಕುಗಳ ಅಡಿಯಲ್ಲಿ ಮುಕ್ತ ಮತ್ತು ಸುರಕ್ಷಿತ ಇಂಡೊ-ಪೆಸಿಫಿಕ್’ ಎಂಬ ಅಮೆರಿಕದ ನಿಲುವನ್ನು ಬೆಂಬಲಿಸುವಂತೆ ಕರೆ ನೀಡಿದರು.

ವ್ಯಾಪಕ ಪ್ರಾದೇಶಿಕ ಹಕ್ಕನ್ನು ಪ್ರತಿಪಾದಿಸುತ್ತಿರುವ ಚೀನಾದ ತಂತ್ರವನ್ನು ಎದುರಿಸಲು ತೈವಾನ್ ಜಲಸಂಧಿ ಮತ್ತು ದಕ್ಷಿಣ ಚೀನಾ ಸಮುದ್ರದ ಮೂಲಕ ನಿಯಮಿತವಾಗಿ ನೌಕಾಯಾನ ಮತ್ತು ಹಾರಾಟ ಸೇರಿದಂತೆ ಇಂಡೊ-ಪೆಸಿಫಿಕ್ ವಲಯದಲ್ಲಿ ಅಮೆರಿಕ ಹಲವು ಪ್ರತಿಕ್ರಮಗಳನ್ನು ಕೈಗೊಂಡಿದೆ. ‘ ಅಂತರಾಷ್ಟ್ರೀಯ ಕಾನೂನು ಎಲ್ಲಿ ಅವಕಾಶ ನೀಡುತ್ತದೆಯೋ ಅಲ್ಲಿ ಎಲ್ಲಾ ದೇಶಗಳೂ ನೌಕಾಯಾನ, ಹಾರಾಟ ನಡೆಸುವುದನ್ನು ಖಾತರಿಪಡಿಸಲು ನಾವು ಬದ್ಧರಾಗಿದ್ದೇವೆ. ಪ್ರತಿಯೊಂದು ದೇಶವೂ, ದೊಡ್ಡದಿರಲಿ ಅಥವಾ ಚಿಕ್ಕದಿರಲಿ, ಕಾನೂನುಬದ್ಧ ಕಡಲ ಚಟುವಟಿಕೆ ನಡೆಸಲು ಮುಕ್ತವಾಗಿರಬೇಕು’ ಎಂದು ಆಸ್ಟಿನ್ ಹೇಳಿದ್ದಾರೆ.
ಉತ್ತರ ಕೊರಿಯಾದ ಕ್ಷಿಪಣಿ ಬೆದರಿಕೆ ಮತ್ತು ತೈವಾನ್ ಮೇಲೆ ಚೀನಾದ ಹಕ್ಕುಸಾಧನೆ ತಡೆಯಲು ಅಮೆರಿಕ ಬದ್ಧವಾಗಿದೆ. ಅಕ್ರಮ ಮೀನುಗಾರಿಕೆ, ಹವಾಮಾನ ವೈಪರೀತ್ಯ ಸಮಸ್ಯೆ ಎದುರಿಸಲು ಏಶಿಯನ್-ಪೆಸಿಫಿಕ್ ದೇಶಗಳಿಗೆ ಅಮೆರಿಕದ ನೆರವು ಮುಂದುವರಿಯಲಿದೆ. ವಲಯದಲ್ಲಿ ಪಾಲುದಾರ ದೇಶಗಳೊಂದಿಗೆ ರಕ್ಷಣಾ ಯೋಜನೆ, ಸಮನ್ವಯ ಮತ್ತು ತರಬೇತಿ ಪ್ರಕ್ರಿಯೆಯನ್ನು ಅಮೆರಿಕ ಹೆಚ್ಚಿಸಲಿದೆ. ಸ್ಪಷ್ಟವಾಗಿ ಹೇಳುವುದಾದರೆ- ನಮಗೆ ವಿವಾದ ಅಥವಾ ಸಂಘರ್ಷ ಬೇಕಿಲ್ಲ. ಆದರೆ ಒತ್ತಡತಂತ್ರ, ಬೆದರಿಕೆಯನ್ನು ಸಹಿಸಿಕೊಂಡು ಸುಮ್ಮನಿರುವುದಿಲ್ಲ ಎಂದು ಆಸ್ಟಿನ್ ಹೇಳಿದ್ದಾರೆ.

ಸಂಘರ್ಷಕ್ಕೆ ಅಮೆರಿಕದಿಂದ ಪ್ರಚೋದನೆ: ಚೀನಾ

ಲಾಯ್ಡ್ ಆಸ್ಟಿನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಚೀನಾದ ಹಿರಿಯ ರಾಜತಾಂತ್ರಿಕ ಜನರಲ್ ಲಿ ಶಾಂಗ್ಫು ‘ ಆಸ್ಟಿನ್ ಚೀನಾದ ವಿರುದ್ಧ ಬಹಿರಂಗವಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ. 
ಈ ಪ್ರದೇಶದಲ್ಲಿ ತನ್ನ ಪ್ರಾಬಲ್ಯವನ್ನು ಕಾಪಾಡಿಕೊಳ್ಳಲು, ತನ್ನದೇ ಆದ ಹಿತಾಸಕ್ತಿಗಳನ್ನು ಮುನ್ನಡೆಸಲು ಅಮೆರಿಕವು ಏಶ್ಯಾ ಪೆಸಿಫಿಕ್ ದೇಶಗಳನ್ನು ಮೋಸದಿಂದ ಬಳಸಿಕೊಳ್ಳುತ್ತಿದೆ. ಶೀತಲ ಯುಗವನ್ನು ನೆನಪಿಸುವ ಒಕ್ಕೂಟಗಳನ್ನು ಅಮೆರಿಕ ಸ್ಥಾಪಿಸುತ್ತಿದೆ. ಆಕಸ್, ಕ್ವಾಡ್ ಮತ್ತಿತರ ಒಕ್ಕೂಟಗಳನ್ನು ರಚಿಸುವ ಮೂಲಕ ಜಗತ್ನನ್ನು ಸೈದ್ಧಾಂತಿಕ ಚಾಲಿತ ಶಿಬಿರಗಳಾಗಿ ವಿಭಜಿಸಲು ಮತ್ತು ಸಂಷರ್ಘವನ್ನು ಪ್ರಚೋದಿಸಲು  ಪ್ರಯತ್ನಿಸುತ್ತಿದೆ ಎಂದವರು ಆರೋಪಿಸಿದ್ದಾರೆ. 

ಪರಸ್ಪರ ಗೌರವವಿದ್ದರೆ ಒಳಿತು: ಅಮೆರಿಕಕ್ಕೆ ಚೀನಾ ಉತ್ತರ

ಅಮೆರಿಕ-ಚೀನಾದ ನಡುವೆ ಸಂಘರ್ಷ ನಡೆದರೆ  ಜಗತ್ತಿಗೇ ಅಸಹನೀಯ ವಿಪತ್ತು ಎದುರಾಗಬಹುದು. ಎರಡೂ ದೇಶಗಳು ಪರಸ್ಪರರ ಬಗ್ಗೆ ಗೌರವ, ವಿಶ್ವಾಸ ಇರಿಸಿಕೊಳ್ಳುವುದು ಈಗಿನ ಅಗತ್ಯವಾಗಿದೆ. ತಮ್ಮ ದೇಶ ಯಾವತ್ತೂ ಸಂಘರ್ಷಕ್ಕಿಂತ ಸಂವಾದಕ್ಕೇ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ಚೀನಾದ ರಕ್ಷಣಾ ಸಚಿವ ಲಿ ಶಾಂಘ್ಫು ಹೇಳಿದ್ದಾರೆ.

ಸಿಂಗಾಪುರದಲ್ಲಿ ನಡೆದ ‘ಶಾಂಗ್ರಿ-ಲ’ ಸಂವಾದದಲ್ಲಿ ಮಾತನಾಡಿದ ಅವರು, ಈ ಜಗತ್ತು  ಅಮೆರಿಕ ಮತ್ತು ಚೀನಾ ಜತೆಯಾಗಿಯೇ ಅಭಿವೃದ್ಧಿ ಹೊಂದಲು ಸಾಕಾಗುವಷ್ಟು ವಿಶಾಲವಾಗಿದೆ. ಅಮೆರಿಕ ಮತ್ತು ಚೀನಾದ ವ್ಯವಸ್ಥೆ ವಿಭಿನ್ನವಾಗಿದೆ. ಆದರೆ ಇದು ದ್ವಿಪಕ್ಷೀಯ ಸಂಬಂಧಗಳನ್ನು ಬೆಳೆಸಲು ಮತ್ತು ಸಹಕಾರವನ್ನು ಗಾಢವಾಗಿರಿಸಲು ತಡೆಯಾಗಬಾರದು
ಎಂದರು.

ತೈವಾನ್ ಜಲಸಂಧಿ ಸೇರಿದಂತೆ, ಅಂತರಾಷ್ಟ್ರೀಯ ಕಾನೂನಿನಡಿ ಅವಕಾಶ ಇರುವ ಎಲ್ಲಾ ಪ್ರದೇಶಗಳಲ್ಲೂ ಕೆನಡಾದ ನೌಕೆಗಳು ಸಂಚರಿಸಲಿವೆ ಎಂಬ ಕೆನಡಾದ ರಕ್ಷಣಾ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಂಘ್ಫು ‘ ನೌಕಾಯಾನ ಪ್ರಾಬಲ್ಯವನ್ನು ಸಾಧಿಸಲು ಮುಕ್ತ ಸಂಚಾರದ ನೆಪಗಳನ್ನು ಬಳಸುವ ಅಮೆರಿಕ ಮತ್ತದರ ಮಿತ್ರರಾಷ್ಟ್ರಗಳ ಪ್ರಯತ್ನಕ್ಕೆ ಚೀನಾ ಆಸ್ಪದ ನೀಡುವುದಿಲ್ಲ’ ಎಂದರು.

Similar News