ಬರ್ಖಾ ದತ್ ರ ಯುಟ್ಯೂಬ್‌ ಚಾನೆಲ್ ಮೋಜೋ ಸ್ಟೋರಿಯ ಎಲ್ಲಾ ವೀಡಿಯೋ ಡಿಲೀಟ್‌ ಮಾಡಿದ ಹ್ಯಾಕರ್‌ಗಳು

Update: 2023-06-05 07:58 GMT

ಹೊಸದಿಲ್ಲಿ: ಖ್ಯಾತ ಪತ್ರಕರ್ತೆ ಬರ್ಖಾ ದತ್ತ್‌ ಅವರ ಡಿಜಿಟಲ್‌ ಸುದ್ದಿ ಸಂಸ್ಥೆ ಮೋಜೋ ಸ್ಟೋರಿ  ಇದರ ಯುಟ್ಯೂಬ್‌ ಚಾನಲ್‌ನಲ್ಲಿದ್ದ ಎಲ್ಲಾ ವೀಡಿಯೋಗಳನ್ನು ಹ್ಯಾಕರ್‌ಗಳು ಡಿಲೀಟ್‌ ಮಾಡಿದ್ದಾರೆಂದು ವರದಿಯಾಗಿದೆ. ಈ ಕುರಿತು ಬರ್ಖಾ ಸೋಮವಾರ ಟ್ವೀಟ್‌ ಮೂಲಕ ಮಾಹಿತಿ ನೀಡಿ ಆಘಾತ ವ್ಯಕ್ತಪಡಿಸಿದ್ದಾರೆ.

ಹ್ಯಾಕರ್‌ಗಳು ತಮ್ಮ ಯುಟ್ಯೂಬ್‌ ಚಾನಲ್‌ಗೆ ಇನ್ನಷ್ಟು ಹಾನಿ ಮಾಡುವುದಕ್ಕಿಂತ ಮುಂಚೆ ಚಾನಲ್‌ ಅನ್ನು ಫ್ರೀಝ್‌ ಮಾಡುವಂತೆ ಬರ್ಖಾ ರವಿವಾರದಿಂದ ಯುಟ್ಯೂಬ್‌ ಅಧಿಕಾರಿಗಳನ್ನು ಆಗ್ರಹಿಸಿದ್ದರು. ಆದರೆ ತನಿಖೆಯ ಪ್ರಕ್ರಿಯೆ ಅನುಸರಿಸಿ  ನಂತರ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳು ಅವರಿಗೆ ತಿಳಿಸಿದ್ದರೆನ್ನಲಾಗಿದೆ.

ಕ್ರಮಕೈಗೊಳ್ಳಲಾಗುತ್ತಿದೆ ಎಂಬ ಯುಟ್ಯೂಬ್‌ ಆಶ್ವಾಸನೆಯ ನಡುವೆಯೇ ಮೋಜೋ ಸ್ಟೋರಿ ಯುಟ್ಯೂಬ್‌ ಚಾನಲ್‌ನಲ್ಲಿ ಕಳೆದ ನಾಲ್ಕು ವರ್ಷಗಳ 11,000 ವೀಡಿಯೋಗಳನ್ನು ಹ್ಯಾಕರ್‌ಗಳು ತೆಗೆದುಹಾಕಿದ್ದಾರೆ. ಕೋವಿಡ್‌ ಸಾಂಕ್ರಾಮಿಕದ ಸಂದರ್ಭ ಬರ್ಖಾ ಅವರು ದೇಶದ ವಿವಿಧೆಡೆ ಸಂಚರಿಸಿ ತಯಾರಿಸಿದ್ದ ವೀಡಿಯೋಗಳೂ ಡಿಲೀಟ್‌  ಆಗಿವೆ.

ಈ ಕುರಿತು ತಮ್ಮ ನೋವನ್ನು ತೋಡಿಕೊಂಡಿರುವ ಬರ್ಖಾ “ನಾಲ್ಕು ವರ್ಷಗಳ ಪರಿಶ್ರಮವೆಲ್ಲ ಕಳೆದುಹೋಗಿವೆ. ನನಗೆ ನೋವಾಗಿದೆ. ಯಾರೋ ಹೃದಯಕ್ಕೆ ಚೂರಿ ಹಾಕಿದಂತಾಗಿದೆ,” ಎಂದು ಹೇಳಿದ್ದಾರೆ.

ಈಗ ಮೋಜೋ ಸ್ಟೋರಿಯ ಯುಟ್ಯೂಬ್‌ ಪುಟದಲ್ಲಿ “ಈ ಚಾನಲ್‌ ಯಾವುದೇ ಕಂಟೆಂಟ್‌ ಹೊಂದಿಲ್ಲ” ಎಂಬ ಸಂದೇಶ ಪ್ರದರ್ಶಿಸುತ್ತಿದೆ. ಈ ಬೆಳವಣಿಗೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

2019ರಲ್ಲಿ ಮೋಜೋ ಸ್ಟೋರಿ ಆರಂಭಗೊಂಡಿತ್ತು.

Similar News