ಪ್ರಜಾಪ್ರಭುತ್ವದ ಅಂಗಳದಲ್ಲಿ ‘ಸೆಂಗೋಲ್’ಗೇನು ಕೆಲಸ?

Update: 2023-06-05 13:15 GMT

ಕೆಲ ದಿನಗಳ ಹಿಂದೆ ಭಾರತೀಯರ ಸಾಮೂಹಿಕ ಪ್ರಜ್ಞೆಯ ಮೇಲೆ ಆವರಿಸಿದ ಧಾರ್ಮಿಕ ಸಂಕೇತ ಸೆಂಗೋಲ್‌ಗೂ ಹೊಸ ಸಂಸತ್ತಿಗೂ ಏನು ಸಂಬಂಧ? ನಿಜ ಹೇಳಬೇಕೆಂದರೆ, ಎರಡಕ್ಕೂ ಪರಸ್ಪರ ಸಂಬಂಧವಿಲ್ಲ. ಸೆಂಗೋಲ್ ಕುರಿತ ಕಲ್ಪನೆಯಂತೆ, ಅದು ರಾಜನೊಬ್ಬ ತನ್ನ ಸಾಮ್ರಾಜ್ಯವನ್ನು, ಭೂಪ್ರದೇಶವನ್ನು ವಿಸ್ತರಿಸುವ ಅವನ ಹಕ್ಕಿನ ಸೂಚಕ ಮತ್ತು ಆತ ತನ್ನವರೊಂದಿಗೆ ತಾನು ಬಯಸಿದಂತೆ ರಾಜ್ಯಭಾರ ಮಾಡುವ ಅಧಿಕಾರವನ್ನು ಅದು ಕೊಡುತ್ತದೆ. ಆತನ ಸಾಧಾರಣ ಸಾಮರ್ಥ್ಯವನ್ನು ಸೆಂಗೋಲ್ ನೈತಿಕ ಅಧಿಕಾರವಾಗಿ ಪರಿವರ್ತಿಸುತ್ತದೆ. ಅದನ್ನು ಕಾನೂನುಬದ್ಧವೆಂದು ಪರಿಗಣಿಸಲಾಗುತ್ತದೆ. ರಾಜನ ಪದವಿಯು ಆ ಅರ್ಥದಲ್ಲಿ ದೈವಿಕವಾಗಿ ಅನುಮೋದಿತ. ಅದನ್ನು ಎಲ್ಲರೂ ಪಾಲಿಸಬೇಕು. ರಾಜ ತನ್ನ ಅಧಿಕಾರವನ್ನು ದೇವರಿಂದ ಪಡೆದನೇ ಹೊರತು ಐಹಿಕ ಶಕ್ತಿಯಿಂದಲ್ಲ ಎಂದಾದರೆ, ಜನರು ಅವನ ಕಟ್ಟಳೆಗಳನ್ನು ಪ್ರಶ್ನಿಸಲಾರರು.

ರಾಜನ ದೈವಿಕ ಹಕ್ಕಿನ ಸಿದ್ಧಾಂತ ಮಧ್ಯಯುಗ ಮತ್ತು ಯುರೋಪಿನ ಆರಂಭಿಕ ಆಧುನಿಕ ಅವಧಿಯ ನಡುವೆ ಮುನ್ನೆಲೆಗೆ ಬಂತು. ನಿರಂಕುಶವಾದಿ ಆಡಳಿತಗಾರರು ತಮ್ಮನ್ನು ದೈವಿಕರು ದಯಪಾಲಿಸಿದ ಮತ್ತು ಅನುಮೋದಿಸಿದ ಅಧಿಕಾರದ ಕೇಂದ್ರವೆಂದು ತೋರಿಸಿಕೊಂಡ ಸಮಯ ಅದು. 1651ರಲ್ಲಿ ತತ್ವಜ್ಞಾನಿ ಥಾಮಸ್ ಹಾಬ್ಸ್
ಜನರೇಕೆ ರಾಜ ಹೇಳಿದಂತೆ ಕೇಳಬೇಕು ಎಂಬ ಪ್ರಶ್ನೆಯನ್ನೆತ್ತಿದಾಗ ದೈವಿಕ ಮತ್ತು ಜಾತ್ಯತೀತ ಶಕ್ತಿಯ ನಡುವಿನ ಸಮೀಕರಣ ಬದಲಾಯಿತು. ಆತನ ‘ಲೆವಾಯಥನ್’ ಕೃತಿ ದೈವಿಕ ಬಲ ಸಿದ್ಧಾಂತವನ್ನು ಪ್ರಶ್ನಿಸಿತು. ಮುಕ್ತ ಮತ್ತು ಸಮಾನ ವ್ಯಕ್ತಿಗಳ ನಡುವಿನ ಸಾಮಾಜಿಕ ಒಪ್ಪಂದದ ಬದಲಿಗೆ ಮಾತನಾಡಿತು. ರಾಜಕೀಯ ವ್ಯವಸ್ಥೆ ಮನುಷ್ಯನಿಗೆ ಸ್ವಾಭಾವಿಕ ಎಂದು ವಾದಿಸಿದ ಗ್ರೀಕ್ ರಾಜಕೀಯ ವಿಜ್ಞಾನಿ ಅರಿಸ್ಟಾಟಲ್‌ನ ಸಿದ್ಧಾಂತವನ್ನು ತಳ್ಳಿಹಾಕಿದ ಹಾಬ್ಸ್, ಮನುಷ್ಯನ ನೈಸರ್ಗಿಕ ನೆಲೆ ರಾಜಕೀಯ ಪೂರ್ವ ಮತ್ತು ಸಾಮಾಜಿಕ ಪೂರ್ವ ಸ್ಥಿತಿಯಾಗಿದೆ ಎಂದು ವಾದಿಸಿದ.

ಪ್ರಕೃತಿಯ ಕಾನೂನುಬಾಹಿರ ಸ್ಥಿತಿಯ ಅಸ್ಥಿರತೆಯಿಂದ ಬೇಸತ್ತ ವ್ಯಕ್ತಿಗಳು ಸಾಮಾಜಿಕ ಒಪ್ಪಂದದ ಮೂಲಕ ಲೆವಾಯಥನ್ ವ್ಯವಸ್ಥೆ ನಿರ್ಮಿಸಿದರು. ಸ್ವಯಂ ಸಂರಕ್ಷಣೆಗೆ ತಮ್ಮ ಆದ್ಯತೆಯ ಹಕ್ಕನ್ನು ಹೊರತುಪಡಿಸಿ ತಮ್ಮ ಎಲ್ಲಾ ನೈಸರ್ಗಿಕ ಹಕ್ಕುಗಳನ್ನು ಲೆವಾಯಥನ್‌ಗೆ ವರ್ಗಾಯಿಸಿದರು. ದೈವಿಕ ಹಕ್ಕುಗಳ ಸಿದ್ಧಾಂತದ ಜಾಗದಲ್ಲಿ ಬಂದ ಆ ಪ್ರಬಲನನ್ನು ಜನರು ತಮ್ಮ ಸ್ವಂತ ಒಳಿತಿಗಾಗಿ ಒಪ್ಪಿಕೊಂಡರು. ಅವನ ಶಕ್ತಿ ನೈತಿಕ ಅಧಿಕಾರವಾಗಿ ಬದಲಾಯಿತು. ಏಕೆಂದರೆ ಅದು ಜನಸಮ್ಮತಿಯಿಂದ ಬಂದ ಅಧಿಕಾರವಾಗಿತ್ತು. ಲೆವಾಯಥನ್ ಶಕ್ತಿ ಅಗಾಧವಾಗಿತ್ತು. ಆದರೆ ತನ್ನ ಜನರ ಸ್ವರಕ್ಷಣೆಗೆ ಧಕ್ಕೆ ತರುವಂತಹ ಏನನ್ನೂ ಮಾಡುವಂತಿರಲಿಲ್ಲ.

ಹಾಬ್ಸ್ ಪ್ರಜಾಪ್ರಭುತ್ವವಾದಿಯಾಗಿರಲಿಲ್ಲ, ಆದರೆ ಆತ ನಿರಂಕುಶವಾದಿ ರಾಜ್ಯದ ಅಥವಾ ರಾಜರ ದೈವಿಕ ಹಕ್ಕಿನ ಪರವಿರಲಿಲ್ಲ. ದಕ್ಷಿಣ ಭಾರತದಲ್ಲಿ ದೇವತೆಯೊಬ್ಬಳು ರಾಜನನ್ನು ಅಭಿಷಿಕ್ತಗೊಳಿಸಲು ಸ್ವರ್ಗದಿಂದ ಇಳಿದುಬಂದು ಸೆಂಗೋಲ್ ಹಸ್ತಾಂತರಿಸಿದಳು ಎಂಬ ಕಥೆಯೊಂದಿದೆ. ಅದು ಅಧಿಕಾರ ಹಸ್ತಾಂತರ, ಪಟ್ಟಾಭಿಷೇಕ ಸಮಾರಂಭಗಳ ಒಂದು ಭಾಗವಾಗಿದೆ. ಆದರೆ ಭಾರತದಲ್ಲಿ ಬ್ರಿಟಿಷರ ವಸಾಹತುಶಾಹಿ ವ್ಯವಸ್ಥೆ ದೈವಿಕವಾಗಿರಲಿಲ್ಲ. ಅವರಿಂದ ಅಧಿಕಾರ ಹಸ್ತಾಂತರದ ಬಳಿಕ ನಾಯಕರು ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ಸಂವಿಧಾನ ತಯಾರಾಗುವುದಿತ್ತು. ಪಂಜಾಬ್, ಬಂಗಾಳ ಮತ್ತು ವಾಯವ್ಯ ಗಡಿನಾಡಿನ ಜನರ ತಲೆಯ ಮೇಲೆ ದೇಶ ವಿಭಜನೆಯ ಪರಿಣಾಮಗಳು ದೊಡ್ಡದಾಗಿದ್ದವು. ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿಗಳನ್ನು ನಿರ್ಧರಿಸಿದ ಕ್ಷಣದಲ್ಲಿಯೇ ರಾಜಪ್ರಭುತ್ವದ ರಾಜ್ಯಗಳ ಏಕೀಕರಣ ಆಗಬೇಕಿತ್ತು. ಹೊಸ ಸರಕಾರವನ್ನು ಆಯ್ಕೆ ಮಾಡಲು ಸಾರ್ವತ್ರಿಕ ಚುನಾವಣೆಗಳನ್ನು ನಡೆಸಬೇಕಾಗಿತ್ತು.

ನೆಹರೂ ಎದುರಿನ ಸವಾಲುಗಳು ದೊಡ್ಡವಿದ್ದವು. ಸಂವಿಧಾನದ ಬರವಣಿಗೆ, ಭಾರತದ ದುರಂತಮಯ ವಿಭಜನೆಯ ಪರಿಣಾಮ, ಗಡಿಗಳನ್ನು ನಿರ್ಧರಿಸಿದ ನಂತರ ರಾಜರ ಅಧೀನದ ರಾಜ್ಯಗಳ ಏಕೀಕರಣ ಮತ್ತು 1947ರ ಅಕ್ಟೋಬರ್‌ನಲ್ಲಿ ಕಾಶ್ಮೀರದ ಮೇಲೆ ಪಾಕಿಸ್ತಾನದ ಆಕ್ರಮಣದಿಂದಾದ ತೊಂದರೆ ಇವೆಲ್ಲವನ್ನೂ ಅವರು ನಿಭಾಯಿಸಬೇಕಾಗಿತ್ತು. ಪ್ರತಿಭಾನ್ವಿತ ನಾಯಕರ ತಂಡದ ಸಾರಥ್ಯ ವಹಿಸಿದ್ದವರಾಗಿ ವಿಭಜನೆಯ ಪರಿಣಾಮ ಮತ್ತು ನಂತರ ಕಾಶ್ಮೀರ ತಮ್ಮ ನಿಯಂತ್ರಣದಾಚೆ ಇರುವುದರ ಹೊರತಾಗಿಯೂ ನೆಹಟೂಅಸಾಧ್ಯವಾದುದನ್ನು ಸಾಧಿಸಬೇಕಾಗಿತ್ತು. ನಮಗೆ ಅದ್ಭುತವಾದ ಸಂವಿಧಾನ ಸಿಕ್ಕಿತು. ಆದರೆ ವಿಭಜನೆಯ ಗಾಯಗಳು ಬಹುಬೇಗ ಮಾಯುವಂಥವಾಗಿರಲಿಲ್ಲ. ಕಾಶ್ಮೀರ ಸಮಸ್ಯೆ ಇವತ್ತಿಗೂ ಉಳಿದುಕೊಂಡಿದೆ. ನೆಹರೂ ಪ್ರಜಾಪ್ರಭುತ್ವವಾದಿಯಾಗಿ ಮುಂದುವರಿದರು. ಅವರು ಜನರ ಇಚ್ಛೆಯನ್ನು ನಂಬಿದ್ದರೇ ಹೊರತು, ಧಾರ್ಮಿಕ ಚಿಹ್ನೆಗಳು ಅಥವಾ ದೈವಿಕ ಸಮ್ಮತಿಯನ್ನಲ್ಲ.

ನೆಹರೂ ದೈವಿಕ ಬಲ ಸಿದ್ಧಾಂತವನ್ನು ಮಧ್ಯಕಾಲೀನ ಎಂದೂ ಆಧುನಿಕ ಕಾಲಮಾನಕ್ಕೆ  ಸೂಕ್ತವಲ್ಲವೆಂದೂ ತಿರಸ್ಕರಿಸಿದರು. ಒಕ್ಕೂಟ ವ್ಯವಸ್ಥೆಯಲ್ಲಿ ಒಂದಾಗಲು ಇಷ್ಟವಿಲ್ಲದ ರಾಜಮನೆತನಗಳಿಗೆ ನೆಹರೂ ಹೇಳಿದ್ದು: ರಾಜಪ್ರಭುತ್ವದ ಸಂಕೇತ ಹಸ್ತಾಂತರಿಸಲು ದೇವತೆಗಳು ತಮ್ಮನ್ನು ಭೇಟಿ ಮಾಡಿದ್ದರೆ ಬಹುಶಃ ಅವರನ್ನು ಔತಣಕ್ಕೆ ಕರೆದು ನಂತರ ವಿನಯದಿಂದಲೇ ಆ ಚಿಹ್ನೆಯನ್ನು ಹಿಂದಿರುಗಿಸುತ್ತಿದ್ದೆ ಎಂದು. ನೆಹರೂ ದೃಷ್ಟಿಯಲ್ಲಿ, ನೈತಿಕ ಅಧಿಕಾರದ ಮೂಲ ಜನರೇ ಆಗಿದ್ದರು. ಅವರು ಆಧುನಿಕ ಜಾತ್ಯತೀತ ಪ್ರಜಾಪ್ರಭುತ್ವಕ್ಕೆ ಬದ್ಧರಾಗಿದ್ದ ಮತ್ತು ಧರ್ಮದ ಮೂಲಕ ಕಾನೂನುಬದ್ಧಗೊಳಿಸುವುದರ ವಿರುದ್ಧವಿದ್ದ ಅಂತಿಮ ಪ್ರಜಾಪ್ರಭುತ್ವವಾದಿಯಾಗಿದ್ದರು. ಇದನ್ನು ಅವರು ತಮ್ಮ ಇತಿಹಾಸದ ವ್ಯಾಪಕ ಓದಿನ ಮೂಲಕ ತಿಳಿದಿದ್ದರು.

ಇಂಗ್ಲೆಂಡ್‌ನಲ್ಲಿ 17ನೇ ಶತಮಾನದ ವೇಳೆಗೆ, ಗ್ಲೋರಿಯಸ್ ಕ್ರಾಂತಿ (1643- 1750) ಮತ್ತು ಸಂಸತ್ತಿನ ಅಧಿಕಾರಗಳ ಹೆಚ್ಚಳದ ನಂತರ ರಾಜರ ದೈವಿಕ ಹಕ್ಕಿನ ಸಿದ್ಧಾಂತ ರಾಜಕೀಯ ಶಬ್ದಕೋಶಗಳಿಂದ ಕಣ್ಮರೆಯಾಯಿತು. ಫ್ರಾನ್ಸ್‌ನಲ್ಲಿ ವಿನಾಶಕಾರಿ ಆರ್ಥಿಕ ಬಿಕ್ಕಟ್ಟು ಮತ್ತು ಯುದ್ಧದ ವೆಚ್ಚ ನಿಭಾಯಿಸಲು ಸರಕಾರ ಹೇರಿದ ಹೆಚ್ಚಿನ ತೆರಿಗೆ ದರಗಳ ಪರಿಣಾಮವಾಗಿ ಸ್ಫೋಟಗೊಂಡ 1789ರ ಕ್ರಾಂತಿ, ಮಾಂಟೆಸ್ಕ್ಯೂ, ವೋಲ್ಟೇರ್ ಮತ್ತು ಜೀನ್ ಜಾಕ್ವೆಸ್ ರೂಸೋ ಆದರ್ಶಗಳಿಂದ ಪ್ರೇರಿತವಾಯಿತು. ರಾಜನ ವಿರುದ್ಧ ನಿರಂತರವಾದ ಆಂದೋಲನ ಜುಲೈ 14, 1789ರಂದು ರಾಜ ಪ್ರಭುತ್ವದ ದೌರ್ಜನ್ಯದ ಸಂಕೇತ ಬಾಸ್ಟಿಲ್ ಪತನದಲ್ಲಿ ಉತ್ತುಂಗಕ್ಕೇರಿತು. ಕಿಂಗ್ ಲೂಯಿಸ್ ಘಿಗಿI ಜನರ ಬೇಡಿಕೆಗಳಿಗೆ ಮಣಿಯಬೇಕಾಯಿತು. ಆಗಸ್ಟ್ 4, 1989ರಂದು ರಾಷ್ಟ್ರೀಯ ಸಂಸತ್ತು ರಾಜಪ್ರಭುತ್ವ, ಕುಲೀನಸ್ಥರ ಪ್ರಭುತ್ವ ಮತ್ತು ಭೂ ತೆರಿಗೆಯನ್ನು ರದ್ದುಗೊಳಿಸಿತು. ಆಗಸ್ಟ್ 26ರಂದು ಅದು ಮಾನವ ಹಕ್ಕುಗಳ ಘೋಷಣೆಯನ್ನು ಅಂಗೀಕರಿಸಿತು. ಸ್ವಾತಂತ್ರ್ಯ, ಸಮಾನತೆ, ಆಸ್ತಿ ಹಕ್ಕುಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ದೌರ್ಜನ್ಯವನ್ನು ವಿರೋಧಿಸುವ ಹಕ್ಕು ಅದಾಗಿತ್ತು.

ಇದು ರಾಜನು ದೈವಿಕ ಹಕ್ಕಿನಿಂದ ಆಳ್ವಿಕೆ ನಡೆಸುತ್ತಾನೆ ಎಂಬ ಭಾವನೆ ಮತ್ತು ಭ್ರಮೆಯನ್ನು ಕೊನೆಗೊಳಿಸಿತು. ಕೆಲವು ದಶಕಗಳ ನಂತರ ಜನರು ತಮ್ಮನ್ನು ತಾವೇ ಆಳುವ ವ್ಯವಸ್ಥೆಯನ್ನು ಘೋಷಿಸಿಕೊಂಡರು. ಈ ಜನ ಸಾರ್ವಭೌಮತ್ವ, ರಾಜಕೀಯ ವ್ಯವಸ್ಥೆಗಳ ಆಧಾರವಾಗಿ ಪೌರತ್ವ ಮತ್ತು ಮೂಲಭೂತ ಹಕ್ಕುಗಳನ್ನು ಕೊಟ್ಟಿತು.

ಆಧುನಿಕ ಪ್ರಜಾಸತ್ತಾತ್ಮಕ ರಾಜಕೀಯವು ವಿಶಾಲ ಅರ್ಥದಲ್ಲಿ ಜಾತ್ಯತೀತ. ಜಾತ್ಯತೀತ ವಾಗಿರುವುದು ಎಂದರೆ ಧರ್ಮವನ್ನು ತ್ಯಜಿಸುವುದಲ್ಲ, ಆದರೆ ಧಾರ್ಮಿಕ ನಂಬಿಕೆಗಳ ಅಡಿ
ಯಲ್ಲಿ ಆಡಳಿತವಿರಕೂಡದು ಎಂಬುದು. ಧರ್ಮವು ಕಾನೂನುಬದ್ಧ ಸಿದ್ಧಾಂತವಲ್ಲ.

ನಮ್ಮ ಸಂವಿಧಾನದ ಪೀಠಿಕೆ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಪ್ರಜಾಪ್ರಭುತ್ವದ ಮೂಲವೆಂದು ಘೋಷಿಸುತ್ತದೆ. ಬಹುಸಂಖ್ಯಾತ ಧರ್ಮವು ತನ್ನ ಅನುಯಾಯಿಗಳು ಬಹುಸಂಖ್ಯಾತರಾಗಿದ್ದರೂ ಸಹ ಸಾರ್ವಜನಿಕ ವಲಯದಲ್ಲಿ ಪ್ರಾಬಲ್ಯ ಸಾಧಿಸಲು ಸೂಕ್ತ ಕಾರಣವಿಲ್ಲ. ಅಲ್ಪಸಂಖ್ಯಾತರು ಸಂಖ್ಯಾತ್ಮಕವಾಗಿ ಕಡಿಮೆಯಿದ್ದರೂ ತೊಂದರೆಗೆ ಒಳಗಾಗದಂತೆ ಕಾನೂನಿನ ರಕ್ಷಣೆಯಿರಬೇಕು. ಬಹು ಧರ್ಮೀಯ ಸಮಾಜದಲ್ಲಿ ನಮ್ಮ ಸಾಮಾನ್ಯ ಇತಿಹಾಸವನ್ನು ವರ್ತಮಾನ ಮತ್ತು ಭವಿಷ್ಯಕ್ಕಾಗಿ ನೆನೆಯಬೇಕು. ರಾಜಕಾರಣಿಗಳ ಭಾಷಣಗಳಲ್ಲಿ ಮರೆಮಾಚಲಾಗುತ್ತಿರುವ ಮತ್ತು ಈಗ ಪಠ್ಯ ಪುಸ್ತಕಗಳಲ್ಲಿ ಇಲ್ಲವಾಗಿರುವ ಸಮನ್ವಯ ಸಂಸ್ಕೃತಿಯ ಇತಿಹಾಸ, ಭಾಷೆ ಮತ್ತು ಸಂವಿಧಾನದ ನಿಷ್ಠೆಯನ್ನು ನಾವು ‘ಜನರು’ ಮರುಸ್ಥಾಪಿಸಬೇಕಾಗಿದೆ.

ಸಂಸತ್ತು ಕಾನೂನುಗಳನ್ನು ಜಾರಿಗೊಳಿಸುವ, ಚರ್ಚೆಗೆ ಅವಕಾಶ ತೆರೆಯುವ, ಜನರನ್ನು ಪ್ರತಿನಿಧಿಸುವ ಧ್ವನಿಗಳ ವೇದಿಕೆ. ಅಲ್ಲೀಗ ಸೆಂಗೋಲ್ ಸ್ಪೀಕರ್ ಪಕ್ಕದಲ್ಲಿ ಸ್ಥಾಪನೆಯಾಗಿದೆ.
ಆದರೆ ಇದು ಪ್ರತಿಪಕ್ಷಗಳಿಗೆ ಪ್ರಜಾಸತ್ತಾತ್ಮಕ ಅವಕಾಶಗಳನ್ನು ನಿರಾಕರಿಸುವ, ತನ್ನದೇ ಪಕ್ಷದ ಪರವಾಗಿ ವರ್ತಿಸುವ ಒಬ್ಬ ಪಕ್ಷಪಾತಿ ಸ್ಪೀಕರ್ ಅನ್ನು ಕಡಿಮೆ ಪಕ್ಷಪಾತಿಯನ್ನಾಗಿ ಮಾಡುವುದಿಲ್ಲ. ಒಬ್ಬ ಸ್ಪೀಕರ್ ಅನ್ನು ಅವನ ನಡೆಗಳಿಂದ, ಅವನು ಕೊಡುವ ತೀರ್ಮಾನಗಳಿಂದ ಅಳೆಯಲಾಗುತ್ತದೆಯೇ ಹೊರತು ದೈವಿಕ ಚಿಹ್ನೆಯಿಂದ ಅಲ್ಲ.

ಸಂಸತ್ತು ಯಾರನ್ನೂ ಪೂಜಿಸುವ ಸ್ಥಳವಲ್ಲ. ಅದು ಜನಪ್ರಾತಿನಿಧ್ಯದ ತಾಣ.
ಕಾನೂನುಗಳನ್ನು ಅಂಗೀಕರಿಸುವ ಸ್ಥಳ ಮತ್ತು ನಮ್ಮ ಭರವಸೆಗಳು ಮತ್ತು ನಮ್ಮ ನಿರೀಕ್ಷೆಗಳನ್ನು ವ್ಯಕ್ತಪಡಿಸುವ ವೇದಿಕೆ. ದೈವಿಕ ಚಿಹ್ನೆ ಸಂಸತ್ತನ್ನು ಪ್ರಜಾಸತ್ತಾತ್ಮವಾಗಿಸಲಾ ರದು. ವಿರೋಧ ಪಕ್ಷವೂ ಜನರಿಂದ ಆಯ್ಕೆಯಾಗಿದೆ ಮತ್ತು ಗೌರವಕ್ಕೆ ಅರ್ಹವಾಗಿದೆ ಎಂದು ತಿಳಿದಿರುವ ಸರಕಾರ ಮಾತ್ರ ಪ್ರಜಾಸತ್ತಾತ್ಮಕತೆಯನ್ನು ಸಾಧಿಸಲು ಸಾಧ್ಯ. ರಾಜ ಕೀಯವೆಂಬುದು ಒಂದು ಅಸಾಧ್ಯ ಕಲೆ. ಅದು ದೈವಿಕ ಸಮ್ಮತಿಯನ್ನು ಕೇಳುವುದಲ್ಲ.

ಅಂತಿಮವಾಗಿ, ಸಂಸತ್ ಭವನ ಉದ್ಘಾಟನಾ ಸಮಾರಂಭ ಪ್ರಧಾನಿಗೆ ತನ್ನ ‘ಪ್ರೈಡ್ ಆ್ಯಂಡ್ ಪ್ರಿಜುಡೈಸ್’ ಪ್ರದರ್ಶನಕ್ಕೆ ಮತ್ತೊಂದು ಅವಕಾಶವನ್ನು ನೀಡಿತು. ಆದರೂ, ಸಂಸತ್ತು ನಮಗೆಲ್ಲರಿಗೂ ಸೇರಿದೆ; ಹಿಂದೂ, ಮುಸ್ಲಿಂ, ಸಿಖ್, ಇಸಾಯಿ, ಪಾರ್ಸಿ ಮತ್ತಿತರ ಧಾರ್ಮಿಕ ಪಂಗಡಗಳಿಗೂ ಸೇರಿದ್ದಾಗಿದೆ ಎಂಬುದು ಸತ್ಯ. ಇಲ್ಲಿ ತಾವು ಚುನಾಯಿಸಿದ ಮತ್ತು ಜವಾಬ್ದಾರರಾಗಿರುವ ಪ್ರತಿನಿಧಿಗಳು ತಮ್ಮ ಅನುಯಾಯಿಗಳದ್ದಷ್ಟೆ ಅಲ್ಲ, ಅವರ ವಿರೋಧಿಗಳ ಭಾವನೆಗಳನ್ನೂ ಗಣನೆಗೆ ತೆಗೆದುಕೊಳ್ಳುತ್ತಾರೆ ಎಂದು ಜನರು ನಿರೀಕ್ಷಿಸುತ್ತಾರೆ.

ಸೆಂಗೋಲ್ ಆನುವಂಶಿಕ ರಾಜಪ್ರಭುತ್ವದ ಸಂಕೇತವಾಗಿದೆ. ನಮ್ಮ ಸಂಸತ್ತು ಜನ ಸಾರ್ವಭೌಮತ್ವದ ನೆಲೆ. ಇವೆರಡರ ನಡುವೆ ನಿಸ್ಸಂದೇಹವಾಗಿ ಯಾವುದೇ ಸಂಬಂಧ ವಿಲ್ಲ. ಕಡೇಪಕ್ಷ ಆಧುನಿಕ ಪ್ರಜಾಪ್ರಭುತ್ವದ ಸಂದರ್ಭದಲ್ಲಂತೂ ಖಂಡಿತ ಇಲ್ಲ.

Similar News