ಮಣಿಪುರದಲ್ಲಿ ಶಾಂತಿ ಸುವ್ಯವಸ್ಥೆಗೆ ಆಗ್ರಹ: ಪುತ್ತೂರಿನಲ್ಲಿ ಸಿಐಟಿಯು ಪ್ರತಿಭಟನೆ

Update: 2023-06-06 13:37 GMT

ಪುತ್ತೂರು: ಮೀಸಲಾತಿ ಹೆಸರಿನಲ್ಲಿ ಮಣಿಪುರದಲ್ಲಿ ಮತೀಯ ಗಲಭೆ ನಡೆಸುತ್ತಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಮೀಸಲಾತಿ ಹೆಸರಲ್ಲಿ ಧರ್ಮಗಳ ಮಧ್ಯೆ ಮೈಮನಸ್ಸು ಹುಟ್ಟಿಸಿ ಸಮಾಜದಲ್ಲಿ ಶಾಂತಿ ಕದಡುವುದತ್ತಿ ರುವುದು ಖಂಡನೀಯವಾಗಿದ್ದು, ಮಣಿಪುರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಪುನರ್ ಸ್ಥಾಪಿಸಬೇಕು ಎಂದು ಸಿಐಟಿಯು ಮುಖಂಡ ನ್ಯಾಯವಾದಿ ಬಿ.ಎಂ. ಭಟ್ ಆಗ್ರಹಿಸಿದರು. 

ಅವರು ಮಂಗಳವಾರ ಪುತ್ತೂರು ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಸಿಐಟಿಯು ವತಿಯಿಂದ ಮಣಿಪುರ ರಾಜ್ಯದಲ್ಲಿ ಮೀಸಲಾತಿ ಹೆಸರಿನಲ್ಲಿ ಗಲಭೆ ಸೃಷ್ಟಿಸಿ ಚರ್ಚ್ ಹಾಗೂ ಕ್ರಿಶ್ಚಿಯನ್ನರ ಮೇಲಾಗುತ್ತಿರುವ ವ್ಯಾಪಕ ದಾಳಿಯನ್ನು ಖಂಡಿಸಿ ಹಾಗೂ ಮಣಿಪುರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. 

ಮಣಿಪುರ ರಾಜ್ಯದಲ್ಲಿ ಕಫ್ರ್ಯೂ ಹೇರುವ ಮೂಲಕ ಜನತೆಯನ್ನು ಗೃಹಬಂಧನದಲ್ಲಿರಿಸುವಂತೆ ಮಾಡಿದೆ. ಕಳೆದ ಕೊರೋನಾ ಸಂದರ್ಭದಲ್ಲೂ ಆದ ಅನುಭವ ಈಗ ಅಲ್ಲಿ ಮರುಕಳಿಸುತ್ತಿದೆ. ಸರ್ಕಾರಗಳು ಬುಡಕಟ್ಟು ಜನಾಂಗದ ಬದುಕನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಇದರೊಂದಿಗೆ ದೇಶಕ್ಕೆ ಹೆಮ್ಮೆ ತಂದು ಕೊಟ್ಟಿರುವ ಕುಸ್ತಿ ಪಟುಗಳ ಮೋದಿ ಸರ್ಕಾರ ದಾಳಿ ನಡೆಸಿರುವುದು ಖಂಡನೀಯವಾಗಿದೆ ಎಂದರು. 

ಬಿಜೆಪಿಯ ಮತವಿಭಜನೆಯ ಕಾರಣದಿಂದ ಅನಿವಾರ್ಯವಾಗಿ ಪುತ್ತೂರಿನಲ್ಲಿ ಕಾಂಗ್ರೆಸ್ ಗೆಲುವು ಪಡೆದಿದೆ. ಬಿಜೆಪಿ ಮತ್ತೊಮ್ಮೆ ಕೋಮು ಗಲಭೆ ನಡೆಸಿ ಮುಂದಿನ ಚುನಾವಣೆಯಲ್ಲಿ ಗೆಲುವು ಪಡೆಯುವ ಹುನ್ನಾರ ನಡೆಸುತ್ತಿದೆ. ಪುತ್ತೂರು ಶಾಸಕರು ಇದಕ್ಕೆ ಅವಕಾಶವಾಗದಂತೆ  ಕೋಮುವಾದವನ್ನು ಮಟ್ಟ ಹಾಕುವ ಕೆಲಸ ಮಾಡಬೇಕು. ಸಂವಿಧಾನದ ಬಗ್ಗೆ ಒಳ್ಳೆಯ ಭಾವನೆ ಮೂಡುವ ಪರಿಸ್ಥಿತಿ ನಿರ್ಮಾಣ ಮಾಡಬೇಕು  ಎಂದು ಆಗ್ರಹಿಸಿದರು. 

ಪ್ರತಿಭಟನಾ ಸಭೆಯಲ್ಲಿ ಸಿಐಟಿಯು ಮುಖಂಡರಾದ ನ್ಯಾಯವಾದಿ ಪಿ.ಕೆ.ಸತೀಶನ್, ಗುಡ್ಡಪ್ಪ ಗೌಡ, ವೆಂಕಟ್ರಮಣ ಗೌಡ ಮತ್ತಿತರರು ಪಾಲ್ಗೊಂಡಿದ್ದರು. 

ಸಿಐಟಿಯು ಮಹಿಳಾ ನಾಯಕಿ ಈಶ್ವರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. 

Similar News