'ಸುದ್ದಿಗಳನ್ನು ನಿಭಾಯಿಸುವ ವಿಧಾನ': ರೈಲು ಅಪಘಾತ ಕುರಿತ ಸಿಬಿಐ ತನಿಖೆಯನ್ನು ಟೀಕಿಸಿದ ಕಾಂಗ್ರೆಸ್

Update: 2023-06-06 16:46 GMT

ಹೊಸದಿಲ್ಲಿ: ಒಡಿಶಾ ರೈಲು ದುರಂತದ ಬಗ್ಗೆ ಸಿಬಿಐ ತನಿಖೆಗೆ ರೈಲ್ವೇ ಇಲಾಖೆ ಮುಂದಾಗಿರುವುದಕ್ಕೆ ಕಾಂಗ್ರೆಸ್ ಮಂಗಳವಾರ ಆಕ್ಷೇಪ ವ್ಯಕ್ತಪಡಿಸಿದೆ. ಇದು ಸುದ್ದಿಗಳನ್ನು ನಿಭಾಯಿಸುವ ಕೇಂದ್ರ ಸರಕಾರದ ವಿಧಾನ ಎಂದು ಅದು ಬಣ್ಣಿಸಿದೆ. ರೈಲು ಅಪಘಾತದ ಬಗ್ಗೆ ಸಿಬಿಐ ತನಿಖೆಗೆ ಶಿಫಾರಸು ಮಾಡಲಾಗಿದೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ರವಿವಾರ ಘೋಷಿಸಿದ್ದರು.

ಈ ನಿರ್ಧಾರಕ್ಕಾಗಿ ಸರಕಾರವನ್ನು ಟೀಕಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘‘ಬಾಲಸೋರ್ ರೈಲು ದುರಂತದ ಬಗ್ಗೆ ರೈಲ್ವೇ ಸುರಕ್ಷತೆ ಕಮಿಶನರ್ ತನ್ನ ವರದಿಯನ್ನು ಸಲ್ಲಿಸುವ ಮುನ್ನವೇ ಸಿಬಿಐ ತನಿಖೆಯನ್ನು ಘೋಷಿಸಲಾಗಿದೆ’’ ಎಂದು ಹೇಳಿದರು. ‘‘ಇದು ತನ್ನ ವೈಫಲ್ಯವನ್ನು ಮುಚ್ಚಿಹಾಕುವುದಕ್ಕಾಗಿ ಸುದ್ದಿಗಳನ್ನು ನಿಭಾಯಿಸುವ ಸರಕಾರದ ತಂತ್ರವಲ್ಲದೆ ಬೇರೇನೂ ಅಲ್ಲ’’ ಎಂದು ಅವರು ಟ್ವಿಟರ್ ನಲ್ಲಿ ಬರೆದಿದ್ದಾರೆ.

2016ರಲ್ಲಿ ನಡೆದ ಕಾನ್ಪುರ ರೈಲು ಅಪಘಾತವನ್ನು ರಮೇಶ್ ಸ್ಮರಿಸಿದ್ದಾರೆ. ಆ ಅಪಘಾತದಲ್ಲಿ 150 ಮಂದಿ ಪ್ರಾಣ ಕಳೆದುಕೊಂಡಿದ್ದರು. ಆ ಅಪಘಾತದ ತನಿಖೆಯನ್ನು ಎನ್ಐಎಗೆ ವಹಿಸಲಾಗಿತ್ತು. ಆದರೆ, ಅದು ಇನ್ನೂ ತನ್ನ ವರದಿಯನ್ನು ಸಲ್ಲಿಸಿಲ್ಲ ಎಂದು ರಮೇಶ್ ಹೇಳಿದ್ದಾರೆ.

‘‘ಈ ಘಟನಾವಳಿಗಳನ್ನು ಜ್ಞಾಪಿಸಿಕೊಳ್ಳಿ:

1) 2016 ನವೆಂಬರ್ 20: ಇಂದೋರ್-ಪಾಟ್ನಾ ಎಕ್ಸ್ಪ್ರೆಸ್ ಕಾನ್ಪುರ ಸಮೀಪ ಹಳಿತಪ್ಪಿತು. 150ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡರು.

2) 2017 ಜನವರಿ 23: ಈ ಅಪಘಾತದ ಬಗ್ಗೆ ಎನ್ಐಎ ತನಿಖೆಗೆ ಆದೇಶಿಸುವಂತೆ ಕೋರಿ ಅಂದಿನ ರೈಲ್ವೇ ಸಚಿವ ಸುರೇಶ್ ಪ್ರಭು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದರು.

3) 2017 ಫೆಬ್ರವರಿ 24: ಕಾನ್ಪುರ ರೈಲು ಅಪಘಾತವು ಪಿತೂರಿಯಾಗಿದೆ ಎಂದು ಪ್ರಧಾನಿ ಹೇಳುತ್ತಾರೆ.

4) 2018 ಅಕ್ಟೋಬರ್ 21: ರೈಲು ಹಳಿತಪ್ಪಿದ ಘಟನೆಗೆ ಸಂಬಂಧಿಸಿ ಎನ್ಐಎಯು ಯಾವುದೇ ಆರೋಪಪಟ್ಟಿ ಸಲ್ಲಿಸುವುದಿಲ್ಲ ಎಂದು ಪತ್ರಿಕೆಗಳು ವರದಿ ಮಾಡಿದವು.

5) 2023 ಜೂನ್ 6: ಕಾನ್ಪುರದಲ್ಲಿ ರೈಲು ಹಳಿತಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಎನ್ಐಎಯ ಅಂತಿಮ ವರದಿಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ಸುದ್ದಿ ಇಲ್ಲ. ಶೂನ್ಯ ಉತ್ತರದಾಯಿತ್ವ!’’ ಎಂದು ರಮೇಶ್ ಟ್ವೀಟ್ ನಲ್ಲಿ ಬರೆದಿದ್ದಾರೆ.

ಸಿಬಿಐ ಇರುವುದು ಅಪರಾಧಗಳ ತನಿಖೆಗಾಗಿಯೇ ಹೊರತು ರೈಲು ಅಪಘಾತಗಳ ತನಿಖೆಗೆ ಅಲ್ಲ; ಅದು ತಾಂತ್ರಿಕ, ಸಾಂಸ್ಥಿಕ ಮತ್ತು ರಾಜಕೀಯ ವೈಫಲ್ಯಗಳಿಗೆ ಉತ್ತರದಾಯಿತ್ವವನ್ನು ನಿಗದಿಪಡಿಸುವುದಿಲ್ಲ ಎಂಬುದಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಒಂದು ದಿನದ ಬಳಿಕ ಜೈರಾಮ್ ರಮೇಶ್ ಈ ವಾಗ್ದಾಳಿ ನಡೆಸಿದ್ದಾರೆ.

ಎರಡು ಪ್ರಯಾಣಿಕ ರೈಲುಗಳು ಮತ್ತು ಒಂದು ಗೂಡ್ಸ್ ರೈಲಿನ ನಡುವೆ ಶುಕ್ರವಾರ ಸಂಜೆ ಸಂಭವಿಸಿದ ಢಿಕ್ಕಿಯಲ್ಲಿ 275 ಮಂದಿ ಮೃತಪಟ್ಟಿದ್ದಾರೆ ಮತ್ತು 1,100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

Similar News