ಬೆದರಿರುವ ಬಿಜೆಪಿ ಮೈತ್ರಿಯತ್ತ ಮುಖ ಮಾಡುತ್ತಿದೆಯೇ?

Update: 2023-06-07 05:46 GMT

ಕರ್ನಾಟಕದಲ್ಲಿನ ಸೋಲಿನ ಬಳಿಕ ಬಿಜೆಪಿಯೊಳಗೆ ತಲ್ಲಣವೆದ್ದಿದೆ. ಅದರ ಸುಳಿವು ಬಯಲಾಗುವ ಹಾಗೆ ಒಂದು ವಿದ್ಯಮಾನ ನಡೆದಿದೆ. ಅದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ತೆಲುಗು ದೇಶಂ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ನಡುವಿನ ಸಭೆ.

ಈ ಸಭೆ ಬಿಜೆಪಿಯ ಭಯದ ಬಗ್ಗೆ ಬಹಳಷ್ಟನ್ನು ಹೇಳುತ್ತಿದೆ. ಈ ನಾಯಕರಿಬ್ಬರ ಭೇಟಿಯ ಬಳಿಕ ನಡೆದಿರುವ ವಿಶ್ಲೇಷಣೆಗಳ ಪ್ರಕಾರ, ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆಗೆ ಮೊದಲು ಬಿಜೆಪಿ ಮತ್ತು ಟಿಡಿಪಿ ನಡುವೆ ಔಪಚಾರಿಕ ಮೈತ್ರಿಯು ಉಂಟಾಗಬಹುದು. ಆದರೆ ‘ಸೆಟ್ಲರ್’ ಮತಗಳು ಸಂಭಾವ್ಯ ಬಿಜೆಪಿ-ಟಿಡಿಪಿ ಮೈತ್ರಿಯೆಡೆಗೆ ಹರಿದುಬಂದಾವೆಯೇ ಎಂಬುದು ಪ್ರಶ್ನೆ.

ಅಮಿತ್ ಶಾ ಮೊನ್ನೆ ಜೂನ್ 3ರಂದು ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದರು. ಗಮನಿಸಬೇಕಾದ ವಿಚಾರವೆಂದರೆ, ಇದು ಐದು ವರ್ಷಗಳ ಬಳಿಕ ನಡೆದ ಭೇಟಿಯೆಂಬುದು.

2019ರ ಲೋಕಸಭೆ ಚುನಾವಣೆಗೆ ಮುನ್ನ, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಿಂದ (ಎನ್‌ಡಿಎ) ಟಿಡಿಪಿ ಹೊರನಡೆದು ಸಂಯುಕ್ತ ವಿರೋಧ ಪಕ್ಷಕ್ಕೆ ಸೇರ್ಪಡೆಗೊಂಡಿತು. ಆಂಧ್ರಪ್ರದೇಶ ವಿಭಜನೆಯಾದ ನಂತರ ಬಿಜೆಪಿ ಅನ್ಯಾಯ ಮಾಡಿದೆ ಎಂಬುದು ಅದರ ಆರೋಪವಾಗಿತ್ತು.

ಅಂದು ಟಿಡಿಪಿ ಮೊದಲು ‘ಧರ್ಮ ಪೋರಾಟಂ’ ಅಂದರೆ ನ್ಯಾಯಕ್ಕಾಗಿ ಹೋರಾಟ ಎಂಬ ಅಭಿಯಾನ ಶುರು ಮಾಡಿತ್ತು. ಅಷ್ಟಕ್ಕೇ ನಿಲ್ಲದೆ ಎನ್‌ಡಿಎ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿತು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಯೋತ್ಪಾದಕ ಎಂದು ಆಗ ನಾಯ್ಡು ಟೀಕಿಸಿದ್ದರು.

ಅದಕ್ಕೆ ಪ್ರತಿಕ್ರಿಯಿಸಿದ್ದ ಅಮಿತ್ ಶಾ, ನಾಯ್ಡು ಅವರನ್ನು ಯು-ಟರ್ನ್ ಸಿಎಂ ಎಂದಿದ್ದರು. ಲೆಕ್ಕವಿಲ್ಲದಷ್ಟು ಬಾರಿ ಎಲ್ಲದರ ಬಗ್ಗೆ ನಾಯ್ಡು ತಮ್ಮ ನಿಲುವನ್ನು ಬದಲಾಯಿಸಿದ್ದಾರೆ ಎಂದು ಟೀಕಿಸಿದ್ದ ಶಾ, ಟಿಡಿಪಿಗೆ ಎನ್‌ಡಿಎ ಬಾಗಿಲು ಶಾಶ್ವತವಾಗಿ ಮುಚ್ಚಲ್ಪಟ್ಟಿದೆ ಎಂದು ಘೋಷಿಸಿದ್ದರು.

ಮುಂದೆ 2019ರ ಚುನಾವಣೆಯಲ್ಲಿ ಟಿಡಿಪಿ ಅತಿ ಹೀನಾಯ ಸೋಲು ಕಂಡಿತು. ಅದಾದ ಬಳಿಕ ಅದರ ಅಸ್ತಿತ್ವವೇ ಪೂರ್ತಿಯಾಗಿ ಅಲುಗಾಡತೊಡಗಿದ್ದು, ಮತ್ತೆ ನಾಯ್ಡು ಎನ್‌ಡಿಎ ಕಡೆಗೆ ಒಲವು ತೋರತೊಡಗಿದ್ದು ನಿಜ.

ಅವತ್ತು ಟಿಡಿಪಿಗೆ ಎನ್‌ಡಿಎ ಬಾಗಿಲು ಮುಚ್ಚಿದೆ ಎಂದಿದ್ದ ಶಾ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಐದು ವರ್ಷಗಳ ಬಳಿಕ ಅದೇ ಚಂದ್ರಬಾಬು ನಾಯ್ಡು ಅವರನ್ನು ಕಂಡು ಮಾತುಕತೆ ನಡೆಸಿದ್ದಾರೆ. ನಾಯ್ಡು ಅವರನ್ನು ಭೇಟಿ ಮಾಡಲು ಶಾ ಮುಂದಾದದ್ದು ಏಕೆ? ಈ ಬೆಳವಣಿಗೆಗೆ ಕಾರಣವೇನು?

ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಕರ್ನಾಟಕದಲ್ಲಿನ ಸೋಲು ಬಿಜೆಪಿಯ ಜಂಘಾಬಲವನ್ನೇ ಉಡುಗಿಸಿದೆ. ಪ್ರಧಾನಿ ಮೋದಿ ಮತ್ತು ಬಿಜೆಪಿ ಕರ್ನಾಟಕದಲ್ಲಿ ಕಾಂಗ್ರೆಸ್ ಕೈಯಲ್ಲಿ ಸೋಲಿನ ಕಹಿ ಅನುಭವಿಸಿದ ನಂತರ ಬಿಜೆಪಿ ತನ್ನನ್ನೇ ತಾನು ನೋಡಿಕೊಳ್ಳತೊಡಗಿದೆ. ವಿಧಾನಸಭೆ ಚುನಾವಣೆ ಎದುರಿಗೆ ಇರುವ ಇತರ ರಾಜ್ಯಗಳಲ್ಲಿನ ಸ್ಥಿತಿಯನ್ನಾದರೂ ಸರಿಪಡಿಸಿಕೊಂಡು ಮುಂದುವರಿಯುವ ನಿಟ್ಟಿನಲ್ಲಿ ಅದು ಯೋಚಿಸುತ್ತಿದೆ. ಕರ್ನಾಟಕದ ಸೋಲಿನ ಬೆನ್ನಲ್ಲೇ, ಪಕ್ಕದ ತೆಲಂಗಾಣದಲ್ಲಿನ ತನ್ನ ಭವಿಷ್ಯದ ಬಗ್ಗೆ ಬಿಜೆಪಿಗೆ ಚಿಂತೆಯಾದಂತಿದೆ.

ತೆಲಂಗಾಣ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬ ವಿಚಾರ ತೀರಾ ಹೊಸದೇನಲ್ಲ. ಎಟೆಲ ರಾಜೇಂದರ್ ಮತ್ತು ಬಂಡಿ ಸಂಜಯ್ ನಡುವಿನ ಬಣ ಕದನ ಅಲ್ಲಿ ಬಿಜೆಪಿಯೊಳಗೆ ಕಳವಳಕ್ಕೆ ಕಾರಣವಾಗಿದೆ ಎಂಬ ಮಾತುಗಳಿವೆ. ರಾಜೇಂದರ್ ಅವರ ಮಧ್ಯಸ್ಥಿಕೆಯ ಹೊರತಾಗಿಯೂ ಪ್ರಮುಖ ನಾಯಕರಾದ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಮತ್ತು ಜೂಪಲ್ಲಿ ಕೃಷ್ಣರಾವ್ ಬಿಜೆಪಿಗೆ ಸೇರಲು ನಿರಾಕರಿಸಿದ್ದು, ಪ್ರಸಕ್ತ ಅಲೆಯು ಬಿಜೆಪಿ ಪರವಾಗಿಲ್ಲ ಎಂಬುದರ ಸೂಚನೆಯಾಗಿದೆ ಎಂಬ ವಿಚಾರವನ್ನು ಬಿಜೆಪಿಗೆ ತೀರಾ ಹತ್ತಿರದ ಮೂಲಗಳೇ ಹೇಳುತ್ತಿರುವ ಬಗ್ಗೆ ‘ದಿ ವೈರ್’ ತನ್ನ ವರದಿಯಲ್ಲಿ ಪ್ರಸ್ತಾಪಿಸಿದೆ.

‘ದಿ ವೈರ್’ ವರದಿಯಲ್ಲಿನ ಪ್ರಮುಖ ಅಂಶಗಳು ಹೀಗಿವೆ:

ಕರ್ನಾಟಕದಲ್ಲಿನ ಸೋಲಿನ ನಂತರ ಬಿಜೆಪಿಗೆ ಮೈತ್ರಿಯ ಅಗತ್ಯ ಕಾಣತೊಡಗಿದೆ. ಟಿಡಿಪಿ ಮೂಲವು ಹೇಳುತ್ತಿರುವ ಪ್ರಕಾರ, ಎನ್‌ಡಿಎ ಈಗ ಖಾಲಿಯಾಗಿದೆ. ಬಿಜೆಪಿ ದಕ್ಷಿಣದಲ್ಲಿ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದೆ. ಈ ಹಂತದಲ್ಲಿ ಅದಕ್ಕೆ ಮೈತ್ರಿ ರಾಜಕಾರಣ ತೀರಾ ಅನಿವಾರ್ಯ ಎನ್ನಿಸಿದೆ.

ತೆಲಂಗಾಣದಲ್ಲಿ ಬಿಜೆಪಿ ತುಂಬಾ ಅಬ್ಬರಿಸುತ್ತಿತ್ತು. ಆದರೆ ಯಾವಾಗ ಕರ್ನಾಟಕದಲ್ಲಿ ಅದರ ಅತಿ ಆತ್ಮವಿಶ್ವಾಸ ಸೂಜಿ ಚುಚ್ಚಿದ ಬಲೂನಿನ ಹಾಗೆ ಒಡೆದುಹೋಯಿತೋ ಆಗಲೇ ಅದರ ಸದ್ದೇ ಅಡಗಿದಂತಾಗಿದೆ. ತೆಲಂಗಾಣದಲ್ಲೂ ಅದು ದಯನೀಯವಾಗಿ ವಿಫಲವಾಗುವ ಎಲ್ಲಾ ಲಕ್ಷಣಗಳೂ ಇವೆ. ನಿಜ ಹೇಳಬೇಕೆಂದರೆ, ಈ ಬಾರಿ ಬಿಜೆಪಿ ರಾಜ್ಯದಲ್ಲಿ ಐದು ಸ್ಥಾನಗಳನ್ನೂ ದಾಟುವುದಿಲ್ಲ ಎಂದು ರಾಜಕೀಯ ಪರಿಣಿತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿಗೆ ರಾಜ್ಯದಲ್ಲಿ ಯಾವುದೇ ಭರವಸೆ ಇಲ್ಲದಂತಾಗಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸದಸ್ಯ ವಂಶಿ ಚಂದ್ ರೆಡ್ಡಿ ಹೇಳುತ್ತಾರೆ.

ನಾಯ್ಡು ಮತ್ತು ಶಾ ನಡುವಿನ ಸಭೆ ಆಂಧ್ರಪ್ರದೇಶದ ಬಗ್ಗೆ ಅಲ್ಲ, ಮುಂಬರುವ ತೆಲಂಗಾಣ ಚುನಾವಣೆಯ ಬಗ್ಗೆ ಎಂಬ ಊಹಾಪೋಹಗಳು ಎದ್ದಿವೆ. ಆದರೆ ಇಂತಹ ವದಂತಿಗಳನ್ನು ನಿರಾಕರಿಸಿರುವ ಟಿಡಿಪಿ ವಕ್ತಾರ ಕೊಮ್ಮರೆಡ್ಡಿ ಪಟ್ಟಾಬಿ, ಸೂಕ್ತ ಸಮಯದಲ್ಲಿ ಸಭೆಯ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದಿದ್ದಾರೆ.

ಈ ಸಭೆಯು ಆಂಧ್ರಪ್ರದೇಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಆಂಧ್ರಪ್ರದೇಶ ಸರಕಾರದ ರಾಷ್ಟ್ರೀಯ ಮಾಧ್ಯಮ ಸಲಹೆಗಾರ ದೇವುಲಾಪಲ್ಲಿ ಅಮರ್ ಅಭಿಪ್ರಾಯಪಟ್ಟಿದ್ದಾರೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ದಿಲ್ಲಿ ಸರಕಾರದ ಪರವಾಗಿ ಬಂದಿರುವ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಸುಗ್ರೀವಾಜ್ಞೆಯನ್ನು ಮಂಡಿಸುವ ಹೊತ್ತಿನಲ್ಲಿ ರಾಜ್ಯಸಭೆಯಲ್ಲಿ ಟಿಡಿಪಿ ಬೆಂಬಲವನ್ನು ಪಡೆಯುವ ದಿಕ್ಕಿನ ಪ್ರಯತ್ನವಾಗಿರಬೇಕು ಈ ಭೇಟಿ ಎಂಬುದು ಅವರ ಅನುಮಾನ.

ಅದೇನೇ ಇದ್ದರೂ, ಬಿಜೆಪಿ ತನ್ನ ಈಗಿನ ಹತಾಶ ಸ್ಥಿತಿಯಲ್ಲಿ ತೆಲಂಗಾಣದಲ್ಲಿ ‘ಸೆಟ್ಲರ್’ ಮತಗಳಿಕೆಯ ತಂತ್ರಗಾರಿಕೆಯನ್ನು ರೂಪಿಸುವ ಭಾಗವಾಗಿ ಟಿಡಿಪಿಯತ್ತ ಮುಖ ಮಾಡಿದಂತಿದೆ ಎಂದು ರಾಜಕೀಯ ವಿಶ್ಲೇಷಕರು ಭಾವಿಸುತ್ತಿದ್ದಾರೆ. ತೆಲಂಗಾಣದಲ್ಲಿ, ವಿಶೇಷವಾಗಿ ಹೈದರಾಬಾದ್ ನಗರದಲ್ಲಿ ನೆಲೆಸಿರುವ ಕರಾವಳಿ ಆಂಧ್ರದ ಜನರನ್ನು ಪ್ರಭಾವಿ ಮತದಾರರೆಂದು ಭಾವಿಸಲಾಗುತ್ತದೆ. ಆದರೆ ರಾಜ್ಯ ವಿಭಜನೆಯಾದ 10 ವರ್ಷಗಳ ಬಳಿಕವೂ ಟಿಡಿಪಿಗೆ ಈ ಸೆಟ್ಲರ್ ಮತದಾರರು ತಮ್ಮ ಬೆಂಬಲ ನೀಡುವ ಮನಃಸ್ಥಿತಿ ಹೊಂದಿದ್ದಾರೆಯೆ?

ಬಹುತೇಕ ಸೀಮಾಂಧ್ರ ಜನರು ಇನ್ನೂ ಟಿಡಿಪಿಯನ್ನು ಬೆಂಬಲಿಸುತ್ತಾರೆ. ವಿಶೇಷವಾಗಿ ಹೈದರಾಬಾದ್ ಮತ್ತು ರಂಗಾರೆಡ್ಡಿ ಜಿಲ್ಲೆಗಳ ನಗರ ಪ್ರದೇಶಗಳು ಮತ್ತು ಗಡಿ ಜಿಲ್ಲೆಗಳಾದ ಖಮ್ಮಂ, ವಾರಂಗಲ್ ಮತ್ತು ಮೆಹಬೂಬ್‌ನಗರದಲ್ಲಿ ಟಿಡಿಪಿಯ ಕಡೆಗೇ ಜನರ ಒಲವಿದೆ. ಹೈದರಾಬಾದ್ ಅನ್ನು ವಿಶ್ವದ ಟೆಕ್ ರಾಜಧಾನಿಯನ್ನಾಗಿ ಪರಿವರ್ತಿಸಿದ ದೂರದೃಷ್ಟಿ ಇದ್ದವರೆಂಬ ಅಭಿಮಾನದಿಂದಲೇ ನಾಯ್ಡು ಅವರನ್ನು ನೆನಪಿಸಿಕೊಳ್ಳುವವರಿದ್ದಾರೆ.

2014ರಲ್ಲಿ ವಿಭಜನೆಯ ಚಳವಳಿಯ ಉತ್ತುಂಗದಲ್ಲಿ ಮತ್ತು ಅದು ಎಬ್ಬಿಸಿದ ಸಂಚಲನದ ಸಮಯದಲ್ಲಿ ಟಿಡಿಪಿ ತೆಲಂಗಾಣದಲ್ಲಿ 15 ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅವುಗಳಲ್ಲಿ 10 ಕ್ಷೇತ್ರಗಳು ಹೈದರಾಬಾದ್ ಮತ್ತು ರಂಗಾರೆಡ್ಡಿ ಜಿಲ್ಲೆಗಳ ನಗರ ಭಾಗಗಳಿಗೆ ಸೇರಿದವಾಗಿದ್ದವು. ಆದರೆ 2018ರಲ್ಲಿ ಗಡಿಯ ಖಮ್ಮಂ ಜಿಲ್ಲೆಯಲ್ಲಿ ಟಿಡಿಪಿ ಸೀಟು ಗಳಿಕೆ ಎರಡರಷ್ಟಕ್ಕೆ ಕುಸಿಯಿತು. ಸ್ಪಷ್ಟವಾಗಿ ಇದು ಟಿಡಿಪಿಗಿಂತ ಹೆಚ್ಚಾಗಿ ತೆಲಂಗಾಣ ರಾಷ್ಟ್ರ ಸಮಿತಿಗೆ (ಈಗ ಭಾರತ್ ರಾಷ್ಟ್ರ ಸಮಿತಿ) ಮತದಾರರು ಒಲವು ತೋರುತ್ತಿದ್ದಾರೆ ಎಂಬುದರ ಸೂಚನೆ.

2014ರಲ್ಲಿ ವಿಶೇಷವಾಗಿ ತೆಲಂಗಾಣದಲ್ಲಿ ನೆಲೆಸಿರುವವ ರಲ್ಲಿ ಗೊಂದಲ ಮತ್ತು ಅಭದ್ರತೆಯಿತ್ತು. ಆದರೆ 2018ರಲ್ಲಿ ಕೆ. ಚಂದ್ರಶೇಖರ್ ರಾವ್ ಅವರ ಪ್ರಭಾವವು ಮತದಾರರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಯಿತು. ಹೊಸ ‘ಬ್ರಾಂಡ್ ತೆಲಂಗಾಣ’ ಜೊತೆ ಗುರುತಿಸಿಕೊಳ್ಳಲು ಅವಕಾಶವಾಯಿತು. ಇದು ಸೆಟ್ಲರ್ ಮತಗಳನ್ನು ಗಳಿಸಲು ಬಿಆರ್‌ಎಸ್‌ಗೆ ಸಹಾಯ ಮಾಡಿತು ಎಂದು ವಿಶ್ಲೇಷಿಸಲಾಗುತ್ತದೆ.

2019ರ ಮೊದಲು ಆಂಧ್ರಪ್ರದೇಶದಲ್ಲಿ ಬಿಜೆಪಿಯೊಂದಿಗೆ ಟಿಡಿಪಿಗೆ ಏನನ್ನು ಮಾಡಲು ಇಷ್ಟವಿಲ್ಲದಿದ್ದರೂ, ತೆಲಂಗಾಣದಲ್ಲಿ 2018ರಲ್ಲಿ ಟಿಡಿಪಿಯನ್ನು ದೂರವಿಟ್ಟಿದ್ದು ಬಿಜೆಪಿ. ಆಂಧ್ರ ಪಕ್ಷದೊಂದಿಗಿನ ಯಾವುದೇ ಥರದ ಮೈತ್ರಿ ತೆಲಂಗಾಣದಲ್ಲಿ ತನ್ನ ಅವಕಾಶಗಳಿಗೆ ಅಡ್ಡಿಯಾಗುತ್ತದೆ ಎಂಬುದು ಬಿಜೆಪಿಯ ಭಯವಾಗಿತ್ತು ಆಗ.

2018ರ ವಿಧಾನಸಭಾ ಚುನಾವಣೆಗೆ ಟಿಡಿಪಿಯೊಂದಿಗೆ ಮೈತ್ರಿ ಘೋಷಿಸಿದ ನಂತರ ಕಾಂಗ್ರೆಸ್‌ಗೆ ಅದೇ ಅನುಭವವಾಯಿತು. ಕೆಸಿಆರ್ ಅವರು ಕಾಂಗ್ರೆಸ್-ಟಿಡಿಪಿ ಮೈತ್ರಿಯ ವಿರುದ್ಧ ಪ್ರಾದೇಶಿಕ ತೆಲಂಗಾಣ ಭಾವನೆಯ ಕಾರ್ಡ್ ಬಳಸಿದರು. ಆ ಮೂಲಕ 2014ರಲ್ಲಿಗಿಂತ ದೊಡ್ಡ ಗೆಲುವು ಅವರದಾಯಿತು. 25 ಸ್ಥಾನಗಳನ್ನು ಗೆದ್ದಿದ್ದರು. ಹೈದರಾಬಾದ್‌ನ ಸೆಟ್ಲರ್ ಮತದಾರರ ಪ್ರದೇಶಗಳಲ್ಲಿಯೇ 10 ಸ್ಥಾನಗಳನ್ನು ಗೆಲ್ಲುವುದು ಅವರಿಗೆ ಸಾಧ್ಯವಾಗಿತ್ತು.

ಈಗ ಇದೇ ಸೆಟ್ಲರ್ ಮತದಾರರನ್ನು ತನ್ನ ತೆಕ್ಕೆಗೆ ಸೆಳೆಯಲು ನಾಯ್ಡು ಬೆಂಬಲ ನೆರವಾದೀತು ಎಂಬ ಲೆಕ್ಕಾಚಾರದ ಲ್ಲಿರುವ ಬಿಜೆಪಿ ನಿಜವಾಗಿಯೂ ಯೋಚಿಸುತ್ತಿರುವುದೇನು?

2018ರಲ್ಲಿ ಟಿಆರ್‌ಎಸ್ ಪ್ರಾದೇಶಿಕ ಪಕ್ಷವಾಗಿತ್ತು. ಹಾಗಾಗಿ ನಾಯ್ಡು ವಿರುದ್ಧ ಕೆಸಿಆರ್ ಪ್ರಾದೇಶಿಕ ಭಾವನೆ ಕಾರ್ಡ್ ಪ್ರಯೋಗಿಸಲು ಸಾಧ್ಯವಾಗಿತ್ತು. ಆದರೆ ಈಗ ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಸ್ಪರ್ಧಿಸುತ್ತಿರುವ ಟಿಆರ್‌ಎಸ್ ರಾಷ್ಟ್ರೀಯ ಪಕ್ಷವಾಗಿದೆ. ಬಿಆರ್‌ಎಸ್ ಆಗಿ ಬದಲಾಗಿದೆ. ಆದ್ದರಿಂದ ಈ ಬಾರಿಯೂ ಪ್ರಾದೇಶಿಕತೆ ಕಾರ್ಡ್ ಬಳಸಲು ಸಾಧ್ಯವಿಲ್ಲ ಎಂಬುದು ಬಿಜೆಪಿಯ ಲೆಕ್ಕಾಚಾರ.

ಬಿಜೆಪಿ ತೆಲಂಗಾಣ ಪಕ್ಷವಲ್ಲ. ಅದಕ್ಕೆ ಅಲ್ಲಿ ಸ್ವಲ್ಪಮತಗಳಿರಬಹುದು. ಆದರೆ ಕಾರ್ಯಕರ್ತರ ಬಲವಿಲ್ಲ. ಟಿಡಿಪಿ ಯಾವುದೇ ಮತಬ್ಯಾಂಕ್ ಹೊಂದಿಲ್ಲ. ಆದರೆ ತೆಲಂಗಾಣದ ಹೆಚ್ಚಿನ ಜಿಲ್ಲೆಗಳಲ್ಲಿ ಅದು ಇನ್ನೂ ಕಾರ್ಯಕರ್ತರನ್ನು ಹೊಂದಿದೆ. ಅವರ ಕೇಡರ್ ಬಲವನ್ನು ಬಳಸಿಕೊಂಡು ತಮ್ಮ ಆಟ ಆಡುವ ತಂತ್ರಗಾರಿಕೆಯನ್ನು ಕಾರ್ಯಗತಗೊಳಿಸಲು ಈಗ ಶಾ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ಅನ್ನು ಸೋಲಿಸುವ ಪ್ರಯತ್ನಕ್ಕೆ ಬಿಜೆಪಿ ಪರೋಕ್ಷವಾಗಿ ಕೆಸಿಆರ್‌ಗೆ ಬೆಂಬಲ ನೀಡುತ್ತಿದೆ ಎಂಬುದು ಕಾಂಗ್ರೆಸ್ ಆರೋಪ. ಈಗಾಗಲೇ ಕರ್ನಾಟಕವನ್ನು ಬಿಜೆಪಿ ಕಳೆದುಕೊಂಡಿದೆ. ತೆಲಂಗಾಣದಲ್ಲಿಯೂ ಕಾಂಗ್ರೆಸ್ ಗೆದ್ದರೆ ಏನು ಗತಿ ಎಂಬ ಆತಂಕ ಅದಕ್ಕಿದೆ. ಹೀಗಾಗಿ ಕೆಸಿಆರ್ ಗೆಲು ವಿಗೆ ಸಹಾಯ ಮಾಡಲು ಆಡಳಿತ ವಿರೋಧಿ ಮತಗಳನ್ನು ವಿಭಜಿಸಲು ನಾಯ್ಡು ಅವರೊಂದಿಗೆ ಶಾ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತಿದ್ದಾರೆ ಕಾಂಗ್ರೆಸ್ ನಾಯಕರು.

ಈ ವರ್ಷಾಂತ್ಯದಲ್ಲಿ ತೆಲಂಗಾಣದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನವೇ ತೆಲಂಗಾಣದಲ್ಲಿ ಬಿಜೆಪಿ ಮತ್ತು ಟಿಡಿಪಿ ನಡುವೆ ಔಪಚಾರಿಕ ಮೈತ್ರಿ ಏರ್ಪಡಲಿದೆ ಎಂಬುದು ಬಹುತೇಕ ವಿಶ್ಲೇಷಕರ ಅಭಿಪ್ರಾಯವಾಗಿದ್ದರೂ, ‘ಸೆಟ್ಲರ್’ ಮತಗಳು ಸಂಭಾವ್ಯ ಬಿಜೆಪಿ-ಟಿಡಿಪಿ ಮೈತ್ರಿಗೆ ಹೋಗುವವೆ ಎಂಬುದು ದೊಡ್ಡ ಪ್ರಶ್ನೆಯಾಗಿ ನಿಂತಿದೆ.

ಇವೆಲ್ಲದರ ನಡುವೆಯೇ, ಮೈತ್ರಿ ಸಾಧ್ಯತೆಯನ್ನು ಟಿಡಿಪಿಯಾಗಲಿ, ಬಿಜೆಪಿಯಾಗಲಿ ಬಹಿರಂಗವಾಗಿ ಒಪ್ಪುತ್ತಿಲ್ಲ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮತ್ತು ಟಿಡಿಪಿ ನಡುವೆ ಮೈತ್ರಿ ಏರ್ಪಡಲಿದೆ ಎಂಬುದು ಊಹಾಪೋಹ ಎಂದೇ ಎರಡೂ ಕಡೆಯ ನಾಯಕರು ತಳ್ಳಿಹಾಕುತ್ತಿದ್ದಾರೆ.

ತೆಲಂಗಾಣ ರಾಜಕಾರಣದಲ್ಲಿ ಹೀಗೆಲ್ಲ ನಡೆದಿರುವಾಗಲೇ, ತಾನು ಸೋತಿರುವ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ದಾರಿಯ ಬಗ್ಗೆ ತಲೆಕೆಡಿಸಿಕೊಂಡಿರುವ ಬಿಜೆಪಿ, ಇಲ್ಲಿ ಜೆಡಿಎಸ್ ಜೊತೆ ಮೈತ್ರಿಗೆ ಗಂಭೀರ ಚಿಂತನೆ ನಡೆಸುತ್ತಿದೆ ಎಂದೂ ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಇಲ್ಲಿಯೂ ಕೂಡ ಅಂಥ ಸಾಧ್ಯತೆಯನ್ನು ನಾಯಕರು ನಿರಾಕರಿಸುತ್ತಿದ್ದಾರೆ.

ಆದರೆ, ಬಿಜೆಪಿ ಬೆದರಿದೆ ಎಂಬುದಂತೂ ನಿಜ. ಕಾಂಗ್ರೆಸ್ ವಿರುದ್ಧದ ರಣತಂತ್ರದ ಭಾಗವಾಗಿ ಮೈತ್ರಿಯಂಥ ನಡೆಗಳನ್ನು ಅದು ಅನುಸರಿಸಿದರೆ ಅಚ್ಚರಿಯೇನೂ ಇಲ್ಲ.

(ಆಧಾರ: ದಿ ವೈರ್, ಇತರ ವರದಿಗಳು)

Similar News