ಎಸ್ಸಿ/ಎಸ್ಟಿ ಪಿಎಚ್.ಡಿ. ವಿದ್ಯಾರ್ಥಿಗಳು ಭಾರತೀಯ ಐಐಟಿಗಳಿಗೆ ಬೇಡವಾಗುತ್ತಿದ್ದಾರೆಯೇ?

Update: 2023-06-07 06:03 GMT

ಒಂದು ಉತ್ತಮ ಉದ್ದೇಶದಿಂದ ಕಟ್ಟಿರುವ ಐಐಟಿಗಳು ಗುಣಾತ್ಮಕ ಶಿಕ್ಷಣಕ್ಕೆ ಹೆಸರು ಮಾಡಿದ್ದರೂ ಸಾಮಾಜಿಕ ನ್ಯಾಯ ಪರಿಪಾಲನೆಯಲ್ಲಿ ಹಿಂದೆ ಬಿದ್ದಿರುವ ಕುರಿತು ಸಾಕಷ್ಟು ಆರೋಪಗಳು ಮತ್ತು ವರದಿಗಳು ಕಳೆದ ಕೆಲವು ವರ್ಷಗಳಿಂದ ಕಾಣಿಸಿಕೊಳ್ಳುತ್ತಿವೆ. ಅದರಲ್ಲೂ ಪಿಎಚ್.ಡಿ.ಯಂತಹ ಉನ್ನತ ಶಿಕ್ಷಣದ ಪ್ರವೇಶಾತಿಯಲ್ಲಿ ಹೆಚ್ಚಿನ ಸಮಸ್ಯೆಗಳು ಐಐಟಿಗಳಲ್ಲಿ ಉಂಟಾಗುವುದರ ಕುರಿತು ಇತ್ತೀಚೆಗೆ ಪಾರ್ಲಿಮೆಂಟ್ನಲ್ಲೂ ಚರ್ಚೆಗಳು ನಡೆದಿವೆ.

ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಗಳಲ್ಲಿ ಅಧ್ಯಯನ ಮಾಡುವುದು ಇಂದು ಪ್ರತೀ ಭಾರತೀಯ ವಿದ್ಯಾರ್ಥಿಯ ಕನಸಾಗಿದೆ. ಭಾರತದಲ್ಲಿರುವ ಹತ್ತು ಹಲವಾರು ಐಐಟಿಗಳಲ್ಲಿ ಕೆಲವು ಐಐಟಿಗಳು ವಿಶ್ವಾದ್ಯಂತ ಹೆಸರು ಮಾಡಿವೆ. ಐಐಟಿಗಳಿಗೆ ಪ್ರವೇಶ ಪಡೆಯುವುದು ಒಂದು ಜೀವಮಾನದ ಸಾಧನೆ ಎಂದು ಹೆಚ್ಚಿನ ವಿದ್ಯಾರ್ಥಿಗಳು ಭಾವಿಸುತ್ತಾರೆ. ಏಕೆಂದರೆ ಅಲ್ಲಿನ ಅತ್ಯುತ್ತಮ ತಂತ್ರಜ್ಞಾನ ಶಿಕ್ಷಣ ಗುಣಮಟ್ಟ ಮತ್ತು ಪದವಿಯ ನಂತರ ಕೋಟ್ಯಂತರ ರೂ. ಸಿಗುವ ವೇತನ. ಒಂದು ಉತ್ತಮ ಉದ್ದೇಶದಿಂದ ಕಟ್ಟಿರುವ ಇಂತಹ ಐಐಟಿಗಳು ಗುಣಾತ್ಮಕ ಶಿಕ್ಷಣಕ್ಕೆ ಹೆಸರು ಮಾಡಿದ್ದರೂ  ಸಾಮಾಜಿಕ ನ್ಯಾಯ ಪರಿಪಾಲನೆಯಲ್ಲಿ ಹಿಂದೆ ಬಿದ್ದಿರುವ ಕುರಿತು ಸಾಕಷ್ಟು ಆರೋಪಗಳು ಮತ್ತು ವರದಿಗಳು ಕಳೆದ ಕೆಲವು ವರ್ಷಗಳಿಂದ ಕಾಣಿಸಿಕೊಳ್ಳುತ್ತಿವೆ. ಅದರಲ್ಲೂ ಪಿಎಚ್.ಡಿ.ಯಂತಹ ಉನ್ನತ ಶಿಕ್ಷಣದ ಪ್ರವೇಶಾತಿಯಲ್ಲಿ ಹೆಚ್ಚಿನ ಸಮಸ್ಯೆಗಳು ಐಐಟಿಗಳಲ್ಲಿ ಉಂಟಾಗುವುದರ ಕುರಿತು ಇತ್ತೀಚೆಗೆ ಪಾರ್ಲಿಮೆಂಟ್ನಲ್ಲೂ ಚರ್ಚೆಗಳು ನಡೆದಿವೆ.

ಇಂದು ಭಾರತದಲ್ಲಿ ಒಟ್ಟು 23 ಐಐಟಿಗಳಿವೆ. 2021ರಲ್ಲಿ ಪಿಎಚ್.ಡಿ. ಪ್ರವೇಶಾತಿ ವಿಚಾರವನ್ನು ಗಮನಿಸಿದಾಗ ಕೆಲವೊಂದು ಅಂಶಗಳು ಬೆಳಕಿಗೆ ಬಂದಿದೆ. ಐಐಟಿ ಖರಗಪುರ್ಗೆ ಒಟ್ಟು 966 ಪರಿಶಿಷ್ಟ ಜಾತಿ (ಎಸ್ಸಿ) ವಿದ್ಯಾರ್ಥಿಗಳು ಮತ್ತು 155 ಎಸ್ಟಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಆದರೆ ಸ್ವೀಕೃತಿಯ ಪ್ರಮಾಣ ಎಸ್ಸಿ ವಿಭಾಗದಲ್ಲಿ ಶೇ. 7.8 ಮತ್ತು ಎಸ್ಟಿ ವಿಭಾಗದಲ್ಲಿ ಕೇವಲ ಶೇ. 3.2! ಅದೇ ವರ್ಷ ಐಐಟಿ ದಿಲ್ಲಿಯಲ್ಲಿ ಒಟ್ಟು 2,279 ಎಸ್ಸಿ ವಿದ್ಯಾರ್ಥಿಗಳು ಪ್ರವೇಶಾತಿ ಕೇಳಿದ್ದರು. ಆದರೆ ಸ್ವೀಕೃತಿಯ ಪ್ರಮಾಣ ಶೇ.1.7. ಐಐಟಿ ಗಾಂಧಿನಗರ 2021ರಲ್ಲಿ ಒಟ್ಟು 1,562 ಪಿಎಚ್. ಅರ್ಜಿಗಳನ್ನು ಪಡೆದಿತ್ತು. ಆದರೆ ಪುರಸ್ಕೃತವಾದ ಎಸ್ಸಿ ವಿದ್ಯಾರ್ಥಿಗಳು ಕೇವಲ ಶೇ.0.7 ಮತ್ತು ಎಸ್ಟಿ ವಿದ್ಯಾರ್ಥಿಗಳದ್ದು ಶೇ.1.4. ಐಐಟಿ ಮಂಡಿ ಅದೇ ವರ್ಷ ಇತರ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಂದ ಒಟ್ಟು 1,974 ಅರ್ಜಿಗಳನ್ನು ಸ್ವೀಕರಿಸಿತ್ತು. ಆದರೆ ಪುರಸ್ಕೃತ ವಾದದ್ದು ಕೇವಲ ಶೇ.1.0. ಇವೆಲ್ಲದಕ್ಕಿಂತಲೂ ಬಹಳ ದುಃಖಕರ ಸಂಗತಿ ಎಂದರೆ 2021ರಲ್ಲಿ ಬಿಲಾಯಿ ಐಐಟಿ 225 ಅರ್ಜಿಗಳನ್ನು ಎಸ್ಸಿ ವಿದ್ಯಾರ್ಥಿಗಳಿಂದ ಮತ್ತು ಎಸ್ಟಿ ವಿದ್ಯಾರ್ಥಿಗಳಿಂದ 31 ಅರ್ಜಿಗಳನ್ನು ಸ್ವೀಕರಿಸಿತ್ತು. ಆದರೆ ಈ ಎರಡು  ವರ್ಗದ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಶೂನ್ಯ ಪ್ರವೇಶಾತಿ. ಐಐಟಿ ತಿರುಪತಿ, ಮಂಡಿ, ಬಿಲಾಯಿ ಮತ್ತು ಗೋವಾಗಳು 2021ರಲ್ಲಿ ಯಾವುದೇ ಎಸ್ಟಿ ವಿದ್ಯಾರ್ಥಿಗಳಿಗೆ ಪಿಎಚ್.ಡಿ. ಪ್ರವೇಶವೇ ನೀಡಿಲ್ಲ.

ಮುಂದುವರಿದು 2021ರಲ್ಲಿ ಐಐಟಿ ದಿಲ್ಲಿಯಲ್ಲಿನ 31 ಅಧ್ಯಯನ ವಿಭಾಗಗಳಲ್ಲಿ ಮತ್ತು ಐಐಟಿ-ಬಾಂಬೆಯಲ್ಲಿನ ಒಟ್ಟು 26 ಅಧ್ಯಯನ ವಿಭಾಗಗಳಲ್ಲಿ ಹೆಚ್ಚು ಕಡಿಮೆ 16 ವಿಭಾಗಗಳು ತಮ್ಮ ತಮ್ಮ ಡಾಕ್ಟರೇಟ್ ಕಾರ್ಯಕ್ರಮಗಳಿಗೆ ಕಳೆದ ವರ್ಷ ಯಾವುದೇ ಎಸ್ಸಿ ವಿದ್ಯಾರ್ಥಿಗಳನ್ನು ಪಿಎಚ್.ಡಿ.ಗೆ ಸೇರಿಸಿಕೊಳ್ಳಲಿಲ್ಲ ಎಂದು ತಿಳಿದು ಬಂದಿದೆ. ಅದೇ ರೀತಿ 2020 ರಲ್ಲಿ ಐಐಟಿ-ದಿಲ್ಲಿಯಲ್ಲಿ ಹತ್ತೊಂಬತ್ತು ಮತ್ತು ಐಐಟಿ-ಬಾಂಬೆಯಲ್ಲಿ ಐದು ವಿಭಾಗಗಳು ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಯಾವುದೇ ಪ್ರವೇಶಾತಿ ನೀಡಿಲ್ಲ. 2020ರಲ್ಲಿ ಐಐಟಿ-ತಿರುಪತಿ ಮತ್ತು ಐಐಟಿ-ಪಾಲಕ್ಕಾಡ್ನಲ್ಲಿ, ಪಿಎಚ್.ಡಿ. ಮಟ್ಟದಲ್ಲಿ ಯಾವುದೇ ಅಧ್ಯಯನ ವಿಭಾಗದಲ್ಲಿ ಶೂನ್ಯ ಎಸ್ಟಿ ವಿದ್ಯಾರ್ಥಿಗಳ ಪ್ರವೇಶವಿದೆ. ಐಐಟಿ-ಬಿಲಾಯಿ, ಐಐಟಿ-ಗೋವಾ ಮತ್ತು ಐಐಟಿ-ಧಾರವಾಡದಲ್ಲಿ, ಒಟ್ಟಾರೆಯಾಗಿ ಕೇವಲ ಒಬ್ಬ ಎಸ್ಟಿ ವಿದ್ಯಾರ್ಥಿಗೆ 2020ರಲ್ಲಿ ಪಿಎಚ್.ಡಿ. ಪ್ರವೇಶಾತಿ ದೊರಕಿತ್ತು. 2021ರಲ್ಲಿ ಒಟ್ಟಾರೆಯಾಗಿ ಎಲ್ಲಾ ಐಐಟಿಗಳಲ್ಲಿ ಪಿಎಚ್.ಡಿ. ವಿದ್ಯಾರ್ಥಿಗಳ ಸಂಖ್ಯೆ ಕಡ್ಡಾಯ ಕೋಟಾಕ್ಕಿಂತ ತುಂಬಾ ಕಡಿಮೆಯಾಗಿದೆ. ಇನ್ನೂ ಸ್ವಲ್ಪಹಿಂದೆ ಹೋದರೆ 2019ರಲ್ಲಿ ಐಐಟಿ ದಿಲ್ಲಿಯಲ್ಲಿ ಎಸ್ಸಿ ಡಾಕ್ಟರೇಟ್ ವಿದ್ಯಾರ್ಥಿಗಳ ಪ್ರವೇಶದ ಶೇಕಡಾವಾರು ಪ್ರಮಾಣವು ಕೇವಲ ಶೇ. 7 ಆಗಿತ್ತು, ಎಸ್ಟಿ ವಿದ್ಯಾರ್ಥಿಗಳ ಪ್ರವೇಶಾತಿ ಕೇವಲ ಶೇ. 2.5 ಮತ್ತು ಒಬಿಸಿ ವಿದ್ಯಾರ್ಥಿಗಳ ಪ್ರಮಾಣ ಶೇ. 18. ಅದೇ 2019ರಲ್ಲಿ ಐಐಟಿ-ಬಾಂಬೆಯಲ್ಲಿ, ಎಸ್ಸಿ ಡಾಕ್ಟರೇಟ್ ವಿದ್ಯಾರ್ಥಿಗಳ ಪ್ರವೇಶದ ಶೇಕಡಾವಾರು ಪ್ರಮಾಣವು ಶೇ. 5, ಎಸ್ಟಿ ವಿದ್ಯಾರ್ಥಿಗಳು ಶೇ. 11 ಮತ್ತು ಒಬಿಸಿ ಸುಮಾರು ಶೇ. 3. ಈ ಸಂಖ್ಯೆಗಳು ಐಐಟಿ ಮದ್ರಾಸ್ನಲ್ಲಿ 2019ರಲ್ಲಿ ಕ್ರಮವಾಗಿ ಶೇ. 8, ಶೇ. 1 ಮತ್ತು ಶೇ. 20ರಷ್ಟಿದೆ ಎನ್ನಲಾಗಿದೆ. ಇದನ್ನು ಗಮನಿಸಿದರೆ ಕಳೆದ ಕೆಲವು ವರ್ಷಗಳಲ್ಲಿ ವಿಶೇಷವಾಗಿ ಬಡ ಮತ್ತು ಅಂಚಿನಲ್ಲಿರುವ ವಿದ್ಯಾರ್ಥಿಗಳಿಗೆ ಐಐಟಿ ಪ್ರವೇಶಾತಿ ಗಗನ ಕುಸುಮವಾಗಿದೆ. ಕೆಲವು ಐಐಟಿಗಳು ಸರಕಾರದ ಮೀಸಲಾತಿ ನೀತಿಯನ್ನು ಅರೆ ಬರೆ ಅನುಸರಿಸಿವೆ. ಕೆಲವು ಐಐಟಿಗಳು ಎಸ್ಸಿ/ ಎಸ್ಟಿ ಕೋಟಾ ಮಾನದಂಡಗಳನ್ನು ಪೂರೈಸಲು ಹೆಚ್ಚುವರಿ ಪ್ರಯತ್ನಗಳನ್ನು ಮತ್ತು ಕಡಿಮೆ ಕಟ್ ಆಫ್ ಅಂಕಗಳನ್ನು ಕೈಗೊಂಡಿದೆ ಎನ್ನುವ ಹೇಳಿಕೆಗಳು ಸಹ ಕೇಳಿಬರುತ್ತಿವೆ.

ಐಐಟಿಯ ಕೆಲವು ವಿಭಾಗಗಳು ಸಾಕಷ್ಟು ಅರ್ಹತೆ ಹೊಂದಿರುವ ಪಿಎಚ್. ಡಿ. ಅಭ್ಯರ್ಥಿಗಳನ್ನು ಪಡೆದರೆ, ಕೆಲವು ಇತರ ವಿಭಾಗಗಳಲ್ಲಿ, ಅಗತ್ಯವಿರುವ ಕ್ಯಾಲಿಬರ್ನ ವಿದ್ಯಾರ್ಥಿಗಳು ಪಿಎಚ್.ಡಿ.ಗೆ ಸೇರ ಬಯಸುವುದಿಲ್ಲ. ಇದು ಪಿಎಚ್.ಡಿ. ಪ್ರವೇಶಾತಿಯಲ್ಲಿ ತಾಂತ್ರಿಕ ಸಮಸ್ಯೆ ಉಂಟು ಮಾಡುತ್ತವೆ ಮತ್ತು ಎಸ್ಸಿ/ಎಸ್ಟಿ ವಿದ್ಯಾರ್ಥಿಗಳ ಕುಟುಂಬದ ಹಿನ್ನೆಲೆ ಮತ್ತು ಆರ್ಥಿಕ ಮಟ್ಟವೂ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ಕೆಲವು ಐಐಟಿಗಳು ತಮ್ಮ ವರದಿಯಲ್ಲಿ ತಿಳಿಸಿವೆ. ಆದರೆ ಕೆಲವರ ಪ್ರಕಾರ ದೇಶದಲ್ಲಿನ ಕಡಿಮೆ ಸಂಖ್ಯೆಯ ಐಐಟಿಗಳು ಇನ್ನೊಂದು ಸಮಸ್ಯೆಯಾಗಿದೆ. ಪಿಎಚ್.ಡಿ. ಸಂಶೋಧನಾ ಕಾರ್ಯಕ್ರಮವು ಸಾಮಾನ್ಯವಾಗಿ ವಿದ್ಯಾರ್ಥಿಗಳಿಂದ ಹೆಚ್ಚಿನ ಸಾಮರ್ಥ್ಯವನ್ನು ಬೇಡುತ್ತದೆ. ವಿದ್ಯಾರ್ಥಿಗಳು ದುರ್ಬಲರಾಗಿದ್ದರೆ ಹೆಚ್ಚುವರಿ ಸಮಯ ಮತ್ತು ತರಬೇತಿ ನೀಡುವ ಮೂಲಕ ಅವರನ್ನು ಉತ್ತಮ ಪಡಿಸಬೇಕಾಗುತ್ತದೆ. ಸಂಶೋಧನೆಗೆ ನಿರ್ದಿಷ್ಟ ಮಟ್ಟದ ಶೈಕ್ಷಣಿಕ ರುಜುವಾತುಗಳ ಅಗತ್ಯವಿರುತ್ತದೆ ಮತ್ತು ನಾವು ಇದನ್ನು ಮೂಲದಿಂದಲೇ ಪರಿಹರಿಸಬೇಕಾಗುತ್ತದೆ ಎಂದು ಕೆಲವು ಐಐಟಿ ಅಧ್ಯಾಪಕರು ಹೇಳುತ್ತಾರೆ.

ಪ್ರತೀ ಭಾರತೀಯ ಐಐಟಿಗಳು ವಾರ್ಷಿಕವಾಗಿ ಅಂದಾಜು 6,000-7,000 ಪಿಎಚ್.ಡಿ. ಅರ್ಜಿಗಳನ್ನು ಪ್ರತೀ ವರ್ಷ ಸ್ವೀಕರಿಸುತ್ತದೆ ಮತ್ತು ಅಂತಿಮವಾಗಿ ಆ ದೊಡ್ಡ ಸಂಖ್ಯೆಯಿಂದ ಕೇವಲ 300-400 ಅರ್ಜಿಗಳನ್ನು ಆಯ್ಕೆ ಮಾಡುವುದು ನಿಜವಾಗಿಯೂ ಕಠಿಣವಾಗಿರುತ್ತದೆ. ಕೆಲವು ಅಧ್ಯಯನ ವಿಭಾಗಗಳಲ್ಲಿ ಎಸ್ಸಿ/ಎಸ್ಟಿ ಪಿಎಚ್.ಡಿ. ದಾಖಲಾತಿ ಇಲ್ಲದಿರುವುದಕ್ಕೆ ಅರ್ಹ ಅಭ್ಯರ್ಥಿಗಳ ಅಲಭ್ಯತೆ ಮುಖ್ಯ ಕಾರಣ ಎಂದು ಕೆಲವು ಪ್ರಾಧ್ಯಾಪಕರ ಅಭಿಪ್ರಾಯ. ವಿಶೇಷವಾಗಿ ಐಐಟಿಗಳಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪ್ರವೇಶಾತಿ ಸಿಗದಿರಲು ಕಳಪೆ ಗುಣಮಟ್ಟದ ಶಾಲಾ ಶಿಕ್ಷಣ ಮುಖ್ಯ ಕಾರಣ ಎಂದು ತಜ್ಞರು ಹೇಳುತ್ತಾರೆ. ಮೊದಲ ತಲೆಮಾರಿನ ಕಲಿಯುವವರಿಗೆ ಅಥವಾ ದಲಿತ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಮೊದಲು ಉತ್ತಮವಾಗಿರಬೇಕು. ಹಳ್ಳಿಗಳ ಸರಕಾರಿ ಶಾಲೆಗಳಲ್ಲಿ ಶಿಕ್ಷಣವು ಸಾಮಾನ್ಯವಾಗಿ ನೀರಸವಾಗಿರುತ್ತದೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಶಾಲಾ ಶಿಕ್ಷಣ ಮತ್ತು ವಿಜ್ಞಾನ ಕಲಿಕೆಯನ್ನು ಬಲಪಡಿಸಲು ಸರಕಾರ ಮೊದಲು ಪ್ರಯತ್ನಿಸಬೇಕು. ಇಂದು ಐಐಟಿಗಳಲ್ಲಿ ಪಿಎಚ್.ಡಿ. ಪ್ರವೇಶಾತಿ ಸಮಸ್ಯೆಯು ಅರ್ಹತೆಯದ್ದಲ್ಲ. ಕೆಲವು ಐಐಟಿಗಳು ಎಸ್ಸಿ/ಎಸ್ಟಿ ವಿದ್ಯಾರ್ಥಿಗಳನ್ನು ಅರ್ಹರನ್ನಾಗಿ ಕಾಣುವುದೇ ಇಲ್ಲ. ಇದೇ ಮುಖ್ಯ ಸಮಸ್ಯೆ. ಅಲ್ಲದೆ ಪ್ರವೇಶ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ನಂತರವೂ, ಈ ಅಭ್ಯರ್ಥಿಗಳು ಸಂದರ್ಶನದ ಸಮಯದಲ್ಲಿ ತಾರತಮ್ಯವನ್ನು ಎದುರಿಸುತ್ತಾರೆ ಎಂದು ತಜ್ಞರು ವಾದಿಸುತ್ತಾರೆ.

ಹಲವು ವರ್ಷಗಳಿಂದ ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವು ಮಹತ್ವದ ವಿಷಯವಾಗಿದೆ. ಭಾರತದಲ್ಲಿನ ಜಾತಿ ವ್ಯವಸ್ಥೆಯು ಸಾಮಾಜಿಕ ಶ್ರೇಣಿಯಾಗಿದ್ದು ಅದು ವ್ಯಕ್ತಿಗಳನ್ನು ಅವರ ಜನ್ಮದ ಆಧಾರದ ಮೇಲೆ ವಿವಿಧ ಗುಂಪುಗಳಾಗಿ ವರ್ಗೀಕರಿಸುತ್ತದೆ ಮತ್ತು ಇದು ದೇಶದ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಆಳವಾದ ಬೇರುಗಳನ್ನು ಹೊಂದಿದೆ.ಉನ್ನತ ಶಿಕ್ಷಣದ ಸಂದರ್ಭದಲ್ಲಿ, ಜಾತಿ ತಾರತಮ್ಯವು ವಿವಿಧ ರೂಪಗಳಲ್ಲಿ ಪ್ರಕಟವಾಗುತ್ತದೆ. ಅವುಗಳಲ್ಲಿ ಪ್ರವೇಶಾತಿ ಮೊದಲನೆಯದು. ಪ್ರವೇಶ ಪ್ರಕ್ರಿಯೆಯಲ್ಲಿ ತಾರತಮ್ಯವು ಸಂಭವಿಸಬಹುದು, ಅಲ್ಲಿ ಕೆಳ ಜಾತಿಗಳ ವ್ಯಕ್ತಿಗಳು ಪ್ರತಿಷ್ಠಿತ ಸಂಸ್ಥೆಗಳಿಗೆ ಪ್ರವೇಶ ಪಡೆಯುವುದನ್ನು ತಡೆಯುವ ಅಡೆತಡೆಗಳು ಅಥವಾ ಪಕ್ಷಪಾತಗಳನ್ನು ಎದುರಿಸಬಹುದು. ಈ ತಾರತಮ್ಯವು ಬಹಿರಂಗ ಮತ್ತು ಪರೋಕ್ಷವಾಗಿರಬಹುದು. ಸರಕಾರಿ ಕೋಟಾಗಳು ಮತ್ತು ಮೀಸಲಾತಿಗಳು ಕೆಲವೊಮ್ಮೆ ಬುದ್ಧಿವಂತಿಕೆಯಿಂದ ಕಡೆಗಣಿಸಲ್ಪಡುತ್ತವೆ. ನಂತರ ಕಿರುಕುಳ ಮತ್ತು ಬೆದರಿಸುವಿಕೆ. ಕೆಳ ವರ್ಗದ ವಿದ್ಯಾರ್ಥಿಗಳು ತಮ್ಮ ಜಾತಿಯ ಹಿನ್ನೆಲೆಯ ಆಧಾರದ ಮೇಲೆ ತಮ್ಮ ಗೆಳೆಯರಿಂದ ಕಿರುಕುಳ, ಬೆದರಿಸುವಿಕೆ ಮತ್ತು ಸಾಮಾಜಿಕ ಬಹಿಷ್ಕಾರವನ್ನು ಎದುರಿಸಬಹುದು. ಇದು ಅವರ ಶೈಕ್ಷಣಿಕ ಮತ್ತು ವೈಯಕ್ತಿಕ ಬೆಳವಣಿಗೆಗೆ ಅಡ್ಡಿಪಡಿಸುವ ಪ್ರತಿಕೂಲ ವಾತಾವರಣವನ್ನು ಸೃಷ್ಟಿಸಬಹುದು. ಅಲ್ಲದೆ ಅಧ್ಯಾಪಕರ ಪಕ್ಷಪಾತ ಐಐಟಿಗಳಲ್ಲಿ ನಡೆಯುತ್ತವೆ ಎನ್ನುವ ವರದಿಗಳಿವೆ. ಆದರೆ ಹೆಚ್ಚಿನ ಅಧ್ಯಾಪಕರು ಜಾತಿಯ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ವಿಭಿನ್ನವಾಗಿ ಪರಿಗಣಿಸುತ್ತಾರೆ ಎನ್ನುವ ಆರೋಪವಿದೆ. ಈ ಪಕ್ಷಪಾತವು ಶ್ರೇಣೀಕರಣ, ಮಾರ್ಗದರ್ಶನ, ಅವಕಾಶಗಳು ಮತ್ತು ಶೈಕ್ಷಣಿಕ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಹಿಂದುಳಿಯುವಿಕೆಗೆ ಕಾರಣವಾಗಬಹುದು. ಅಲ್ಲದೆ ಸೀಮಿತ ಪ್ರಾತಿನಿಧ್ಯ ಸಹ ಇನ್ನೊಂದು ಸಮಸ್ಯೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಾಮಾನ್ಯವಾಗಿ ಕೆಳಜಾತಿಗಳ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಪ್ರಾತಿನಿಧ್ಯದ ಕೊರತೆ ಇರುತ್ತದೆ. ಈ ಕಡಿಮೆ ಪ್ರಾತಿನಿಧ್ಯವು ತಾರತಮ್ಯವನ್ನು ಮತ್ತಷ್ಟು ಶಾಶ್ವತಗೊಳಿಸುತ್ತದೆ ಮತ್ತು ಅಂತರ್ಗತ ಕಲಿಕೆಯ ವಾತಾವರಣದ ಸೃಷ್ಟಿಗೆ ಅಡ್ಡಿಯಾಗುತ್ತದೆ. ಕೆಲವು ಸಾಮಾಜಿಕ ವರ್ಗಗಳ ಪ್ರಾಬಲ್ಯ, ಭಾಷಾ ಪಕ್ಷಪಾತಗಳು ಮತ್ತು ಸಾಂಸ್ಕೃತಿಕ ಸಂವೇದನಾಶೀಲತೆಯಂತಹ ಕೆಲವು ಸಾಂಸ್ಥಿಕ ಆಚರಣೆಗಳು ಸಹ ಉನ್ನತ ಶಿಕ್ಷಣದಲ್ಲಿ ಜಾತಿ ತಾರತಮ್ಯಕ್ಕೆ ಕಾರಣವಾಗಬಹುದು.

ಸರಕಾರಗಳು ಉನ್ನತ ಶಿಕ್ಷಣದಲ್ಲಿ ಜಾತಿ ತಾರತಮ್ಯವನ್ನು ಪರಿಹರಿಸಲು ಪ್ರಯತ್ನಗಳನ್ನು ಮಾಡಿವೆ. ಹಿಂದುಳಿದ ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಒದಗಿಸಲು ದೃಢೀಕರಣದಂತಹ ಮೀಸಲಾತಿ ನೀತಿಗಳನ್ನು ಜಾರಿಗೆ ತರಲಾಗಿದೆ. ವಿದ್ಯಾರ್ಥಿ ಸಂಘಟನೆಗಳು, ನಾಗರಿಕ ಸಮಾಜದ ಗುಂಪುಗಳು ಮತ್ತು ಚಿಂತಕರು ಜಾತಿ ತಾರತಮ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಹೆಚ್ಚು ಒಳಗೊಳ್ಳುವ ಉನ್ನತ ಶಿಕ್ಷಣ ವ್ಯವಸ್ಥೆಗಾಗಿ ಪ್ರತಿಪಾದಿಸಲು ಕೆಲಸ ಮಾಡಬೇಕಾಗಿದೆ. ಅವರ ಪ್ರಯತ್ನಗಳು ಎಲ್ಲಾ ಜಾತಿಗಳ ವಿದ್ಯಾರ್ಥಿಗಳಿಗೆ ಸುರಕ್ಷಿತ ಮತ್ತು ಸಮಾನ ವಾತಾವರಣವನ್ನು ಐಐಟಿಗಳಲ್ಲಿ ಸೃಷ್ಟಿಸುವ ಗುರಿಯನ್ನು ಹೊಂದಬೇಕಾಗಿದೆ. ಉನ್ನತ ಶಿಕ್ಷಣದಲ್ಲಿ ಗಮನಾರ್ಹವಾದ ಪ್ರಗತಿಯನ್ನು ಸಾಧಿಸಿದ್ದರೂ, ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವು ಮುಂದುವರಿದಿದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಶೈಕ್ಷಣಿಕ ನೀತಿ ಬದಲಾವಣೆಗಳು, ಜಾಗೃತಿ ಅಭಿಯಾನಗಳು, ಸಂವೇದನಾಶೀಲ ಕಾರ್ಯಕ್ರಮಗಳು ಅಗತ್ಯವಿದೆ.

Similar News