ಏರ್ ಇಂಡಿಯಾ ವಿಮಾನ ರಶ್ಯದಲ್ಲಿ ತುರ್ತು ಭೂಸ್ಪರ್ಶ: ಪರಿಸ್ಥಿತಿ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದ ಅಮೆರಿಕ

Update: 2023-06-07 06:45 GMT

ಹೊಸದಿಲ್ಲಿ: ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ರಶ್ಯದಲ್ಲಿ ತುರ್ತು ಭೂಸ್ಪರ್ಶ ಮಾಡಿದ ನಂತರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಅಮೆರಿಕ ಮಂಗಳವಾರ ತಿಳಿಸಿದೆ.

ದಿಲ್ಲಿಯಿಂದ ಹೊರಟಿದ್ದ ಎಐ173 ವಿಮಾನವನ್ನು ಇಂಜಿನ್ ದೋಷದ ಕಾರಣ ಮಂಗಳವಾರ ರಶ್ಯದ ಮಗದನ್‌ ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಟಾಟಾ ಗ್ರೂಪ್ ಒಡೆತನದ ಖಾಸಗಿ ವಿಮಾನ ಸಂಸ್ಥೆ  ನಿನ್ನೆ ಸಂಜೆ ಹೇಳಿಕೆಯಲ್ಲಿ ತಿಳಿಸಿದೆ.

216 ಪ್ರಯಾಣಿಕರು ಹಾಗೂ 16 ಸಿಬ್ಬಂದಿಯನ್ನು ಹೊತ್ತಿದ್ದ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.

"ಅಮೆರಿಕಕ್ಕೆ ತೆರಳುತ್ತಿದ್ದ ವಿಮಾನ  ರಶ್ಯದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು ಎಂಬ ವಿಚಾರ ನಮಗೆ ತಿಳಿದಿದೆ. ಆ ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ನಾವು ಮುಂದುವರಿಸುತ್ತೇವೆ. ಈ ಸಮಯದಲ್ಲಿ ಎಷ್ಟು ಅಮೆರಿಕದ ನಾಗರಿಕರು ವಿಮಾನದಲ್ಲಿದ್ದರು ಎಂದು ಖಚಿತಪಡಿಸಲು ನನಗೆ ಸಾಧ್ಯವಾಗುತ್ತಿಲ್ಲ" ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಉಪ ವಕ್ತಾರ ವೇದಾಂತ್ ಪಟೇಲ್ ಅವರು ತಮ್ಮ ದೈನಂದಿನ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

Similar News