ನೂತನ ಸಂಸತ್‌ನಲ್ಲಿ ಅಖಂಡ ಭಾರತ ನಕ್ಷೆ: ಭಾರತದಿಂದ ಸ್ಪಷ್ಟೀಕರಣ ಕೇಳಿದ ಬಾಂಗ್ಲಾ ಸರಕಾರ

Update: 2023-06-07 07:47 GMT

ಹೊಸದಿಲ್ಲಿ: ಭಾರತದ ನೂತನ ಸಂಸತ್‌ ಕಟ್ಟಡದಲ್ಲಿರಿಸಲಾಗಿರುವ ಅಖಂಡ ಭಾರತ ನಕ್ಷೆಯ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯದಿಂದ ಸ್ಪಷ್ಟೀಕರಣ ಕೇಳುವಂತೆ ಬಾಂಗ್ಲಾದೇಶ ಸರ್ಕಾರ  ತನ್ನ ಭಾರತೀಯ ಹೈಕಮಿಷನ್‌ಗೆ ಸೂಚಿಸಿದೆ.

ಭಾರತದ ಸಂಸತ್ತಿನಲ್ಲಿನಲ್ಲಿರುವ ನಕ್ಷೆಯು ಈಗಿನ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳವನ್ನು ಅಂಖಡ ಭಾರತವೆಂದು ತೋರಿಸುವುದು ಈಗಾಗಲೇ ನೇಪಾಳ ಮತ್ತು ಪಾಕಿಸ್ತಾನದಿಂದ ಆಕ್ಷೇಪಕ್ಕೆ ತುತ್ತಾಗಿದೆ. ಈ ಕುರಿತು ಸ್ಪಷ್ಟೀಕರಣ ಕೇಳುವ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿದೆ ಎಂದು ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ಸಚಿವ ಶಹರಿಯರ್‌ ಆಲಂ ಹೇಳಿದ್ದಾರೆ.

ಭಾರತದ ನೂತನ ಸಂಸತ್ತಿನಲ್ಲಿರುವ ನಕ್ಷೆಯು ಬಾಂಗ್ಲಾದೇಶದ ಸ್ವಾತಂತ್ರ್ಯ ಮತ್ತು ಸಾರ್ವಭೌಮತೆಗೆ ಧಕ್ಕೆಯಾಗಿದೆ ಎಂದು ಬಾಂಗ್ಲಾದೇಶದ ವಿಪಕ್ಷವಾಗಿರುವ ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿ ಹೇಳಿದೆ.

ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಷಿ ಸಂಸತ್ತಿನಲ್ಲಿರುವ ಅಖಂಡ ಭಾರತ ಮ್ಯೂರಲ್‌ನತ್ತ ಬೊಟ್ಟು ಮಾಡಿ “ನಿರ್ಧಾರ ಸ್ಪಷ್ಟ-ಅಖಂಡ ಭಾರತ್”‌ ಎಂದು ಹೇಳಿದ ನಂತರ ಈ ಮ್ಯೂರಲ್‌ ವ್ಯಾಪಕ ಸುದ್ದಿಯಾಗಿತ್ತು.

ನಂತರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಂ ಬಾಗ್ಚಿ ಸ್ಪಷ್ಟೀಕರಣ ನೀಡಿ ಈ ಮ್ಯೂರಲ್‌ ಮೌರ್ಯರ ಕಾಲದ ಭಾರತೀಯ ಇತಿಹಾಸವನ್ನು ಬಿಂಬಿಸುತ್ತದೆ ಎಂದು ಹೇಳಿದ್ದರು.

ನೇಪಾಳ ಪ್ರಧಾನಿ ಬಾಬುರಾಮ್‌ ಭಟ್ಟರೈ ಈ ನಕ್ಷೆಯನ್ನು ಟೀಕಿಸಿದ ನಂತರ ಮೇಲಿನ ಸ್ಪಷ್ಟೀಕರಣ ಬಂದಿದೆ. ಈ ನಕ್ಷೆಯಲ್ಲಿ ಬುದ್ಧನ ಜನ್ಮಸ್ಥಳ ಲುಂಬಿನಿ ಅನ್ನು ಭಾರತದ ಭೂಭಾಗ ಎಂದು ಬಿಂಬಿಸಲಾಗಿರುವುದು ನೇಪಾಳದ ಆಕ್ರೋಶಕ್ಕೆ ಕಾರಣವಾಗಿದೆ.

Similar News