ಕೇಂದ್ರ ಕ್ರೀಡಾ ಸಚಿವರ ಭೇಟಿ ವೇಳೆ ಐದು ಬೇಡಿಕೆಗಳನ್ನು ಇಟ್ಟ ಕುಸ್ತಿಪಟುಗಳು

Update: 2023-06-07 08:19 GMT

ಹೊಸದಿಲ್ಲಿ: ಮಹಿಳೆಯೊಬ್ಬರು ಭಾರತದ ಕುಸ್ತಿ ಒಕ್ಕೂಟದ ಮುಖ್ಯಸ್ಥರಾಗಬೇಕು ಎನ್ನುವುದು ಸೇರಿದಂತೆ ಐದು ಬೇಡಿಕೆಗಳನ್ನು ಕುಸ್ತಿಪಟುಗಳು ಬುಧವಾರ ಕ್ರೀಡಾ ಸಚಿವ ಅನುರಾಗ್ ಠಾಕೂರ್  ಅವರ ಮುಂದಿಟ್ಟಿದ್ದಾರೆ  ಎಂದು ವರದಿಯಾಗಿದೆ.

ಟ್ವಿಟರ್  ನಲ್ಲಿ ತಡರಾತ್ರಿಯ ಆಹ್ವಾನದ ನಂತರ ಬಜರಂಗ್ ಪುನಿಯಾ ಹಾಗೂ  ಸಾಕ್ಷಿ ಮಲಿಕ್ ಅವರು ಇಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರೊಂದಿಗೆ ಅವರ ಮನೆಯಲ್ಲಿ ಮಾತುಕತೆ ನಡೆಸಿದರು.

ಐದು ದಿನಗಳಲ್ಲಿ ಕುಸ್ತಿಪಟುಗಳು  ಹಾಗೂ ಸರಕಾರದ  ನಡುವೆ ಇದು ಎರಡನೇ ಸಭೆಯಾಗಿದೆ. ಏಳು ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮಕೈಗೊಳ್ಳಲು ಕುಸ್ತಿಪಟುಗಳು ಶನಿವಾರ ತಡರಾತ್ರಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದರು.

ಭಾರತ ಕುಸ್ತಿ ಒಕ್ಕೂಟಕ್ಕೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಹಾಗೂ ಮಹಿಳಾ ಮುಖ್ಯಸ್ಥರ ನೇಮಕ ಸೇರಿದಂತೆ ಐದು ಬೇಡಿಕೆಗಳನ್ನು ಕುಸ್ತಿಪಟುಗಳು ಸಚಿವರಿಗೆ ಸಲ್ಲಿಸಿದರು. ಬ್ರಿಜ್ ಭೂಷಣ್ ಸಿಂಗ್ ಅಥವಾ ಅವರ ಕುಟುಂಬ ಸದಸ್ಯರು ಡಬ್ಲ್ಯುಎಫ್‌ಐ ಭಾಗವಾಗಿರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಕಳೆದ ತಿಂಗಳು ಭಾರತದ ಹೊಸ ಸಂಸತ್ತಿನ ಕಟ್ಟಡವನ್ನು ಉದ್ಘಾಟಿಸಿದ ದಿನದಂದು ತಮ್ಮ ಪ್ರತಿಭಟನೆಯ ಬಗ್ಗೆ ತಮ್ಮ ವಿರುದ್ಧ ದಾಖಲಾಗಿರುವ ಪೊಲೀಸ್ ಪ್ರಕರಣವನ್ನು ರದ್ದುಪಡಿಸಬೇಕು ಹಾಗೂ  ಬ್ರಿಜ್ ಭೂಷಣ್ ಸಿಂಗ್ ನನ್ನು ಬಂಧಿಸಬೇಕೆಂಬ   ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ.

ಕಳೆದ ಶನಿವಾರ ಕುಸ್ತಿಪಟುಗಳು ಗೃಹ ಸಚಿವ ಅಮಿತ್ ಶಾ ಅವರನ್ನು  ಅವರ ಮನೆಯಲ್ಲಿ ಭೇಟಿಯಾಗಿದ್ದರು. ಆದರೆ ಆ ಭೇಟಿ ಅಪೂರ್ಣವಾಗಿತ್ತು ಎನ್ನಲಾಗಿದೆ.

ಬಾಲಕಿ ಸೇರಿದಂತೆ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ.   ಸಿಂಗ್  ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಹಾಗೂ   ಪೋಕ್ಸೋ ಕಾಯ್ದೆಯಡಿಯಲ್ಲೂ ಕೇಸ್ ದಾಖಲಿಸಲಾಗಿದೆ.

Similar News