ಎಪಿಎಂಸಿಯಲ್ಲಿ ನಿವೇಶನಗಳ ಹಂಚಿಕೆಯಲ್ಲಿ ಮೋಸ ಆರೋಪ: ಕ್ರಮಕ್ಕೆ ಮನವಿ

Update: 2023-06-07 15:13 GMT

ಉಡುಪಿ, ಜೂ.7: ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆ(ಎಪಿಎಂಸಿ)ಯ ಪ್ರಾಂಗಣದಲ್ಲಿರುವ ನಿವೇಶನಗಳ ಹಂಚಿಕೆ ಯಲ್ಲಿ ನಡೆದಿರುವ ಅಕ್ರಮಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಆದಿಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವರ್ತಕರು ಶಾಸಕ ಯಶಪಾಲ್ ಎ.ಸುವರ್ಣ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿರುವ 14 ನಿವೇಶನಗಳಲ್ಲಿ 11 ನಿವೇಶನವನ್ನು ಈಗಾಗಲೇ ಚದರ ಅಡಿಗೆ 376ರೂ.ನಂತೆ ಮಾರಾಟ ಮಾಡಲಾಗಿದೆ. ಈ ಹಂಚಿಕೆಯಲ್ಲಿ ಹಲವಾರು ಅಕ್ರಮಗಳು ನಡೆದಿದೆ. ಇಲ್ಲಿ ಚದರ ಅಡಿಗೆ 2000ರೂ. ಮಾರುಕಟ್ಟೆ ದರ ಇದೆ. ಹೊಸ ಲೈಸೆನ್ಸ್‌ದಾರರಿಗೆ ನಿವೇಶನ ಹಂಚಿಕೆ ಮಾಡಿದ್ದು, ಕೆಲವರು ಈಗಾಗಲೇ ಗೋಡೌನ್‌ಗಳನ್ನು ಪಡೆದಿದ್ದಾರೆ. ಈ ಕೂಡಲೇ ಈ ನಿವೇಶನ ಹಂಚಿಕೆಯನ್ನು ನಿಲ್ಲಿಸಬೇಕು. ಸರಕಾರದ ಜಾಗವು ಸರಕಾರಕ್ಕೆ ಉಳಿಯುವ ಹಾಗೆ ಕ್ರಮ ತೆಗೆದುಕೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಎಪಿಎಂಸಿ ಅಧಿಕಾರಿ ರಾಜು ನಾಯಕ್ ಎಂಬುವವರು ಕಳೆದ ಒಂದೂವರೆ ವರ್ಷದ ಹಿಂದೆ ಈ ಜಾಗದಲ್ಲಿ ತಾತ್ಕಾಲಿಕ ಶೆಡ್ ಹಾಕಿ ವ್ಯಾಪಾರ ಮಾಡುವಂತೆ ಸೂಚಿಸಿದ್ದು, 10 ವರ್ಷಗಳ ವ್ಯಾಪಾರ ಮಾಡಬಹುದೆಂದಿದ್ದರು. ಇದಕ್ಕೆ ನಮ್ಮಿಂದ ಲಂಚ ಕೂಡ ಪಡೆದುಕೊಂಡಿದ್ದರು. 2 ರಿಂದ 3 ಲಕ್ಷ ರೂ. ಬಂಡವಾಳ ಹಾಕಿ ಶೆಡ್ ಹಾಕಿದ್ದೇವೆ. ಈಗ ನಮ್ಮನ್ನು ಎಬ್ಬಿಸಿ ಪ್ರಭಾವಿಗಳಿಗೆ ಗೋಡೌನ್ ನಿರ್ಮಿಸುವುದಕ್ಕೆ ಅವಕಾಶ ಕೊಡುತ್ತಿದ್ದಾರೆ. ಇಲ್ಲಿ 20, 30 ಸಣ್ಣಪುಟ್ಟ ವ್ಯಾಪಾರಿಗಳಿದ್ದೇವೆ. ನಮ್ಮ ಹೊಟ್ಟೆಗೆ ಹೊಡೆಯುವ ಕೆಲಸವಾಗುತ್ತಿದೆ ಎಂದು ವ್ಯಾಪಾರಿ ಲಕ್ಷ್ಮಣ ಆರೋಪಿಸಿದ್ದಾರೆ.

‘ಸಣ್ಣಪುಟ್ಟ ವ್ಯಾಪಾರಿಗಳ ಬದುಕಿಗೆ ಆಸರೆಯಾಗಿದ್ದ ಈ ಜಾಗವನ್ನು ಯಾವುದೋ ಪ್ರಭಾವಿಗಳ ಆಮಿಷಕ್ಕೆ ಮಣಿದು ಈ ರೀತಿ ದುರ್ಬಳಕೆ ಮಾಡಿಕೊಳ್ಳುವುದು ಎಷ್ಟು ಸರಿ ? 20-25 ವರ್ಷಗಳಿಂದ ಇದೇ ಜಾಗದಲ್ಲಿ ನಾವು ವ್ಯಾಪಾರ ಮಾಡುತ್ತಿದ್ದೇವೆ. ನಮ್ಮಿಂದ ಅಕಾರಿಗಳು ಸಾವಿರಾರು ರೂ. ಲಂಚ ಪಡೆದುಕೊಂಡಿದ್ದಾರೆ. ಈಗ ನಮ್ಮನ್ನು ಎಬ್ಬಿಸಿ ಇನ್ನೊಬ್ಬರಿಗೆ ಮಾರಾಟ ಮಾಡುವುದಕ್ಕೆ ಮುಂದಾಗಿದ್ದಾರೆ ಎಂದು ವರ್ತಕ ಬಸಯ್ಯ ದೂರಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ವಿಜಯ ಕೊಡವೂರು, ಮಾಜಿ ಸದಸ್ಯ ಪ್ರಶಾಂತ್, ರಮಾಕಾಂತ್ ಕಾಮತ್, ಸುಭಾಷಿತ್ ಕುಮಾರ್, ಚಿನ್ಮಯ್ ಮೂರ್ತಿ, ಸುರೇಶ್ ಕಲ್ಯಾಣಪುರ, ಥರಜ್, ಸಿದ್ಧನಗೌಡ, ಸಂಗನಗೌಡ, ರಾಜು, ಫಯಾಝ್ ಅಹ್ಮದ್ ಮೊದಲಾದವರು ಉಪಸ್ಥಿತರಿದ್ದರು.

Similar News