ಅಮೆರಿಕ: ಹೈಸ್ಕೂಲ್‌ ನಲ್ಲಿ ಶೂಟೌಟ್: ಇಬ್ಬರು ಮೃತ್ಯು, 5 ಜನರಿಗೆ ಗಾಯ

Update: 2023-06-07 16:58 GMT

ವಾಷಿಂಗ್ಟನ್: ಅಮೆರಿಕದ ವರ್ಜೀನಿಯಾ ರಾಜ್ಯದ ರಿಚ್ಮಂಡ್ ನಗರದ ಹೈಸ್ಕೂಲ್ನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದ ಸಭಿಕರ ಮೇಲೆ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟು ಇತರ ಐದು ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ವರ್ಜೀನಿಯಾ ಕಾಮನ್ವೆಲ್ತ್ ವಿವಿಯ ಆವರಣದಲ್ಲಿರುವ ಹ್ಯುಜೆನಾಟ್ ಹೈಸ್ಕೂಲ್ನ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಶಂಕಿತ ಆರೋಪಿ 19 ವರ್ಷದ ಯುವಕನಾಗಿದ್ದು ಈತ ಪೂರ್ವದ್ವೇಷದಿಂದ ಈ ಕೃತ್ಯ ಎಸಗಿದ್ದಾನೆ. ಸಭೆಯಲ್ಲಿ ಕಾರ್ಯಕ್ರಮ ವೀಕ್ಷಿಸುತ್ತಿದ್ದವರಲ್ಲಿ ಓರ್ವನ ಜತೆ ಈತ ದ್ವೇಷಕಟ್ಟಿಕೊಂಡಿದ್ದ. ಆತನನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ ಅಮಾಯಕರು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ.

ಆರೋಪಿಯನ್ನು ಬಂಧಿಸಲಾಗಿದ್ದು ಈತನ ಬಳಿ 4 ಪಿಸ್ತೂಲ್ಗಳಿದ್ದವು ಎಂದು ರಿಚ್ಮಂಡ್ ಪೊಲೀಸ್ ಮುಖ್ಯಸ್ಥ ರಿಕ್ ಎಡ್ವರ್ಡ್ಸ್ ಸುದ್ಧಿಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ. ಗಾಯಗೊಂಡವರಲ್ಲಿ ಓರ್ವ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ. ಗುಂಡು ಹಾರಾಟದ ಸಂದರ್ಭ ಸಭೆಯಲ್ಲಿದ್ದವರು ಆತಂಕದಿಂದ ದಿಕ್ಕಾಪಾಲಾಗಿ ಓಡಿದಾಗ 9 ವರ್ಷದ ಬಾಲಕಿಯೊಬ್ಬಳಿಗೆ ಕಾರೊಂದು ಡಿಕ್ಕಿಯಾಗಿ ಗಾಯಗೊಂಡಿದ್ದಾಳೆ. ಇತರ ಹಲವರೂ ಓಡುವಾಗ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದವರು ಹೇಳಿದ್ದಾರೆ.

Similar News